ಗಯಾ ಪ್ರವಾಸೋದ್ಯಮ ಉತ್ತೇಜನಕ್ಕೆ ಸಿಂಗಲ್-ವಿಂಡೋ ವ್ಯವಸ್ಥೆ ಜಾರಿ
ಸಿಂಗಲ್-ವಿಂಡೋ ವ್ಯವಸ್ಥೆಯಡಿ ಹೊಟೇಲ್, ಪ್ರವಾಸೋದ್ಯಮ ಯೋಜನೆಗಳು ಹಾಗೂ ಇತರ ಉದ್ಯಮಗಳಿಗೆ ಸಂಬಂಧಿಸಿದ ಪರವಾನಗಿಗಳು, ವಿದ್ಯುತ್-ನೀರು ಸಂಪರ್ಕ ಮತ್ತು ವಿವಿಧ ಇಲಾಖೆಗಳ ಅನುಮತಿಗಳನ್ನು ತ್ವರಿತವಾಗಿ ನೀಡಲು ಸಾಧ್ಯವಾಗಲಿದೆ. ಇದರಿಂದ ಈವರೆಗೆ ಉದ್ಯಮಿಗಳಿಗೆ ಆಗುತ್ತಿದ್ದ ಅಡಚಣೆಗಳು ಕಡಿಮೆಯಾಗಲಿದ್ದು, ಹೂಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಯಾ ಹಾಗೂ ಬೋಧಗಯಾ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಗಯಾ ಜಿಲ್ಲಾಡಳಿತ ಸಿಂಗಲ್-ವಿಂಡೋ ವ್ಯವಸ್ಥೆ ಜಾರಿಗೆ ತರಲು ಯೋಜನೆ ರೂಪಿಸಿದೆ. ಈ ವ್ಯವಸ್ಥೆಯ ಮೂಲಕ ಪ್ರವಾಸೋದ್ಯಮ ಹಾಗೂ ಸಂಬಂಧಿತ ಉದ್ಯಮಗಳಿಗೆ ಅಗತ್ಯವಿರುವ ಅನುಮತಿಯನ್ನು ಒಂದೇ ಸ್ಥಳದಲ್ಲಿ ಶೀಘ್ರವಾಗಿ ಒದಗಿಸುವ ಉದ್ದೇಶ ಹೊಂದಲಾಗಿದೆ.
ಜಿಲ್ಲಾಧಿಕಾರಿ ಶಶಾಂಕ ಶುಭಂಕರ್ ಅವರು ಈ ಕುರಿತು ಮಾತನಾಡಿ, ಮಹಾಬೋಧಿ ಹಾಗೂ ವಿಷ್ಣುಪಾದ್ ಪ್ರವಾಸೋದ್ಯಮ ಕಾರಿಡಾರ್‌ಗಳ ರೂಪರೇಖೆಗಳನ್ನು ಶೀಘ್ರದಲ್ಲೇ ಸ್ವೀಕರಿಸುವ ನಿರೀಕ್ಷೆಯಿದೆ ಎಂದರು. ಈ ಕಾರಿಡಾರ್‌ಗಳು ಭಕ್ತರು ಮತ್ತು ಪ್ರವಾಸಿಗರಿಗೆ ಸುಲಭ ಸಂಚಾರ, ಮೂಲಸೌಕರ್ಯ ಸುಧಾರಣೆ ಮತ್ತು ಉತ್ತಮ ಅನುಭವ ಒದಗಿಸುವಂತೆ ಅಭಿವೃದ್ಧಿಪಡಿಸಲಾಗುತ್ತದೆ.

ಸಿಂಗಲ್-ವಿಂಡೋ ವ್ಯವಸ್ಥೆಯಡಿ ಹೊಟೇಲ್, ಪ್ರವಾಸೋದ್ಯಮ ಯೋಜನೆಗಳು ಹಾಗೂ ಇತರ ಉದ್ಯಮಗಳಿಗೆ ಸಂಬಂಧಿಸಿದ ಪರವಾನಗಿಗಳು, ವಿದ್ಯುತ್-ನೀರು ಸಂಪರ್ಕ ಮತ್ತು ವಿವಿಧ ಇಲಾಖೆಗಳ ಅನುಮತಿಗಳನ್ನು ತ್ವರಿತವಾಗಿ ನೀಡಲು ಸಾಧ್ಯವಾಗಲಿದೆ. ಇದರಿಂದ ಈವರೆಗೆ ಉದ್ಯಮಿಗಳಿಗೆ ಆಗುತ್ತಿದ್ದ ಅಡಚಣೆಗಳು ಕಡಿಮೆಯಾಗಲಿದ್ದು, ಹೂಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಸಾರ್ವಜನಿಕ ದೂರುಗಳ ಪರಿಣಾಮಕಾರಿ ಪರಿಹಾರಕ್ಕೆ ಒತ್ತು ನೀಡಲಾಗುತ್ತಿದ್ದು, ದೂರುಗಳ ಡೇಟಾಬೇಸ್ ಸಿದ್ಧಪಡಿಸಿ, ಅವುಗಳ ಪ್ರಗತಿ ಮಾಹಿತಿಯನ್ನು ಆನ್‌ಲೈನ್ ಅಥವಾ ಮೊಬೈಲ್ ಮೂಲಕ ನಾಗರಿಕರಿಗೆ ತಿಳಿಸಲಾಗುತ್ತದೆ. ತಿಂಗಳಿಗೊಮ್ಮೆ ವಿಶೇಷ ಜನತಾ ದರ್ಬಾರ್‌ಗಳನ್ನು ಆಯೋಜಿಸುವ ಯೋಜನೆಯೂ ಇದೆ.
ಗಯಾ ಮತ್ತು ಬೋಧಗಯಾ ಮಾತ್ರವಲ್ಲದೆ, ಗೇಹ್ಲೌರ್ ಕಣಿವೆಯಂಥ ಇತರ ಪ್ರವಾಸಿ ತಾಣಗಳನ್ನೂ ಅಭಿವೃದ್ಧಿಪಡಿಸುವ ಉದ್ದೇಶ ಜಿಲ್ಲಾಡಳಿತದದ್ದಾಗಿದೆ. ಈ ಕ್ರಮಗಳಿಂದ ಗಯಾ ಜಿಲ್ಲೆ ದೇಶಿ-ವಿದೇಶಿ ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಕ ತಾಣವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.