ಮಹಾರಾಷ್ಟ್ರ ಸರಕಾರದಿಂದ ಬೀಚ್ ಶ್ಯಾಕ್ ನೀತಿಗೆ ಅನುಮೋದನೆ
ಬೀಚ್ ಶ್ಯಾಕ್ ಸ್ಥಾಪಿಸಲು ಆಸಕ್ತರಿರುವವರು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಮುಂದಿನ ಹಂತಗಳಲ್ಲಿ ಇನ್ನಷ್ಟು ಕಡಲತೀರಗಳನ್ನು ಈ ನೀತಿಯ ವ್ಯಾಪ್ತಿಗೆ ತರಲು ಸರಕಾರ ಯೋಜನೆ ರೂಪಿಸಿದೆ.
ಮಹಾರಾಷ್ಟ್ರ ಸರಕಾರವು ರಾಜ್ಯದ ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬೀಚ್ ಶ್ಯಾಕ್ (Beach Shack) ನೀತಿಗೆ ಅಧಿಕೃತ ಅನುಮೋದನೆ ನೀಡಿದೆ. ಈ ನೀತಿ ಜಾರಿಯಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ದೊರೆಯಲಿದ್ದು, ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯದ ಅವಕಾಶಗಳು ಹೆಚ್ಚಾಗಲಿವೆ ಎಂಬುದು ಸರಕಾರ ನಿರೀಕ್ಷೆ.
ಈ ನೀತಿಯಡಿ, ಗೋವಾ ಮಾದರಿಯಲ್ಲಿ ಕೊಂಕಣ ಕರಾವಳಿಯ ಆಯ್ದ ಕಡಲತೀರಗಳಲ್ಲಿ ತಾತ್ಕಾಲಿಕ ಬೀಚ್ ಶ್ಯಾಕ್‌ಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ. ಪ್ರಥಮ ಹಂತದಲ್ಲಿ ರತ್ನಗಿರಿ ಜಿಲ್ಲೆಯ ಗುಹಾಗರ್ ಮತ್ತು ಆರೆವರೆ, ಸಿಂಧುದುರ್ಗ ಜಿಲ್ಲೆಯ ಕುಂಕೇಶ್ವರ ಮತ್ತು ತರ್ಕರ್ಲಿ, ರೈಗಡ್ ಜಿಲ್ಲೆಯ ವ್ಯರ್ಸೋಲಿ ಮತ್ತು ದಿವೇಗಾರ, ಹಾಗೂ ಪಾಲಘರ್ ಜಿಲ್ಲೆಯ ಕೆಲ್ವೇ ಮತ್ತು ಬೋರ್ದಿ ಕಡಲತೀರಗಳನ್ನು ಆಯ್ಕೆ ಮಾಡಲಾಗಿದೆ.
ಬೀಚ್ ಶ್ಯಾಕ್ ಸ್ಥಾಪಿಸಲು ಆಸಕ್ತರಿರುವವರು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಮುಂದಿನ ಹಂತಗಳಲ್ಲಿ ಇನ್ನಷ್ಟು ಕಡಲತೀರಗಳನ್ನು ಈ ನೀತಿಯ ವ್ಯಾಪ್ತಿಗೆ ತರಲು ಸರಕಾರ ಯೋಜನೆ ರೂಪಿಸಿದೆ.

ಈ ನೀತಿ ಅನ್ವಯ ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಶ್ಯಾಕ್‌ಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಕನಿಷ್ಠ 80 ಶೇಕಡಾ ಹುದ್ದೆಗಳು ಸ್ಥಳೀಯರಿಗೆ ಮೀಸಲಾಗಿರುತ್ತವೆ ಎಂದು ತಿಳಿಸಲಾಗಿದೆ. ಇದರಿಂದ ಕರಾವಳಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರ ದೊರೆಯಲಿದೆ.
ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಬೀಚ್ ಶ್ಯಾಕ್‌ಗಳ ಸ್ಥಾಪನೆಗಾಗಿ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (Coastal Zone Management Authority) ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಪರಿಸರ ಸ್ನೇಹಿ ನಿಯಮಗಳನ್ನು ಪಾಲಿಸಿದರೆ ಮಾತ್ರ ಶ್ಯಾಕ್‌ಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ.
ಈ ಬೀಚ್ ಶ್ಯಾಕ್ ನೀತಿಯ ಜಾರಿಯಿಂದ ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವುದರ ಜತೆಗೆ, ಸ್ಥಳೀಯ ಆಹಾರ, ಸಂಸ್ಕೃತಿ ಮತ್ತು ಕರಾವಳಿ ಜೀವನಶೈಲಿಯ ಪ್ರಚಾರಕ್ಕೂ ಸಹಾಯವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.