ವಿಶ್ವ ಪ್ರವಾಸ ಮತ್ತು ಪ್ರವಾಸೋದ್ಯಮ ಮಂಡಳಿ (World Travel & Tourism Council – WTTC) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕ್ಷೇತ್ರವು 9.1 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಅಂಕಿ ಅಂಶವು ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುವ ಪ್ರತೀ ಮೂರು ಉದ್ಯೋಗಗಳಲ್ಲಿ ಒಂದು ಪ್ರವಾಸೋದ್ಯಮ ಕ್ಷೇತ್ರದಿಂದಲೇ ಆಗಲಿದೆ ಎಂಬುದನ್ನು ಸೂಚಿಸುತ್ತದೆ.

‘ಫ್ಯೂಚರ್ ಆಫ್ ದ ಟ್ರಾವೆಲ್ ಅಂಡ್ ಟೂರಿಸಂ ವರ್ಕ್‌ಫೋರ್ಸ್’ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾದ ಈ ವರದಿ ಪ್ರಕಾರ, ಜನಸಂಖ್ಯೆ ಹಾಗೂ ರಚನಾತ್ಮಕ ಬದಲಾವಣೆಗಳಿಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ 4.3 ಕೋಟಿಗೂ ಹೆಚ್ಚು ಮಂದಿ ನಿಪುಣ ಕೆಲಸಗಾರರ ಕೊರತೆ ಉಂಟಾಗುವ ಸಾಧ್ಯತೆ ಇದೆ.

tour


ಪ್ರವಾಸೋದ್ಯಮ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಕೊಡುಗೆಯನ್ನು ವಿಶ್ಲೇಷಿಸುವ ಜಾಗತಿಕ ಪ್ರಾಮಾಣಿಕ ಸಂಸ್ಥೆಯಾದ WTTC, ವಿವಿಧ ರಾಷ್ಟ್ರಗಳ ಸರ್ಕಾರಗಳೊಂದಿಗೆ ಕೈಜೋಡಿಸಿ ಪ್ರವಾಸೋದ್ಯಮ ಸಂಬಂಧಿತ ನೀತಿ ಹಾಗೂ ಅಭಿವೃದ್ಧಿ ವಿಚಾರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

Tourism industry


ರೋಮ್‌ನಲ್ಲಿ ನಡೆದ 25ನೇ WTTC ಗ್ಲೋಬಲ್ ಸಮಿಟ್ ಸಂದರ್ಭದಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದ್ದು, ಇದು ವ್ಯಾಪಕ ಅಂತಾರಾಷ್ಟ್ರೀಯ ಸಂಶೋಧನೆ, ಉದ್ಯಮಿಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖ ಸದಸ್ಯರೊಂದಿಗೆ ನಡೆಸಿದ ಸಂದರ್ಶನಗಳ ಆಧಾರದ ಮೇಲೆ ಸಿದ್ಧಗೊಂಡಿದೆ.

ಈ ವರದಿ ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗಾವಕಾಶ, ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಪ್ರಭಾವದ ಮಹತ್ವವನ್ನು ಒತ್ತಿಹೇಳುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಪ್ರಾರಂಭಿಸಿ ಆರ್ಥಿಕ ಶಕ್ತಿಶಾಲಿ ರಾಷ್ಟ್ರಗಳವರೆಗೆ ಪ್ರವಾಸೋದ್ಯಮವು ಭವಿಷ್ಯದ ಉದ್ಯೋಗ ಕ್ಷೇತ್ರದ ಪ್ರಮುಖ ಚಾಲಕವಾಗಲಿದೆ ಎಂಬ ವಿಶ್ವಾಸವನ್ನು ಈ ವರದಿ ಮೂಡಿಸಿದೆ.