Tuesday, September 1, 2026
Tuesday, September 1, 2026

ಪ್ರಮುಖ ಫ್ಲೈಓವರ್‌ಗಳಲ್ಲಿ ಸಂಚಾರಕ್ಕೆ ನಿರ್ಬಂಧ

ರಸ್ತೆ ಸುರಕ್ಷತೆ, ವಿನ್ಯಾಸ, ಅಗಲ ಮತ್ತು ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ವಿವಿಧ ಫ್ಲೈಓವರ್‌ಗಳಿಗೆ ಪ್ರತ್ಯೇಕವಾದ ವಾಹನ ನಿರ್ಬಂಧ ಮತ್ತು ಸಮಯದ ನಿಯಮಗಳನ್ನು ಪ್ರಕಟಿಸಲಾಗಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣಗಳು ಮತ್ತು ಟ್ರಾಫಿಕ್ ಜಾಮ್‌ಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಸಂಚಾರ ಪೊಲೀಸರು, ನಗರದ 5 ಪ್ರಮುಖ ಫ್ಲೈಓವರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ರಸ್ತೆ ಸುರಕ್ಷತೆ, ವಿನ್ಯಾಸ, ಅಗಲ ಮತ್ತು ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ವಿವಿಧ ಫ್ಲೈಓವರ್‌ಗಳಿಗೆ ಪ್ರತ್ಯೇಕವಾದ ವಾಹನ ನಿರ್ಬಂಧ ಮತ್ತು ಸಮಯದ ನಿಯಮಗಳನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: ಓಣಂ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿನ ಬೋಗಿಗಳ ಸಂಖ್ಯೆ ಏರಿಕೆ

ರಸ್ತೆ ಅಪಘಾತಗಳ ತೀವ್ರತೆಯನ್ನು ತಗ್ಗಿಸುವುದು, ವಾಹನಗಳು ಕೆಟ್ಟು ನಿಲ್ಲುವುದರಿಂದ ಉಂಟಾಗುವ ದಟ್ಟಣೆಯನ್ನು ತಪ್ಪಿಸುವುದು, ಪ್ರವೇಶ ಹಾಗೂ ನಿರ್ಗಮನಾ ಕೇಂದ್ರಗಳಲ್ಲಿ ಉಂಟಾಗುವ ಜಾಮ್‌ಗಳನ್ನು ನಿವಾರಿಸುವುದು ಮತ್ತು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಸಮಗ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಬಿಜಿಎಸ್ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ಇತರ ಹಗುರ ಸರಕು ಸಾಗಣೆ ವಾಹನಗಳಿಗೆ ಪ್ರತಿದಿನ ಬೆಳಗ್ಗೆ 7 ರಿಂದ 11 ರವರೆಗೆ ಮತ್ತು ಮಧ್ಯಾಹ್ನ 4 ರಿಂದ ರಾತ್ರಿ 10 ರವರೆಗೆ ನಿರ್ಬಂಧವಿರುತ್ತದೆ.

ಪೀಣ್ಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆ ಆಟೋ ರಿಕ್ಷಾಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜತೆಗೆ, ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳು ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ ರಾತ್ರಿ 10 ರವರೆಗೆ ಈ ಮಾರ್ಗವನ್ನು ಬಳಸುವಂತಿಲ್ಲ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಫ್ಲೈಓವರ್‌ ಮೇಲೆ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳ ಸಂಚಾರಕ್ಕೆ ಸಂಪೂರ್ಣ ತಡೆ ಹಾಕಲಾಗಿದೆ. ಅಲ್ಲದೆ, ಎಲ್ಲಾ ವರ್ಗದ ಸರಕು ವಾಹನಗಳ ಸಂಚಾರವನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ನಿರ್ಬಂಧಿಸಲಾಗಿದೆ.

ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ನಡುವಿನ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿರಲಿದೆ. ಇದರೊಂದಿಗೆ ದ್ವಿಚಕ್ರ ವಾಹನಗಳು ಹಾಗೂ ಪ್ರಯಾಣಿಕ ಮತ್ತು ಸರಕು ಸಾಗಣೆ ಆಟೋ ರಿಕ್ಷಾಗಳು ಈ ಮಾರ್ಗವನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇತರ ಎಲ್ಲಾ ಫ್ಲೈಓವರ್‌ಗಳಲ್ಲಿ ಈ ನಿಯಮಗಳು ಸೆಪ್ಟೆಂಬರ್ 4 ರಿಂದಲೇ ಜಾರಿಗೆ ಬರಲಿದ್ದು, ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ಗೆ ಸಂಬಂಧಿಸಿದ ನಿರ್ಬಂಧಗಳು ಮಾತ್ರ ಸೆಪ್ಟೆಂಬರ್ 11 ರಿಂದ ಜಾರಿಗೆ ಬರಲಿವೆ ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..