ಬೆಂಗಳೂರಿನಲ್ಲಿ 36 ತಾಸು!
ರೈಲೋ ಬಸ್ಸೋ ಮಿಸ್ ಆಯ್ತು, ಅಗಬೇಕಾದ ಕೆಲಸ ಆಗಿಲ್ಲ ಅಂತ ಬೆಂಗಳೂರಲ್ಲೇ ಉಳಿಯುವ ಪರಿಸ್ಥಿತಿ ಬಂದಾಗ, ಒಂದೂವರೆ ದಿನದಲ್ಲಿ ಬೆಂಗಳೂರು ದರ್ಶನ ಮಾಡೋದು ಹೇಗೆ? ಬೆಂಗಳೂರಿನಲ್ಲಿ 36 ಗಂಟೆಗಳಲ್ಲಿ ನೋಡಬಹುದಾದ, ಸುತ್ತಬಹುದಾದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು ಎಷ್ಟು ದೊಡ್ಡದು ಅಂದರೆ, ಒಂದೆರಡು ದಿನಗಳಲ್ಲಿ ಸುತ್ತಾಡಿ ಮುಗಿಸೋದು ಸಾಧ್ಯವೇ ಇಲ್ಲ. ರಾಜ್ಯದ ರಾಜಧಾನಿಯಾಗಿ, ಭಾರತದ ಸಿಲಿಕಾನ್ ಸಿಟಿಯಾಗಿ ತನ್ನದೇ ಛಾಪನ್ನು ಮೂಡಿಸಿರುವ ಬೆಂಗಳೂರು ನಗರ, ವಿಶ್ವದಲ್ಲೆಲ್ಲ ತನ್ನ ಅಭಿಮಾನಿಗಳನ್ನು ಹೊಂದಿದೆ. ತಲೆನೋವು ಎನಿಸುವಂಥ ಟ್ರಾಫಿಕ್ ಇದ್ದರೂ ಬೆಂಗಳೂರು ಸುತ್ತುವವರಿಗೆ ಹಲವಾರು ಸ್ಥಳಗಳಿವೆ. ಬೆಂಗಳೂರಿನಲ್ಲಿ ಜಲಪಾತವಿಲ್ಲ, ಮುಂಬೈ ರೀತಿಯ ಬೀಚ್ ಇಲ್ಲ. ರಾಜಸ್ಥಾನದ ಥರ ಮರುಭೂಮಿ ಇಲ್ಲ, ಉತ್ತರಾಖಂಡದ ಥರ ಹಿಮಾಲಯವಿಲ್ಲ. ಅದರ ಹೊರತಾಗಿ ಏನಿಲ್ಲ ಹೇಳಿ. ಭವ್ಯ ಕಟ್ಟಡಗಳು, ಐತಿಹಾಸಿಕ ಸ್ಥಳಗಳು, ಮ್ಯೂಸಿಯಂಗಳು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು, ದೇವಾಲಯಗಳು, ಪಾರ್ಕುಗಳು, ಸಸ್ಯಕಾಶಿ, ಅಂತಾರಾಷ್ಟೀಯ ವಿಮಾನನಿಲ್ದಾಣ.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿ ಹಲವು ಜಾಗಗಳು ಅಫಿಷಿಯಲೀ ಪ್ರವಾಸಿ ತಾಣಗಳಲ್ಲ. ಆದರೆ ಹೊರಗಿನಿಂದ ಮತ್ತು ಗ್ರಾಮೀಣ ಪರಿಸರದಿಂದ ಬರುವ ಮಂದಿಗೆ, ತಮ್ಮಲ್ಲಿಲ್ಲದ ಪ್ರತಿ ತಾಣವೂ, ಪ್ರವಾಸ ವಿಶೇಷದ ತಾಣವೇ. ಬೆಂಗಳೂರು ಎಂದಾಕ್ಷಣ ಕೆಲವರು ವಿಧಾನ ಸೌಧ ಮತ್ತು ಹೈಕೋರ್ಟ್ ತೋರಿಸಿ ಅಲ್ಲಿಂದ ಕಬ್ಬನ್ ಪಾರ್ಕ್, ಲಾಲ್ ಬಾಗ್ ಕರ್ಕೊಂಡು ಹೋಗಿ ಮುಗಿಸಿಬಿಡ್ತಾರೆ. ಆದರೆ ಬೆಂಗಳೂರು ಅಂದ್ರೆ ಪ್ರವಾಸಿಗರ ಪಾಲಿಗೆ ಅಷ್ಟೇನಾ?
