ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮದ ವಿಸ್ತರಣೆ
ಸ್ವದೇಶ್ ದರ್ಶನ್ ಯೋಜನೆ ಮೂಲಕ ಹಳ್ಳಿಗಳನ್ನು ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಹಿಂದೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ದೇಶಾದ್ಯಂತ ಗ್ರಾಮಗಳನ್ನು ಪ್ರೋತ್ಸಾಹಿಸಲು 'ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ' ಸ್ಪರ್ಧೆಯನ್ನು ಆಯೋಜಿಸಲಾಗತ್ತು.
ಭಾರತ ಸರಕಾರದ ಹೊಸ ಉಪಕ್ರಮಗಳು ಮತ್ತು ಗ್ರಾಮೀಣ ಪ್ರವಾಸೋದ್ಯಮದ ವಿಸ್ತರಣೆಯು ಪ್ರವಾಸಿಗರಿಗೆ ಭಾರತದ ನೈಜ ಸಂಸ್ಕೃತಿ, ಪರಂಪರೆ ಮತ್ತು ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸಲು ವೇದಿಕೆ ಕಲ್ಪಿಸಿಕೊಡುತ್ತಿದೆ.
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಹಳ್ಳಿಗಳ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಪ್ರವಾಸಿಗರಿಗೆ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಪ್ರವಾಸದ ಅನುಭವವನ್ನು ನೀಡುವುದು. ಹಳ್ಳಿಗಳಲ್ಲಿ ಪ್ರವಾಸೋದ್ಯಮ ಬೆಳೆದಂತೆ ಸ್ಥಳೀಯ ಕಲಾಕಾರರು, ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ನೇರ ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳು, ಸಾಂಪ್ರದಾಯಿಕ ಅಡುಗೆ ಪದ್ಧತಿ ಮತ್ತು ಕರಕುಶಲ ಕಲೆಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಅವುಗಳನ್ನು ಜೀವಂತವಾಗಿರಿಸಲಾಗುತ್ತಿದೆ.
ಇದನ್ನೂ ಓದಿ: ಅಜಂತಾದಲ್ಲಿ ಪರ್ಫ್ಯೂಮ್ ಹಾಕಂಗಿಲ್ಲ ಗೊತ್ತಾ?
ಪ್ರವಾಸಿಗರು ಹಳ್ಳಿಗಳಿಗೆ ಹೋಗಿ ಗದ್ದೆಗಳಲ್ಲಿ ಕೆಲಸ ಮಾಡಬಹುದು, ಹಸುಗಳನ್ನು ಮೇಯಿಸಬಹುದು ಮತ್ತು ಸಾವಯವ ಕೃಷಿಯ ಬಗ್ಗೆ ತಿಳಿಯಬಹುದು. ಮಡಿಕೆ ಮಾಡುವುದು, ನೇಯ್ಗೆ ಅಥವಾ ಚಿತ್ರಕಲೆಯನ್ನು ಸ್ಥಳೀಯ ತಜ್ಞರಿಂದ ಕಲಿಯುವ ಅವಕಾಶವಿದೆ. ಹಳ್ಳಿಯ ಮನೆಗಳಲ್ಲೇ ಪ್ರವಾಸಿಗರು ತಂಗಲು ಅನುಕೂಲವಾಗುವಂತೆ ಸುಸಜ್ಜಿತ 'ಹೋಂ ಸ್ಟೇ'ಗಳನ್ನು ಉತ್ತೇಜಿಸಲಾಗುತ್ತಿದೆ. ಹಳ್ಳಿಗಳಲ್ಲೂ ಇಂಟರ್ನೆಟ್ ಸೌಲಭ್ಯ ಲಭ್ಯವಿರುವುದರಿಂದ ಪ್ರವಾಸಿಗರು ಸುಲಭವಾಗಿ ಬುಕಿಂಗ್ ಮಾಡಲು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿದೆ.
ಭಾರತದ ಜನಸಂಖ್ಯೆಯ ಸುಮಾರು 65% ಕ್ಕೂ ಹೆಚ್ಚು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ, ಇದು ಗ್ರಾಮೀಣ ಪ್ರವಾಸೋದ್ಯಮಕ್ಕೆ ಬೃಹತ್ ಅವಕಾಶ ನೀಡುತ್ತದೆ. ಪ್ರವಾಸೋದ್ಯಮ ಸಚಿವಾಲಯವು ಭಾರತದಾದ್ಯಂತ 50ಕ್ಕೂ ಹೆಚ್ಚು ಗ್ರಾಮಗಳನ್ನು ಮಾದರಿ ಪ್ರವಾಸೋದ್ಯಮ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಲು ಗುರುತಿಸಿದೆ. ಈ ವಲಯವು ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಭಾಗದ ಆದಾಯವನ್ನು 15-20% ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.