Tuesday, November 11, 2025
Tuesday, November 11, 2025

ಶರಾವತಿಯ ಮಡಿಲಲ್ಲಿ ಸಿಗಂದೂರು ದೇವಿ

473ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆ, ಅಂಬಾರಗೊಡ್ಲುನಿಂದ ಕಳಸವಳ್ಳಿಯವರೆಗೆ ಸಂಪರ್ಕ ಕಲ್ಪಿಸಲು 2.44ಕಿಮೀ ಉದ್ದ ಮತ್ತು 16ಮೀ ಅಗಲವಾಗಿದ್ದು, ದೇಶದಲ್ಲೇ ಎರಡನೇ ಅತಿ ಉದ್ದದ ತೂಗು ಸೇತುವೆ ಅಥವಾ ಕೇಬಲ್‌ ಆಧಾರಿತ ಸೇತುವೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ಚೌಡಮ್ಮ, ಚೌಡೇಶ್ವರಿ, ವನದೇವಿ, ಜಲದುರ್ಗೆ, ಸಿಗಂದೂರೇಶ್ವರಿ, ಸಿಗಂದೂರಮ್ಮ ಹೀಗೆ ಹಲವು ಹೆಸರುಗಳಿಂದ ಜನಮನಗಳಲ್ಲಿ ಉಳಿದಿರುವ ಸಿಗಂದೂರು ಚೌಡೇಶ್ವರಿಯ ಜಾತ್ರೆಯು ಪ್ರತಿವರ್ಷ ಸಂಕ್ರಾಂತಿ ದಿನಗಳಲ್ಲಿ ಅಂದರೆ ಜನವರಿಯಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ಈ ಸಮಯದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಹಲವು ಕಾರ್ಯಕ್ರಮಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಭಕ್ತಾದಿಗಳ ಮತ್ತು ಪ್ರವಾಸಿಗರ ಸಂಖ್ಯೆಯೂ ಆಗ ಇಲ್ಲಿ ಅಧಿಕವಾಗಿರುತ್ತದೆ. ಉಳಿದಂತೆ ದಸರಾ, ದೀಪಾವಳಿ, ಆಷಾಢ ಮೊದಲಾದ ದಿನಗಳಲ್ಲಿ ಇಲ್ಲಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು, ಅಲಂಕಾರ, ಆರಾಧನೆಗಳು ನಡೆಯುತ್ತವೆ.

siganduru choudeshwari 1

60 ವರ್ಷಗಳ ಕನಸು ನನಸು

ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಿಗಂದೂರು ಪ್ರದೇಶವನ್ನು ದ್ವೀಪವಾಗಿ ರೂಪಿಸಿದೆ. ಇಲ್ಲಿರುವ ಹಿನ್ನೀರಿನಲ್ಲಿ ಲಾಂಚ್‌ನಲ್ಲಿಯೇ ಸಾಗಿ ಇನ್ನೊಂದು ಪ್ರದೇಶಕ್ಕೆ ಹೋಗಬೇಕು. ಹೊರತು ಪಡಿಸಿದರೆ ಅಲ್ಲಿನ ಜನರು ನೂರಾರು ಕಿಮೀ ಕ್ರಮಿಸಿಯೇ ಹೊರ ಜಗತ್ತಿನೊಂದಿಗೆ ಸಂಪರ್ಕ ಪಡೆಯಬೇಕು. ಇದಕ್ಕೆ ಪರಿಹಾರವಾಗಿ ಶರಾವತಿಗೆ ಸೇತುವೆ ನಿರ್ಮಾಣವಾಗಬೇಕು ಎನ್ನುವುದು ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗಿ ಹಿನ್ನೀರಿನಲ್ಲಿ ಸಿಗಂದೂರು ಮುಳುಗಡೆಯಾದಾಗಿನಿಂದ ಅಂದರೆ 1960ರಿಂದ ಇಂದು 2025ರವೆರೆಗೆ 60 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದ ಅಲ್ಲಿನ ಸ್ಥಳೀಯರ ಕೂಗು ಆಗಿತ್ತು. ಇದಕ್ಕೆ ಉತ್ತರವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಯೋಗದಿಂದ ಬೃಹತ್‌ ಕೇಬಲ್‌ ಸೇತುವೆ ನಿರ್ಮಾಣವಾಗಿದೆ. ಆರು ವರ್ಷಗಳ ಸತತ ಪರಿಶ್ರಮ ಅರವತ್ತು ವರ್ಷಗಳ ಸಮಸ್ಯೆಗೆ ಪರಿಹಾರ ಕೊಟ್ಟಿದ್ದು, 2025ರ ಜುಲೈ 14ರಂದು ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಗೊಂಡಿದೆ. ಭಕ್ತರ ಭಾವನೆಯ ಗೌರವಾರ್ಥವಾಗಿ ಊರ ದೇವತೆಯ ಹೆಸರನ್ನೇ ಇಡಲಾಗಿದೆ.

