Wednesday, February 4, 2026
Wednesday, February 4, 2026

ನಾವು ಕಂಡ ಕಾಠ್ಮಂಡು

ಮಾಜಿ ದೇವಿ ಕುಮಾರಿಯನ್ನು ಯಾವ ಗಂಡಸೂ ಮದುವೆಯಾಗುವುದಿಲ್ಲ. ಕಾರಣ - ಪುರಾಣ ಮತ್ತು ನಂಬಿಕೆಗಳ ಪ್ರಕಾರ ಮಾಜಿ ದೇವಿಯನ್ನು ಮದುವೆಯಾದರೆ, ಗಂಡನಿಗೆ ಆಯುಷ್ಯ ಕಡಿಮೆಯೆಂದೂ, ಅಲ್ಲದೆ ಕುಮಾರಿಯನ್ನು ಸಂಪೂರ್ಣವಾಗಿ ಶಿಕ್ಷಣ ಮತ್ತು ಜನಸಾಮಾನ್ಯರಿಂದ ದೂರವಿಡಲಾಗಿದ್ದು, ಸಮಾಜದಲ್ಲಿ ಜನಸಾಮಾನ್ಯರ ಜೀವನ ಶೈಲಿಗೆ ಒಗ್ಗಿ ಬಾಳಿ-ಬದುಕುವುದು ಬಲು ಕಷ್ಟವೆಂಬ ಕಾರಣಕ್ಕೆ ಅವಳಿಗೆ ಮದುವೆ ಆಗುವುದಿಲ್ಲ.

  • ಶ್ರೀನಿವಾಸ ಎಂ.ಜಿ. ಪಾಣಿಭಾತೆ

ಕಾಠ್ಮಂಡು, ನೇಪಾಳದ ರಾಜಧಾನಿ. ಸಮುದ್ರಮಟ್ಟದಿಂದ ಸುಮಾರು 4,600 ಅಡಿಗಳಷ್ಟು ಎತ್ತರದಲ್ಲಿರುವ ಸುಂದರ ಹಾಗೂ ಚರಿತ್ರೆ ಸಂಪನ್ನ ನಗರ. ವರ್ಷಪೂರ್ತಿ ಸರಾಸರಿ ಸುಮಾರು 18 ಡಿಗ್ರಿ ತಾಪಮಾನ ಹೊಂದಿರುತ್ತದೆ. ನೇಪಾಳ ಸಾಮ್ರಾಜ್ಯ ಸ್ಥಾಪಕ ಥಾಕುರಿ ಮೂಲದ ರಾಜ ಪೃಥ್ವಿ ನಾರಾಯಣ್ ಷಾ 1768ರಲ್ಲಿ ಗೂರ್ಖಾ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿ ಕಾಠ್ಮಂಡುವನ್ನು ರಾಜಧಾನಿಯಾಗಿ ಮಾಡಿದ್ದರು. 2008ರಲ್ಲಿ ರಾಜಪ್ರಭುತ್ವ ರದ್ದಾಗಿ ಇದು ʻಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ನೇಪಾಳʼವಾಯಿತು. ಇಲ್ಲಿನ ಜನರು ಹಿಂದಿಯಲ್ಲೂ ಮಾತನಾಡುತ್ತಾರೆ.

ʻಬೆಂಗಳೂರು ಟು ಲಂಡನ್‌ʼ ರಸ್ತೆ ಮಾರ್ಗವಾಗಿ ಹೊರಟ ನನ್ನ ಪ್ರಪಂಚ ಪರ್ಯಾಟನೆಯಲ್ಲಿ, ಒಂದು ದಿನದ ಮಟ್ಟಿಗೆ ಇಲ್ಲಿನ ಸ್ಥಳಗಳನ್ನು ನೋಡುವ ಅವಕಾಶ ಸಿಕ್ಕಿತ್ತು. ಕಾಠ್ಮಂಡು ಕೇವಲ ಒಂದು ನಗರವಲ್ಲ – ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕವಾಗಿ ಮನಸನ್ನು ಮುದಗೊಳಿಸುವ ತಾಣ.

