ಚಾಮರಾಜನಗರ: ಕಳೆದ 15 ದಿನದಿಂದ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲಾಗಿದ್ದು, ಇದರಿಂದ ಅರಣ್ಯ ಧಾಮಗಳಿಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ಈ ಹಿನ್ನೆಲೆ ಡಿಸೆಂಬ‌ರ್ ಮೊದಲ ವಾರದಿಂದ ಮತ್ತೆ ಸಫಾರಿ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಪ್ರವಾಸಿಗರ ಹಾಟ್‌ಸ್ಪಾಟ್ ಹಾಗೂ ಪ್ರಕೃತಿ ಪ್ರಿಯರ ನೆಚ್ಚಿನ ತಾಣ, ರಾಜ್ಯದಲ್ಲಿ ಅತಿ ಹೆಚ್ಚು ಹುಲಿ, ಆನೆ, ಚಿರತೆ ಹೊಂದಿರುವ ಬಂಡೀಪುರ ಅರಣ್ಯ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ. ನಿತ್ಯ ನೂರಾರು ಜನರು ಬಂಡೀಪುರದ ಸಫಾರಿಗೆ ಆಗಮಿಸುತ್ತಿದ್ದರು. ಪ್ರಾಣಿಗಳ ದರ್ಶನದ ಜತೆಗೆ ಪ್ರಕೃತಿಯ ರಮ್ಯ ರಮಣೀಯತೆಯನ್ನು ಕಣ್ಣುಂಬಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೈಸೂರು, ಚಾಮರಾಜನಗರ ಭಾಗದಲ್ಲಿ ಹುಲಿ ದಾಳಿಯಿಂದ ರೈತರು ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚಳವಾಗಿತ್ತು. ಇದರಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೀಪುರ ಹಾಗೂ ನಾಗರಹೊಳೆ ಎರಡು ಕಡೆಯೂ ಸಫಾರಿ ನಿಷೇಧಿಸಿ, ಸಫಾರಿಗೆ ಬಳಕೆ ಮಾಡ್ತಿರುವ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆ ಹಾಗೂ ಜಾಗೃತಿ ಮೂಡಿಸುವಂತೆ ಖಡಕ್‌ ಸೂಚನೆ ಕೊಟ್ಟಿದ್ದರು.

nagarahole safari 2

ಪ್ರತಿನಿತ್ಯ 3 ಲಕ್ಷ ರು. ವಾರಾಂತ್ಯದಲ್ಲಿ 15 ಲಕ್ಷ ರು. ಸಫಾರಿಯಿಂದಲೇ ಆದಾಯ ಬರುತ್ತಿತ್ತು. ಆದರೆ ಸಫಾರಿ ಸ್ಥಗಿತದಿಂದ ಆರ್ಥಿಕ ಹೊಡೆತ ಬೀಳುವ ಸಾಧ್ಯತೆಯಿದೆ. ಜತೆಗೆ ಸಫಾರಿ ಜೀಪ್, ಬಸ್ ಎರಡು ಕೂಡ ಧೂಳು ಹಿಡಿಯುತ್ತಿವೆ.

ಶೀಘ್ರದಲ್ಲೇ ಸಫಾರಿ ಆರಂಭ ಸಾಧ್ಯತೆ

ಬಂಡೀಪುರದ ಕಾಡಂಚಿನ ಪ್ರದೇಶಗಳಲ್ಲಿ ಇದ್ದ ಹುಲಿಗಳನ್ನು ಸೆರೆಹಿಡಿಯುವ ಕೆಲಸ ಮಾಡಿದ್ದೇವೆ. ಅಲ್ಲದೇ ಸಫಾರಿ ನಿಷೇಧದಿಂದ ಸಾಕಷ್ಟು ಕುಟುಂಬಗಳಿಗೆ ಆರ್ಥಿಕ ಹೊಡೆತ ಉಂಟಾಗಿದೆ. ಈ ಕುಟುಂಬಗಳು ಸಫಾರಿ ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ. ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತಂದಿದ್ದು, ಶೀಘ್ರದಲ್ಲೇ ಸಫಾರಿ ಆರಂಭಿಸುವ ಸಾಧ್ಯತೆ ಇದೆ ಎಂದು ಡಿಸಿಎಫ್ ತಿಳಿಸಿದ್ದಾರೆ.