• ನಾಗೇಶ. ಯು. ಸಿದ್ಧೇಶ್ವರ.

ಮುಂಬಯಿ, ಜನ ನಿಬಿಡ ನಗರ. ಅಲ್ಲಿನ ಜನಜಂಗುಳಿ, ಗದ್ದಲ ನೋಡಿದಾಗ ನನಗೆ ಹಳೆಯ ಹಿಂದಿ ಸಿನಿಮಾದ ಹಾಡು ʻಎ ದಿಲ್ ಹೈ ಮುಷ್ಕಿಲ್ ಜೀನಾ ಯಂಹಾ, ಜರಾ ಹಟಕೆ, ಜರಾ ಬಚಕೆ, ಎ ಬಾಂಬೈ ಮೇರಿ ಜಾನ್ʼ ನೆನಪಾಗುತ್ತದೆ. ಈ ಗದ್ದಲದಿಂದ ಪಾರಾಗಿ ಯಾವುದಾದರೂ ಪ್ರಶಾಂತವಾದ ಪ್ರವಾಸಿ ತಾಣಕ್ಕೆ ಹೋಗಿ ಸೃಷ್ಠಿ ಸೌಂದರ್ಯ ಸವಿಯೋಣ ಎಂಬ ಭಾವನೆ ಮೂಡುವುದು ಸಹಜ. ಮುಂಬೈ ನಗರದಲ್ಲೇ ಹುಟ್ಟಿ ಬೆಳೆದ ನನ್ನ ಯುವ ಮಿತ್ರ Mr ಗುರು ಸಲಹೆಯಂತೆ ಸನಿಹದಲ್ಲಿದ್ದ ಸುಂದರ ಗಿರಿಧಾಮ ʻಮಾಥೇರಾನ್ʼಗೆ ಹೋಗಿ ಒಂದೆರಡು ದಿನ ಕಳೆಯೋಣ ಎಂದು ನಿರ್ಧರಿಸಿದೆವು.

ಇದನ್ನೂ ಓದಿ: ನಾವು ಕಂಡ ಕಾಠ್ಮಂಡು

ಮುಂಬೈ ನಗರದ ಕಲ್ಯಾಣ ಸ್ಟೇಷನ್‌ನಿಂದ ಮಾಥೇರಾನ್ ಸುಮಾರು 60 ಕಿಮೀ ದೂರದಲ್ಲಿದೆ. ಪೂನಾ ಮೂಲಕ ಹೋಗುವುದಾದರೆ 100 ಕಿಮೀ. ನಾವು ಕಲ್ಯಾಣದಿಂದ ಕರ್ಜತ್‌ಗೆ ಹೋಗುವ ಮುಂಬೈ ಲೋಕಲ್ ಟ್ರೈನ್ ಹತ್ತಿ 50 ನಿಮಿಷದಲ್ಲಿ ನೇರಲದಲ್ಲಿ ಇಳಿದೆವು. ಅಲ್ಲಿಂದ ನ್ಯಾರೋ ಗೇಜ್ ರೈಲ್ವೆ ಮಾರ್ಗದಲ್ಲಿ ಮಾಥೇರಾನ್ ಗಿರಿಧಾಮಕ್ಕೆ ಚಲಿಸುವ ಟಾಯ್‌ ಟ್ರೈನ್ ಲಭ್ಯವಿದೆ. ಸಮುದ್ರ ಮಟ್ಟದಿಂದ 2640 ಅಡಿ ಎತ್ತರದಲ್ಲಿನ ಈ ಸುಂದರ ತಾಣ ತಲುಪಲು ಟಾಯ್‌ ಟ್ರೈನ್‌ನಲ್ಲಿ ಸುಮಾರು 2 ತಾಸು ಪ್ರಯಾಣ. ಸಾವಕಾಶವಾಗಿ ಹಾವಿನಂತೆ ಸಾಗುವ ಈ ಟ್ರೈನ್ ಬೆಟ್ಟ-ಗುಡ್ಡಗಳ ಸಾಲು ದಾಟುತ್ತ ಕಣ್ಣಿಗೆ ಹಬ್ಬ ನೀಡುತ್ತದೆ. ಇದೊಂದು ಅಪರೂಪದ ಅನುಭವ. ಅಸಂಖ್ಯ ತಿರುವುಗಳು, ಟನಲ್‌ಗಳು, ಮೈ ಜುಮ್ಮೆನಿಸುವ ಪ್ರಪಾತಗಳು, ಚಿಕ್ಕ ಚಿಕ್ಕ ಜಲಪಾತಗಳು, ಗಗನಚುಂಬಿ ಗಿರಿಸಾಲು, ಹಚ್ಚ ಹಸಿರಿನ ಗಿಡ-ಮರಗಳು, ನಿಸರ್ಗ ಪ್ರೇಮಿಗಳ ಮನಸಿಗೆ ಹುಚ್ಚು ಹಿಡಿಸುತ್ತದೆ. ದಿವ್ಯ ಮೌನ, ಪ್ರಶಾಂತ ವಾತಾವರಣ, ಯಾರೋ ನಮ್ಮನ್ನು ಎತ್ತರದ ಗಂಧರ್ವ ಲೋಕಕ್ಕೆ ಕರೆದೊಯ್ಯುತ್ತಿರುವಂತೆ ಭಾಸವಾಗುತ್ತದೆ.

