ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜಗತ್ತಿನ ಪರಿಣಿತರ ಗಮನ ಸೆಳೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೃತಕ ಬುದ್ಧಿಮತ್ತೆ, ಮನರಂಜನೆ, ಅಂತಾರಾಷ್ಟ್ರೀಯ ಈವೆಂಟ್‌ಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ತಜ್ಞರು, ಉದ್ಯಮಿಗಳು ಮತ್ತು ಕಲಾವಿದರನ್ನು ಆಕರ್ಷಿಸಲು ನಾಲ್ಕು ಹೊಸ ʼಭೇಟಿ ವೀಸಾʼ ವರ್ಗಗಳನ್ನು ಪರಿಚಯಿಸಿದೆ. ಈ ಹೆಜ್ಜೆ ಯುಎಇಯನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಮುಕ್ತವಾಗಿ, ಪ್ರತಿಭೆಗಳನ್ನು ಆಕರ್ಷಿಸುವ ಕೇಂದ್ರವಾಗಿ ಹಾಗೂ ಹೂಡಿಕೆ, ನಾವೀನ್ಯತೆಯ ತಾಣವಾಗಿಸಲು ಸಹಕಾರಿಯಾಗಿದೆ.

uae


ಹೊಸ ವೀಸಾ ವರ್ಗಗಳ ವೈಶಿಷ್ಟ್ಯಗಳು:-

  • AI ತಜ್ಞರ ವೀಸಾ – ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯ ಶಿಫಾರಸು ಆಧಾರಿತವಾಗಿ, ನಿರ್ದಿಷ್ಟ ಅವಧಿಗೆ ಏಕ ಅಥವಾ ಬಹುಪ್ರವೇಶ ಅನುಮತಿಯನ್ನು ಈ ವೀಸಾ ನೀಡಲಿದೆ.
  • ಮನರಂಜನಾ ವೀಸಾ – ಸಾಂಸ್ಕೃತಿಕ ಹಾಗೂ ಮನರಂಜನಾ ಉದ್ದೇಶಕ್ಕಾಗಿ ಕಡಿಮೆ ಅವಧಿಗೆ ಬರುವ ಕಲಾವಿದರು ಹಾಗೂ ತಜ್ಞರಿಗೆ ಮನರಂಜನಾ ವೀಸಾವನ್ನು ನೀಡಲಾಗುತ್ತದೆ.
  • ಈವೆಂಟ್ ವೀಸಾ – ಹಬ್ಬ, ಪ್ರದರ್ಶನ, ಕಾನ್ಫರೆನ್ಸ್, ವಿಚಾರ ಸಂಕಿರಣ ಅಥವಾ ಕ್ರೀಡಾ–ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುವವರಿಗೆ ಈವೆಂಟ್‌ ವೀಸಾ ನೀಡಲಾಗುತ್ತದೆ. ಇದಕ್ಕಾಗಿ ಆತಿಥೇಯ ಸಂಸ್ಥೆಯಿಂದ ಕಾರ್ಯಕ್ರಮದ ವಿವರಗಳೊಂದಿಗೆ ಶಿಫಾರಸು ಪತ್ರ ಪಡೆಯುವುದು ಕಡ್ಡಾಯ.
  • ಪ್ರವಾಸಿ ವೀಸಾ(ಟೂರಿಸಂ ವೀಸಾ)– ಕ್ರೂಸ್ ಹಡಗುಗಳು ಹಾಗೂ ಮನರಂಜನಾ ನೌಕೆಗಳ ಮೂಲಕ ಬರುವ ಪ್ರವಾಸಿಗರಿಗೆ ಪ್ರವಾಸಿ ವೀಸಾ ನೀಡಲಾಗುತ್ತದೆ. ಪ್ರವಾಸ ಯೋಜನೆಯಲ್ಲಿ ಯುಎಇ ನಿಲುಗಡೆ ಸೇರಿರಬೇಕು ಮತ್ತು ಈ ರೀತಿಯ ಚಟುವಟಿಕೆ ನಡೆಸಲು ಪರವಾನಗಿ ಪಡೆದ ಪ್ರವಾಸ ಸಂಸ್ಥೆ ಪ್ರಾಯೋಜಕರಾಗಿರಬೇಕು.