ಈಗ ಹೊರಗಿನಿಂದ ಕಾರ್ಯನಿಮಿತ್ತ ಹಲವಾರು ಮಂದಿ ಬೆಂಗಳೂರಿಗೆ ಬರುತ್ತಿರುತ್ತಾರೆ. ಬೆಳಗ್ಗೆ ಕಚೇರಿಗೆ ಹೋಗಿ ಮಧ್ಯಾಹ್ನದ ಹೊತ್ತಿಗೆ ತಮ್ಮ ಕೆಲಸವನ್ನು ಮುಗಿಸಿಕೊಂಡು ಹೊಟೇಲ್ ರೂಂನಲ್ಲೋ ಅಥವಾ ಸಿನಿಮಾ ನೋಡಿಯೋ ಟೈಂ ಪಾಸ್ ಮಾಡಿಬಿಡುತ್ತಾರೆ. ರೈಲೋ ಬಸ್ಸೋ ಮಿಸ್ ಆಯ್ತು, ಅಗಬೇಕಾದ ಕೆಲಸ ಆಗಿಲ್ಲ ಅಂತ ಬೆಂಗಳೂರಲ್ಲೇ ಉಳಿಯುವ ಪರಿಸ್ಥಿತಿ ಬಂದಾಗ, ಒಂದೂವರೆ ದಿನದಲ್ಲಿ ಬೆಂಗಳೂರು ದರ್ಶನ ಮಾಡೋದು ಹೇಗೆ? ಬೆಂಗಳೂರಿನಲ್ಲಿ 36 ಗಂಟೆಗಳಲ್ಲಿ ನೋಡಬಹುದಾದ, ಸುತ್ತಬಹುದಾದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕಬ್ಬನ್ ಪಾರ್ಕ್ 6 am -9 am
ಬೆಂಗಳೂರಿನಲ್ಲಿ ಒಂದೊಳ್ಳೆ ಮುಂಜಾನೆ ಸವಿಯಬೇಕೆಂದರೆ, ಅದು ಪಾರ್ಕ್ ಅಥವಾ ಉದ್ಯಾನವನದಲ್ಲಿಯೇ ಶುರುವಾಗಬೇಕು. ಅಲ್ವಾ? ಗಾರ್ಡನ್ ಸಿಟಿಯ ಮುಂಜಾನೆಯಲ್ಲಿ ಗಾರ್ಡನ್‌ಗಳ ಮಜವೇ ಬೇರೆ. ವಾರಾಂತ್ಯಕ್ಕೆ ಕಬ್ಬನ್ ಪಾರ್ಕ್‌ಗೆ ಹೋಗುವವರಿಗೆ ಅದೊಂದು ಬೇರೆಯದ್ದೇ ಲೋಕವನ್ನು ತೆರೆದಿಡುತ್ತದೆ. ವಾರದ ದಿನ ಹೋಗುವವರಿಗೆ ಕಬ್ಬನ್ ಪಾರ್ಕ್‌ನಲ್ಲಿ ಒಂದು ದೊಡ್ಡ ಲೈಬ್ರರಿ, ಮ್ಯೂಸಿಯಂ, ಅಕ್ವೇರಿಯಂ, ಬಾಲ ಭವನದಲ್ಲಿ ಪುಟಾಣಿ ರೈಲು, ಹಲವಾರು ಪ್ರತಿಮೆಗಳು, ಟೆನ್ನಿಸ್ ಅಕಾಡೆಮಿ ಎಲ್ಲವೂ ನೋಡಲು ಸಿಗುತ್ತದೆ. ಬೆಳ್ಳಂಬೆಳಗ್ಗೆ ಇದು ಜಾಗರ್‌ಗಳ ಸ್ವರ್ಗವೂ ಹೌದು. ಹಲವಾರು ಜನ ಜಾಗರ್‌ಗಳ ಜತೆಗೆ ನಿಮ್ಮ ಮನಸ್ಸಿದ್ದರೆ, ನೀವು ಜಾಗಿಂಗ್ ಮಾಡಬಹುದು.

