ಉತ್ತರ ಪ್ರದೇಶದ ಇಂಡೋ-ನೇಪಾಳ ಗಡಿ ಭಾಗದಲ್ಲಿ ಸಂಪರ್ಕವನ್ನು ಕಲ್ಪಿಸಲು ಮತ್ತು ವ್ಯಾಪಾರ, ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೇಪಾಳಗಂಜ್ ರೋಡ್ (ರೂಪಿದೀಹಾ)-ನನ್‌ಪರಾ-ಬಹ್ರೈಚ್ ರೈಲು ವಿಭಾಗದ ನವೀಕರಣ ಹಾಗೂ ಬ್ರಾಡ್‌ಗೇಜ್ ಪರಿವರ್ತನೆಯನ್ನು ಪೂರ್ಣಗೊಳಿಸಲಾಗಿದೆ. ಈ ಮಹತ್ವದ ರೈಲು ಮಾರ್ಗವನ್ನು ಮತ್ತು ಹೊಸ ರೈಲು ಸೇವೆಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೋಕಾರ್ಪಣೆಗೊಳಿಸಿದ್ದು, ರೂಪಿದೀಹಾವನ್ನು ವಾರಣಾಸಿಯೊಂದಿಗೆ ಸಂಪರ್ಕಿಸುವ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.

ಇದನ್ನೂ ಓದಿ: ವಾರಾಣಸಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಹಾರಿದ ಗುಂಡು: ಇಬ್ಬರಿಗೆ ಗಾಯ!

ಬಹ್ರೈಚ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ದಶಕಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಗಡಿ ಪ್ರದೇಶದ ಹಲವು ವರ್ಷಗಳ ಬೇಡಿಕೆ ಈಗ ಈಡೇರಿದೆ ಎಂದು ತಿಳಿಸಿದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದರು. ಒಟ್ಟು 56 ಕಿ.ಮೀ ಉದ್ದದ ಈ ರೈಲು ಮಾರ್ಗವನ್ನು ನಿಗದಿತ ಸಮಯದೊಳಗೆ 730 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಸಿಎಂ ಯೋಗಿ ಹರ್ಷ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೇ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಈ ಪ್ರದೇಶಕ್ಕೆ ನಾಲ್ಕು ಹೊಸ ರೈಲು ಸೇವೆಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

ಈ ಹೊಸ ರೈಲು ಮಾರ್ಗವು ಭಾರತ ಮತ್ತು ನೇಪಾಳ ನಡುವಿನ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಅಯೋಧ್ಯೆ, ವಾರಾಣಸಿ, ಗೋರಖ್‌ಪುರ ಮತ್ತು ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದಂಥ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ ಎಂದು ಅವರು ಬಣ್ಣಿಸಿದರು. ಇದರೊಂದಿಗೆ ಬಹ್ರೈಚ್ ಮತ್ತು ಖಲೀಲಾಬಾದ್ ನಡುವೆ ಹೊಸ ರೈಲು ಮಾರ್ಗ ನಿರ್ಮಾಣವಾಗುತ್ತಿದ್ದು, ಸಿದ್ಧಾರ್ಥನಗರ, ಶೋಹರತ್‌ಗಢ ಮತ್ತು ಬಲರಾಮಪುರ ಮೂಲಕ ಬಹ್ರೈಚ್ ಮತ್ತು ಗೋರಖ್‌ಪುರ ನಡುವಿನ ಸಂಪರ್ಕವನ್ನು ಸುಧಾರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಪ್ರಕಟಿಸಿದರು.