ಏಷ್ಯಾದ ಹೃದಯಭಾಗದಲ್ಲಿರುವ ಕಿರಿದಾದರೂ ವೈವಿಧ್ಯದಲ್ಲಿ ಹಿರಿದಾದ ದ್ವೀಪ ಶ್ರೀಲಂಕಾ. ಕೆಲ ವರ್ಷಗಳ ಹಿಂದೆ ಆರ್ಥಿಕ ಸಂಕಷ್ಟ, ಪ್ರವಾಸೋದ್ಯಮದ ಕುಸಿತ ಹಾಗೂ ಜಾಗತಿಕ ಅನಿಶ್ಚಿತತೆಗಳನ್ನು ಎದುರಿಸಿದ ಈ ದ್ವೀಪ ಇಂದು ಅಸಾಧಾರಣ ರೀತಿಯಲ್ಲಿ ಪುನರುತ್ಥಾನಗೊಳ್ಳುತ್ತಿದೆ. ಪ್ರವಾಸೋದ್ಯಮವನ್ನು ತನ್ನ ಜೀವಾಳವನ್ನಾಗಿಸಿಕೊಂಡಿರುವ ಶ್ರೀಲಂಕಾ, ಇದೀಗ ಜಗತ್ತಿನ ಪ್ರವಾಸಿಗರ ಗಮನವನ್ನು ಪುನಃ ಸೆಳೆಯುತ್ತಿದ್ದು, ಆಕರ್ಷಕ ಅನುಭವಗಳ ಮೂಲಕ ತನ್ನನ್ನು ‘Comeback Island’ ಆಗಿ ಮರುಸ್ಥಾಪಿಸಿಕೊಂಡಿದೆ.

ಪ್ರವಾಸಿಗರ ಪ್ರವಾಹ ಸಂಖ್ಯೆ ಹೇಳುವ ಕಥೆ

2025ರ ಮೊದಲಾರ್ಧದಲ್ಲೇ ಒಂದು ಮಿಲಿಯನ್‌ಗಿಂತ ಹೆಚ್ಚು ವಿದೇಶಿ ಪ್ರವಾಸಿಗರು ಶ್ರೀಲಂಕಾಕ್ಕೆ ಆಗಮಿಸಿದ್ದಾರೆ. ಭಾರತ, ರಷ್ಯಾ, ಇಂಗ್ಲೆಂಡ್ ಹಾಗೂ ಮಧ್ಯಪೂರ್ವ ರಾಷ್ಟ್ರಗಳು ಪ್ರಮುಖ ಮೂಲಗಳಾಗಿವೆ. ಹಿಂದಿನ ವರ್ಷಗಳಿಗಿಂತ ಶೇಕಡಾವಾರು ಏರಿಕೆಯನ್ನು ಕಂಡಿರುವುದು ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಆಶಾವಾದವನ್ನು ಹುಟ್ಟಿಸಿದೆ. ಸರ್ಕಾರವು 2025ರಲ್ಲೇ 2 ಮಿಲಿಯನ್ ಪ್ರವಾಸಿಗರ ಗುರಿ ಹೊಂದಿದ್ದು, 3 ಬಿಲಿಯನ್ ಅಮೇರಿಕನ್ ಡಾಲರ್ ಆದಾಯವನ್ನು ಗಳಿಸುವ ನಿರೀಕ್ಷೆಯಲ್ಲಿದೆ.

mirissa beach

ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಮುಖ ಕಾರಣಗಳು

1. ಪ್ರವಾಸಿಗರಿಗೆ ಸುಲಭವಾದ ಪ್ರವೇಶ

ಶ್ರೀಲಂಕಾ ಸರ್ಕಾರವು ಉಚಿತ ವೀಸಾ ಹಾಗೂ 30 ದಿನಗಳ ಪ್ರವಾಸ ವೀಸಾ ಸೌಲಭ್ಯವನ್ನು ಹಲವಾರು ದೇಶಗಳಿಗೆ ನೀಡಿರುವುದು ಪ್ರಮುಖ ಹೆಜ್ಜೆ. ಇದರಿಂದ ಪ್ರಯಾಣ ಪ್ರಕ್ರಿಯೆ ಸುಗಮವಾಗಿ, ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

2. ಜಾಗತಿಕ ಮಾರುಕಟ್ಟೆಯಲ್ಲಿ ಪ್ರಚಾರ

ವಿಶ್ವದ ಪ್ರಮುಖ ಪ್ರವಾಸಿ ಮೇಳಗಳಲ್ಲಿ ಪಾಲ್ಗೊಂಡು, ಏರ್‌ಲೈನ್ ಸಂಪರ್ಕವನ್ನು ವಿಸ್ತರಿಸುವ ಮೂಲಕ ಶ್ರೀಲಂಕಾ ತನ್ನ ಪ್ರವಾಸೋದ್ಯಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದೆ. “Small Island, Big Experience” ಎಂಬ ಸಂದೇಶದೊಂದಿಗೆ ದೇಶ ತನ್ನ ವೈವಿಧ್ಯಮಯ ಪ್ರವಾಸಿ ಅನುಭವಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ.

tea plantation

3. ವಿಸ್ಮಯ ತಾಣಗಳು

ಚಹಾ ತೋಟಗಳ ಹಸಿರು ಹೊದಿಕೆಯುಳ್ಳ ನುವರ ಎಲಿಯಾ, ಪರ್ವತ ರೈಲು ಮಾರ್ಗದ ಸುಂದರ ಯಾನ, ತಿಮಿಂಗಿಲ ವೀಕ್ಷಣೆಗೆ ಪ್ರಸಿದ್ಧ ಮಿರಿಸ್ಸಾ ಕಡಲತೀರ, ಯುನೆಸ್ಕೋ ಪರಂಪರೆ ತಾಣಗಳಾದ ಸಿಗಿರಿಯಾ ಕೋಟೆ, ಅನುರಾಧಪುರ ಮತ್ತು ಪೋಲೊನ್ನರುವಾ, ಬೌದ್ಧ ಯಾತ್ರಾ ತಾಣಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.

