- ಸುನೀತಾ

ಕೇರಳದ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಮುನ್ನಾರ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಸಾಲು ಸಾಲು ಚಹಾದ ತೋಟಗಳು, ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು, ಮೈಕೊರೆಯುವ ಚಳಿ, ಇವೆಲ್ಲವೂ ಪ್ರಕೃತಿ ಪ್ರೇಮಿಗಳಿಗೆ ಒಂಥರ ಸ್ವರ್ಗವೇ ಸರಿ. ಸೋಷಿಯಲ್ ಮೀಡಿಯಾದಲ್ಲಿ ಮುನ್ನಾರ್‌ನ ರಸ್ತೆಬದಿಯ ನೇರಳೆ ಬಣ್ಣದ 'ಜಾಕರಾಂಡ' (Jacaranda) ಹೂವುಗಳ ವಿಡಿಯೋ ನೋಡಿದಾಗಲೇ ನಾನು ಮತ್ತು ನನ್ನ ಗಂಡ ನಿರ್ಧರಿಸಿದ್ದೆವು, ಈ ಬಾರಿ ಹೇಗಾದರೂ ಮಾಡಿ ಈ ಸುಂದರ ಲೋಕಕ್ಕೆ ಭೇಟಿ ನೀಡಲೇಬೇಕೆಂದು. ಹಾಗಾಗಿ, ನಗರದ ಗದ್ದಲದಿಂದ ದೂರ, ನಾಲ್ಕು ದಿನಗಳ ಕಾಲ ಪ್ರಕೃತಿಯ ಸೌಂದರ್ಯ ಸವಿಯಲು ನಾವು ಹೊರಟೆವು.

ಜಾಕರಾಂಡ ವಿಶೇಷ

ಬಿಸಿಲಿನ ಬೇಗೆ ಶುರುವಾಗುವ ಮೊದಲೇ ದೂರದ ಹಾದಿ ಕ್ರಮಿಸಬೇಕೆಂದು ನಾವು ಮುಂಜಾನೆ 4.30ಕ್ಕೆ ಬೆಂಗಳೂರಿನಿಂದ ನಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ನಾವು ಆರಿಸಿಕೊಂಡ ಹಾದಿ ಕೃಷ್ಣಗಿರಿ - ಸೇಲಂ - ಪೋಳ್ಳಾಚಿ - ಅಣ್ಣಾಮಲೈ ಅರಣ್ಯ ಮೀಸಲು ಪ್ರದೇಶ ಮತ್ತು ಚಿನ್ನಾರ್ ವನ್ಯಜೀವಿ ಧಾಮದ ಮೂಲಕ ಸಾಗಿತ್ತು. ದಾರಿಯುದ್ದಕ್ಕೂ ಹಸಿರಿನ ಹಾಸಿಗೆಯನ್ನು ನೋಡುತ್ತಾ ಸಾಗುವ ಅನುಭವವೇ ಅದ್ಭುತ. ಮುನ್ನಾರ್ ಹತ್ತಿರವಾಗುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದ್ದು ಅದೇ ನೇರಳೆ ಬಣ್ಣದ ಜಾಕರಾಂಡಾ ಮರಗಳು! ಜಾಕರಾಂಡ ಬಗ್ಗೆ ಹೇಳಲೇಬೇಕು. ಮೂಲತಃ ದಕ್ಷಿಣ ಅಮೆರಿಕದ ಬ್ರೆಜಿಲ್ ಮತ್ತು ಅರ್ಜೆಂಟೀನಾ ದೇಶಗಳಿಗೆ ಸೇರಿದ ಈ ಮರಗಳು, ಇಂದು ಭಾರತದ ಹವಾಮಾನಕ್ಕೆ ಎಷ್ಟು ಹೊಂದಿಕೊಂಡಿವೆ ಎಂದರೆ, ಇವು ನಮ್ಮ ಮಣ್ಣಿನದ್ದೇ ಎಂಬ ಭಾವನೆ ಮೂಡಿಸುತ್ತವೆ. ನಮ್ಮ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕೇರಳದ ಗಿರಿಧಾಮಗಳಾದ ಮುನ್ನಾರ್‌ನಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು. ಫೆಬ್ರವರಿ ತಿಂಗಳ ಕೊನೆಯಿಂದ ಏಪ್ರಿಲ್ ವರೆಗೆ ಈ ಮರಗಳು ಎಲೆಗಳನ್ನೆಲ್ಲ ಉದುರಿಸಿ, ಕೊಂಬೆ ತುಂಬಾ ನೀಲಿ ಮತ್ತು ನೇರಳೆ ಬಣ್ಣ ಮಿಶ್ರಿತ ಹೂವುಗಳನ್ನು ಹೊತ್ತು ನಿಲ್ಲುತ್ತವೆ. ಈ ದೃಶ್ಯವಂತೂ ಕಣ್ಣಿಗೆ ಹಬ್ಬದಂತಿರುತ್ತದೆ.

