ಮಧ್ಯಪ್ರದೇಶ ಸರ್ಕಾರ ಇತ್ತೀಚೆಗಷ್ಟೇ ‘ಶ್ರೀ ರಾಮ ಪಥ ಸರ್ಕ್ಯೂಟ್’ ಯೋಜನೆಯನ್ನು ಅನಾವರಣಗೊಳಿಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಪ್ರೇರಣೆಯನ್ನು ನೀಡಿದೆ. ಪೌರಾಣಿಕ ಶ್ರೀರಾಮನ ಪಾದಸ್ಪರ್ಶ ಪಡೆದಿರುವ ಮಾರ್ಗಗಳನ್ನು ಗುರುತಿಸಿ, ಅವುಗಳನ್ನು ಸಾಂಸ್ಕೃತಿಕ ಪರಂಪರೆ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಮಹತ್ವಾಕಾಂಕ್ಷಿ ಯೋಜನೆ ಹೊಂದಿದೆ

Shri Ram Path Circuit

ಶ್ರೀ ರಾಮಚಂದ್ರ ಪಥ ಗಮನ್ ಟ್ರಸ್ಟ್‌ನ ಮಾರ್ಗದರ್ಶನದಲ್ಲಿ ರೂಪುಗೊಂಡ ಈ ಸರ್ಕ್ಯೂಟ್‌ನಲ್ಲಿ ಒಟ್ಟು ಒಂಬತ್ತು ಜಿಲ್ಲೆಗಳ 23 ಪವಿತ್ರ ಹಾಗೂ ಐತಿಹಾಸಿಕ ತಾಣಗಳು ಒಳಗೊಂಡಿವೆ. ಈ ಯೋಜನೆಯಡಿ ರಸ್ತೆ ಸಂಪರ್ಕ, ಪ್ರವಾಸಿ ಮೂಲಸೌಕರ್ಯ, ಹಾಗೂ ಅಧ್ಯಾತ್ಮಿಕ ವಾತಾವರಣಕ್ಕೆ ಹೊಂದುವ ಸೌಲಭ್ಯಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಚಿತ್ರಕೂಟ ಮತ್ತು ಅಮರಕಾಂಟಕವನ್ನು ಈ ಪಥದ ಕೇಂದ್ರ ಬಿಂದುಗಳಾಗಿ ಪರಿಗಣಿಸಲಾಗಿದ್ದು, ಇವುಗಳ ಸಮಗ್ರ ಅಭಿವೃದ್ಧಿಗೆ ಸುಮಾರು 5,289 ಕೋಟಿ ರುಪಾಯಿಗಳ ಹೂಡಿಕೆಗೆ ಯೋಜನೆ ರೂಪಿಸಲಾಗಿದೆ. ಕಮದಗಿರಿ ಪರಿಕ್ರಮಾ ಪಥ, ಬೃಹಸ್ಪತಿ ಕುಂಡ್‌ನ ಗ್ಲಾಸ್ ಸೇತುವೆ, ಸತಣ ಮತ್ತು ಪನ್ನಾ ಜಿಲ್ಲೆಯ ಆಶ್ರಮಗಳ ನವೀಕರಣ ಮುಂತಾದ ಯೋಜನೆಗಳು ಈಗಾಗಲೇ ಪ್ರಾರಂಭಗೊಂಡಿವೆ. ಇದರ ಜತೆಗೆ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸರ್ಕಾರವು ಮಾರ್ಗದರ್ಶಕರಾಗಿ, ಕಲಾವಿದರಾಗಿ, ಹಸ್ತಶಿಲ್ಪಗಾರರಾಗಿ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿರಿಸಲು ಇತ್ತೀಚೆಗೆ ಭೋಪಾಲ್ ಮತ್ತು ಚಿತ್ರಕೂಟಗಳಲ್ಲಿ ನಡೆದ ಅಂತಾರಾಷ್ಟ್ರೀಯ ರಾಮಲೀಲಾ ಉತ್ಸವ 2025 ಮಹತ್ತರ ಯಶಸ್ಸು ಕಂಡಿತು.

Ramleela utsav

ಈ ಯೋಜನೆಯ ನಿರ್ವಹಣೆ ಮತ್ತು ಪ್ರಗತಿಯನ್ನು ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ಉನ್ನತ ಮಟ್ಟದ ಸಮಿತಿ ನಿಯಂತ್ರಿಸುತ್ತದೆ. ಪರಂಪರೆ, ನಂಬಿಕೆ ಮತ್ತು ಆಧುನಿಕ ಅಭಿವೃದ್ಧಿಯ ಸಂಯೋಜನೆಯಾದ ಈ ಶ್ರೀ ರಾಮ ಪಥ ಸರ್ಕ್ಯೂಟ್, ಮಧ್ಯಪ್ರದೇಶವನ್ನು ಭಾರತದ ಪ್ರಮುಖ ಸಾಂಸ್ಕೃತಿಕ ಪ್ರವಾಸೋದ್ಯಮ ತಾಣವನ್ನಾಗಿ ನಿರ್ಮಿಸುವ ಗುರಿಯನ್ನು ಹೊಂದಿದೆ.