ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ….
ಶಿವ ಗೋಪುರವನ್ನು ದಾಟಿ ಒಳಗಡೆ ಹೋದರೆ ಎದುರಾಗಿ ಇರುವುದೇ ಶಿವನ ಗರ್ಭಗುಡಿ. ಗರ್ಭಗುಡಿಯ ಹೊರಗೆ ನಂದಿ ಕೂಡ ಕುಳಿತಿದ್ದಾನೆ. ಮುಖ್ಯ ದೇವಾಲಯದ ಎಡಭಾಗದಲ್ಲಿ ಪಾರ್ವತಿಯ ಮಂದಿರ, ಬಲಭಾಗದಲ್ಲಿ ಮಗನಾದ ಗಣಪತಿಯ ಮಂದಿರ, ದೇವಾಲಯದ ಮುಂದೆ ಬಲಭಾಗದಲ್ಲಿ ಸೂರ್ಯದೇವನ ಮಗ ಶನೈಶ್ಚರ, ದೇವಾಲಯದ ಎಡ ಮುಂಭಾಗದಲ್ಲಿ ಕ್ಷೇತ್ರಪಾಲಕನಾಗಿ ಕಾಲಭೈರವನನ್ನು, ಹಾಗೆಯೇ ಎಡಭಾಗದಲ್ಲಿ ನವಗ್ರಹಗಳನ್ನೂ ಕೂಡ ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
- ಶಿವನಗೌಡ ಕಿಲಬನೂರ
ನಮ್ಮ ಪ್ರವಾಸದಲ್ಲಿ ಅದೆಷ್ಟೋ ಗಿರಿ ಪರ್ವತಗಳು, ರಮಣೀಯ ತಾಣಗಳು ಇರುತ್ತವೆ. ಆದರೆ ನೋಡಲೇ ಬೇಕೆನ್ನುವ ಒಂದಾದರೂ ಧಾರ್ಮಿಕ ಸ್ಥಳ ಪ್ರವಾಸದ ಪಟ್ಟಿಯಲ್ಲಿ ಇದ್ದೇ ಇರುತ್ತದೆ. ಅದು ನಮ್ಮ ನಂಬಿಕೆ, ಆಚಾರ ವಿಚಾರ, ಮನಃಶಾಂತಿಗೆ ನಮಗಿರುವ ತುಸು ನೆಮ್ಮದಿಯ ಆಯ್ಕೆ. ಅಂಥದ್ದೇ ಒಂದು ವಿನೂತನ, ಧಾರ್ಮಿಕ ಕೇಂದ್ರವೆಂದರೆ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಿರ್ಮಾಣವಾದ ಶಿವಶಕ್ತಿಧಾಮ.
ವಿ.ಆರ್.ಎಲ್ ಸಂಸ್ಥೆಯ ಪರಿಕಲ್ಪನೆಯ ಮೇರೆಗೆ, ಆರಾಧನಾ ಟ್ರಸ್ಟ್ ನಿರ್ಮಿಸಿದ ಈ ದೇವಾಲಯದ ಜವಾಬ್ದಾರಿಯನ್ನು ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಪೀಠ ವಹಿಸಿಕೊಂಡಿದೆ. ಸುಮಾರು 6.5 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಂತೆ ಕಟ್ಟಲಾಗಿದೆ. ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ, ತಮಿಳುನಾಡಿನ ಕೆ. ಸ್ವಾಮಿನಾಥನ್ ಸ್ಥಪತಿ (ಆರ್ಕಿಟೆಕ್ಟ್) ಉಸ್ತುವಾರಿಯಲ್ಲಿ, ಮಧುರೈನ 50 ಶಿಲ್ಪಿಗಳ ಸತತ 4 ವರ್ಷಗಳ ಪ್ರಯತ್ನದಲ್ಲಿ ಬೃಹತ್ ದೇವಸ್ಥಾನ ಆಗಿರುವುದು ಧಾರ್ಮಿಕ ಪರಂಪರೆಗೆ ಮತ್ತೊಂದು ಕೊಡುಗೆಯಾಗಿದೆ.

ವಿಶೇಷತೆ
ಈ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ದೊಡ್ಡಬಳ್ಳಾಪುರದ ಕಲ್ಲುಗಳನ್ನು ತರಿಸಲಾಗಿದೆ. ಹಾಗೆಯೇ ಸುಮಾರು 52 ಮೂರ್ತಿಗಳ ಕೆತ್ತನೆಗೆ ತಮಿಳುನಾಡಿನ ವಾಲಜಾಬಾದಿನಿಂದ ಕಪ್ಪು ಶಿಲೆಗಳನ್ನು ತರಿಸಿ ಕೆತ್ತಲಾಗಿದೆ. ಕಳಸ, ಕವಚ ಮುಂತಾದ ಪ್ರಭಾವಳಿಗಳನ್ನು ಕುಂಭಕೋಣಂ ನಿಂದ ತರಿಸಿದ ಕಲ್ಲುಗಳಲ್ಲಿ ರೂಪಿಸಲಾಗಿದೆ. ಈ ದೇವಾಲಯದ ಮುಖ್ಯ ವಿಶೇಷತೆ ಎಂದರೆ ಒಂದೇ ಜಾಗದಲ್ಲಿ ಹಲವಾರು ದೇವ - ದೇವತೆಯರ ಪ್ರತಿಷ್ಠಾಪನೆ ಕಾಣಬಹುದು. ಹಾಗಾಗಿ ಕೇವಲ ದೇವಾಲಯ ಅಲ್ಲದೇ ದೇವಾಲಯಗಳ ಸಮುಚ್ಚಯ ಎನ್ನಬಹುದು.