ಏರ್‌ಲೈನ್ಸ್ ಹೊಟೇಲ್‌ನಲ್ಲಿ ಬ್ರೇಕ್ ಫಾಸ್ಟ್ 9 am – 10 am
ಹಲವಾರು ಹಳೆಯ ಸಿನಿಮಾಗಳ ಖಾಯಂ ಶೂಟಿಂಗ್ ಜಾಗ, ಏರ್‌ಲೈನ್ಸ್ ಹೊಟೇಲ್. ಈಗಿನ ಕಾಲದ ಪಬ್, ಕೆಫೆಗಳಿಗಿಂತ ಹಳೆಯ ವೈಬ್‌ಗಳನ್ನು ಕಾಪಿಟ್ಟುಕೊಂಡು ಬಂದಿರುವ ಏರ್‌ಲೈನ್ಸ್ ಹೊಟೇಲ್ ಇಂದಿಗೂ ವಿಂಟೇಜ್ ಫೀಲ್ ಉಳಿಸಿಕೊಂಡಿದೆ. ಏರ್‌ಲೈನ್ಸ್ ಹೊಟೇಲ್‌ನಲ್ಲಿ ಹೋದ ತಕ್ಷಣವೇ ಸೀಟ್ ಸಿಗೋದು ಡೌಟ್. ಅಲ್ಲಿ ಮಸಾಲಾ ದೋಸೆ, ಜತೆಗೆ ಕಾಫಿಯನ್ನು ಸವಿಯಬಹುದು. ಇನ್ನೂ ಅಲ್ಲಿ ಹಲವಾರು ರೀತಿಯ ಅಥೆಂಟಿಕ್ ತಿಂಡಿಗಳು ಸಿಗುವುದರಿಂದ ನಿಮಗಿಷ್ಟವಾದ ತಿಂಡಿಯನ್ನೇ ಆರಿಸಿಕೊಳ್ಳಬಹುದು. ಅದರ ಜತೆಗೆ ಉದ್ದದ ಲೋಟದಲ್ಲಿ ಕೊಡುವ ಕಾಫಿಯನ್ನು ಹೀರಿ. ಮುಂದೆ ಹೋಗಲು ಸಿದ್ಧರಾಗಿ.
ಇಂಡಿಯನ್ ಕಾರ್ಟೂನ್ ಗ್ಯಾಲರಿ 10.30am-1am
ಬೆಂಗಳೂರಿನಲ್ಲಿ ವಿಶ್ವದ ಖ್ಯಾತ ಕಾರ್ಟೂನಿಸ್ಟ್‌ಗಳಿಂದ ಮೂಡಿದ ಕಾರ್ಟೂನ್ ಗ್ಯಾಲರಿ ಇದೆ. ಅದರ ಜತೆ ಕಾರ್ಟೂನ್‌ನ ಇತಿಹಾಸದ ಬಗ್ಗೆ ಅದರ ಹಳೆಯ ಹಾಗೂ ಇತ್ತೀಚಿನ ಕಾರ್ಟೂನಿಸ್ಟ್‌ಗಳ ಬಗ್ಗೆ ಮಾಹಿತಿ ಇರುವ ಲೈಬ್ರರಿ ಸಹ ಇದೆ. ವ್ಯಾಕ್ಸ್‌ಗಳಿಂದ ಮಾಡಲಾದ ಆಕೃತಿಯ ಎಗ್ಸಿಬಿಷನ್ ಸೆಂಟರ್ ಸಹ ಇದೆ. ಅಲ್ಲಿಗೆ ಹೋದಾಗ ಕಾರ್ಟೂನ್‌ನ ಇತಿಹಾಸದ ಜತೆ, ಹಲವಾರು ಕಾರ್ಟೂನ್ ಗಳನ್ನು ನೋಡಿ, ನಿಮಗೆ ಇಷ್ಟವಾದ ಕಾರ್ಟೂನ್‌ಗಳ ಪಕ್ಕದಲ್ಲಿ ಒಂದು ಫೋಟೋ ತೆಗೆಸಿಕೊಂಡು ಒಂದೊಳ್ಳೆ ನೆನಪನ್ನು ಹೊತ್ತು ತರಬಹುದು.
