Monday, December 8, 2025
Monday, December 8, 2025

ಮುಂದಿನ ನಿಲ್ದಾಣ ಪ್ಲಾಟ್‌ಫಾರ್ಮ್‌ 65

ವೀಕೆಂಡ್‌ ಬಂದರೆ ಈಗಂತೂ ಅನೇಕ ಮನೆಗಳಲ್ಲಿ ಗ್ಯಾಸ್ ಸ್ಟೋವ್ ಉರಿಯುವುದೇ ಕಡಿಮೆ. ಶುಚಿ ಹಾಗೂ ರುಚಿಕರವಾದ ಆಹಾರವನ್ನು ಉಣಬಡಿಸುವ ಹೊಟೇಲ್‌ಗಳು ಗಲ್ಲಿಗೆ ಒಂದಷ್ಟು ಎಂಬಂತಾಗಿರುವಾಗ ದಣಿದು ಮನೆಗೆ ಬಂದ ವೇಳೆ ಅಥವಾ ವಾರಾಂತ್ಯದಲ್ಲಿ ಅಡುಗೆ ಮನೆಗೆ ಹೋಗುವವರ್ಯಾರು? ಅದರಲ್ಲೂ ವಿಶೇಷವಾಗಿ ಈಗಂತೂ ಹೊಟೇಲ್‌ ಉದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಪೈಪೋಟಿಯೆಂಬಂತೆ ಒಂದಕ್ಕಿಂತ ವಿಭಿನ್ನ ಆಂಬಿಯನ್ಸ್‌ ಹಾಗೂ ವೆರೈಟಿ ಫುಡ್‌ ಒದಗಿಸುವ ಹೊಟೇಲ್‌ ಗಳಂತೂ ಹೆಚ್ಚುತ್ತಲೇ ಇವೆ. ಅಂಥ ಹೊಟೇಲ್‌ಗಳ ಪೈಕಿ ಪ್ಲಾಟ್‌ಫಾರ್ಮ್‌ 65 ಎಲ್ಲರ ಹೃದಯ ಕದ್ದಿದೆ.

ಸಾಮಾನ್ಯವಾಗಿ ರೈಲಿನಲ್ಲಿ ಆಹಾರ ಸೇವಿಸುವುದೆಂದರೆ ಮೂಗು ಮುರಿಯುವವರೇ ಎಲ್ಲರೂ. ಅದ್ಯಾರಿಗೆ ರುಚಿಸುತ್ತದೆ, ಅನ್ನ ಬೆಂದಿರುವುದಿಲ್ಲ, ಖಾರ ಹೆಚ್ಚಿರುತ್ತದೆ. ಉಪ್ಪು ಸರಿಹೊಂದಿರುವುದಿಲ್ಲ, ಎಣ್ಣೆ ಕೈಗೆ ಮೆತ್ತಿಕೊಂಡಿರುತ್ತದೆ ಹೀಗೆ ನೂರಾರು ಕಂಪ್ಲೇಂಟ್... ಬರಿಯ ಕಂಪ್ಲೇಂಟ್‌ ಅಷ್ಟೇ. ಆದರೆ ಈಗ ನಾವು ಪರಿಚಯಿಸುತ್ತಿರುವ ರೈಲಿನಲ್ಲಿ ಲಭ್ಯವಾಗುವ ಆಹಾರ ಹಾಗಿರುವುದಿಲ್ಲ. ಇಲ್ಲಿ ಸಿಗುವ ಆಹಾರಕ್ಕಾಗಿ ದುಬಾರಿ ಬೆಲೆ ತೆತ್ತರೂ ಪರವಾಗಿಲ್ಲ ಎನ್ನುವ ಮಂದಿಯೇ ಹೆಚ್ಚಿನವರು. ರುಚಿ ರುಚಿಯಾದ ಈ ಆಹಾರಕ್ಕಾಗಿ ಕ್ಯೂನಲ್ಲಿ ಕಾದು ಬರುವ ಮಂದಿಗೇನೂ ಕಡಿಮೆಯಿಲ್ಲ. ಹೌದು, ನಾವು ಹೇಳುತ್ತಿರುವುದು ಟ್ರೇನ್‌ ಥೀಮ್‌ ರೆಸ್ಟೋರೆಂಟ್‌ ʼಪ್ಲಾಟ್‌ಫಾರ್ಮ್‌ 65ʼ ಬಗ್ಗೆ.

