ಪರಿಸರ ಸಂರಕ್ಷಣೆಯ ಜತೆಗೆ ಪ್ರವಾಸೋಸದ್ಯಮದ ಬೆಳವಣಿಗೆಗೆ ಒತ್ತು ನೀಡುವ ಹಸಿರು ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಮಲೇಷ್ಯಾ, ಥೈಲ್ಯಾಂಡ್‌ ಮತ್ತು ವಿಯೆಟ್ನಾಂ ಒಟ್ಟಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ, ಸ್ಥಳೀಯ ಸಮುದಾಯಗಳ ಅಭಿವೃದ್ಧಿ ಮತ್ತು ಪ್ರವಾಸಿಗಳ ಬೇಡಿಕೆಗಳಿಗನುಗುಣವಾಗಿ ಹಲವು ಪ್ರಮುಖ ಕಾರ್ಯಸೂಚಿಗಳನ್ನು ರೂಪಿಸಿವೆ.

Visit Malaysia 2026 ಅಭಿಯಾನದ ಭಾಗವಾಗಿ, ಮಲೇಷ್ಯಾ ದೇಶವು ಪ್ರವಾಸೋದ್ಯಮವನ್ನು ಸುಸ್ಥಿರ ಪ್ರವಾಸೋದ್ಯಮವಾಗಿಸುವತ್ತ ಕಾರ್ಯಪ್ರವೃತ್ತವಾಗಿದೆ. ದೇಶದಲ್ಲಿರುವ ರೇನ್‌ ಫಾರೆಸ್ಟ್‌ಗಳತ್ತ ಪ್ರವಾಸಿಗರನ್ನು ಸೆಳೆಯಲು, ನೈಸರ್ಗಿಕ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು, ಪರಂಪರಾ ಗ್ರಾಮಗಳನ್ನು ನಿರ್ಮಿಸಲು ಮತ್ತು ಇಕೋ ಟೂರಿಸಂ ಅನ್ನು ಉತ್ತೇಜಿಸುವ ವಿಶೇಷ ಪ್ಯಾಕೇಜ್‌ಗಳ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದೆ.

Thailand tourism (2)


ಈ ಅಭಿಯಾನದ ಪ್ರಚಾರಕ್ಕಾಗಿ, ಮಲೇಷ್ಯಾ ಥೈಲ್ಯಾಂಡಿನಲ್ಲಿ ವಿಶೇಷ ಕಾರ್ಯಾಗಾರಗಳನ್ನು ಆರಂಭಿಸಿದ್ದು, ಸ್ಥಳೀಯ ಪ್ರವಾಸಿಗರಿಗೆ ಪರಿಸರ ಸಂರಕ್ಷಣೆಗೆ ಪುಷ್ಠಿ ನೀಡುವ ಜವಾಬ್ದಾರಿಯುತ ಪ್ರವಾಸದ ಮಹತ್ವವನ್ನು ಸಾರುತ್ತಿದೆ. ನೈಸರ್ಗಿಕ ಪ್ರವಾಸಿ ತಾಣಗಳು ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಮರುಪರಿಚಯಿಸುವ ಪ್ರಯತ್ನವೂ ನಡೆಯುತ್ತಿದೆ.

Vietnam Tourism


ವಿಯೆಟ್ನಾಂನೊಂದಿಗೂ ಕೈಜೋಡಿಸಿರುವ ಮಲೇಷ್ಯಾ, 2025ರಲ್ಲಿ ಹೋ ಚಿ ಮಿನ್ ಸಿಟಿ ಮತ್ತು ಹನಾಯಿಯಲ್ಲಿ ‘Malaysia Culture & Food Fest’ ಕಾರ್ಯಕ್ರಮ ಆಯೋಜಿಸಿದ್ದು, Visit Malaysia 2026 ಅಭಿಯಾನವನ್ನು ಅಲ್ಲಿನ ಜನರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ. ಇದೀಗ ಎರಡೂ ದೇಶಗಳ ನಡುವೆ ಸಂಚರಿಸುವ ವಿಮಾನಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ಅಭಿಯಾನ ಯಶಸ್ವಿಯಾಗಲು ಈ ಅಂಶ ಸಹಕಾರಿಯಾಗಿದೆ.

ಮೂರೂ ರಾಷ್ಟ್ರಗಳ ಈ ಸಂಯುಕ್ತ ನಡೆ, ದೀರ್ಘಾವಧಿಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಬಲಪಡಿಸುವುದರ ಜತೆಗೆ ಏಷ್ಯನ್ ಮಾರುಕಟ್ಟೆಯಲ್ಲೂ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.