ವನ್ಯಜೀವಿಗಳ ಸುರಕ್ಷತೆಯ ಕಾರಣಕ್ಕೆ ಕರ್ನಾಟಕ ಸರಕಾರ ಇತ್ತೀಚೆಗೆ ಸಫಾರಿ ನಿರ್ಬಂಧಿಸಿ ಆದೇಶವನ್ನು ಹೊರಡಿಸಿತ್ತು. ಈ ಆದೇಶದ ವಿರುದ್ಧ ಟ್ರಾವೆಲ್ ಏಜೆನ್ಸಿ ಮತ್ತು ರೆಸಾರ್ಟ್ ಮಾಲೀಕರಿಂದ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಕೊನೆಗೂ ಅವರ ಮನವಿಗೆ ಓಗೊಟ್ಟಿರುವ ಸರಕಾರ ಈ ಕುರಿತು ಮಹತ್ವದ ಸಭೆಯನ್ನು ಇತ್ತೀಚೆಗೆ ವಿಧಾನಸೌಧದಲ್ಲಿ ನಡೆಸಿತು.

ಮುಖ್ಯಮಂತ್ರಿಗಳು ಮತ್ತು ಅರಣ್ಯ ಸಚಿವರ ಉಪಸ್ಥಿತಿಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಸಫಾರಿ ಪುನರಾರಂಭಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಸ್ತೃತವಾಗಿ ಚರ್ಚೆ ಮಾಡಿದ್ದು ವಸ್ತುಸ್ಥಿತಿಯ ವಿಶ್ಲೇಷಣೆ ನಡೆಸಲಾಗಿದೆ.

ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ನಿಯಂತ್ರಿಸಲು ಸಫಾರಿಗೆ ನಿರ್ಬಂಧಿಸಿದ್ದ ಸರಕಾರ ಈಗ ಸ್ಥಳೀಯರ ಉದ್ಯೋಗ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮರು ಪರಿಶೀಲಿಸಲು ಸರಕಾರ ಮುಂದಾಗಿದೆ. ತಾಂತ್ರಿಕ ಸಮಿತಿಯೊಂದನ್ನು ರಚಿಸಿ, ಅಭಿಪ್ರಾಯ ಪಡೆಯಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.