ಕರ್ನಾಟಕದಲ್ಲಿದು ಹೊಸ ಪ್ರಯತ್ನ

ಕರ್ನಾಟಕದಲ್ಲಿ ಹುಡುಕಾಡಿದರೂ ಹೀಗೆ ಟಾಯ್‌ ಟ್ರೇನ್‌ ರೆಸ್ಟೋರೆಂಟ್‌ ಕಾಣಸಿಗುವುದು ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಹಾಗೂ ಆರ್‌ ಆರ್‌ ನಗರದಲ್ಲಿ ಮಾತ್ರ. ಈ ರೆಸ್ಟೋರೆಂಟ್‌ ಒಳಗೆ ಹೋಗುತ್ತಿದ್ದಂತೆ ಟ್ರೇನ್‌ ಥೀಮ್‌ ಆಂಬಿಯನ್ಸ್‌ ನೋಡುವುದಕ್ಕೆ ಸಿಗುತ್ತದೆ. ಎಲ್ಲ ಟೇಬಲ್ನಲ್ಲೂ ಚಿತ್ರದುರ್ಗ, ಮಂಗಳೂರು, ತುಮಕೂರು, ಮೈಸೂರು, ಬಳ್ಳಾರಿ ಹೀಗೆ ಪ್ರಮುಖ ರೈಲ್ವೆ ನಿಲ್ದಾಣಗಳ ಹೆಸರು ಕಾಣಸಿಗುತ್ತದೆ. ರೈಲ್ವೆ ನಿಲ್ದಾಣಗಳಲ್ಲೇ ಇದ್ದೇವೇನೋ ಎಂದೆನಿಸಿಬಿಡುತ್ತದೆ.

plateform 65 2

ಟ್ರೇನ್‌ನಲ್ಲೇ ಫುಡ್‌ ಸಪ್ಲೈ

ನಿಮಗೆ ಏನೇನು ಬೇಕು ಎಂಬುದರ ಆರ್ಡರ್‌ ಪಡೆದುಕೊಂಡು ಹೋಗುವುದಷ್ಟೇ ಇಲ್ಲಿನ ವೇಟರ್‌ಗೆ ಇರುವ ಮುಖ್ಯ ಕೆಲಸ. ವೇಟರ್‌ ಟ್ಯಾಬ್‌ ನಲ್ಲಿ ಆರ್ಡರ್‌ ಗಳನ್ನು ಗುರುತಿಸಿಕೊಂಡು ಹೋದಮೇಲೆ, ಆರ್ಡರ್‌ ಸಮೇತ ವೇಟರ್‌ ಬರಬಹುದೆಂದು ನೀವಂದುಕೊಂಡರೆ ಅದು ಸುಳ್ಳು. ಯಾಕೆಂದರೆ ಇಲ್ಲಿ ನಿಮ್ಮ ಫುಡ್‌ ಡೆಲಿವರ್‌ ಮಾಡುವವರು ವೇಟರ್‌ಗಳಲ್ಲ, ಬದಲಾಗಿ ಟಾಯ್‌ ಟ್ರೇನ್‌ಗಳು. ನೀವು ಫುಡ್‌ ಆರ್ಡರ್‌ ಕೊಟ್ಟು ನಿಮಿಷಗಳಲ್ಲೇ ನಿಮ್ಮ ಟೇಬಲ್‌ ಮೇಲಿರುವ ರೈಲ್ವೆ ಸಿಗ್ನಲ್‌ ಊಟ ತಯಾರಿರುವ ಬಗ್ಗೆ ಅಲರ್ಟ್ ನೀಡುತ್ತದೆ. ನಿಮಿಷಗಳೊಳಗಾಗಿ ಚುಕು ಬುಕು…ಚುಕುಬುಕು ಎನ್ನುತ್ತಲೇ ಸದ್ದು ಮಾಡುತ್ತಾ ಸುತ್ತಲೂ ಹೆಣೆದಿರುವ ರೈಲ್ವೆ ಹಳಿಗಳ ಮೇಲೆ ಬರುವ ಟಾಯ್‌ ಟ್ರೇನ್‌ ಗಳು ನಿಮ್ಮ ನೆಚ್ಚಿನ ಆಹಾರವನ್ನು ಹೊತ್ತು ಟೇಬಲ್‌ ಎದುರಿನ ನಿಲ್ದಾಣವನ್ನು ಸೇರುತ್ತವೆ.

ಸ್ಟಾರ್ಟರ್ಸ್‌, ಮೇನ್‌ ಕೋರ್ಸ್‌, ಡೆಸರ್ಟ್ಸ್‌, ಎಲ್ಲವೂ ಟ್ರೇನ್‌ ಏರಿ ಬಂದರೆ ಮಾಕ್‌ಟೇಲ್ಸ್‌ ಹಾಗೂ ಜ್ಯೂಸ್‌ ಐಟಂಗಳನ್ನಷ್ಟೇ ವೇಟರ್ಸ್ ನಿಮಗೆ ನೇರವಾಗಿ ತಲುಪಿಸುತ್ತಾರೆ. ವೆಜ್‌ ಹಾಗೂ ನಾನ್‌ ವೆಜ್‌ ರೆಸ್ಟೋರೆಂಟ್‌ ಇದಾಗಿದ್ದು, ಫ್ಯಾಮಿಲಿ ಲಂಚ್‌ ಹಾಗೂ ಗೆಟ್‌ ಟುಗೆದರ್‌ ಗೆ ಇದು ಹೇಳಿಮಾಡಿಸಿದ ಜಾಗ.

