'ದಟ್ಸ್ ಯು' ಅಭಿಯಾನಕ್ಕೆ ಮುಖ್ಯಮಂತ್ರಿ ಸುಖು ಚಾಲನೆ
ಚಂಡೀಗಢ-ಶಿಮ್ಲಾ ಪ್ರವೇಶ ಮಾರ್ಗ, ಗಗ್ಗಲ್ ಮತ್ತು ಭುಂತರ್ ವಿಮಾನ ನಿಲ್ದಾಣಗಳು ಮತ್ತು ಐತಿಹಾಸಿಕ ಕಲ್ಕಾ-ಶಿಮ್ಲಾ ಆಟಿಕೆ ರೈಲು ಮಾರ್ಗ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ 'ದಟ್ಸ್ ಯು' ಅಭಿಯಾನವನ್ನು ಆರಂಭಿಸುವುದಾಗಿ ಪ್ರವಾಸೋದ್ಯಮ ನಿರ್ದೇಶಕ ವಿವೇಕ್ ಭಾಟಿಯಾ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಇಲಾಖೆಯ 'ದಟ್ಸ್ ಯು' ಅಭಿಯಾನಕ್ಕೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಇಂದು ಚಾಲನೆ ನೀಡಿದ್ದು, ರಾಜ್ಯದ ಪ್ರವಾಸೋದ್ಯಮದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಲಿದೆ. ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ಮೀರಿ ʼಸ್ಲೋ ಟೂರಿಸಂʼ ಪರಿಕಲ್ಪನೆಯನ್ನು ಉತ್ತೇಜಿಸುವ ಗುರಿ ಈ ಯೋಜನೆಯದ್ದಾಗಿದೆ.
ರಾಜ್ಯದ ಗಡಿಗಳು, ವಿಮಾನ ನಿಲ್ದಾಣಗಳು ಮತ್ತು ಪಾರಂಪರಿಕ ರೈಲು ನಿಲ್ದಾಣಗಳು ಸೇರಿದಂತೆ ಪ್ರಮುಖ ಪ್ರವೇಶ ಸ್ಥಳಗಳಲ್ಲಿ ಪ್ರವಾಸಿಗರನ್ನು ಸ್ವಾಗತಿಸಲು ಈ ಅಭಿಯಾನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸುಖು ಹೇಳಿದರು. ಇದು ರಾಜ್ಯಕ್ಕೆ ಬರುವ ಸಂದರ್ಶಕರು ಮತ್ತು ಹಿಮಾಲಯದ ನೈಸರ್ಗಿಕ ಪರಿಸರದ ನಡುವೆ ವಿಶೇಷವಾದ ಬಾಂಧವ್ಯ ಬೆಸೆಯುವ ಉದ್ದೇಶ ಹೊಂದಿದೆ. ʻಸ್ಲೋ ಟೂರಿಸಂʼಗೆ ಒತ್ತು ನೀಡುವುದು ಪರಿಸರದ ಸುಸ್ಥಿರತೆಗೆ ರಾಜ್ಯ ಸರಕಾರ ಬದ್ಧ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಅಷ್ಟಾಗಿ ಗುರುತಿಸಿಕೊಳ್ಳದ ಹಳ್ಳಿಗಳನ್ನು ಮುನ್ನೆಲೆಗೆ ತರುವ ಮೂಲಕ, ಅಲ್ಲಿನ ಸ್ಥಳೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯೊಂದಿಗೆ ಪ್ರವಾಸಿಗರು ಹೆಚ್ಚಿಗೆ ತೊಡಗಿಸಿಕೊಳ್ಳುವ ಹಾಗೂ ಆ ಮೂಲಕ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಇದು ಜನಪ್ರಿಯ ಪ್ರವಾಸಿ ತಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. 'ದಟ್ಸ್ ಯು' ಅಭಿಯಾನವು ಪ್ರವಾಸಿಗರನ್ನು ಹಿಮಾಚಲ ಪ್ರದೇಶದ ಕಲೆ, ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿಯ ಕಡೆಗೆ ತಿರುಗಿ ನೋಡುವಂತೆ ಮಾಡುತ್ತದೆ.
ಚಂಡೀಗಢ-ಶಿಮ್ಲಾ ಪ್ರವೇಶ ಮಾರ್ಗ, ಗಗ್ಗಲ್ ಮತ್ತು ಭುಂತರ್ ವಿಮಾನ ನಿಲ್ದಾಣಗಳು ಮತ್ತು ಐತಿಹಾಸಿಕ ಕಲ್ಕಾ-ಶಿಮ್ಲಾ ಆಟಿಕೆ ರೈಲು ಮಾರ್ಗ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಈ ಅಭಿಯಾನವನ್ನು ಆರಂಭಿಸುವುದಾಗಿ ಪ್ರವಾಸೋದ್ಯಮ ನಿರ್ದೇಶಕ ವಿವೇಕ್ ಭಾಟಿಯಾ ತಿಳಿಸಿದ್ದಾರೆ.