ಇದನ್ನೂ ಓದಿ: ಭಯವಾಗದ ವಾತವಾರಣದಲ್ಲಿ ವಿಪರೀತ ಭಯವಾದಾಗ

ಈ ಮರದ ವೈಶಿಷ್ಟ್ಯವೆಂದರೆ ಅದರ ಹೂವುಗಳ ವಿನ್ಯಾಸ. ಗಂಟೆಯ ಆಕಾರದ ಈ ಪುಟ್ಟ ಹೂವುಗಳು ಗುಂಪು ಗುಂಪಾಗಿ ಅರಳಿರುತ್ತವೆ, ಹಾಗಾಗಿ ಇವುಗಳನ್ನು 'ನೀಲಿ ಗಂಟೆಯ ಹೂವುಗಳು' ಎಂದೂ ಕರೆಯುತ್ತಾರೆ. ಈ ಹೂವುಗಳು ಉದುರಿ ನೆಲದ ಮೇಲೆ ಬಿದ್ದಾಗ, ರಸ್ತೆಯ ಉದ್ದಕ್ಕೂ ಯಾರೋ ನೇರಳೆ ಬಣ್ಣದ ರತ್ನಗಂಬಳಿ ಹಾಸಿದಂತೆ ಕಾಣುತ್ತದೆ. ಕೇವಲ ಅಂದಕ್ಕೆ ಮಾತ್ರವಲ್ಲದೆ, ಈ ಮರಗಳು ನೆರಳು ನೀಡಲು ಮತ್ತು ಪರಿಸರದಲ್ಲಿ ಹಸಿರನ್ನು ಉಳಿಸಲು ಸಹಕಾರಿಯಾಗಿವೆ. ನಗರ ಪ್ರದೇಶದ ಕಾಂಕ್ರೀಟ್ ಕಾಡುಗಳ ಮಧ್ಯೆ ಈ ನೇರಳೆ ಬಣ್ಣದ ಹೂವುಗಳು ಮನಸ್ಸಿಗೆ ಒಂದು ರೀತಿಯ ಶಾಂತಿ ಮತ್ತು ಮುದ ನೀಡುತ್ತವೆ. ವಿಶ್ವದ ಹಲವು ಕಡೆಗಳಲ್ಲಿ ಜಾಕರಂಡ ಮರಕ್ಕೆ ಸಾಂಸ್ಕೃತಿಕ ಮಹತ್ವವೂ ಇದೆ. ಉದಾಹರಣೆಗೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಇವುಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸುತ್ತಾರೆ. ವಿದ್ಯಾರ್ಥಿಗಳಿಗೆ ಈ ಹೂವು ಅರಳುವ ಸಮಯವೆಂದರೆ ಅದು ಪರೀಕ್ಷೆಯ ಕಾಲ ಎಂದರ್ಥ. ಹೂವು ಮರದಿಂದ ಉದುರಿ ವಿದ್ಯಾರ್ಥಿಯ ತಲೆಯ ಮೇಲೆ ಬಿದ್ದರೆ, ಅವರು ಪರೀಕ್ಷೆಯಲ್ಲಿ ಉತ್ತಮವಾಗಿ ತೇರ್ಗಡೆಯಾಗುತ್ತಾರೆ ಎಂಬ ತಮಾಷೆಯ ನಂಬಿಕೆಯೂ ಅಲ್ಲಿದೆ. ಪ್ರಕೃತಿಯ ಅಂದವನ್ನು ಹೆಚ್ಚಿಸುವಲ್ಲಿ ಮತ್ತು ಮನುಷ್ಯನ ಮನಸನ್ನು ಉಲ್ಲಾಸಗೊಳಿಸುವಲ್ಲಿ ಜಾಕರಂಡ ಮರದ ಪಾತ್ರ ದೊಡ್ಡದಿದೆ.

Untitled design - 2026-06-05T205949.286

ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ

ಇದಾದ ಬಳಿಕ ಎರಡನೆಯ ದಿನ ನಾವು ಮಟ್ಟುಪೆಟ್ಟಿ ಅಣೆಕಟ್ಟಿನಿಂದ ಪ್ರವಾಸ ಆರಂಭಿಸಿದೆವು. ಇಲ್ಲಿ ಬೋಟಿಂಗ್ ಆನಂದಿಸಲು ಉತ್ತಮ ಅವಕಾಶವಿದೆ. ನಮಗಂತೂ ಸ್ಪೀಡ್ ಬೋಟಿಗಿಂತ ಪೆಡಲ್ ಬೋಟಿಂಗ್ ಹೆಚ್ಚು ಮಜಾ ನೀಡಿತು. ನಂತರ ಸಾಲು ಸಾಲು ಪೈನ್ ಮರಗಳ ಮಧ್ಯೆ ಸಾಗುತ್ತಾ ನಾವು ತಲುಪಿದ್ದು 'ಟಾಪ್ ಸ್ಟೇಷನ್' ವ್ಯೂ ಪಾಯಿಂಟ್. ಇಲ್ಲಿನ ವಾಚ್ ಟವರ್‌ನಿಂದ ಕಾಣುವ ದೃಶ್ಯ ಫೊಟೋ ಪ್ರಿಯರಿಗಂತೂ ಹಬ್ಬವೇ ಸರಿ. ಅಲ್ಲಿಂದ ಗ್ಯಾಪ್ ರೋಡ್ ಮೂಲಕ ಸಾಗುವಾಗ ಚಹಾ ತೋಟಗಳ ಗ್ಯಾಲರಿ ನೋಟ ಡ್ರೋನ್ ಶಾಟ್ ತೆಗೆದುಕೊಳ್ಳಲು ಹೇಳಿ ಮಾಡಿಸಿದ ಜಾಗದಂತಿತ್ತು.

