ಉತ್ತರ ಪ್ರದೇಶವು 2025ರ ಭಾರತದ ಡೊಮೆಸ್ಟಿಕ್‌ ಟೂರಿಸಂ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಈ ವರ್ಷದಲ್ಲಿ ರಾಜ್ಯಕ್ಕೆ ಒಟ್ಟು 137 ಕೋಟಿ ದೇಶೀಯ ಪ್ರವಾಸಿಗರು ಭೇಟಿ ನೀಡಿರುವುದು ದಾಖಲಾಗಿದೆ. ವಿದೇಶಿ ಪ್ರವಾಸಿಗರ ಆಗಮನದ ಸಂಖ್ಯೆಯಲ್ಲಿ ಉತ್ತರ ಪ್ರದೇಶವು ದೇಶದ ಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.

ಪ್ರವಾಸೋದ್ಯಮದ ಈ ಸಾಧನೆಗೆ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳ ಪ್ರಮುಖ ಕಾರಣವಾಗಿದೆ. ಮಹಾಕುಂಭ ಮೇಳದಲ್ಲಿ 66 ಕೋಟಿಗೂ ಅಧಿಕ ಭಕ್ತರು ಮತ್ತು ಪ್ರವಾಸಿಗರು ಭಾಗವಹಿಸಿದ್ದು, ಇದು ಒಟ್ಟಾರೆ ಪ್ರವಾಸಿಗರ ಸಂಖ್ಯೆಯಲ್ಲಿ ಮಹತ್ತರ ಪಾತ್ರವಹಿಸಿದೆ.

ಅಯೋಧ್ಯೆ, ವಾರಣಾಸಿ, ಮಥುರಾ–ವೃಂದಾವನ್, ಶ್ರಾವಸ್ತಿ ಮತ್ತು ಪ್ರಯಾಗರಾಜ್ ಮುಂತಾದ ಧಾರ್ಮಿಕ ಹಾಗೂ ಐತಿಹಾಸಿಕ ತಾಣಗಳು ವರ್ಷಪೂರ್ತಿ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿವೆ. ದೇವದೀಪಾವಳಿ, ದೀಪೋತ್ಸವ, ಮಾಘ ಮೇಳ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರವಾಸೋದ್ಯಮಕ್ಕೆ ಮತ್ತಷ್ಟು ಬಲ ನೀಡಿವೆ.

Uttar Pradesh Emerges as India’s Top Domestic Tourism Hub in 2025

ರಾಜ್ಯ ಸರಕಾರವು ರಸ್ತೆ, ರೈಲು ಮತ್ತು ವಿಮಾನ ಸಂಪರ್ಕದ ಸುಧಾರಣೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಹೊಟೇಲ್ ಹಾಗೂ ಹೋಮ್‌ಸ್ಟೇ ಸೌಲಭ್ಯಗಳ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಿದೆ. 2025ರಲ್ಲಿ ಸಾವಿರಾರು ಕೋಟಿ ರುಪಾಯಿ ಮೌಲ್ಯದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ಪ್ರವಾಸೋದ್ಯಮ ನೀತಿ ಮತ್ತು ಮೂಲಸೌಕರ್ಯ ವಿಸ್ತರಣೆ, ಜತೆಗೆ ಧಾರ್ಮಿಕ-ಸಾಂಸ್ಕೃತಿಕ ಆಕರ್ಷಣೆಗಳ ಪರಿಣಾಮವಾಗಿ, ಉತ್ತರ ಪ್ರದೇಶವು 2025ರಲ್ಲಿ ದೇಶದ ಪ್ರಮುಖ ಪ್ರವಾಸಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.