ವಿಮಾನಕ್ಕೆ ಹಕ್ಕಿ ಡಿಕ್ಕಿ: 3ನೇ ಸ್ಥಾನದಲ್ಲಿದೆ ಬೆಂಗಳೂರು ಏರ್‌ಪೋರ್ಟ್!
ದೇಶದೆಲ್ಲೆಡೆ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆಯುವ ಪ್ರಕರಣಗಳು ಹೊಸದೇನಲ್ಲ. ಆದರೆ ಇಂಥ ಪ್ರಕರಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು , ಕಳೆದ ಐದೂವರೆ ವರ್ಷಗಳಲ್ಲಿ 343 ಪ್ರಕರಣಗಳು ದಾಖಲಾಗಿದೆ ಎಂದರೆ ನಂಬಲೇಬೇಕು.
ಬೆಂಗಳೂರು: ಇತ್ತೀಚೆಗೆ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದರ ಪರಿಣಾಮ ಅನೇಕ ಸಾವು ನೋವುಗಳೂ ಸಂಭವಿಸಿರುವುದು ದಾಖಲಾಗಿದೆ. ಕಳೆದ ಐದೂವರೆ ವರ್ಷಗಳಲ್ಲಿ ದಕ್ಷಿಣ ಭಾರತದ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಥ 343 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಏರ್ ಪೋರ್ಟ್ 3ನೇ ಸ್ಥಾನದಲ್ಲಿದೆ. ನವದೆಹಲಿ ಮೊದಲ ಸ್ಥಾನ (695), ಮುಂಬಯಿ (405) ಎರಡನೇ ಸ್ಥಾನದಲ್ಲಿದೆ.
ಕೇಂದ್ರ ವಿಮಾನಯಾನ ಸಚಿವಾಲಯದ ಪ್ರಕಾರ, 2020 ರಿಂದ 2025ರ ನಡುವೆ ದೇಶಾದ್ಯಂತ ಸುಮಾರು 2,800 ವಿಮಾನ ಪಕ್ಷಿ ಡಿಕ್ಕಿ ಪ್ರಕರಣಗಳು ವರದಿಯಾಗಿವೆ. ಕೋವಿಡ್19 ಹಿನ್ನೆಲೆಯಲ್ಲಿ 2020 2021ರಲ್ಲಿ ಈ ಸಂಖ್ಯೆ ಕಡಿಮೆಯಿತ್ತು. ಆದರೆ, ವಿಮಾನಯಾನ ಪುನಾರಂಭಗೊಂಡ ನಂತರ ಹೆಚ್ಚಿನ ಸಂಖ್ಯೆ ಪ್ರಕರಣಗಳು ವರದಿಯಾಗುತ್ತಿವೆ.

ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನ ಕೆಐಎನಲ್ಲಿ ವಾರ್ಷಿಕ ಸರಾಸರಿ 85 ಪ್ರಕರಣಗಳು ದಾಖಲಾಗಿವೆ. 2020 ರಿಂದ ದಕ್ಷಿಣ ಭಾರತದ ಇತರ ನಗರಗಳಾದ ಹೈದರಾಬಾದ್‌ನಲ್ಲಿ 191, ಚೆನ್ನೈನಲ್ಲಿ 188 ಮತ್ತು ತಿರುವನಂತಪುರಂನಲ್ಲಿ 109 ಪ್ರಕರಣಗಳು ವರದಿಯಾಗಿವೆ.
ತಡೆಯುವುದು ಹೇಗೆ ?
ಪಕ್ಷಿ ಡಿಕ್ಕಿ ಅಪಾಯಗಳನ್ನು ಕಡಿಮೆಗೊಳಿಸಲು, ವಿಮಾನ ನಿಲ್ದಾಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಯುಯಾನ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಬಹು ಹಂತದ ವನ್ಯಜೀವಿ ಅಪಾಯ ನಿರ್ವಹಣಾ ಯೋಜನೆ ಜಾರಿಗೆ ತಂದಿದೆ. ಇದರ ಮೇಲ್ವಿಚಾರಣೆಗೆ ತಂಡವನ್ನೂ ರಚಿಸಲಾಗಿದೆ. ಪಕ್ಷಿ ನಿವಾರಕ, ಹೆಗ್ಗಣಗಳ ನಿಯಂತ್ರಣ ಮತ್ತು ಕೀಟ ನಿರ್ವಹಣೆ ಮತ್ತು ನಿಲ್ದಾಣದ ಸುತ್ತಲಿನ ತ್ಯಾಜ್ಯ ನಿರ್ವಹಣೆಯ ಮೇಲೆ ಕೇಂದ್ರಿಕರಿಸಿದ ಜಾಗೃತಿಯೂ ಇದರಲ್ಲಿ ಸೇರಿದೆ ಎನ್ನುತ್ತವೆ ಮೂಲಗಳು.