Sigiriya rock fort

4. ಆರ್ಥಿಕ ಪುನರುತ್ಥಾನಕ್ಕೆ ಪೂರಕ

ಪ್ರವಾಸೋದ್ಯಮದ ಏರಿಕೆಯಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೊಟೇಲ್‌ಗಳು, ಹೋಮ್‌ಸ್ಟೇಗಳು, ಸ್ಥಳೀಯ ಸಾರಿಗೆ, ಹಸ್ತಕಲಾ ಉದ್ಯಮಗಳು ಮತ್ತೆ ಜೀವಂತವಾಗುತ್ತಿವೆ. ಇದು ಕೇವಲ ಪ್ರವಾಸಿಗರ ಸಂಭ್ರಮವಲ್ಲ, ಒಂದು ರಾಷ್ಟ್ರದ ಆರ್ಥಿಕ ಚೇತರಿಕೆಯ ದ್ಯೋತಕವೂ ಹೌದು.

Srilanka train

ಏಕೆ ಈಗ ಭೇಟಿ ನೀಡಬೇಕು?

  • ವರ್ಷಪೂರ್ತಿ ಪ್ರವಾಸಕ್ಕೆ ಸೂಕ್ತ ಹವಾಮಾನ: ದಕ್ಷಿಣ–ಪಶ್ಚಿಮ ಭಾಗಕ್ಕೆ ಡಿಸೆಂಬರ್–ಮಾರ್ಚ್ ಮತ್ತು ಪೂರ್ವ ಕರಾವಳಿಗೆ ಮೇ–ಸೆಪ್ಟೆಂಬರ್ ಪ್ರವಾಸಿಗರು ಭೇಟಿ ನೀಡಲು ಉತ್ತಮ ಕಾಲವಾಗಿದೆ.
  • ಅನನ್ಯ ಸಂಸ್ಕೃತಿ ಮತ್ತು ಪಾಕಶೈಲಿ: ಸಿಂಹಳ ಮತ್ತು ತಮಿಳು ಸಂಸ್ಕೃತಿಗಳ ವೈವಿಧ್ಯಮಯ ಮಿಶ್ರಣ, ಸುಗಂಧಮಯ ಮಸಾಲೆಯ ಪಾಕಶೈಲಿ ಪ್ರವಾಸಿಗರನ್ನು ಪ್ರಫುಲ್ಲಗೊಳಿಸುತ್ತವೆ.
  • ಆಧ್ಯಾತ್ಮಿಕ–ಪ್ರಕೃತಿ ಸಂಯೋಜನೆ: ಬೌದ್ಧ ಯಾತ್ರೆ, ಪ್ರಾಚೀನ ದೇಗುಲಗಳು, ಜೊತೆಗೆ ಚಹಾ ತೋಟಗಳು, ಕಡಲ ತೀರಗಳು, ವನ್ಯಜೀವಿ ಉದ್ಯಾನಗಳು ಸುಂದರ ಪ್ರಕೃತಿಯ ಮಡಿಲಿನಲ್ಲಿ ಅಮೋಘ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತವೆ.
  • ಅತ್ಯುತ್ತಮ ಆತಿಥ್ಯ: ಶ್ರೀಲಂಕಾದ ಜನರ ಸ್ನೇಹಭಾವ ಹಾಗೂ ಹೃದಯಸ್ಪರ್ಶಿ ಆತಿಥ್ಯವು ಪ್ರತಿಯೊಬ್ಬ ಪ್ರವಾಸಿಗನನ್ನೂ ಬೆರಗಾಗಿಸುತ್ತದೆ.

ಶ್ರೀಲಂಕಾ ಇಂದು ಕೇವಲ ಪ್ರವಾಸಿಗರನ್ನು ಸೆಳೆಯುವ ತಾಣವಲ್ಲ, ಅದು ಒಂದು ರಾಷ್ಟ್ರದ ಪುನರುತ್ಥಾನದ ಕಥೆಯಾಗಿದೆ. ಪ್ರಾಚೀನ ಇತಿಹಾಸ, ಸಮೃದ್ಧ ಸಂಸ್ಕೃತಿ, ಸುಂದರ ಪ್ರಕೃತಿ ಮತ್ತು ಜನರ ಆತಿಥ್ಯ, ಈ ಎಲ್ಲ ಅಂಶಗಳೇ ಶ್ರೀಲಂಕಾವನ್ನು “ಏಷ್ಯಾದ ಮುತ್ತು” ಎಂದು ಕರೆಯಲು ಕಾರಣ. ಪ್ರವಾಸಿಗರಿಗಾಗಿ ಹೊಸ ದ್ವಾರಗಳನ್ನು ತೆರೆದಿರುವ ಈ ದ್ವೀಪ, ತನ್ನ ಅನೂಹ್ಯ ವಿಶೇಷತೆಗಳೊಂದಿಗೆ ಪ್ರವಾಸಿಗರ ಫೇವ್‌ರೇಟ್‌ ಐಲ್ಯಾಂಡ್‌ ಆಗಿ ಮಿಂಚುತ್ತಿದೆ.