ಇದನ್ನೂ ಓದಿ: ವಿಸ್ಕಾನ್ಸಿನ್‌ ಜನರ ವಿಹಾರ ಉದ್ಯಾನವಲ್ಲಿ ವನೋದ್ಯಾನ

ಪಶುಪತಿನಾಥ ದರ್ಶನ

ಈ ದೇವಾಲಯ ಯುನೆಸ್ಕೋ ಪರಂಪರೆಯ ಪಟ್ಟಿಗೆ ಸೇರಿದೆ. ಇದು ಆರಾಧನೆಯ ಜತೆಗೆ ಭಕ್ತಿ, ಸಂಸ್ಕೃತಿ ಮತ್ತು ಶಾಂತಿಯ ಕೇಂದ್ರವಾಗಿದೆ. ಈ ದೇವಸ್ಥಾನದ ಗರ್ಭಗುಡಿಯ ಬಾಗಿಲಲ್ಲಿ ಕುಳಿತು ದೇವರನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತ್ತು. ಗರ್ಭಗುಡಿಗೆ ನಾಲ್ಕು ಬಾಗಿಲುಗಳಿದ್ದು, ಸಂಪೂರ್ಣ ದೇವಾಲಯ ಕಪ್ಪುಕಲ್ಲಿನ ಭದ್ರ ಗೋಡೆಗಳಿಂದ ಕಟ್ಟಲಾಗಿದೆ. ನನ್ನಂತೆ ಹಲವರು ಮೊದಲ ಪೂಜೆಯ ವಿಶೇಷ ದರ್ಶನಕ್ಕೆ ಬಂದು ಸೇರಿದ್ದರು. ಸುಮಾರು ಒಂದೂವರೆ ಮೀಟರ್‌ ಎತ್ತರ ಮತ್ತು ನಾಲ್ಕು ಮುಖದ ಶಿವಲಿಂಗ! ಪ್ರತಿಯೊಂದು ಮುಖವೂ ಬಲಗೈಯಲ್ಲಿ ರುದ್ರಾಕ್ಷಿ ಮಾಲೆ, ಇನ್ನೊಂದರಲ್ಲಿ ಕಮಂಡಲವನ್ನು ಹಿಡಿದಿರುವ ಸಣ್ಣ ಕೈಗಳನ್ನು ಹೊಂದಿದ್ದು, ಭಾರತ ಮತ್ತು ನೇಪಾಳದ ಇತರ ಶಿವಲಿಂಗಗಳಿಗಿಂತ ವಿಭಿನ್ನವಾಗಿದೆ. ಶಿವನ ತಲೆಯಮೇಲೆ ದೊಡ್ಡ ಗೌಮುಖಿಯಿದೆ. ಈ ಲಿಂಗಕ್ಕೆ ಅಭಿಷೇಕದ ಸಮಯ ಬಿಟ್ಟು ಯಾವಾಗಲೂ ಚಿನ್ನದ ವಸ್ತ್ರವನ್ನು ಉಡಿಸಿರುತ್ತಾರೆ. ಕಾಠ್ಮಂಡಿನ ಈ ಪಶುಪತಿನಾಥನ ಲಿಂಗದ ನಾಲ್ಕೂ ದಿಕ್ಕಿನ ಮೂರ್ತಿಗಳು ನಾಲ್ಕು ಅಂಶಗಳನ್ನು ಪ್ರತಿನಿಧಿಸಿದರೆ, ಐದನೇ ಈಶಾನ ಅಂಶವನ್ನು ಸರ್ವ ಲಿಂಗವೂ ಪ್ರತಿನಿಧಿಸುತ್ತದೆ.

katmandu 2

ಪಶುಪತಿನಾಥನ ದರ್ಶನದ ನಂತರ ಆವರಣದಲ್ಲಿದ್ದ – ಗುಹ್ಯೇಶ್ವರಿ, ವಿಷ್ಣು, ಹನುಮಂತ, ಕಪಾಲ-ಮೋಚನ ಮತ್ತು ಹಲವು ದೇವಸ್ಥಾನಗಳನ್ನೂ ನೋಡಿದೆವು. ಇನ್ನೊಂದು ವಿಶೇಷವೆಂದರೆ - ಬಾಗ್ಮತಿ ನದಿ, ಇದು ದೇವಸ್ಥಾನದ ಆವರಣದಲ್ಲೇ ಹರಿಯುತ್ತಿದ್ದು, ಇಲ್ಲಿ ಶವದಹನವನ ಮಾಡುವುದು ಪವಿತ್ರವೆಂದು ಭಾವಿಸುತ್ತಾರೆ.