ಕೋಶಿಸ್ ನಲ್ಲಿ ಊಟ 1.30-2.30 pm
ಬೆಂಗಳೂರಿನ ಆಂಬಿಯನ್ಸ್ ಬೇಕೆಂದರೆ, ಕೋಶಿಸ್ ಬಾರ್ ಮತ್ತು ರೆಸ್ಟೊರೆಂಟ್‌ಗೆ ಹೋಗಬೇಕು. ಇದು ನಿನ್ನೆ ಮೊನ್ನೆ ಶುರುವಾದ ಹೊಟೇಲ್ ಇಲ್ಲ, ಬದಲಿಗೆ 100 ವರ್ಷಗಳ ಹಳೆಯದಾದ ಹೊಟೇಲ್. ಬ್ರಿಟಿಷ್‌ರ ಸಮಯದಿಂದಲೂ ಕೋಶಿಸ್ ಇದೆ, ಈಗಲೂ ಹಾಗೆ ಇದೆ. ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳೂ ಈ ಹೊಟೇಲ್‌ಗೆ ಬಂದಿದ್ದರೆಂದರೆ, ಕೋಶಿಸ್ ಹವಾ ಹೇಗಿರಬಹುದು! ಇಲ್ಲಿ ವೆಜ್ ಹಾಗೂ ನಾನ್‌ವೆಜ್ ಊಟದ ಜತೆಗೆ ಆಲ್ಕೋಹಾಲ್ ಸಹ ಸಿಗುತ್ತದೆ. ಹಾಗೇ ಈ ಹೋಟೇಲ್ ತುಂಬಾ ಕಾಸ್ಟ್ಲೀ ಅಲ್ಲ, ಪಾಕೆಟ್ ಫ್ರೆಂಡ್ಲಿ.

ಬೆಂಗಳೂರು ಪ್ಯಾಲೇಸ್ 3.30pm
ಎಕರೆಗಟ್ಟಲೇ ಜಾಗದಲ್ಲಿ ಕಟ್ಟಿರುವ ಈ ಬೆಂಗಳೂರು ಅರಮನೆ, ಇಂಗ್ಲೆಂಡ್‌ನ ವಿಂಡ್ಸರ್ ಕಾಸಲ್‌ನಿಂದ ಸ್ಫೂರ್ತಿ ಪಡೆದಿದೆ. 1887ರಲ್ಲಿ ಚಾಮರಾಜ ವಡೆಯರ್‌ರಿಂದ ಕಟ್ಟಿಸಲಾದ ಈ ಅರಮನೆಯೂ, ಟುಡರ್ ಮತ್ತು ಸ್ಕಾಟಿಶ್ ಗೋಥಿಕ್ ವಿನ್ಯಾಸದಲ್ಲಿದೆ. ಅರಮನೆಯ ತುಂಬಾ ಕಟ್ಟಿಗೆಯಿಂದ ಮಾಡಿದ ಒಳಾಂಗಣ ಅರಮನೆಯ ಸೌಂದರ್ಯ ಹೆಚ್ಚಿಸಿದೆ. ಅಲಂಕೃತ ಕಂಬಗಳು, ಕಮಾನುಗಳು, ಕಂಗಣಿಗಳು, ಕಲಾಕೃತಿಗಳುಳ್ಳ ಗೋಡೆಗಳು ಮತ್ತು ಇನ್ನೂ ಹಲವಾರು ವಿಶೇಷತೆ ಅರಮನೆಗೆ ಮೆರುಗನ್ನು ನೀಡುತ್ತದೆ. ಅದರ ಜತೆಗೆ ಇಲ್ಲಿ ಪ್ರಸಿದ್ಧ ಕಲಾವಿದ ರಾಜಾ ರವಿ ವರ್ಮಾ ಅವರ ಕೆಲವು ಉತ್ತಮ ಚಿತ್ರಗಳನ್ನು ನೋಡದೇ ಹಿಂತಿರುಗಬೇಡಿ.