ಶಿವನೇ ಈ ದೇವಾಲಯಕ್ಕೆ ಪ್ರಧಾನ ದೇವರಾದರೂ ಪಾರ್ವತಿ, ಗಣಪತಿ, ಶನೈಶ್ಚರ, ಕಾಲಭೈರವ, ಜತೆಗೆ ನವಗ್ರಹ ದೇವತೆಗಳಿಗೆ ಕೂಡ ಸ್ಥಾನ ನೀಡಲಾಗಿದೆ. ಬಹುಶಿಸ್ತೀಯ ಆಯದಲ್ಲಿ ಪಾದಚಾರಿಯಲ್ಲಿ ಸಾಗಿ ಶಿವ ಗೋಪುರವನ್ನು ದಾಟಿ ಒಳಗಡೆ ಹೋದರೆ ಎದುರಾಗಿ ಇರುವುದೇ ಶಿವನ ಗರ್ಭಗುಡಿ. ಗರ್ಭಗುಡಿಯ ಹೊರಗೆ ನಂದಿ ಕೂಡ ಕುಳಿತಿದ್ದಾನೆ. ಮುಖ್ಯ ದೇವಾಲಯದ ಎಡಭಾಗದಲ್ಲಿ ಪಾರ್ವತಿಯ ಮಂದಿರ, ಬಲಭಾಗದಲ್ಲಿ ಮಗನಾದ ಗಣಪತಿಯ ಮಂದಿರ, ದೇವಾಲಯದ ಮುಂದೆ ಬಲಭಾಗದಲ್ಲಿ ಸೂರ್ಯದೇವನ ಮಗ ಶನೈಶ್ಚರ, ದೇವಾಲಯದ ಎಡ ಮುಂಭಾಗದಲ್ಲಿ ಕ್ಷೇತ್ರಪಾಲಕನಾಗಿ ಕಾಲಭೈರವನನ್ನು, ಹಾಗೆಯೇ ಎಡಭಾಗದಲ್ಲಿ ನವಗ್ರಹಗಳನ್ನೂ ಕೂಡ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಧಾರ್ಮಿಕ ಪದ್ದತಿಯಂತೆ ಪುಷ್ಕರಣಿ, ನೀರಿನ ಹೊಂಡವನ್ನೂ ಕೂಡ ನಿರ್ಮಾಣ ಮಾಡಲಾಗಿದೆ. ಹಾಗೆಯೇ ಒಂದಿಷ್ಟು ಹಸುಗಳು ಇರುವಷ್ಟು ಗೋಶಾಲೆಯನ್ನೂ ಕೂಡ ಕಟ್ಟಲಾಗಿದೆ. ಹಸುಗಳಿಗೆ ಮೇವು ಮತ್ತು ನೀರಿನ ನಿರಂತರ ಪೂರೈಕೆಗೆಗಾಗಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ದಾಸೋಹದೊಂದಿಗೆ ಬೇರೆ ಬೇರೆ ಮಠಾಧಿಪತಿಗಳಿಗೆ, ಸಾಧು ಸಂತರಿಗೆ ವಸತಿ, ಪೂಜಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ದೇವಸ್ಥಾನ ಮತ್ತಷ್ಟು ವಿಶೇಷ ಪೂಜೆ, ಆಚರಣೆಗಳಿಂದ ದೀಪಾಲಂಕಾರದಲ್ಲಿ ಕಂಗೊಳಿಸುತ್ತದೆ.
ವ್ಯವಸ್ಥೆ
ದೇವಸ್ಥಾನ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವುದರಿಂದ ಹತ್ತಿರದಲ್ಲಿ ಹೊಟೇಲ್, ಲಾಡ್ಜ್, ಕಾಟೇಜ್ ಗಳು ಸುಲಭವಾಗಿ ಸಿಗುತ್ತವೆ. ನವಗ್ರಹ ತೀರ್ಥ, ಸಿದ್ದಾರೂಢ ಮಠ, ಗಾಜಿನ ಮನೆ, ಅಗಡಿ ತೋಟ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಹುಬ್ಬಳ್ಳಿಯ ಹತ್ತಿರದಲ್ಲಿ ಕಾಣಬಹುದು.
ದಾರಿ ಹೇಗೆ?
ಬೆಂಗಳೂರಿನಿಂದ ಹುಬ್ಬಳ್ಳಿಗೆ ತಲುಪಿ, ಪುಣೆ - ಬೆಂಗಳೂರು ರಸ್ತೆಯಲ್ಲಿರುವ ಪಾಲಿಕೊಪ್ಪದ ಈ ದೇವಸ್ಥಾನಕ್ಕೆ ಹುಬ್ಬಳ್ಳಿ ಸಿಟಿ ಬಸ್ ನಿಲ್ದಾಣದಿಂದ ಸಿಟಿ ಬಸ್ ಅಥವಾ ಅಟೋ ಮೂಲಕ ಸುಲಭವಾಗಿ ತಲುಪಬಹುದು.