Thursday, September 3, 2026
Thursday, September 3, 2026

ವನ್ಯಜೀವಿ ಸಫಾರಿಗೆ ದರ ಏರಿಕೆ: ವಯಸ್ಕರ ಬಸ್‌ ಟಿಕೆಟ್ 1,000 ರು.

ವನ್ಯಜೀವಿ ಸಫಾರಿಗೆ ದರ ಏರಿಕೆ: ಪ್ರವಾಸಿಗರಿಗೆ ಹೆಚ್ಚಿದ ಹೊರೆ. ಬಸ್‌ ಹಾಗೂ ಜೀಪ್‌ ಸಫಾರಿ ದರ ಪರಿಷ್ಕರಣೆಗೊಂಡಿದೆ.

ಕರ್ನಾಟಕದ ಪ್ರಸಿದ್ಧ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ದರವನ್ನು ಪರಿಷ್ಕರಿಸಲಾಗಿದೆ. ಹೊಸ ದರಗಳು ಸೆಪ್ಟೆಂಬರ್ 1, 2026ರಿಂದ ಜಾರಿಗೆ ಬಂದಿದ್ದು, ವನ್ಯಜೀವಿ ಸಫಾರಿ ಪ್ರವಾಸಿಗರಿಗೆ ಹೆಚ್ಚುವರಿ ವೆಚ್ಚ ಎದುರಾಗಿದೆ.

ಹೊಸ ದರದ ಪ್ರಕಾರ, ವಯಸ್ಕರ ಬಸ್ ಸಫಾರಿ ಟಿಕೆಟ್ 1,000 ರು.ಕ್ಕೆ ಏರಿಕೆಯಾಗಿದೆ. ಈ ಮೊದಲು 650 ರು.ಇದ್ದ ದರವನ್ನು 350ರು. ಹೆಚ್ಚಿಸಲಾಗಿದೆ. 12 ವರ್ಷದೊಳಗಿನ ಮಕ್ಕಳ ಟಿಕೆಟ್ ದರ 350 ರು. ರಿಂದ 500 ರು. ಕ್ಕೆ ಏರಿಕೆಯಾಗಿದೆ. ಬಸ್ ಸಫಾರಿ ದರದಲ್ಲಿ ನೇಚರ್ ಗೈಡ್ ಶುಲ್ಕವೂ ಒಳಗೊಂಡಿದೆ ಎಂದು ವರದಿಯಾಗಿದೆ.

ಜೀಪ್ ಸಫಾರಿ ದರದಲ್ಲೂ ಗಣನೀಯ ಏರಿಕೆಯಾಗಿದೆ. ವಯಸ್ಕರಿಗೆ 1,500 ರು.ಹಾಗೂ ಮಕ್ಕಳಿಗೆ 750 ರು. ದರ ನಿಗದಿಪಡಿಸಲಾಗಿದೆ. ಇದರಿಂದ ಕುಟುಂಬ ಸಮೇತ ಸಫಾರಿಗೆ ತೆರಳುವ ಪ್ರವಾಸಿಗರ ಒಟ್ಟು ಪ್ರವಾಸ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.

ಇದರ ಜತೆಗೆ, ವನ್ಯಜೀವಿ ಛಾಯಾಗ್ರಾಹಕರಿಗೂ ಹೊಸ ಶುಲ್ಕ ನಿಯಮ ಜಾರಿಯಾಗಿದೆ. 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ 1,500 ರು. ಶುಲ್ಕದ ಜತೆಗೆ 18% ಜಿಎಸ್‌ಟಿ ವಿಧಿಸಲಾಗುತ್ತದೆ.

ಅರಣ್ಯ ಇಲಾಖೆ ದರ ಪರಿಷ್ಕರಣೆಗೆ ವನ್ಯಜೀವಿ ಸಂರಕ್ಷಣೆ, ಸಫಾರಿ ನಿರ್ವಹಣೆ, ವಾಹನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಗಳ ಹೆಚ್ಚುತ್ತಿರುವ ವೆಚ್ಚವನ್ನು ಕಾರಣವಾಗಿ ಸೂಚಿಸಿದೆ. ಹೆಚ್ಚುವರಿ ಆದಾಯವನ್ನು ಸಂರಕ್ಷಣಾ ಕಾರ್ಯಗಳಿಗೆ ಬಳಸುವ ನಿರೀಕ್ಷೆಯಿದೆ.

ಆದರೆ, ದರ ಏರಿಕೆಯಿಂದ ಮಧ್ಯಮ ವರ್ಗದ ಕುಟುಂಬಗಳು, ವಿದ್ಯಾರ್ಥಿಗಳು ಹಾಗೂ ನಿಯಮಿತವಾಗಿ ಸಫಾರಿಗೆ ತೆರಳುವ ವನ್ಯಜೀವಿ ಪ್ರಿಯರಿಗೆ ಆರ್ಥಿಕ ಹೊರೆಯಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ, ಆನೆ, ಚಿರತೆ ಸೇರಿದಂತೆ ಹಲವು ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ವೀಕ್ಷಿಸಲು ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದ್ದರಿಂದ ದರ ಏರಿಕೆಯು ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..