ಬಸವನ ಗುಡಿ 6pm
ಬೆಂಗಳೂರಿನ ವೈಬ್‌ನ್ನು ಸಂಪೂರ್ಣವಾಗಿ ಸವಿಯಲು ಬಸವನ ಗುಡಿಗಿಂತ ಒಳ್ಳೆಯ ಸ್ಥಳ ಮತ್ತೊಂದಿಲ್ಲ. ಒಳ್ಳೊಳ್ಳೆ ಉಪಾಹಾರ ಕೇಂದ್ರಗಳು, ಬಸವನ ಗುಡಿ ದೇವಸ್ಥಾನ, ಖ್ಯಾತ ವಿದ್ಯಾರ್ಥಿ ಭವನ್ ಹೊಟೇಲ್, ಮಾರುಕಟ್ಟೆಯ ಜತೆಗೆ ಒಳ್ಳೊಳ್ಳೆ ಪಾರ್ಕ್‌ಗಳೂ ಇವೆ. ಅಲ್ಲಿಗೆ ಹೋದರೆ, ಮೊದಲು ಬಸವನ ಗುಡಿಗೆ ಹೋಗಿ, ಆಮೇಲೆ ವಿದ್ಯಾರ್ಥಿ ಭವನ್‌ನಲ್ಲಿ ಗರಿಗರಿ ದೋಸೆಯ ಜತೆಗೆ ಕಾಪಿಯನ್ನು ಸವಿದು. ಅದರ ಎದುರಿಗೆ ಇರುವ ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿ, ಗಾಂಧಿ ಬಜಾರ್‌ನಲ್ಲೂ ಒಂದು ಸುತ್ತು ಹಾಕಿ, ಏನಾದರೂ ಬೇಕಾದದ್ದನ್ನು ತಗೊಂಡು. ಮುಂದಿನ ಪಯಣಕ್ಕೆ ಸಿದ್ಧರಾಗಬಹುದು.

ಇಂದಿರಾನಗರ 9pm
ಇಂದಿರಾನಗರ ಬೆಂಗಳೂರಿನ ಅತೀ ಫೇಮಸ್ ಹಾಗೂ ಸ್ಟೈಲಿಶ್ ಏರಿಯಾ. ಇಲ್ಲಿ ಟೆಕ್ ಕಂಪನಿಗಳ ಜತೆಗೆ ಹಲವಾರು ಪಬ್ ಮತ್ತು ರೆಸ್ಟೋರೆಂಟ್‌ಗಳಿಗೆ ವಿಶ್ವ ವಿಖ್ಯಾತಿಯನ್ನೂ ಪಡೆದುಕೊಂಡಿದೆ. ಇಂದಿರಾನಗರದ ಪ್ರಮುಖ ಬೀದಿಗಳಲ್ಲಿ ಓಡಾಡುತ್ತಾ ಹೋದಾಗ ಅಲ್ಲಿ ಟಿಪ್ಸಿ ಬುಲ್ ಎಂಬ ಪಬ್ ಮತ್ತು ರೆಸ್ಟೋರೆಂಟ್ ಸಿಗುತ್ತದೆ. ಅಲ್ಲಿ ಒಳ್ಳೆಯ ಊಟ ಮಾಡಿ. ಗುಂಡುಗಲಿಗಳಾಗಿದ್ದರೆ, ಒಂದೊಳ್ಳೆ ಗುಂಡು ಹಾಕಿ ಆರಾಮವಾಗಿ ಮನೆಗೆ ಹೋಗಿ ಮಲಗಿಕೊಳ್ಳಿ.
