ರಾಷ್ಟ್ರಪತಿ ಭವನದ ಭವ್ಯತೆಯ ದರ್ಶನ!
ರಾಷ್ಟ್ರಪತಿ ಭವನಕ್ಕೆ ಪ್ರವೇಶಕ್ಕಾಗಿ ಪಾಸ್ ಪಡೆಯುವುದು ಹೇಗೆ ಮತ್ತು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಸಂಬಂಧಿಸಿದ ನಿಯಮಗಳು ಯಾವುವು? ಅದಕ್ಕೆ ನೋಂದಾಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
- ಅಮೃತವಲ್ಲಿ
ಹಲವಾರು ದೇಶಗಳಲ್ಲಿ ರಾಷ್ಟ್ರಪತಿ ಭವನ, ಪಾರ್ಲಿಮೆಂಟ್ ಮತ್ತಿತರ ಭವನಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಆದರೆ ಭಾರತ ತನ್ನ ಭದ್ರತೆಯ ದೃಷ್ಟಿಯಿಂದ ಕೆಲವು ನಿರ್ಬಂಧಗಳನ್ನು ಇಟ್ಟುಕೊಂಡಿತ್ತು. ಇದೀಗ ಬೆಂಗಳೂರಿನ ವಿಧಾನಸೌಧಕ್ಕೆ ಸಾರ್ವಜನಿಕರು ಹೋಗಬಹುದಾಗಿದೆ. ಕೆಲವೇ ದಿನಗಳಲ್ಲಿ ರಾಜಭವನ ನೋಡಲೂ ಅವಕಾಶ ಸಿಗುತ್ತದೆ. ರಾಷ್ಟ್ರಪತಿ ಭವನ ಇಂಥ ಯೋಜನೆಗೆ ಮಾದರಿ ಅನ್ನಬಹುದು.
ರಾಷ್ಟ್ರಪತಿ ಭವನ ಎಂಬುದು ಭಾರತದ ಭವ್ಯ ಕಟ್ಟಡಗಳಲ್ಲಿ ಒಂದು. ಐತಿಹಾಸಿಕವಾಗಿಯೂ ಸಾಕಷ್ಟು ಮಹತ್ವವಿರುವ ಭವನವಿದು. ಭಾರತದ ಶ್ರೇಷ್ಠ ನಿರ್ಮಾಣ ಕಲೆಯ ಮಾದರಿಯಾಗಿದ್ದು, ಆಧುನಿಕ ಇತಿಹಾಸ, ಸಂಸ್ಕೃತಿ ಮತ್ತು ವೈಭವವನ್ನು ಪ್ರತಿಬಿಂಬಿಸುತ್ತದೆ. ಈ ಭವನಕ್ಕೆ ಶಿಲ್ಪಕಲೆ, ವಿನ್ಯಾಸ ಹಾಗೂ ಹಚ್ಚಹಸಿರಿನ ಪರಿಸರ ಅನೇಕ ವೈಶಿಷ್ಟ್ಯಗಳಿವೆ. ಅನೇಕ ಜನರಿಗೆ ರಾಷ್ಟ್ರಪತಿ ಭವನವು ಒಳಗಿನಿಂದ ಹೇಗಿರುತ್ತದೆ, ಅದರ ಒಳಗೆ ಹೋಗಬೇಕು ಎನ್ನುವ ಆಸೆ ಇರುತ್ತದೆ. ನಿಮ್ಮ ಈ ಕನಸನ್ನು ನನಸು ಮಾಡಿಕೊಳ್ಳಬಹುದು. ನೀವು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಬಹುದು. ರಾಷ್ಟ್ರಪತಿ ಭವನಕ್ಕೆ ಪ್ರವೇಶಕ್ಕಾಗಿ ಪಾಸ್ ಪಡೆಯುವುದು ಹೇಗೆ ಮತ್ತು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಸಂಬಂಧಿಸಿದ ನಿಯಮಗಳು ಯಾವುವು? ಅದಕ್ಕೆ ನೋಂದಾಯಿಸಿಕೊಳ್ಳುವುದು ಹೇಗೆ?

ರಾಷ್ಟ್ರಪತಿ ಭವನಕ್ಕೆ ಮೂರು ಭಾಗಗಳಿದ್ದು, ಅಲ್ಲಿಗೆ ಸಾರ್ವಜನಿಕರಿಗೆ ಹೋಗಲು ಅವಕಾಶವಿದೆ. ಮೊದಲ ಭಾಗವು ರಾಷ್ಟ್ರಪತಿ ಭವನದ ಮೊದಲ ಸರ್ಕ್ಯೂಟ್ ಆಗಿದ್ದು, ಇದರಲ್ಲಿ ರಾಷ್ಟ್ರಪತಿ ಭವನದ ಮುಖ್ಯ ಕಟ್ಟಡ, ಅಶೋಕ ಹಾಲ್, ದರ್ಬಾರ್ ಹಾಲ್, ಗ್ರಂಥಾಲಯ, ಡ್ರಾಯಿಂಗ್ ರೂಮ್, ಇತ್ಯಾದಿ ಸೇರಿವೆ. ಎರಡನೇ ಸರ್ಕ್ಯೂಟ್ ವಸ್ತುಸಂಗ್ರಹಾಲಯದ ಭಾಗವಾಗಿದ್ದು,ಇದರಲ್ಲಿ ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯವನ್ನು ನೋಡಬಹುದು. ಮೂರನೇ ಸರ್ಕ್ಯೂಟ್‌ನಲ್ಲಿ ಮೊಘಲ್ ಉದ್ಯಾನಗಳನ್ನು ಒಳಗೊಂಡಿರುವ ಸುಂದರ ಉದ್ಯಾನಗಳಿವೆ.
