ಥೈಲ್ಯಾಂಡ್ ಸರಕಾರವು ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಮದ್ಯ ಮಾರಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲು ನಿರ್ಧರಿಸಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಿಂದ ನಿರ್ಬಂಧ ಹಿಂಪಡೆಯಲು ಒತ್ತಡ ಹೆಚ್ಚಾದ ಪರಿಣಾಮ ಸರ್ಕಾರವು ಈ ನಿಲುವನ್ನು ತಾಳಿದೆ.

ಹೊಸ ನಿಯಮದ ಜಾರಿ ಡಿಸೆಂಬರ್‌ 2025 ರಿಂದ ಶುರುವಾಗಿ, ಆರು ತಿಂಗಳವರೆಗೆ ಪೈಲೆಟ್‌ ಪ್ರೋಗ್ರಾಂ ರೂಪದಲ್ಲಿ ಜಾರಿಯಾಗಲಿದೆ. ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳ ಆಧಾರದ ಮಲೆ ನಂತರ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಸರಕಾರ ಚಿಂತನೆ ನಡೆಸಲಿದೆ.

Alcohol ban on afternoon lifted in Thailand


ಹಿಂದಿನ ನಿಯಮದಡಿ, ಮಧ್ಯಾಹ್ನ ಮದ್ಯ ಸೇವಿಸಿದವರ ಮೇಲೆ 10,000 ಬೈಟ್ (ಥಾಯ್ ಕರೆನ್ಸಿ) ದಂಡ ವಿಧಿಸಲಾಗುತ್ತಿತ್ತು. ಮದ್ಯಮಾರಾಟದ ಜಾಹೀರಾತುಗಳ ಮೇಲೆಯೂ ನಿರ್ಬಂಧ ಹೇರಲಾಗಿತ್ತು. ನಿಯಮವನ್ನು ಪಾಲಿಸದ ಮದ್ಯ ವ್ಯಾಪಾರಸ್ಥರು ಮತ್ತು ಗ್ರಾಹಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿತ್ತು. ಹೊಸ ನಿಯಮದಡಿ ಮೇಲಿನ ನಿರ್ಬಂಧನೆಗಳು ಸಡಿಲಿಕೆಯಾಗಲಿದ್ದು, ಮದ್ಯ ಮಾರಾಟಗಾರರಲ್ಲಿ ಮತ್ತು ಮದ್ಯ ಸೇವಿಸಲಿಚ್ಛಿಸುವ ಪ್ರವಾಸಿಗರಲ್ಲಿ ನಿರಾಳತೆಯನ್ನು ತಂದಿದೆ.
ಲೈಸೆನ್ಸ್ ಪಡೆದ ಮನರಂಜನಾ ಕೇಂದ್ರಗಳು, ಕೆಲವು ಹೊಟೇಲ್‌ಗಳು, ಪ್ರವಾಸಿ ಪ್ರದೇಶಗಳಲ್ಲಿ ಲೈಸೆನ್ಸ್‌ ಪಡೆದ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಧ್ಯಾಹ್ನ ಮದ್ಯ ಮಾರಾಟ ಮಾಡಲು ಮುಂಚೆ ಅವಕಾಶವಿತ್ತು. ಈಗಲೂ ಕೂಡ ಅದೇ ನಿಯಮ ಮುಂದುವರೆಯಲಿದ್ದು, ಈ ಎಲ್ಲ ಕೇಂದ್ರಗಳಲ್ಲಿ ಮಧ್ಯಾಹ್ನವೂ ಮದ್ಯ ದೊರೆಯಲಿದೆ.