ಮೂರನೇ ದಿನ ಸರ್ಕಾರದ ಸಸ್ಯೋದ್ಯಾನಕ್ಕೆ ಭೇಟಿ ನೀಡಿದೆವು. ಅಲ್ಲಿನ ಹೂವುಗಳ ಮಧ್ಯೆ ಹರಿಯುವ ತಣ್ಣನೆಯ ಹೊಳೆ ನಮ್ಮ ಮನಸಿಗೆ ಮುದ ನೀಡಿತು. ನಂತರ ನಾವು ತೆರಳಿದ್ದು 'ಡೋರ್ ಟು ಹೆವನ್' (Door to Heaven) ಎಂಬ ಜಾಗಕ್ಕೆ. ಹೆಸರಿಗೆ ತಕ್ಕಂತೆ ಕಣ್ಣನ್ ದೇವನ್ ಬೆಟ್ಟಗಳ ಮಧ್ಯೆ ಇರುವ ಈ ಸ್ಥಳ ನಿಜಕ್ಕೂ ಸ್ವರ್ಗದ ಬಾಗಿಲಿನಂತೆಯೇ ಇದೆ. ಇಲ್ಲಿ ಕೇವಲ 500 ರುಪಾಯಿಗೆ ಸುಂದರವಾದ ಡ್ರೋನ್ ಶಾಟ್‌ಗಳನ್ನು ತೆಗೆಸಿಕೊಳ್ಳಬಹುದು.

ಕೊಳುಕ್ಕುಮಲೈ ಸೂರ್ಯೋದಯ

ಇಡೀ ಪ್ರವಾಸದ ಹೈಲೈಟ್ ಎಂದರೆ ಅದು ಕೊಳುಕ್ಕುಮಲೈ ಜೀಪ್ ಸಫಾರಿ. ಮುಂಜಾನೆ 4.30ಕ್ಕೆ ಜೀಪ್ ಹತ್ತಿ ಹೊರಟೆವು. 9 ಕಿಲೋಮೀಟರ್‌ನ ಈ ಪ್ರಯಾಣ ಸುಮಾರು 1 ಗಂಟೆ ಕಾಲ ಹಿಡಿಯುತ್ತದೆ. ಯಾಕೆಂದರೆ ಈ ಹಾದಿ ಪೂರ್ತಿ ಕಲ್ಲು-ಮುಳ್ಳುಗಳಿಂದ ಕೂಡಿದ ಸಾಹಸಮಯ ಪಯಣ! ಬೆನ್ನುನೋವಿರುವವರು ಸ್ವಲ್ಪ ಎಚ್ಚರ ವಹಿಸಬೇಕು. ಜೀಪ್ ಇಳಿದು 1.5 ಕಿ.ಮೀ ಚಾರಣ ಮಾಡಿದ ನಂತರ ನಮಗೆ ಕಂಡ ಆ ಸೂರ್ಯೋದಯ ನಮ್ಮ ಜೀವನದ ಅತ್ಯಂತ ಸ್ಮರಣೀಯ ಕ್ಷಣ. ದಟ್ಟವಾದ ಮೋಡಗಳ ರಾಶಿಯ ಮಧ್ಯೆ ಸೂರ್ಯ ನಿಧಾನವಾಗಿ ಇಣುಕುತ್ತಾ ಆಕಾಶವನ್ನು ಕೆಂಪು, ಹಳದಿ ಬಣ್ಣಕ್ಕೆ ತಿರುಗಿಸುವ ದೃಶ್ಯ ವರ್ಣನಾತೀತ.

ಈ ಅದ್ಭುತ ನೆನಪುಗಳನ್ನು ತುಂಬಿಕೊಂಡು ನಾವು ಬೆಂಗಳೂರಿಗೆ ಹಿಂದಿರುಗಿದೆವು. ನೀವು ಕೂಡ ಒಮ್ಮೆ ಮುನ್ನಾರ್‌ಗೆ ಭೇಟಿ ನೀಡಿ, ಈ ಮಾಯಾಲೋಕದಲ್ಲಿ ಕಳೆದುಹೋಗಿ ಬನ್ನಿ!