ಎರಡನೇ ದಿನ
ಲಾಲ್‌ಬಾಗ್ ಗಾರ್ಡನ್ 7 am
ಬೆಂಗಳೂರಿನ ಮತ್ತೊಂದು ಶ್ವಾಸಕೋಶ ಲಾಲ್‌ಬಾಗ್ ಬಟಾನಿಕಲ್ ಗಾರ್ಡನ್. 240 ಎಕರೆಯಲ್ಲಿರುವ ಈ ಗಾರ್ಡನ್ ಹಲವಾರು ರೀತಿಯ ಸಸ್ಯಗಳಿಗೆ ಮನೆಯಾಗಿದೆ. ಅದರ ಜತೆಗೆ ಈ ಗಾರ್ಡನ್‌ನಲ್ಲಿ ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟ ವಾಚ್ ಟವರ್ ಸಹ ಇದೆ. ನೀವು ಈ ಸ್ಥಳಕ್ಕೆ ಭೇಟಿಕೊಟ್ಟಾಗ ಹಲವಾರು ರೀತಿಯ ಪಕ್ಷಿಗಳ ಜತೆಗೆ ಸಾವಿರಾರು ಪ್ರಭೇದದ ಹೂಗಳನ್ನೂ ನೋಡಬಹುದು. ಸ್ವಾತಂತ್ರ್ಯೋತ್ಸವ ದಿನ ಹಾಗು ಗಣರಾಜ್ಯೋತ್ಸವ ದಿನ ಸೇರಿಸಿ ಇನ್ನೂ ಕೆಲವು ವಿಶೇಷ ದಿನಗಳಲ್ಲಿ ಇಲ್ಲಿ ಫ್ಲವರ್ ಶೋಗಳಾಗುತ್ತದೆ. ಆ ಶೋಗೆ ಪ್ರಪಂಚದ ಹಲವಾರು ದೇಶಗಳಿಂದ ವಿಶಿಷ್ಠ ರೀತಿಯ ಹೂಗಳನ್ನು ತರಿಸಿರುತ್ತಾರೆ. ಹಾಗೆ ಈ ಸ್ಥಳದಲ್ಲಿ 3000 ಮಿಲಿಯನ್ ವರ್ಷ ಹಳೆಯ ಕಲ್ಲಿನ ಬಂಡೆಗಳನ್ನು ನೋಡಬಹುದು. ಹಾಗೇ 20 ಮಿಲಿಯನ್ ವರ್ಷಗಳ ಹಿಂದಿನ ಮರಗಳ ಪಳೆಯುಳಿಕೆಯನ್ನೂ ನೋಡಬಹುದು.
ಎಂಟಿಆರ್‌ನಲ್ಲಿ ತಿಂಡಿ 9 am
1924ರಲ್ಲಿ ಶುರುವಾದ ಮಾವಳ್ಳಿ ಟಿಫಿನ್ ರೂಂ ಇಂದಿಗೂ ಬೆಂಗಳೂರಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ. ಇಲ್ಲಿ ಮಸಾಲಾ ದೋಸೆ, ಇಡ್ಲಿ, ವಡೆ, ಉಪ್ಪಿಟ್ಟು ಹಾಗೂ ಬಾದಾಮ್ ಹಲ್ವಾ ಸೇರಿದಂತೆ ಹಲವಾರು ರೀತಿಯ ದಕ್ಷಿಣ ಭಾರತ ಶೈಲಿಯ ಖಾದ್ಯಗಳು ಸಿಗುತ್ತವೆ. ಲಾಲ್ ಬಾಗ್‌ಗೆ ಹತ್ತಿರವಿರುವ ಈ ಸ್ಥಳ, ಲಾಲ್ ಬಾಗ್‌ನಲ್ಲಿ ಸುತ್ತಾಡಿದ ಮೇಲೆ ಹಸಿವನ್ನು ನೀಗಿಸಬಹುದು. ಆದರೆ, ಇಲ್ಲಿ ಬಂದ ತಕ್ಷಣವೇ ಸೀಟ್ ಸಿಗಲ್ಲ. ಕ್ಯೂ ಇರುತ್ತೆ. ಕಾಯಲೇಬೇಕು.
