ಕರ್ನಾಟಕ ಚಿತ್ರಕಲಾ ಪರಿಷತ್‌ ವತಿಯಿಂದ ಆಯೋಜಿಸಲಾಗುತ್ತಿರುವ 23ನೇ ಚಿತ್ರಸಂತೆ 2026ರ ಜನವರಿ 4ರಂದು (ಭಾನುವಾರ) ಬೆಂಗಳೂರಿನಲ್ಲಿ ನಡೆಯಲಿದೆ. ದೇಶದ ಅತಿದೊಡ್ಡ ಮುಕ್ತ ಕಲಾ ಮೇಳವೆಂದು ಪರಿಗಣಿಸಲ್ಪಡುವ ಈ ಏಕದಿನ ಕಾರ್ಯಕ್ರಮ, ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.

ಚಿತ್ರಸಂತೆಯನ್ನು ಕುಮಾರಕೃಪಾ ರಸ್ತೆ, ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ಹೊಟೇಲ್‌ವರೆಗೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತದೆ. ಈ ಬಾರಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.

ಸುಮಾರು 1,500ಕ್ಕೂ ಅಧಿಕ ಮಳಿಗೆಗಳು ಚಿತ್ರಸಂತೆಯಲ್ಲಿ ಇರಲಿದ್ದು, 22 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ ಕಲಾವಿದರು ಭಾಗವಹಿಸಲಿದ್ದಾರೆ. ಚಿತ್ರಕಲೆ, ಶಿಲ್ಪಕಲೆ, ಕ್ಯಾರಿಕೇಚರ್‌, ಸಮಕಾಲೀನ ಮತ್ತು ಪಾರಂಪರಿಕ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಿ ಮಾರಾಟ ಮಾಡಲಾಗುತ್ತದೆ.

chitrasante (1)

ಈ ವರ್ಷದ ಚಿತ್ರಸಂತೆಯು ಪ್ರಮುಖವಾಗಿ ಪರಿಸರಕ್ಕೆ ಸಂಬಂಧಿಸಿದ್ದು, ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂದು ಬೆಳಿಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಬಂಧಿತ ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಚಿತ್ರಸಂತೆ ಕಲಾವಿದರಿಗೆ ನೇರವಾಗಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟ ಮಾಡುವ ಅವಕಾಶವನ್ನು ಒದಗಿಸುತ್ತದೆ. ಹಿರಿಯ ಕಲಾವಿದರು, ಯುವ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳಿಗೆ ಇದು ಮಹತ್ವದ ವೇದಿಕೆಯಾಗಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರತಿ ವರ್ಷ ಐವರು ಖ್ಯಾತ ಸಾಧಕ ಕಲಾವಿದರಿಗೆ ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿ ನೀಡಿ ಗೌರವಿಸುತ್ತಿತ್ತು. ಆದರೆ, ಈ ವರ್ಷದಿಂದ ಆ ಹಣದಿಂದ ಚಿತ್ರಕಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್‌.ಶಂಕರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.