ಕಾಠ್ಮಂಡಿನ ಜೀವಂತ ದೇವತೆ - ಕುಮಾರಿ ದರ್ಶನ

‘ದೇವಿ ಕುಮಾರಿ’ ಅಥವಾ ‘ಜೀವಂತ ದೇವತೆ’ ನೇಪಾಳಿಯರ ಧಾರ್ಮಿಕ ಸಂಪ್ರದಾಯ. ಆಕೆಯಲ್ಲಿ ದೈವಿಕ ಸ್ತ್ರೀಶಕ್ತಿಯಾಗಿ ಪೂಜಿಸುತ್ತಾರೆ. ನೇಪಾಳದ ಹಲವು ನಗರಗಳಲ್ಲಿ ದೇವಿ ಕುಮಾರಿಗಳಿದ್ದರೂ, ಕಾಠ್ಮಂಡಿನ ಅರಮನೆಯ ದೇವಿ ಕುಮಾರಿ ಅತ್ಯಂತ ಪ್ರಸಿದ್ಧ. ಅವಳು ಅರಮನೆಯ ‘ಕುಮಾರಿ ಘರ್‌’ನಲ್ಲಿ ವಾಸಿಸುತ್ತಾಳೆ. ಅರಮನೆಯ ದೇವಿ ಕುಮಾರಿಯ ಆಯ್ಕೆಯೂ ಕಠಿಣವಾಗಿದ್ದು, ನೇಪಾಳದ ‘ನೆವಾರ್ ಬೌದ್ಧ’ ಸಮುದಾಯದ, ‘ಶಾಕ್ಯ’ ಜಾತಿಯಿಂದ ‘ದುರ್ಗಾದೇವಿ’ ಸ್ವರೂಪದ ತೇಜಸ್ಸು ಇರುವ, 5-6 ವರ್ಷದ, 32 ಭೌತಿಕ ಗುಣಲಕ್ಷಣಗಳನ್ನು ಹೊಂದಿರುವ ಹುಡುಗಿಯನ್ನು ಆಯ್ಕೆ ಮಾಡುತ್ತಾರೆ.

