ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ ಕೈಗೊಂಡಿದ್ದ ಮಾಜಿ ಸಚಿವ ಎಸ್‌. ಸುರೇಶ್‌ಕುಮಾರ್‌ ಸಾಹಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ ಕೈಗೊಂಡ ಶ್ರೀ ಎಸ್. ಸುರೇಶ್ ಕುಮಾರ್ ಅವರ ಸಾಧನೆ ಶ್ಲಾಘನೀಯ ಮತ್ತು ಸ್ಫೂರ್ತಿದಾಯಕವಾಗಿದೆ. ಆರೋಗ್ಯದ ಹಿನ್ನಡೆಗಳನ್ನು ಮೆಟ್ಟಿ ನಿಂತು ಅವರು ಈ ಸಾಧನೆ ಮಾಡಿರುವುದು ಅವರ ದೃಢ ನಿರ್ಧಾರ ಮತ್ತು ಅಚಲ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಇದು ಫಿಟ್ನೆಸ್ ಕುರಿತು ಪ್ರಮುಖ ಸಂದೇಶವನ್ನೂ ನೀಡುತ್ತದೆ. ಅವರೊಂದಿಗೆ ಮಾತನಾಡಿ, ಅವರ ಈ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದೆ'' ಎಂದು ಪ್ರಧಾನಿ ಮೋದಿ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸುರೇಶ ಕುಮಾರ್, ‘‘ನರೇಂದ್ರ ಮೋದಿಯವರು ಕರೆ ಮಾಡಿ ಅಭಿನಂದನೆ ತಿಳಿಸಿರುವುದು ಸ್ಫೂರ್ತಿ ನೀಡಿದೆ" ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯದಿಂದ ಬಳಲಿದ್ದ ಸುರೇಶ್‌ಕುಮಾರ್‌, ಬೆಂಗಳೂರಿನಿಂದ ಐದು ದಿನಗಳಲ್ಲಿ ಬರೋಬ್ಬರಿ 702 ಕಿ.ಮೀ. ಸೈಕಲ್‌ ಸವಾರಿ ಮಾಡುವ ಮೂಲಕ 'ಫಿಟ್ ಇಂಡಿಯಾ' ಆಶಯಕ್ಕೆ ರೂವಾರಿಯಾಗಿದ್ದಾರೆ.