ಬೀದರ್-ಬೆಂಗಳೂರು ವಿಮಾನ ಸೇವೆ ಪುನರಾರಂಭ
ವಿಮಾನಯಾನ ಸಂಸ್ಥೆಗಳು ಎದುರಿಸುವ ನಷ್ಟವನ್ನು ಭರಿಸಲು ವಯಬಿಲಿಟಿ ಗ್ಯಾಪ್ ಫಂಡಿಂಗ್ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಈ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಭರಿಸಲಾಗುವುದು. ಇದರಿಂದ ವಿಮಾನ ಸೇವೆ ನಿರಂತರವಾಗಿ ಕಾರ್ಯನಿರ್ವಹಿಸಲು ಸಹಾಯವಾಗಲಿದೆ.
ಬೀದರ್ ಜಿಲ್ಲೆಗೆ ಮಹತ್ವದ ಬೆಳವಣಿಗೆಯಾಗಿ, ಸ್ಥಗಿತಗೊಂಡಿದ್ದ ನಾಗರಿಕ ವಿಮಾನಯಾನ ಸೇವೆ ಮತ್ತೆ ಆರಂಭಗೊಳ್ಳಲು ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಬೀದರ್–ಬೆಂಗಳೂರು ನಡುವೆ ಕಾರ್ಯನಿರ್ವಹಿಸುತ್ತಿದ್ದ ವಿಮಾನ ಸೇವೆ ಪುನರಾರಂಭವಾಗಲಿದ್ದು, ಟರ್ಮಿನಲ್ ಕಾರ್ಯಾಚರಣೆಗಳು ಮತ್ತೆ ಚೇತರಿಸಿಕೊಳ್ಳಲು ದಾರಿ ಸುಗಮವಾಗಿದೆ. ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರು, ಬೀದರ್‌ನ ನಾಗರಿಕ ವಿಮಾನಯಾನ ಸೇವೆಗೆ ಅಗತ್ಯ ಅನುದಾನ ಒದಗಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಈ ನಿರ್ಧಾರದ ಭಾಗವಾಗಿ, ವಿಮಾನಯಾನ ಸಂಸ್ಥೆಗಳು ಎದುರಿಸುವ ನಷ್ಟವನ್ನು ಭರಿಸಲು ವಯಬಿಲಿಟಿ ಗ್ಯಾಪ್ ಫಂಡಿಂಗ್ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಈ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಭರಿಸಲಾಗುವುದು. ಇದರಿಂದ ವಿಮಾನ ಸೇವೆ ನಿರಂತರವಾಗಿ ಕಾರ್ಯನಿರ್ವಹಿಸಲು ಸಹಾಯವಾಗಲಿದ್ದು, ಜಿಲ್ಲೆಯ ಸಂಪರ್ಕ ವ್ಯವಸ್ಥೆ, ಪ್ರವಾಸೋದ್ಯಮ ಹಾಗೂ ಕೈಗಾರಿಕಾ ವಲಯಗಳಿಗೆ ಮಹತ್ತರ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.