ಹತ್ತಾರು ಸೆಕೆಂಡ್‌ಗಳ ದರ್ಶನ

ನಾವು ಅರಮನೆಯ ಪ್ರವೇಶ ದ್ವಾರದಿಂದ ಒಳಗೆ ಹೋದಾಗ, ವಿಶಾಲ ಅಂಗಳವನ್ನು ಕಾಣಬಹುದು. ಅಂಗಳದ ಸುತ್ತ ನಾಲ್ಕೂ ದಿಕ್ಕಿನಲ್ಲಿ ಹರಡಿದ್ದ ಮೂರಂತಸ್ತಿನ ಹಳೆಯ ಕಪ್ಪುಮರದ ಹೆಂಚಿನ ಮನೆಯಿದ್ದು, ಸುಮಾರು ಜನ ಅಂಗಳದಲ್ಲಾಗಲೇ ಸೇರಿದ್ದರು. ನಮ್ಮ ಗೈಡ್ ಸುರೇಂದರ್‌ ನಮಗೆ ಎದುರಿನ ಮೂರನೇ ಮಹಡಿಯಲ್ಲಿದ್ದ ಮಧ್ಯದ ಕಿಟಕಿಯನ್ನು ತೋರಿಸುತ್ತಾ, ʻದೇವಿ ಆ ಕಿಟಕಿಯಿಂದ 10-15 ಸೆಕೆಂಡ್ ಮಾತ್ರ ದರ್ಶನ ಕೊಡುತ್ತಾಳೆ, ಮಿಸ್ ಮಾಡದೆ ಅತ್ತ ನೋಡುತ್ತಿರಿ. ಫೊಟೋ ತೆಗೆಯಬೇಡಿʼ ಎಂದ. ನಾವು ಮೊಬೈಲನ್ನು ಜೇಬಿಗೆ ಹಾಕಿ, ಕಿಟಕಿಯ ಕಡೆ ಮುಖ ಮಾಡಿ ನೋಡುತ್ತಾ ನಿಂತೆವು. ಮೂರ್ನಾಲ್ಕು ನಿಮಿಷದಲ್ಲಿ ದೇವಿ ಕುಮಾರಿಯು ಅದೇ ಕಿಟಕಿಯಿಂದ ದರ್ಶನ ಕೊಟ್ಟಳು. ದೇವಿಯು ಸುಮಾರು ಎಂಟರಿಂದ ಹತ್ತು ವರ್ಷದ ಶ್ವೇತವರ್ಣದ ಚಂದ್ರಮುಖಿ. ಹಣೆಯ ತುಂಬಾ ಕೆಂಪು ಕುಂಕುಮ ಹಚ್ಚಿಕೊಂಡು, ಕಣ್ಣಿಗೆ ಕಾಡಿಗೆಯಿಂದ ಮೀನಿನಾಕಾರದಲ್ಲಿ ಸಿಂಗರಿಸಿ, ಮೈತುಂಬಾ ಕೆಂಪನೆಯ ಬಟ್ಟೆ, ಕೆಂಪು ಶಾಲು, ಕೊರಳಲ್ಲಿ ದೊಡ್ಡ ಮುತ್ತಿನ ಹಾರಗಳು, ಹೂವಿನ ಮಾಲೆಗಳನ್ನು ಹಾಕಿದ್ದು, ಮುಖದಲ್ಲಿ ಯಾವ ಭಾವವೂ ಇಲ್ಲದೆ ಬಂದು ಕಿಟಕಿಯಲ್ಲಿ ನಿಂತಳು. ಸುಮಾರು ಐದಾರು ಸೆಕೆಂಡುಗಳಷ್ಟೇ ಅವಳ ದರ್ಶನದ ಭಾಗ್ಯ ನಮ್ಮದಾಗಿತ್ತು.

katmandu5

ದೇವಿಯ ಬಗ್ಗೆ ಗೈಡ್ ಸುರೇಂದರ್ ಹೇಳಿದ ವಿಷಯಗಳು

  • ದೇವಿಯು ನಗ ಬಾರದು, ಅಳಲೂ ಬಾರದು - ಅದು ನಿಯಮ. ಒಂದು ವೇಳೆ ಯಾರನ್ನಾದರೂ ನೋಡುತ್ತಾ ದೇವಿ ನಕ್ಕರೆ, ಅವರಿಗೆ ಕೆಡುಕಾಗುತ್ತದೆ ಮತ್ತು ಅತ್ತರೆ, ಅವರಿಗೆ ಸಾವು ಸನ್ನಿಹಿತವಾಗಿದೆಯೆಂಬ ಅರ್ಥ.
  • ದೇವಿಯು ಋತುಮತಿ ಆಗುವವರೆಗೆ ಮಾತ್ರ ದೇವಿಯಾಗಿರುತ್ತಾಳೆ, ಅನಂತರದಲ್ಲಿ ಬದಲಾಯಿಸುತ್ತಾರೆ. ಕಾರಣ - ಕುಮಾರಿಯ ಆಯ್ಕೆಯ ಸಮಯದಲ್ಲಿ ಪಡೆದ ದೇವಿ ಶಕ್ತಿಯು, ಋತುಮತಿಯಾದಾಗ, ಇಲ್ಲವೇ ಯಾವುದೇ ರೀತಿಯಲ್ಲಿ ರಕ್ತವನ್ನು ಕಳೆದುಕೊಂಡರೆ ಅವಳನ್ನು ಬಿಟ್ಟು ಹೋಗುತ್ತದೆ ಎಂದು ನಂಬಿಕೆಯಿಂದ.
  • ಮಾಜಿ ದೇವಿ ಕುಮಾರಿಯನ್ನು ಯಾವ ಗಂಡಸೂ ಮದುವೆಯಾಗುವುದಿಲ್ಲ. ಕಾರಣ - ಪುರಾಣ ಮತ್ತು ನಂಬಿಕೆಗಳ ಪ್ರಕಾರ ಮಾಜಿ ದೇವಿಯನ್ನು ಮದುವೆಯಾದರೆ, ಗಂಡನಿಗೆ ಆಯುಷ್ಯ ಕಡಿಮೆಯೆಂದೂ, ಅಲ್ಲದೆ ಕುಮಾರಿಯನ್ನು ಸಂಪೂರ್ಣವಾಗಿ ಶಿಕ್ಷಣ ಮತ್ತು ಜನಸಾಮಾನ್ಯರಿಂದ ದೂರವಿಡಲಾಗಿದ್ದು, ಸಮಾಜದಲ್ಲಿ ಜನಸಾಮಾನ್ಯರ ಜೀವನ ಶೈಲಿಗೆ ಒಗ್ಗಿ ಬಾಳಿ-ಬದುಕುವುದು ಬಲು ಕಷ್ಟವೆಂಬ ಕಾರಣಕ್ಕೆ ಅವಳಿಗೆ ಮದುವೆ ಆಗುವುದಿಲ್ಲ.