ದೇಶದ ಎರಡನೇ ಉದ್ದದ ತೂಗು ಸೇತುವೆ

473ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆ, ಅಂಬಾರಗೊಡ್ಲುನಿಂದ ಕಳಸವಳ್ಳಿಯವರೆಗೆ ಸಂಪರ್ಕ ಕಲ್ಪಿಸಲು 2.44ಕಿಮೀ ಉದ್ದ ಮತ್ತು 16ಮೀ ಅಗಲವಾಗಿದ್ದು, ದೇಶದಲ್ಲೇ ಎರಡನೇ ಅತಿ ಉದ್ದದ ತೂಗು ಸೇತುವೆ ಅಥವಾ ಕೇಬಲ್‌ ಆಧಾರಿತ ಸೇತುವೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಸೇತುವೆಯ ದೃಶ್ಯವೂ ಸುಂದರವಾಗಿದೆ. ಅದರ ಮೇಲೆ ನದಿ ದಾಟುವುದು ಇನ್ನೂ ಅದ್ಭುತ ಅನುಭವವನ್ನು ನೀಡುತ್ತದೆ. ಸಾರಿಗೆ ವಾಹನಗಳ ಮೂಲಕ ಜನರು ತಮ್ಮಿಷ್ಟ ದೇವಿಯ ದೇವಾಲಯದ ಮುಂದೆಯೇ ಇಳಿಯಬಹುದಾಗಿದೆ. ವಾಹನ ಪಾರ್ಕಿಂಗ್‌ಗೆ ದೇವಸ್ಥಾನದ ಮುಂದಿನ ನಿವೇಶನದಲ್ಲಿ ಸ್ಥಳಾವಕಾಶವಿದೆ.

siganduru bridge

ಮತ್ತೆ ಲಾಂಚ್‌ ಆಗಬೇಕಿದೆ ಲಾಂಚ್‌

ಈ ಸೇತುವೆ ನಿರ್ಮಾಣಕ್ಕೂ ಮೊದಲು ಚೌಡೇಶ್ವರಿ ದೇವಾಲಯದ ಭೇಟಿಗೆ ಬರುವವರು ಭಕ್ತರಾಗಲೀ, ಪ್ರವಾಸಿಗರಾಗಲೀ ಶರಾವತಿಯನ್ನು ದಾಟಲು ಬಳಸುತ್ತಿದ್ದದ್ದು ಇಲ್ಲಿದ್ದ ಲಾಂಚ್‌ಗಳನ್ನು. ಇವು ಇಂದಿಗೆ ತಮ್ಮ ಕಾರ್ಯವನ್ನು ನಿಲ್ಲಿಸಿವೆ. ಸೇತುವೆ ನಿರ್ಮಾಣದ ನಂತರ ಇವುಗಳು ನಿರುಪಯೋಗಿ ಆಗಿವೆ. ಹೀಗಾಗಿ ಲಾಂಚ್ ಗಳು ನಿಷ್ಕ್ರಿಯವಾಗಿ ದಡದಲ್ಲಿ ನಿಲ್ಲುವಂತಾಗಿದೆ.

