ದೀಪಾವಳಿಗೆ ರೈಲು ಟಿಕೆಟ್ ಬುಕಿಂಗ್ ಆರಂಭ
ದೀಪಾವಳಿ ಪ್ರಯಾಣಕ್ಕೆ ರೈಲು ಟಿಕೆಟ್‌ಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈಗಲೇ ಟಿಕೆಟ್ ಕಾಯ್ದಿರಿಸುವುದು ಉತ್ತಮ.
2026ರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರೈಲು ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ದೀಪಾವಳಿ ಸಂದರ್ಭದಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಿಂದ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ರೈಲು ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸುವುದು ಉತ್ತಮ.
ಭಾರತೀಯ ರೈಲ್ವೆಯ ನಿಯಮದಂತೆ ಸಾಮಾನ್ಯ ಪ್ರಯಾಣಿಕರಿಗೆ ಪ್ರಯಾಣದ ದಿನಾಂಕಕ್ಕಿಂತ 60 ದಿನಗಳ ಮುಂಚಿತವಾಗಿ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಆದ್ದರಿಂದ ದೀಪಾವಳಿ ಪ್ರಯಾಣದ ದಿನಾಂಕ ನಿಗದಿಯಾಗಿದ್ದರೆ, ಬುಕಿಂಗ್ ವಿಂಡೋ ತೆರೆದ ತಕ್ಷಣ ಟಿಕೆಟ್ ಕಾಯ್ದಿರಿಸುವುದು ದೃಢೀಕೃತ ಬರ್ತ್ ಪಡೆಯಲು ಸಹಾಯ ಮಾಡುತ್ತದೆ.
ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ರೈಲ್ ಕನೆಕ್ಟ್ ಮೊಬೈಲ್ ಆ್ಯಪ್ ಬಳಸಬಹುದು. ಆರಂಭಿಕ ನಿಲ್ದಾಣ, ಗಮ್ಯಸ್ಥಾನ, ಪ್ರಯಾಣದ ದಿನಾಂಕ ಹಾಗೂ ರೈಲನ್ನು ಆಯ್ಕೆ ಮಾಡಿ, ಸ್ಲೀಪರ್, AC 3- ಟೈರ್, AC 2- ಟೈರ್, ಸೇರಿದಂತೆ ಲಭ್ಯವಿರುವ ವರ್ಗದಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಅವೈಲಬಲ್ ಎಂದು ತೋರಿಸಿದರೆ ತಕ್ಷಣ ಬುಕ್ ಮಾಡುವುದು ಉತ್ತಮ. ಹಬ್ಬದ ಸಮಯದಲ್ಲಿ ಟಿಕೆಟ್‌ಗಳು ವೇಗವಾಗಿ ಭರ್ತಿಯಾಗುವ ಕಾರಣ ಕೊನೆಯ ಕ್ಷಣದವರೆಗೆ ಕಾಯುವುದರಿಂದ WL ಅಥವಾ RAC ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದಲ್ಲದೆ, ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ವಿವಿಧ ಮಾರ್ಗಗಳಲ್ಲಿ ದೀಪಾವಳಿ ವಿಶೇಷ ರೈಲುಗಳನ್ನು ಘೋಷಿಸುತ್ತದೆ. ನಿಮ್ಮ ಸಾಮಾನ್ಯ ರೈಲಿನಲ್ಲಿ ಟಿಕೆಟ್ ಸಿಗದಿದ್ದರೆ, ಅದೇ ಮಾರ್ಗದಲ್ಲಿ ವಿಶೇಷ ರೈಲುಗಳಿವೆಯೇ ಎಂಬುದನ್ನು IRCTC ಅಥವಾ ರೈಲ್ವೆಯ ಅಧಿಕೃತ ಪ್ರಕಟಣೆಗಳಲ್ಲಿ ಪರಿಶೀಲಿಸಬಹುದು.ಹೀಗಾಗಿ ದೀಪಾವಳಿ ಸಮಯದಲ್ಲಿ ಸ್ವಂತ ಊರಿಗೆ ಅಥವಾ ಪ್ರವಾಸಕ್ಕೆ ರೈಲಿನಲ್ಲಿ ತೆರಳುವವರು 60 ದಿನಗಳ ಮುಂಚಿತ ಬುಕಿಂಗ್ ಅವಕಾಶವನ್ನು ಬಳಸಿಕೊಂಡು ಪ್ರಯಾಣವನ್ನು ಯೋಜಿಸುವುದು ಸೂಕ್ತ.