ಬುಕ್ ಮಾಡುವುದು ಹೇಗೆ?
ನೀವು ರಾಷ್ಟ್ರಪತಿ ಭವನ ಮತ್ತು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲು ಬಯಸಿದರೆ ಇದಕ್ಕಾಗಿ ನೀವು ಆನ್‌ಲೈನ್ ಮೂಲಕ ಬುಕ್ ಮಾಡಬೇಕು.ಮೊದಲು ರಾಷ್ಟ್ರಪತಿ ಭವನದ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, https://visit.rashtrapatibhavan.gov.in/ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನೇರವಾಗಿ ಬುಕಿಂಗ್ ಪುಟ ತೆರೆದುಕೊಳ್ಳುತ್ತದೆ. ನಂತರ ನೀವು ವಿವಿಧ ಸರ್ಕ್ಯೂಟ್‌ಗಳ ಆಯ್ಕೆಗಳನ್ನು ಅಲ್ಲಿ ನೀವು ಕಾಣಬಹುದು. ಆಗ ನೀವು ತಕ್ಷಣವೇ ಬುಕ್ ಮಾಡಬೇಕು. ನಂತರ ನೀವು ಲಭ್ಯವಿರುವ ಸ್ಲಾಟ್ ಮತ್ತು ನಿಮ್ಮ ಆಯ್ಕೆಯ ದಿನಾಂಕವನ್ನು ಆರಿಸಬೇಕಾಗುತ್ತದೆ. ಇದರ ನಂತರ ನೀವು ಫಾರ್ಮ್ ಅನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿ ಮಾಡಬೇಕು ಮತ್ತು ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಒಮ್ಮೆಗೆ ಎಷ್ಟು ಜನ ಹೋಗಬಹುದು?
ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಮೂರು ಸ್ಲಾಟ್‌ಗಳಿವೆ. ಮೊದಲ ಸ್ಲಾಟ್ ಬೆಳಿಗ್ಗೆ 10.30 ರಿಂದ 11.30 ರವರೆಗೆ, ಎರಡನೇ ಸ್ಲಾಟ್ ಮಧ್ಯಾಹ್ನ 12.30 ರಿಂದ 1.30 ರವರೆಗೆ ಮತ್ತು ಮೂರನೇ ಸ್ಲಾಟ್ ಮಧ್ಯಾಹ್ನ 2.30 ರಿಂದ 3.30 ರವರೆಗೆ. ಈ ಸಮಯದಲ್ಲಿ, ಒಂದು ಸ್ಲಾಟ್‌ನಲ್ಲಿ ಗರಿಷ್ಠ 25 ಜನರನ್ನು ಏಕಕಾಲದಲ್ಲಿ ಬುಕ್ ಮಾಡಬಹುದು. ನೀವು ಪ್ರತಿ ವಾರದ ಎರಡು ದಿನಗಳು, ಶನಿವಾರ ಮತ್ತು ಭಾನುವಾರ ಇಲ್ಲಿಗೆ ಭೇಟಿ ನೀಡಬಹುದು ಮತ್ತು ಸರ್ಕಾರಿ ರಜಾದಿನಗಳಲ್ಲಿ ಪ್ರವೇಶವಿರುವುದಿಲ್ಲ. ನೋಂದಣಿ ಶುಲ್ಕ ಪ್ರತಿ ವ್ಯಕ್ತಿಗೆ 50 ರೂ.

ರಾಷ್ಟ್ರಪತಿ ಭವನ ವಸ್ತು ಸಂಗ್ರಹಾಲಯ:
ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯ ಸಂಕೀರ್ಣವು ಮಂಗಳವಾರದಿಂದ ಭಾನುವಾರದವರೆಗೆ ಅಂದರೆ ವಾರದ 6 ದಿನಗಳವರೆಗೆ ತೆರೆದಿರುತ್ತದೆ. ಸರಕಾರಿ ರಜಾದಿನಗಳಲ್ಲಿ ಇದು ಮುಚ್ಚಿರುತ್ತದೆ. ಇದರ ಬುಕಿಂಗ್‌ಗಾಗಿ 4 ಸ್ಲಾಟ್‌ಗಳನ್ನು ನೀಡಲಾಗಿದೆ. ಮೊದಲ ಸ್ಲಾಟ್ ಬೆಳಿಗ್ಗೆ 9.30 ರಿಂದ 11.00 ರವರೆಗೆ, ಎರಡನೇ ಸ್ಲಾಟ್ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ, ಮೂರನೇ ಸ್ಲಾಟ್ ಮಧ್ಯಾಹ್ನ 1.30 ರಿಂದ 3.00 ರವರೆಗೆ ಮತ್ತು ನಾಲ್ಕನೇ ಸ್ಲಾಟ್ ಮಧ್ಯಾಹ್ನ 3.00 ರಿಂದ ಸಂಜೆ 5.00 ರವರೆಗೆ. ಪ್ರತಿ ಸ್ಲಾಟ್‌ಗೆ ಗರಿಷ್ಠ 50 ಜನರಿಗೆ ಅವಕಾಶವಿರುತ್ತದೆ.
ಇನ್ಮುಂದೆ ದೆಹಲಿ ಪ್ರವಾಸಕ್ಕೆ ಹೋದರೆ ರಾಷ್ಟ್ರಪತಿ ಭವನಕ್ಕೂ ಭೇಟಿ ನೀಡಿ ಈ ಭವ್ಯ ಕಟ್ಟಡದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ.