ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೆರೆಕಟ್ಟೆ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿರುವ ಜನಪ್ರಿಯ ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣ ಮಾರ್ಗಗಳ ಪ್ರವೇಶಕ್ಕೆ ಕಾಡಾನೆಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾದ ನಿರ್ಬಂಧವನ್ನು ಹೇರಲಾಗಿದೆ.

ನವೆಂಬರ್‌ 17ರಿಂದ ನವೆಂಬರ್‌ 19ರವರೆಗೆ ಪ್ರವಾಸಿಗರಿಗೆ ಈ ಎರಡೂ ಚಾರಣ ಮಾರ್ಗಗಳಿಗೆ ಪ್ರವೇಶ ಅವಕಾಶ ಇರುವುದಿಲ್ಲ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Narasimha Parvata

ವಾಲಿಕುಂಜ ಹಾಗೂ ನರಸಿಂಹಪರ್ವತ ಚಾರಣಗಳು ಪ್ರಕೃತಿ ಸೌಂದರ್ಯ, ದಟ್ಟ ಅರಣ್ಯ ಮಾರ್ಗಗಳು, ಕಾಡಿನ ಜೀವ ವೈವಿಧ್ಯವನ್ನು ಸಮೀಪದಿಂದ ಪ್ರವಾಸಿಗರು ಅನುಭವಿಸಲು ಅವಕಾಶ ಮಾಡಿಕೊಡುತ್ತವೆ, ಈ ಕಾರಣದಿಂದ ಇವು ಚಾರಣಿಗರ ಮೆಚ್ಚಿನ ತಾಣಗಳಾಗಿವೆ.

ನರಸಿಂಹಪರ್ವತ ಶಿಖರದಿಂದ ಕಾಣುವ ಪಶ್ಚಿಮಘಟ್ಟದ ದೃಶ್ಯ ಪ್ರವಾಸಿಗರ ಮನಸೂರೆಗೊಳಿಸುತ್ತದೆ. ಹಾಗೆಯೇ, ವಾಲಿಕುಂಜ ಮಾರ್ಗದಲ್ಲಿನ ದಟ್ಟ ಕಾಡು, ನೀರಿನ ಹರಿವು, ಹಸಿರಾದ ನಿಸರ್ಗ ಪ್ರವಾಸಾಸಕ್ತರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಚಲನವಲನ ಈ ಪ್ರದೇಶದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧವನ್ನು ವಿಧಿಸಲಾಗಿದೆ.