ಹನುಮಾನ್ ಧೋಕಾ

ಭೂಕಂಪದಿಂದ ನೆಲಸಮವಾಗಿದ್ದ ಪ್ರದೇಶಗಳ ಮಧ್ಯೆ, ನವೀಕರಿಸಲ್ಪಟ್ಟ ದೇವಾಲಯಗಳು ಮತ್ತು ಮರದ ಕಟ್ಟಡಗಳು ಕಾಠ್ಮಂಡಿನ ಹಳೆಯ ವೈಭವದ ಕಥೆಯನ್ನು ಹೇಳುತ್ತಿದ್ದವು. ʻಹನುಮಾನ್ ಧೋಕಾʼ - ನೇಪಾಳಿಯಲ್ಲಿ ‘ಧೋಕಾ’ ಎಂದರೆ ‘ದ್ವಾರ’ ಎಂದರ್ಥ. ಅರಮನೆಯ ಪ್ರವೇಶದ್ವಾರದಲ್ಲಿ ದೊಡ್ಡ ಕಲ್ಲಿನ ಕಂಬದ ಮೇಲೆ ಅರಮನೆಯ ರಕ್ಷಣೆಯ ಸಂಕೇತವಾಗಿ ಹನುಮಾನ್ ಪ್ರತಿಮೆಯಿದೆ. ಪ್ರತಾಪ ಮಲ್ಲನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದು, ಇದನ್ನು ‘ಬಸಂತಪುರ ದರ್ಬಾರ್’ ಎಂದೂ ಕರೆಯುತ್ತಾರೆ. ಅದರ ಪಕ್ಕದಲ್ಲಿ ಹಳೆಯ ‘ರಾಯಲ್ ಪ್ಯಾಲೇಸ್’ ಇದೆ. ಹಳೆಯ ಅರಮನೆಯು ಮರಗಳಿಂದಲೇ ಕಟ್ಟಿದ್ದು, ಸುಂದರವಾದ ಕಲ್ಲಿನ ಉಗ್ರನರಸಿಂಹನ ಪ್ರತಿಮೆ ಇದೆ. ಮರದ ಮೇಲೆ ಕೆತ್ತಿದಂಥ ರಾಮಾಯಣದ ಸನ್ನಿವೇಷಗಳ ಕಲಾಕೃತಿಗಳು, ರಾಜ ನಡೆಸುತ್ತಿದ್ದ ದರ್ಬಾರ್ ಹಾಲ್ ಮತ್ತು ರಾಜಮನೆತನಗಳ ಚರಿತ್ರೆ ಸಾರುವ ಅವರ ಭಾವಚಿತ್ರಗಳು ಮಾತ್ರವಲ್ಲದೆ ಅವರ ರಾಜ್ಯಭಾರದ ಅವಧಿಯ ವಿವರಗಳೂ ಅಲ್ಲಿದ್ದವು.