plateform 65 3

ಸ್ಟೂಡೆಂಟ್ಸ್ ಗೆ 15% ಆಫರ್‌

ಇದು ಯಾವುದೇ ಹಬ್ಬ-ಹರಿದಿನಗಳ ಸಂದರ್ಭಕ್ಕಷ್ಟೇ ಸೀಮಿತವಾದ ಆಫರ್‌ ಅಲ್ಲ. ಬದಲಾಗಿ ಯಾವುದೇ ದಿನ ಹೋದರೂ ನೀವು ಸ್ಟೂಡೆಂಟ್ಸ್‌ ಆಗಿದ್ದರೆ ಸಾಕು, ನೀವು ಆರ್ಡರ್‌ ಮಾಡಿರುವ ಫುಡ್‌ ನ ಮೇಲೆ 15% ಆಫರ್‌ ಲಭ್ಯವಾಗುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಕನ್ನಡದ ಹಾಡುಗಳಿಗೇ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬರ್ತ್‌ ಡೇ ಆಚರಣೆಯಂಥ ಸಂದರ್ಭಗಳಲ್ಲಿ ಕನ್ನಡದ ಹಾಡುಗಳನ್ನು ಪ್ಲೇ ಮಾಡಿ, ಊಟದ ಜತೆಗೆ ಸಂಗೀತದ ಹಿತಕರ ಅನುಭವವನ್ನು ನೀಡುತ್ತಾರೆ.

ಟ್ರೇನ್‌ ಎಂದರೇನೇ ಮಕ್ಕಳಿಗೆ ಅಚ್ಚುಮೆಚ್ಚು. ಅದರಲ್ಲಿ ಟಾಯ್‌ ಟ್ರೇನ್‌ ಎಂದರೆ ಕೇಳಬೇಕೆ? ಮಕ್ಕಳು ರೆಸ್ಟೋರೆಂಟ್‌ನ ಟ್ರೇನ್‌ ಆಂಬಿಯೆನ್ಸ್‌ ನೋಡಿ ಖುಷಿ ಪಡುವುದರ ಜತೆಗೆ ಟೇಬಲ್‌ ಮೇಲಿರುವ ನಿಲ್ದಾಣಗಳಿಗೆ ಬರುವ ಟ್ರೇನ್‌ ಹಾಗೂ ಅವು ಹೊತ್ತು ತರುವ ಆಹಾರವನ್ನು ಬೆರಗುಗಣ್ಣಿನಿಂದ ನೋಡುತ್ತಾರೆ. ಮತ್ತೆ ಮತ್ತೆ ಟ್ರೇನ್‌ ಬರಲಿ ಅಂತ ಇನ್ನೊಂದಷ್ಟು ಆರ್ಡರ್‌ ಮಾಡಿಸಿದರೂ ಅಚ್ಚರಿ ಪಡಬೇಕಿಲ್ಲ.

plateform 65 1

ಸಲಾಡ್ಸ್‌, ಚೈನೀಸ್‌ ವೆಜ್‌ ಹಾಗೂ ನಾನ್‌ ವೆಜ್‌ ಸ್ಟಾರ್ಟರ್ಸ್‌, ಸೌತ್‌ ಇಂಡಿಯನ್‌ ವೆಜ್‌ ಹಾಗೂ ನಾನ್‌ ವೆಜ್‌ ಸ್ಟಾರ್ಟರ್ಸ್‌, ತಂದೂರಿ ವೆಜ್‌ ಹಾಗೂ ನಾನ್‌ ವೆಜ್‌ ಸ್ಟಾರ್ಟರ್ಸ್‌, ಇಂಡಿಯನ್‌ ಬ್ರೆಡ್‌, ಬಿರಿಯಾನೀಸ್‌, ವೆಜ್‌ ಹಾಗೂ ನಾನ್‌ ವೆಜ್‌ ಕರೀಸ್‌ ಜತೆಗೆ ರೈಸ್‌ ಹಾಗೂ ನೂಡಲ್ಸ್‌ ಲಭ್ಯವಿದೆ.

ವಿಳಾಸ:

ಪ್ಲಾಟ್‌ಫಾರ್ಮ್‌ 65, 2ನೇ ಫ್ಲೋರ್‌, ವೈಜಿಆರ್‌ ಸಿಗ್ನೇಚರ್‌ ಮಾಲ್‌, ಡಬಲ್‌ ರೋಡ್‌, ರಾಜರಾಜೇಶ್ವರಿ ನಗರ, ರಾಷ್ಟ್ರೋತ್ಥಾನ ಆಸ್ಪತ್ರೆ ಮುಂಭಾಗ, ಬೆಂಗಳೂರು, ಕರ್ನಾಟಕ – 560098

ಮೊಬೈಲ್‌ : 090350 05999

Bhagya Divana

Bhagya Divana

Bhagya Divana is a Professional Journalist. Working in Pravasi Prapancha.