ಇರಾನ್ ಮತ್ತು ಅದರ ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತು ಸಂಘರ್ಷದ ಪರಿಸ್ಥಿತಿಯು ವೈದ್ಯಕೀಯ ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಯುದ್ಧ ಪೀಡಿತ ಪ್ರದೇಶಗಳ ಮೇಲೆ ವಿಮಾನ ಹಾರಾಟ ನಿಷೇಧ ಮತ್ತು ವಿಮಾನ ಪ್ರಯಾಣದ ದರ ಏರಿಕೆಯಿಂದಾಗಿ ಮಧ್ಯಪ್ರಾಚ್ಯದ ರೋಗಿಗಳು ಭಾರತಕ್ಕೆ ಬರುವುದು ಕಷ್ಟಕರವಾಗಿದೆ. ಸಂಘರ್ಷದ ಕಾರಣದಿಂದಾಗಿ ಉಂಟಾಗಿರುವ ಆರ್ಥಿಕ ಅಸ್ಥಿರತೆ ಮತ್ತು ಕರೆನ್ಸಿ ಮೌಲ್ಯ ಕುಸಿತವು ವಿದೇಶಿ ರೋಗಿಗಳಿಗೆ ದುಬಾರಿ ಆಗಿದೆ.

ಈ ಹಿಂದೆ ಭಾರತಕ್ಕೆ ಬರುತ್ತಿದ್ದ ಅಂತಾರಾಷ್ಟ್ರೀಯ ರೋಗಿಗಳಲ್ಲಿ ಸುಮಾರು 15-20% ರಷ್ಟು ಪಾಲು ಮಧ್ಯಪ್ರಾಚ್ಯದ್ದಾಗಿತ್ತು, ಇದೀಗ ಈ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಮಧ್ಯಪ್ರಾಚ್ಯದ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಭಾರತೀಯ ಆಸ್ಪತ್ರೆಗಳ ಜಾಲ ಈಗ ಹೊಸ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡಿವೆ. ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಮತ್ತು ಕಿರ್ಗಿಸ್ತಾನ್ ದೇಶಗಳಿಂದ ಬರುವ ರೋಗಿಗಳ ಸಂಖ್ಯೆಯಲ್ಲಿ 25% ಏರಿಕೆ ಕಂಡುಬಂದಿದೆ.

ಇದನ್ನೂ ಓದಿ: ಇದು ಮಹಾಖೋನ್‌ ನೀಡುವ ಮಹದಾವಕಾಶ

ಪ್ರಯಾಣದ ಅಡೆತಡೆಗಳಿಂದ ಪಾರಾಗಲು ಭಾರತ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ವಿದೇಶಿ ರೋಗಿಗಳು ಭಾರತಕ್ಕೆ ಬರುವ ಮೊದಲೇ ಇಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಸುಧಾರಿತ ಟೆಲಿ-ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಬಳಸಲಾಗುತ್ತಿದೆ.

ಭಾರತ ಸರಕಾರವು ತನ್ನ 'ಹೀಲ್ ಇನ್ ಇಂಡಿಯಾ' ಯೋಜನೆ ಮೂಲಕ ವೈದ್ಯಕೀಯ ವೀಸಾ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಆಯುರ್ವೇದ ಹಾಗೂ ಯೋಗ ಚಿಕಿತ್ಸೆಗಳಿಗಾಗಿ ಬರುವವರಿಗೆ ಬರುವವರಿಗೆ ವಿಶೇಷ ವೀಸಾ ಸೌಲಭ್ಯ ನೀಡಲಾಗುತ್ತಿದೆ. ಆಯ್ದ ದೇಶಗಳ ರೋಗಿಗಳಿಗೆ 48 ಗಂಟೆಗಳ ಒಳಗಾಗಿ ವೈದ್ಯಕೀಯ ವೀಸಾ ನೀಡುವ ಗುರಿ ಹೊಂದಲಾಗಿದೆ. ಅಮೆರಿಕ ಅಥವಾ ಯುರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ಚಿಕಿತ್ಸಾ ವೆಚ್ಚವು 60% ರಿಂದ 80% ರಷ್ಟು ಕಡಿಮೆ ಇದೆ..