Untitled design (9)

ಮಾಥೇರಾನ್‌ಗೆ ಮುಂಬಯಿ ಅಥವಾ ಪೂನದದಿಂದ ಟ್ಯಾಕ್ಸಿ ಮೂಲಕವೂ ಪ್ರಯಾಣಿಸಬಹುದು. ಆದರೆ, ಟ್ಯಾಕ್ಸಿಯಿಂದ ಕೇವಲ ಅಮನ್ ಲಾಡ್ಜ್ ತನಕ ಮಾತ್ರ ಅವಕಾಶ. ಮುಂದಿನ ಪ್ರಯಾಣ e-riksha ಅಥವಾ ಕುದುರೆ, ಟಾಯ್‌ ಟ್ರೈನ್, ಕೈಯಿಂದ ದೂಡುವ ಗಾಡಿಗಳ ಮೂಲಕ ಮಾಡಬೇಕಾಗುತ್ತದೆ. ಮಾಥೇರಾನ್ ಗಿರಿಧಾಮದ ಇಡೀ ಏಷ್ಯಾ ಖಂಡದಲ್ಲಿನ ಏಕೈಕ ಪ್ರಧೂಷಣ ಮುಕ್ತ, ಆಟೊ ಮೋಟಾರ್ ವಾಹನ ಮುಕ್ತ ಗಿರಿಧಾಮ. ಇಲ್ಲಿ ತಿರುಗಾಡಲು ಕುದುರೆಗಳು, ಕೈಯಿಂದ ದೂಡುವ ಗಾಡಿಗಳು ಇರುತ್ತವೆ. ಚಾರಣ ಪ್ರಿಯರು ಸ್ವತಃ ನಡೆದುಕೊಂಡೇ ಹೋಗಬಹುದು. ಸೂರ್ಯೋದಯ, ಸೂರ್ಯಾಸ್ತ ಪಾಯಿಂಟ್‌ಗಳು, ಚೌಕ ಪಾಯಿಂಟ್, ಹನಿಮೂನ್ ಪಾಯಿಂಟ್, ಮಂಕಿ ಪಾಯಿಂಟ್, ಕಿಂಗ್ ಜಾರ್ಜ್ ಪಾಯಿಂಟ್, ಲೂಸಿಯಾ ಪಾಯಿಂಟ್ ಹೀಗೆ ಅನೇಕ ದೃಶ್ಯಗಳನ್ನು, ನಿಸರ್ಗ ದೇವತೆಯ ಸೌಂದರ್ಯ ವೈಚಿತ್ರ್ಯಗಳನ್ನು ನೋಡಲು ಸಮಯ ಮತ್ತು ಆಸಕ್ತಿ ಬೇಕು. ಪ್ರವಾಸಿಗರನ್ನು ಇಲ್ಲಿಯ ಜನ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಎಲ್ಲ ಪ್ರವಾಸಿಗರಿಗೆ ಅನುಕೂಲವಾಗುವ ಹೊಟೇಲ್‌, ವಿಶ್ರಾಂತಿ ಗೃಹಗಳಿವೆ. ಊಟೋಪಚಾರವೂ ಚೆನ್ನಾಗಿದೆ.

Untitled design (11)

ಮಾಥೇರಾನ್ ಗಿರಿಧಾಮ ಇರುವುದು ಪಶ್ಚಿಮ ಘಟ್ಟದಲ್ಲಿ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಕರ್ಜತ್ ತಾಲೂಕಿನಲ್ಲಿ. ಈ ಪ್ರದೇಶಕ್ಕೆ ತನ್ನದೇ ಆದ ಇತಿಹಾಸವಿದೆ. 1850ರಲ್ಲಿ ಠಾಣಾ ಜಿಲ್ಲೆಯ ಕಲೆಕ್ಟರ್ ಆಗಿದ್ದ ಬ್ರಿಟಿಷ್ ಅಧಿಕಾರಿ Mr Hugh Poyntz Malet ಇದನ್ನು ಗಿರಿಧಾಮವಾಗಿ ಗುರುತಿಸಿದ.1907ರಲ್ಲಿ ಆಡಮ್ ಜೀ ಪೀರ್ಬಾಯ್ ಟಾಯ್‌ ಟ್ರೈನ್ ಲೈನ್ ಹಾಕಿಸಿ ಸಂಪರ್ಕ ಕಲ್ಪಿಸಿದರು. ಅಂದು ಇದು ಬ್ರಿಟಿಷ್ ಅಧಿಕಾರಿಗಳ ಮತ್ತು ಆಗರ್ಭ ಶ್ರೀಮಂತರ ಐಷಾರಾಮಿ ಗಿರಿಧಾಮ. ಇದೇ ಊರಿನಲ್ಲಿ ಆಗ ವಿಠಲಭಾಯಿ, ಲಕ್ಷ್ಮಣ ಕೊತ್ವಾಲ್ ಎಂಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಜನಿಸಿದ್ದರು. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗುಪ್ತ ಸಭೆಗಳು ಆಗುತ್ತಿದ್ದವು ಎನ್ನಲಾಗಿದೆ. ಮಾಥೆರಾನ್‌ನಲ್ಲಿ ಶಿವಾಜಿ ಮಹಾರಾಜರ ಮ್ಯೂಸಿಯಂ ಸಹ ಇದೆ.

ಮಾಥೇರಾನ್ ಗಿರಿಧಾಮ. ಪ್ರದೂಷಣ ರಹಿತ ಪ್ರದೇಶದ ವಾತಾವರಣ, ಪ್ರೇಮಿಗಳ, ನಿಸರ್ಗ ಪ್ರಿಯರ, ಚಾರಣಿಗರ ಸ್ವರ್ಗ ಎನ್ನುವುದರಲ್ಲಿ ಸಂಶಯ ಇಲ್ಲ.