ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಗೆ “ಗ್ಲೋಬಲ್ ಟೂರಿಸಂ ಅವಾರ್ಡ್”
ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಈ ಬಾರಿಯ “ಗ್ಲೋಬಲ್ ಟೂರಿಸಂ ಅವಾರ್ಡ್-2025” ಪ್ರಶಸ್ತಿಗೆ ಪಾತ್ರವಾಗಿದ್ದು, ಗ್ಲೋಬಲ್ ನ್ಯೂಸ್ ನೆಟ್‌ವರ್ಕ್ ಸಂಸ್ಥೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಆಂಧ್ರಪ್ರದೇಶ ರಾಜ್ಯವನ್ನು ಭಾರತದ ಅತ್ಯಂತ ಭರವಸೆಯ ಪ್ರವಾಸಿ ತಾಣಗಳಲ್ಲೊಂದಾಗಿ ರೂಪಿಸಲು ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಕೈಗೊಂಡ ಅದ್ಭುತ ಉಪಕ್ರಮಗಳಿಗಾಗಿ “ಗ್ಲೋಬಲ್ ಟೂರಿಸಂ ಅವಾರ್ಡ್ 2025” ಗೌರವಕ್ಕೆ ಇಲಾಖೆ ಪಾತ್ರವಾಗಿದೆ.
ಮಂಗಳವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಪ್ರವಾಸೋದ್ಯಮ ಸಲಹೆಗಾರ್ತಿ ನಿಶಿತಾ ಗೋಯಲ್ ಅವರು ಇಲಾಖೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಪ್ರಶಸ್ತಿಯನ್ನು ನೀಡಿದ ಗ್ಲೋಬಲ್ ನ್ಯೂಸ್ ನೆಟ್‌ವರ್ಕ್, ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಕೈಗೊಂಡ ಹೊಸ ಪ್ರವಾಸೋದ್ಯಮ ನೀತಿ ರೂಪಣೆ, ಹೂಡಿಕೆದಾರರಿಗೆ ಮಾರ್ಗದರ್ಶನ, ಪರಿಸರ ಸ್ನೇಹಿ ರಾಜಧಾನಿ ನಿರ್ಮಾಣ ಹಾಗೂ ರಾಜ್ಯದ ಆರ್ಥಿಕ ಬಲವರ್ಧನೆಯ ಕಾರ್ಯತಂತ್ರ ಮುಂತಾದ ದೂರದೃಷ್ಟಿಯ ಯೋಜನೆಗಳನ್ನು ಶ್ಲಾಘಿಸಿತು. ಭಾರತದ ಸಮಗ್ರ ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ನೀಡಿದ ಕೊಡುಗೆ ಹಾಗೂ ಭಾರೀ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಸಾಧಿಸಿದ ಯಶಸ್ಸಿಗೂ ಇಲಾಖೆ ಮೆಚ್ಚುಗೆಗೆ ಪಾತ್ರವಾಯಿತು.

ಈ ಪ್ರಶಸ್ತಿಯು ವಿಶೇಷವಾಗಿ “ದಕ್ಷಿಣ ಭಾರತದ ಗ್ರ್ಯಾಂಡ್ ಕ್ಯಾನಿಯನ್” ಎಂದು ಕರೆಯಲ್ಪಡುವ ಗಂಡಿಕೋಟಾ ಪ್ರದೇಶವನ್ನು ಪ್ರಮುಖ ಪರಿಸರ ಸ್ನೇಹಿ ಮತ್ತು ಸಾಹಸ ಪ್ರವಾಸಿ ತಾಣವಾಗಿ ರೂಪಿಸುವಲ್ಲಿ, ಅಗತ್ಯ ಮೂಲಸೌಕರ್ಯ ಹಾಗೂ ಆತಿಥ್ಯ ಸೇವೆಗಳನ್ನು ಸೃಷ್ಟಿಸುವಲ್ಲಿ, ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಹಾಗೂ ಪಿಪಿಪಿ ಮಾದರಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮೂಲಕ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಇಲಾಖೆಯ ಅವಿರತ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ 15 ತಿಂಗಳಲ್ಲಿ, ಇಲಾಖೆ 103 ಪ್ರಮುಖ ಸಂಸ್ಥೆಗಳೊಂದಿಗೆ ಮಹತ್ವದ ಒಪ್ಪಂದಗಳನ್ನು (MoUs) ಸಹಿ ಮಾಡಿದ್ದು, ಈ ಸಾಧನೆಯೂ ಕೂಡ ಪ್ರಶಸ್ತಿ ಪಡೆಯಲು ಕಾರಣವಾಯಿತು.