ಚಿಕ್ಕಮಗಳೂರು: ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆ ಹಚ್ಚ ಹಸಿರಿನಿಂದ ಕಂಗೊಳಿಸುವುದಲ್ಲದೆ, ಧುಮ್ಮಿಕ್ಕಿ ಹರಿಯುವ ಜಲಪಾತಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಆದರೆ ಈ ಬಾರಿ ಜೂನ್‌ ತಿಂಗಳಿನಲ್ಲಿಯೇ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರೋ ವಾತಾವಣದಿಂದಾಗಿ ಜಿಲ್ಲೆಯ ಎತ್ತಿನ ಭುಜ ಪ್ರವಾಸಿ ತಾಣ, ಚಾರಣಕ್ಕೆ ಸುರಕ್ಷತವಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ. ಅಲ್ಲದೆ ಇಂದಿನಿಂದ ತಾತ್ಕಾಲಿಕ ನಿಷೇಧವನ್ನು ಜಾರಿಗೊಳಿಸಿ, ಪ್ರಕಟಣೆ ಹೊರಡಿಸಿದೆ.

ettina bhuja new

ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಸುಮಾರು 7 ಕಿ.ಮೀ. ಚಾರಣ ಹೋಗಿ, ಪ್ರವಾಸಿಗರು ಎತ್ತಿನಭುಜದ ಸೌಂದರ್ಯ ಸವಿಯುತ್ತಿದ್ದರು. ನಿರಂತರ ಮಳೆಯಿದ್ದರೂ ಜಾರುತ್ತಿರುವ ನೆಲದ ನಡುವೆಯೂ ಚಾರಣ ಮಾಡುತ್ತಿದ್ದರು. ಇಲ್ಲಿಗೆ ನೇರವಾಗಿ ಯಾವುದೇ ವಾಹನ ಸೌಕರ್ಯವಿಲ್ಲದಿರುವ ಕಾರಣದಿಂದ ಚಾರಣಿಗರಿಗೆ ಅನಾಹುತ ಸಂಭವಿಸಿದರೆ ಆಸ್ಪತ್ರೆಗೆ ಕರೆತರುವುದು ಕಷ್ಟಸಾಧ್ಯವಾಗುತ್ತದೆ. ಅಲ್ಲದೆ ಕಾಡುಪ್ರಾಣಿಗಳ ಕಾಟದಿಂದ ಮಳೆಗಾಲದಲ್ಲಿ ಚಾರಣವನ್ನು ಮಾಡುವುದಂತೂ ಅಸಾಧ್ಯ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ತಾತ್ಕಾಲಿಕ ನಿಷೇಧದ ತೀರ್ಮಾನವನ್ನು ಕೈಗೊಂಡಿದೆ.

ನಿಷೇಧ ಯಾವಾಗಿನಿಂದ ?

ಅರಣ್ಯ ಇಲಾಖೆಯು ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ ಒಂದು ತಿಂಗಳ ಕಾಲ ಅಂದರೆ ಜುಲೈ 1ರಿಂದ ಜುಲೈ 31ರ ರವರೆಗೆ ಎತ್ತಿನಭುಜ ಚಾರಣವನ್ನು ಸ್ಥಗಿತಗೊಳಿಸಿದ್ದು, ಓರ್ವ ಕಾವಲುಗಾರನನ್ನು ನೇಮಿಸಲು ಸೂಚನೆ ನೀಡಲಾಗಿದೆ.