ಕಾಜಿರಂಗದ ಸೌಂದರ್ಯಕ್ಕೆ ನಾನು ಮನಸೋತಿದ್ದೇನೆ. ಇದೊಂದು ಅದ್ಬುತ ಲೋಕ ಎಂದು ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದರು. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ಅವರು ಅಲ್ಲಿನ ಜೀಪ್ ಸಫಾರಿಯಲ್ಲಿ ಬಾಗೋರಿ ಅರಣ್ಯ ಶ್ರೇಣಿಯಲ್ಲಿ ಸುತ್ತಾಡಿದರು. ಉದ್ಯಾನವನದ ಸೌಂದರ್ಯ ಮತ್ತು ವನ್ಯಜೀವಿಗಳ ನಿರ್ವಹಣೆ ಬಗ್ಗೆ ತಿಳಿದುಕೊಂಡ ಅವರು, ಇದೇ ವೇಳೆ ಬಾಗೋರಿ ಶ್ರೇಣಿಯ ಪ್ರವೇಶ ಭಾಗದಲ್ಲಿರುವ ಸಾಂಪ್ರದಾಯಿಕ ಕೈಮಗ್ಗ ಮಳಿಗೆಗಳಿಗೆ ಭೇಟಿ ನೀಡಿದರು. ಕಾಜಿರಂಗ ಪ್ರವಾಸದ ಅನುಭವವು ಸ್ಮರಣೀಯವಾಗಿದೆ ಎಂದು ಹೊಗಳಿದ ಕುಂಬ್ಳೆ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿರುವ ಹೂಲಾಕ್ ಗಿಬ್ಬನ್‌ಗಳು, ಘೇಂಡಾಮೃಗಗಳು ಮತ್ತು ಹಲವಾರು ಪಕ್ಷಿ ಪ್ರಭೇದಗಳನ್ನು ನೋಡಿ ಖುಷಿಪಟ್ಟರು. ಉದ್ಯಾನದ ಪ್ರಶಾಂತ ವಾತಾವರಣಕ್ಕೆ ಮನಸೋತ ಕ್ರಿಕೆಟಿಗ, ಉದ್ಯಾನವನದ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.