ಇದಲ್ಲದೆ, ಪ್ರತಿಯೊಂದು ವೀಸಾ ವರ್ಗಕ್ಕೂ ಸ್ಪಷ್ಟವಾದ ವಾಸಾವಧಿ ಹಾಗೂ ವಿಸ್ತರಣೆಯ ಶರತ್ತುಗಳನ್ನು ಸೇರಿಸಲಾಗಿದೆ.

UAE Tourism


ಇನ್ನು ವಿಧವೆಯಾದ ಅಥವಾ ವಿಚ್ಛೇದನ ಹೊಂದಿದ ವಿದೇಶಿ ಮಹಿಳೆಗೆ ಒಂದು ವರ್ಷದ ವಾಸಾನುಮತಿ ನೀಡಲಾಗುತ್ತದೆ; ಇದೇ ಅವಧಿಗೆ ಪುನರ್‌ನವೀಕರಣಕ್ಕೂ ಅವಕಾಶವಿದೆ. ಮಿತ್ರ ಅಥವಾ ಬಂಧು ಭೇಟಿ ವೀಸಾ ಮೂಲಕ ಪ್ರಾಯೋಜಕರ ಆದಾಯದ ಆಧಾರದಲ್ಲಿ ವೀಸಾ ಪಡೆಯಬಹುದಾಗಿದೆ. ಬಿಸಿನೆಸ್ ಎಕ್ಸ್‌ಪ್ಲೋರೇಷನ್ ವೀಸಾಗಾಗಿ ಆರ್ಥಿಕ ಸಾಮರ್ಥ್ಯ, ವಿದೇಶಿ ಕಂಪನಿಯಲ್ಲಿ ಪಾಲುದಾರಿಕೆ ಅಥವಾ ವೃತ್ತಿ ಅನುಭವದ ಸಾಬೀತು ಅಗತ್ಯ. ಟ್ರಕ್ ಚಾಲಕರ ವೀಸಾ ಪಡೆಯಲು ಪ್ರಾಯೋಜಕತ್ವ ಹಾಗೂ ಆರೋಗ್ಯ, ಆರ್ಥಿಕ ಭದ್ರತೆ ಕಡ್ಡಾಯ.

ಯುದ್ಧ, ಪ್ರಕೃತಿ ವಿಕೋಪ ಮತ್ತು ಅಶಾಂತಿಯಿಂದ ಬಳಲುತ್ತಿರುವ ದೇಶಗಳಿಂದ ಬರುವ ವಿದೇಶಿಗರಿಗೆ, ಪ್ರಾಯೋಜಕರಿಲ್ಲದೆ ವೀಸಾ ನೀಡುವ ಅಧಿಕಾರವನ್ನು ʼಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಸಿಟಿಜನ್ಶಿಪ್, ಕಸ್ಟಮ್ಸ್ ಅಂಡ್ ಪೋರ್ಟ್ ಸೆಕ್ಯುರಿಟಿʼ ಪ್ರಾಧಿಕಾರ ಹೊಂದಿದೆ. ಈ ಪ್ರಕಾರ, ಒಂದು ವರ್ಷದ ಅವಧಿಗೆ ಮಾನವೀಯತೆಯ ದೃಷ್ಟಿಕೋನದಿಂದ ವಾಸಾನುಮತಿ ನೀಡಲಾಗುತ್ತದೆ ಹಾಗೂ ಅಗತ್ಯವಿದ್ದರೆ ನಿಗದಿತ ಶರತ್ತುಗಳೊಂದಿಗೆ ಅವಧಿಯನ್ನು ವಿಸ್ತರಿಸಬಹುದಾಗಿದೆ.