ಬೆಂಗಳೂರು ಕೋಟೆ ಮತ್ತು ಟಿಪ್ಪೂ ಬೇಸಗೆ ಅರಮನೆ 11.00 am
1537 ರಲ್ಲಿ ಕೆಂಪೇಗೌಡರು ಕಟ್ಟಿಸಿದ ಈ ಅರಮನೆ ಮೊದಲು ಮಣ್ಣಿನಿಂದ ಕಟ್ಟಲಾಗಿತ್ತು. ತದನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್‌ನ ಆಳ್ವಿಕೆ ಕಾಲ ಅಂದರೆ 18 ನೇ ಶತಮಾನದಲ್ಲಿ ಈ ಅರಮನೆಯನ್ನು ಕಲ್ಲಿನಿಂದ ಕಟ್ಟಿಸಿದರು. ಈ ಕೋಟೆ ಈಗ ಸಾರ್ವಜನಿಕರು ನೋಡಲು ಮುಕ್ತವಾಗಿದ್ದು, ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ಕಟ್ಟಲಾದ ಈ ಅರಮನೆಯೂ ನೋಡುಗರ ಕಣ್ಣಿಗೆ ತುಂಬಾ ಜಾಸ್ತಿ ಕೆಲಸ ಕೊಡಬಹುದು. ಇದರಲ್ಲಿ ಒಂದು ಮ್ಯೂಸಿಯಮ್ ಸಹ ಇದ್ದು ಅಲ್ಲಿ ಟಿಪ್ಪುವಿನ ಸಾಧನೆ ಹಾಗೂ ಲಂಡನ್‌ನ ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ ನಲ್ಲಿರುವ ಟಿಪ್ಪುವಿನ ಹುಲಿಯ ಒಂದು ಪ್ರತಿಕೃತಿಯೂ ಇದೆ. ಇದರ ಸುತ್ತಮುತ್ತ ಮಾರ್ಕೆಟ್‌ಗಳಿದ್ದು, ಅರಮನೆಯನ್ನು ನೋಡಿ ಮುಗಿಸಿದ ಮೇಲೆ ಅಲ್ಲಿನ ಮಾರ್ಕೆಟ್‌ಗಳತ್ತ ಹೊರಡಬಹುದು.
ನೀವು ವಾರದ ಮಟ್ಟಿಗೆ ಪ್ರವಾಸಕ್ಕೆಂದೇ ಬೆಂಗಳೂರಿಗೆ ಬಂದರೆ ನಿಮಗೆ ತೋರಿಸೋಕೆ, ಸಜೆಸ್ಟ್ ಮಾಡೋಕೆ ಹಲವಾರು ಜಾಗಗಳಿವೆ. ಆದರೆ ನೀವು ಮೂವತ್ತಾರು ಗಂಟೆಗಳಲ್ಲಿ, ಶಾಪಿಂಗು, ತಿಂಡಿ, ಊಟ ಎಲ್ಲದರ ಜೊತೆ ಕೆಲವು ಪ್ಲೇಸ್ ಕವರ್ ಮಾಡಬೇಕು ಅಂದ್ರೆ ನಾವು ಕೊಟ್ಟಿರೋದು ಬೆಸ್ಟ್ ಪ್ಲಾನ್.
ಇದೇ ರೀತಿ ಪರ್ಯಾಯ ಪ್ಲಾನ್ ಚಾರ್ಟ್ ಕೂಡ ನೀವು ಮಾಡಿಕೊಳ್ಳಬಹುದು. ಮೂವತ್ತಾರು ಗಂಟೆಯಲ್ಲಿ ಬೆಂಗಳೂರು ಅಂತ ನೀವೂ ಒಂದು ಪ್ಲಾನ್ ಕಳಿಸಿಕೊಡಿ ನೋಡೋಣ!