ಕಲಬುರಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಲಬುರಗಿ ವತಿಯಿಂದ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು ಹಾಗೂ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಕರ್ಷಕ ಬ್ರೋಷರ್ ಗಳನ್ನು ಹೊರತರಲಾಗಿದ್ದು, ಕೈಪಿಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶರಣಬಸವೇಶ್ವರ ದೇವಾಲಯ, ಸೂರ್ಯನಾರಾಯಣ ದೇವಾಲಯ, ಹಫ್ತ್ ಗುಂಬಜ್, ಚಿಂಚೋಳಿ ಅಭಯಾರಣ್ಯ ಸೇರಿದಂತೆ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿವೆ, ಇನ್ನೂ ಕೆಲವು ಪ್ರವಾಸಿ ತಾಣಗಳು ಪ್ರಚಾರವಿಲ್ಲದೆ ಹೆಚ್ಚಿನ ಪ್ರವಾಸಿಗರಿಗೆ ತಿಳಿಯದಂತೆ ಉಳಿದಿವೆ. ಜಿಲ್ಲೆಯ ಎಲ್ಲಾ ಮಹತ್ವದ ಪ್ರವಾಸಿ ತಾಣಗಳ ಮಾಹಿತಿಗಳನ್ನು ಪ್ರಚಾರಪಡಿಸುವುದಕ್ಕೆ ಮತ್ತು ಕಲಬುರಗಿ ಜಿಲ್ಲೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಕುರಿತು ಕ್ರೂಢೀಕೃತ ಮತ್ತು ಸಂಕ್ಷಿಪ್ತವಾಗಿ ಮಾಹಿತಿಯನ್ನು ಒದಗಿಸಲು ಬ್ರೋಷರ್ ಗಳು ಸಹಕಾರಿಯಾಗಲಿವೆ ಎಂದರು.

ಅಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರಗುವ ಪ್ರವಾಸೋದ್ಯಮ ಮೇಳಗಳು, ಟ್ರಾವೆಲ್ ಎಕ್ಸ್‌ಪೋಗಳಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿವಿಧ ರಾಜ್ಯ ಮತ್ತು ದೇಶಗಳ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು, ಹೂಡಿಕೆದಾರರು ಮತ್ತು ಪ್ರವಾಸೋದ್ಯಮ ಉತ್ಸಾಹಿಗಳ ಮೂಲಕ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಹೆಚ್ಚಿನ ಪ್ರಚಾರ ಮಾಡಲು ಕಾಫಿಟೇಬಲ್ ಪುಸ್ತಕಗಳು ಉತ್ತಮವೆನಿಸುತ್ತವೆ ಎಂಬುದಾಗಿ ಸಿಎಂ ಹೇಳಿದರು.