ತೆಲಂಗಾಣ ಸರಕಾರ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ದೀರ್ಘಾವಧಿ ವಾಸ (Longer Stay / Stay-in) ಪ್ರವಾಸೋದ್ಯಮ ಮಾದರಿಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕುರಿತು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜುಪ್ಪಳ್ಳಿ ಕೃಷ್ಣ ರಾವ್ ಅವರು ಹೈದರಾಬಾದ್‌ನಲ್ಲಿ ನಡೆದ “ಟೂರಿಸಂ ವಿಸನ್ – 2026” ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಪ್ರಸ್ತುತ ಪ್ರವಾಸಿಗರು ಕಡಿಮೆ ಅವಧಿಗೆ ಮಾತ್ರ ರಾಜ್ಯಕ್ಕೆ ಭೇಟಿ ನೀಡುತ್ತಿರುವುದನ್ನು ಗಮನಿಸಿದ ಸರಕಾರ, ಮುಂದಿನ ದಿನಗಳಲ್ಲಿ ಪ್ರವಾಸಿಗರು ಕನಿಷ್ಠ 48 ಗಂಟೆಗಳಿಗಿಂತ ಹೆಚ್ಚು ಕಾಲ ರಾಜ್ಯದಲ್ಲಿ ತಂಗುವಂತೆ ಮಾಡುವ ತಂತ್ರ ರೂಪಿಸಲು ಯೋಜಿಸಿದೆ. ಇದರಿಂದ ಪ್ರವಾಸೋದ್ಯಮದಿಂದ ದೊರೆಯುವ ಆದಾಯ ಹೆಚ್ಚುವುದರ ಜತೆಗೆ ಸ್ಥಳೀಯ ಆರ್ಥಿಕತೆಗೂ ಉತ್ತೇಜನ ದೊರೆಯಲಿದೆ ಎಂದು ಸಚಿವರು ಹೇಳಿದರು.

ಈ ಗುರಿ ಸಾಧನೆಗಾಗಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟದ ವಸತಿ ವ್ಯವಸ್ಥೆ, ಸಾರಿಗೆ ಸೌಲಭ್ಯಗಳ ಸುಧಾರಣೆ ಹಾಗೂ ಬಹುಭಾಷಾ ಪ್ರವಾಸ ಮಾರ್ಗದರ್ಶಕರ ತರಬೇತಿಗೆ ಆದ್ಯತೆ ನೀಡಲಾಗುವುದು. ಜತೆಗೆ ಐಟಿ ಕಾರಿಡಾರ್‌ಗಳು, ಶಾಪಿಂಗ್ ಮಾಲ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸೋದ್ಯಮದ ಬಗ್ಗೆ ವ್ಯಾಪಕ ಪ್ರಚಾರ ನಡೆಸುವ ಯೋಜನೆಯೂ ಇದೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸುವ ಮೂಲಕ ಪ್ರವಾಸಿಗರಿಗೆ ಸ್ಥಳೀಯ ಹಬ್ಬಗಳು, ಸಂಪ್ರದಾಯಗಳು ಮತ್ತು ಆಹಾರ ಸಂಸ್ಕೃತಿಯನ್ನು ನೇರವಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಕೇರಳದಂಥ ಯಶಸ್ವಿ ಪ್ರವಾಸ ಮಾದರಿಯನ್ನು ಅಧ್ಯಯನ ಮಾಡಿ, ತೆಲಂಗಾಣವನ್ನು ಆಕರ್ಷಕ ಹಾಗೂ ಸ್ಪರ್ಧಾತ್ಮಕ ಪ್ರವಾಸ ತಾಣವನ್ನಾಗಿ ರೂಪಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.