katmandu 1

ದರ್ಬಾರ್ ಸ್ಕ್ವೇರ್‌ನಲ್ಲಿ ಇಂದ್ರಾ ಜಾತ್ರೆ

ಇದು ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿದೆ. ಸುಗ್ಗಿ ಕಾಲದ ಧಾರ್ಮಿಕ ಹಬ್ಬ ‘ಇಂದ್ರಾ ಜಾತ್ರೆ’ಯನ್ನು ಇಲ್ಲಿ ನಡೆಸುತ್ತಾರೆ. ಇದು ಮುಂಗಾರಿನ ಬಳಿಕ ನಡೆಯುವ ನೇಪಾಳಿಯರ ವಿಶಿಷ್ಟ ಹಬ್ಬ. ದೇವತೆ ಮತ್ತು ರಾಕ್ಷಸರನ್ನು ಪ್ರತಿನಿಧಿಸುವ ಮುಖವಾಡ ಧರಿಸಿದವರು ನರ್ತಿಸುತ್ತಿದ್ದರೆ, ಹಲವರು ಇಂದ್ರನ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊತ್ತು ಸಾಗುತ್ತಾರೆ. ಮತ್ತೂ ಹಲವರು ಜೀವಂತ ದೇವಿ ಸ್ವರೂಪದ ‘ದೇವಿ ಕುಮಾರಿ’ಯನ್ನು ರಥದಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡುತ್ತಾರೆ. ಇದು ಮೃತ ಕುಟುಂಬದ ಸದಸ್ಯರನ್ನು ಗೌರವಿಸುವ ಮೆರವಣಿಗೆ ಎಂದು ಇಲ್ಲಿನ ಜನ ನಂಬುತ್ತಾರೆ.

ʻಸ್ವೇಟ್ ಭೈರವ್’ನಲ್ಲಿ ಬಾರ್ಲಿ ಮದ್ಯ

ಇಂದ್ರಾ ಜಾತ್ರೆ ಸಮಯದಲ್ಲಿ ‘ಸ್ವೇಟ್ ಭೈರವ್’ನ ಬಾಯಿಯಲ್ಲಿ ಮರದ ಅಥವಾ ಬಿದಿರಿನ ಕೊಳವೆಯನ್ನು ಇಟ್ಟು, ಅಲ್ಲಿಂದ ಸಾಂಪ್ರದಾಯಿಕವಾಗಿ ತಯಾರಿಸಿದ ಬಾರ್ಲಿ ಅಕ್ಕಿಯ ಮದ್ಯವನ್ನು ಭಕ್ತರಿಗೆ ಕುಡಿಯಲು ಕೊಡುತ್ತಾರೆ. ಈ ಮದ್ಯ ಸೇವಿಸಿದವರು ಆರೋಗ್ಯ ಮತ್ತು ಸಮೃದ್ಧಿ ಹೊಂದುತ್ತಾರೆ ಎಂಬ ನಂಬಿಕೆಯಿದೆ. ಇಲ್ಲಿನ ಸ್ವೇಟ್ ಭೈರವನ ವಿಗ್ರಹ ಪ್ರಪಂಚದಲ್ಲಿನ ದೊಡ್ಡದಾದ ಮೂರ್ತಿಯಾಗಿದ್ದು, ಉಗ್ರ ರೂಪದಲ್ಲಿದೆ. ಈ ದೇವಾಲಯ ವರ್ಷದ ಎಲ್ಲಾ ದಿನಗಳಲ್ಲಿ ಮುಚ್ಚಿದ್ದು, ಈ ಜಾತ್ರೆಯಲ್ಲಿ ಮಾತ್ರ ತೆರೆಯುತ್ತಾರೆ.