ಆದರೆ ಹೊಳೆಬಾಗಿಲು, ಸಿಗಂದೂರು ಪ್ರದೇಶಗಳಿಗೆ ಪ್ರವಾಸ ನಿಮಿತ್ತ ಭೇಟಿ ನೀಡುತ್ತಿದ್ದ ಪ್ರವಾಸಿಗರು ಹಿನ್ನೀರಿನಲ್ಲಿ ಲಾಂಚ್ ಮೇಲೆ ಪಯಣಿಸುವ ಅದ್ಭುತ ಅನುಭವವನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸಿಗಂದೂರು ಎಂದು ಗೂಗಲ್ ಸರ್ಚ್‌ ಇಂಜಿನ್‌ಗಳಲ್ಲಿ ಹುಡುಕಿದರೆ ಇಂದಿಗೂ ಚೌಡೇಶ್ವರಿ ಜತೆಗೆ ಈ ಲಾಂಚ್‌ಗಳ ದೃಶ್ಯ ಕಾಣಸಿಗುತ್ತದೆ. ಸಾರಿಗೆ ದೃಷ್ಟಿಯಿಂದಲ್ಲದಿದ್ದರೂ, ಪ್ರವಾಸೋದ್ಯಮದ ದೃಷ್ಟಿಯಿಂದಲಾದರೂ ಇಲ್ಲಿ ಮತ್ತೆ ಲಾಂಚ್‌ಗಳು ಲಾಂಚ್‌ ಆಗಬೇಕೆನ್ನುವುದು ಇಲ್ಲಿಗೆ ಭೇಟಿ ನೀಡುವ ಹಲವು ಪ್ರವಾಸಿಗರ ಅಭಿಮತ.

ಹತ್ತಿರದಲ್ಲಿವೆ ಹತ್ತಾರು ಪ್ರವಾಸಿ ತಾಣಗಳು

ಸಿಗಂದೂರು ಪ್ರವಾಸಿ ತಾಣವಾಗಿದ್ದು, ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಇಲ್ಲಿಗೆ ಹತ್ತಿರ ಎನ್ನುವಂತೆ ಜನರ ಮನಸೂರೆಗೊಳಿಸುವ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳ ಪಟ್ಟಿಯಲ್ಲಿ ವಿಶ್ವಪ್ರಸಿದ್ಧ ಜೋಗ ಜಲಪಾತ, ಮುರುಡೇಶ್ವರ, ಗೋಕರ್ಣ, ಯಾಣ, ಕೊಲ್ಲೂರು, ಕುಕ್ಕೆ ಹೀಗೆ ಹಲವು ತಾಣಗಳು ಸೇರಿಕೊಳ್ಳುತ್ತವೆ.

ಸಿಗಂದೂರಿನ ಕ್ಷೇತ್ರ ಪಾಲಕ ಭೂತರಾಯ ಸ್ವಾಮಿ. ಇವರು ಸಿಗಂದೂರು ಚೌಡೇಶ್ವರಿ ದೇವಿಯ ಬಂಟನಂತೆ. ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವ ಜನರು ಇಲ್ಲಿನ ಭೂತರಾಯನಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾನೂನು ಸಂಬಂಧಿತ ಕಲಹಗಳು, ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಂತೆ ಸಾಕಷ್ಟು ಜನರು ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಸಾಕಷ್ಟು ಜನರ ಸಮಸ್ಯೆಗಳು ಇಲ್ಲಿ ಹರಕೆ ಹೊತ್ತ ನಂತರ ಪರಿಹಾರವಾಗಿವೆ.
ಕಾವ್ಯಾನಂದ ವೈಷ್ಣವ್‌. ದೇವಾಲಯದ ಅರ್ಚಕರು

ಪ್ರತಿದಿನವೂ ಈ ಕ್ಷೇತ್ರದಲ್ಲಿ ತ್ರಿಕಾಲ ಪ್ರಸಾದ ವ್ಯವಸ್ಥೆ ಇರುತ್ತದೆ. 3000ದಿಂದ 4000 ಜನರು ಪ್ರತಿದಿನ ಇಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರಸಾದ ಸಿದ್ಧ ಪಡಿಸಲು ಈಗಾಗಲೇ ಸುಸಜ್ಜಿತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಟ್ಟೆಗಳನ್ನು ತೊಳೆಯಲೂ ಯಂತ್ರವನ್ನು ಬಳಸಲಾಗುತ್ತಿದೆ. ಇಲ್ಲಿ ನೈರ್ಮಲ್ಯಕ್ಕೆ ಮೊದಲ ಪ್ರಾಧಾನ್ಯ.
ಅಜಯ್‌, ಪ್ರಸಾದ ನಿಲಯ ಸಿಬ್ಬಂದಿ
Jadesha Emmiganur

Jadesha Emmiganur

Jadesha Emmiganur Is a Passionate Journalist from Ballari