ಭಾರತ ದೇಶದಲ್ಲಿ ಇರುವ ಐತಿಹಾಸಿಕ ಹಾಗೂ ಪಾರಂಪರಿಕ ಸಂಸ್ಕೃತಿಗಳನ್ನು ರಕ್ಷಿಸಲು ಇಸ್ರೋ ಸಂಸ್ಥೆ ಹೊಸ ಅತ್ಯಾಧುನಿಕ ಉಪಗ್ರಹ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. 'ಭುವನ್' ಜಿಯೋ-ಪ್ಲಾಟ್‌ಫಾರ್ಮ್‌ನಲ್ಲಿ 'ಭಾರತ್ ದರ್ಶನ್ ' ಹಾಗೂ ʼಕಸ್ತೂರಿʼ ಎಂಬ ಎರಡು ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.

ಏನಿದರ ವಿಶೇಷ?

ಭಾರತ್ ದರ್ಶನ್ ಅಪ್ಲಿಕೇಶನ್, ಯುನೆಸ್ಕೋ ಮಾನ್ಯತೆ ಪಡೆದ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳ 2D ಮತ್ತು 3D ವರ್ಚುವಲ್ ಪ್ರವಾಸ ನೀಡುತ್ತದೆ. ಅಂದರೆ, ಜಗತ್ತಿನ ಯಾವುದೇ ಮೂಲೆಯಿಂದ ಕೆಂಪು ಕೋಟೆ, ಕುತುಬ್ ಮಿನಾರ್ ಅಥವಾ ತಾಜ್ ಮಹಲ್‌ನಂಥ ತಾಣಗಳನ್ನು ಪ್ರವಾಸಿಗರು ಡಿಜಿಟಲ್ ರೂಪದಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: ಶ್ರೀನಗರದಲ್ಲಿ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್

ಇನ್ನು 'ಕಸ್ತೂರಿ' ದೇಶದ ಮೊದಲ ಜಿಯೋ-ಸ್ಪೇಷಿಯಲ್ ಗೇಟ್ ವೆ. ಉಪಗ್ರಹ ಚಿತ್ರಗಳು, ಐತಿಹಾಸಿಕ ನಕ್ಷೆಗಳು ಮತ್ತು ಕ್ಷೇತ್ರ ದತ್ತಾಂಶಗಳನ್ನು ಒಟ್ಟುಗೂಡಿಸಿ, ಸ್ಮಾರಕಗಳ ಸುತ್ತಮುತ್ತಲಿನ ಪರಿಸರ ಮತ್ತು ಇತಿಹಾಸದ ಬಗ್ಗೆ ಆಳವಾದ ಮಾಹಿತಿ ನೀಡುತ್ತದೆ.

ಉಪಗ್ರಹ ಚಿತ್ರಗಳ ಸಹಾಯದಿಂದ ಐತಿಹಾಸಿಕ ತಾಣಗಳ ಸುತ್ತ ನಡೆಯುವ ಅಕ್ರಮ ಕಟ್ಟಡ ನಿರ್ಮಾಣ ಅಥವಾ ಒತ್ತುವರಿಗಳನ್ನು ಅಧಿಕಾರಿಗಳು ಸುಲಭವಾಗಿ ಪತ್ತೆಹಚ್ಚಬಹುದು ಹಾಗೂ ಸ್ಮಾರಕಗಳಿಗೆ ಉಂಟಾಗುವ ಹಾನಿಯನ್ನು ಕೂಡಲೇ ಗಮನಿಸಬಹುದು. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಭಾರತದ ಎಲ್ಲಾ ಪ್ರಮುಖ ಪರಂಪರೆಯ ತಾಣಗಳನ್ನು ಒಂದೇ ವೇದಿಕೆಯಡಿ ತರಲಾಗಿದೆ. ಪುರಾತತ್ವ ಇಲಾಖೆ ಮತ್ತು ಸಂಸ್ಕೃತಿ ಸಚಿವಾಲಯದ ಅಧಿಕೃತ ದತ್ತಾಂಶಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವುದರಿಂದ ಪ್ರವಾಸಿಗರಿಗೆ ನಿಖರವಾದ ಇತಿಹಾಸ ತಿಳಿಯುತ್ತದೆ.