katmandu 4

ಸ್ವಯಂಭೂ ಮಹಾಚೈತ್ಯ - ಶಾಂತಿಯ ತಾಣ

ಮಧ್ಯಾಹ್ನದಲ್ಲಿ ಸ್ವಯಂಭೂ ಮಹಾಚೈತ್ಯ ಬೌದ್ಧ ಸ್ತೂಪಕ್ಕೆ ಭೇಟಿ ಕೊಟ್ಟೆವು. ಇದು ಟಿಬೆಟಿಯನ್ನರ ಬೌದ್ಧ ಸ್ತೂಪ. ‘ಸ್ವಯಂಭೂ’ ಎಂದರೆ ‘ಸ್ವಯಂ-ಪ್ರಕಟವಾಗಿರುವುದು’ ಎಂದರ್ಥ. ಇದು ಆಧ್ಯಾತ್ಮಿಕ ಶಾಂತಿ ಮತ್ತು ಜ್ಞಾನೋದಯದ ಸಂಕೇತವೆಂದು ಪರಿಗಣಿಸಲಾಗಿದೆ. ಇಲ್ಲಿ ಮೂರು ಗೋಪುರಗಳಿದ್ದು - ಟಿಬೆಟಿಯನ್, ಹಿಂದೂ ಮತ್ತು ಬೌದ್ಧ ಸಂಸ್ಕೃತಿಗಳ ವಿಶಿಷ್ಟ ಸಮಿಶ್ರಣದ ನೆಲೆಯಾಗಿದೆ. ಬೌದ್ಧ ಸ್ತೂಪವು ಮಧ್ಯದಲ್ಲಿದ್ದು, ಅದರ ನಾಲ್ಕು ದಿಕ್ಕಿಗೂ ಬುದ್ಧನ ಎರಡು ಕಣ್ಣು ಮತ್ತು ಸಣ್ಣ ಮೂಗು ಚಿತ್ರಿಸಲಾಗಿದೆ. ಹಿಂದೂ ದೇವಸ್ಥಾನದ ಮುಂಭಾಗ, ದೊಡ್ಡದಾದ ಶಂಕರನ ‘ಡಮರು’ ಆಕರ್ಷಣೆಯ ಕೇಂದ್ರವಾಗಿದೆ.

ಕಾಠ್ಮಂಡಿನ ಮರೆಯಲಾರದ ಅನುಭವಗಳು

ಕಾಠ್ಮಂಡು ಒಂದು ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾಗಿದ್ದು, ಭೂಕಂಪದಿಂದ ಭಾಗಶಃ ನಾಶವಾಗಿದ್ದರೂ, ಪುನರ್‌ನಿರ್ಮಿಸಿ ನೇಪಾಳದ ಗತವೈಭವನ್ನು ಕಾಪಾಡಿಕೊಂಡು ಬಂದಿದ್ದಾರೆ. ಎಲ್ಲವನ್ನೂ ನೋಡಲು ಕನಿಷ್ಠ ಎರಡು ದಿನವಾದರೂ ಬೇಕಾಗುತ್ತದೆ. ಒಳ್ಳೆಯ ಮಾರ್ಗದರ್ಶಿ ಮತ್ತು ಒಳ್ಳೆಯ ಸಹ ಪ್ರಯಾಣಿಕ ಜತೆಗಿದ್ದರೆ ಇಲ್ಲಿ ಸುಂದರ ಕ್ಷಣಗಳನ್ನು ಕಳೆಯಬಹುದು. ‘ದರ್ಬಾರ್ ಸ್ಕ್ವೇರ್’ನ ಕಟ್ಟೆಯ ಮೇಲೆ ದಿನಪೂರ್ತಿ ಕಳೆಯುವುದೂ ಮನಸಿಗೆ ಮುದ ನೀಡುತ್ತದೆ. ಪಶುಪತಿನಾಥ ದೇವಸ್ಥಾನ, ಬಾಗ್ಮತಿಯ ತಟದಲ್ಲಿ ನಡೆಯುವ ಶವಸಂಸ್ಕಾರಗಳನ್ನು ನೋಡುತ್ತಿದ್ದರೆ, ‘ಜನನ-ಮರಣಗಳ ಮಧ್ಯೆ, ಇಷ್ಟೆಲ್ಲಾ ಜೀವನ ಜಂಜಾಟಗಳನ್ನು ಅನುಭವಿಸಿ, ಒಂದು ದಿನ ನಶ್ವರವಾಗುವ ಈ ಬದುಕಿಗೆ, ಇರುವಷ್ಟು ದಿನ ಎಲ್ಲರೊಂದಿಗೆ ಒಳ್ಳೆಯವರಾಗಿ ಬದುಕಿ ಬಾಳಬಾರದೇಕೆ? ಎಂದು ಅನಿಸದೇ ಇರಲಾರದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!