ಜಾತ್ರೆಯ ದಿನ ಸ್ವಾತಂತ್ರ್ಯಕ್ಕಾಗಿ 35 ಜನ ಪ್ರಾಣ ತೆತ್ತಿದ್ದರು!
ಮಕ್ಕಳಾಗದ ದಂಪತಿಗಳು ಈ ಕ್ಷೇತ್ರಕ್ಕೆ ಬಂದು ಹರಕೆ ಕಟ್ಟಿ ಪ್ರಾರ್ಥಿಸಿಕೊಂಡರೆ ಮಕ್ಕಳಾಗುತ್ತದೆ ಎಂಬ ನಂಬಿಕೆಯಿದೆ. ಈ ಮಾತಿಗೆ ಪುಷ್ಠಿ ತುಂಬುವಂತೆ ಪ್ರತಿದಿನ ಭಕ್ತ ದಂಪತಿಗಳು ತಮ್ಮ ಮಕ್ಕಳೊಂದಿಗೆ ಬಂದು ಹರಕೆ ನೀಡಿ, ಪೂಜೆ ಸಲ್ಲಿಸುತ್ತಾರೆ. ಭಕ್ತರು ವಿವಿಧ ಕ್ಷೇತ್ರಗಳಲ್ಲಿ ಸರ್ಪಸಂಸ್ಕಾರ ಸೇವೆಗಳನ್ನು ಪೂರೈಸಿ ವಿದುರಾಶ್ವತ್ಥಕ್ಕೆ ಆಗಮಿಸಿ ನಾಗರಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ.
ಕರ್ನಾಟಕದಲ್ಲಿ ವಿದುರಾಶ್ವತ್ಥದ ಹೆಸರು ಕೇಳಿದರೆ ಸ್ವಂತತ್ರ ಸಂಗ್ರಾಮದ ನೆನಪು ಬರುತ್ತದೆ. ಇದು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ಧಿ ಪಡೆದಿದೆ. ಅದಷ್ಟೇ ಅಲ್ಲದೆ ಸಂತಾನ ಭಾಗ್ಯಕ್ಕಾಗಿ ಪೂಜಿಸುವ, ಹರಕೆ ಸಲ್ಲಿಸುವ ಪುಣ್ಯ ಕ್ಷೇತ್ರವೂ ಇದಾಗಿದೆ. ಇದು ನಾಗರದೋಷ ನಿವಾರಣೆಗೆ ಮಹತ್ವ ಪಡೆದ ಕ್ಷೇತ್ರ. ಇಲ್ಲಿ ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರೆ ಸಂತಾನಕ್ಕೆ ಸಂಬಂಧಿಸಿದ ದೋಷಗಳು ನಿವಾರಣೆಗೊಂಡು ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿಯಿದೆ. ಇಲ್ಲಿನ ಅಶ್ವಥನಾರಾಯಣ ಸ್ವಾಮಿ, ಸುಬ್ರಮಣ್ಯ ಸ್ವಾಮಿಯ ದೇವಸ್ಥಾನ ಭಕ್ತರ ಪಾಲಿನ ಪವಿತ್ರ ಭೂಮಿಯಾಗಿದೆ. ಇಲ್ಲಿಗೆ ಆಗಮಿಸುವ ಭಕ್ತಾದಿಗಳೇ ನಾಗರಕಲ್ಲನ್ನು ಪ್ರತಿಷ್ಠಾಪಿಸುವುದು ಇಲ್ಲಿನ ವಿಶೇಷ.
ಹೆಸರಿನ ಹಿನ್ನೆಲೆ
ಮಹಾಭಾರತದ ಯುದ್ಧದಲ್ಲಿ ವಿದುರನು ಸಾವಿರಾರು ಸಾವು ನೋವುಗಳನ್ನು ಕಾಣುತ್ತಾನೆ. ಆಗ ಶ್ರೀ ಕೃಷ್ಣನ ಸಲಹೆಯಂತೆ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತ, ಇಲ್ಲಿನ ಮೈತ್ರೇಯಿ ಮಹರ್ಷಿಗಳ ಆಶ್ರಮಕ್ಕೆ ಭೇಟಿ ನೀಡುತ್ತಾನೆ. ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬರಲು ಕೌರವರ ದುಷ್ಟ ಬುದ್ದಿಯೂ ಕಾರಣವಾಗುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಉತ್ತರ ಪಿನಾಕಿನಿ ನದಿಯ ತಟದ ಕುರುಗೋಡು ಎಂಬಲ್ಲಿ ಮಹರ್ಷಿಗಳು ವಾಸವಿರುತ್ತಾರೆ. ಅಲ್ಲಿಗೆ ವಿದುರನು ಬಂದು ತಂಗುತ್ತಾನೆ. ಮಹರ್ಷಿಗಳ ಸಲಹೆಯಂತೆ ಅಶ್ವಥ ವೃಕ್ಷ ನೆಟ್ಟು, ಪೋಷಿಸಿ ಹಲವು ವರ್ಷಗಳ ಕಾಲ ಇಲ್ಲೇ ನೆಲೆಸಿ ಪೂಜೆ ಸಲ್ಲಿಸಿದ ಕಾರಣ ಈ ಸ್ಥಳಕ್ಕೆ ವಿದುರಾಶ್ವತ್ಥ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ. ಈ ಪೂಜೆಯ ಫಲವಾಗಿ ತ್ರಿಮೂರ್ತಿಗಳು ವಿದುರನಿಗೆ ಪ್ರತ್ಯಕ್ಷವಾಗಿ ಅವನ ಆತ್ಮೋದ್ದಾರಾ ಮಾಡಿದರೆಂದು ಪುರಾಣ ಕಥೆಗಳು ಹೇಳುತ್ತವೆ. ಆದರೆ, 2011ರಲ್ಲಿ ವಿದುರ ನೆಟ್ಟ ಅಶ್ವಥವೃಕ್ಷ ನೆಲಸಮವಾಗಿದ್ದು ಅದರ ಅವಶೇಷಗಳು ಮಾತ್ರ ಕಂಡು ಬರುತ್ತವೆ. ಈಗ ಅಲ್ಲಿ ಇತರ ಅಶ್ವಥ ವೃಕ್ಷಗಳಿವೆ.
ಸಂತಾನದೋಷ ನಿವಾರಣೆ
ಮಕ್ಕಳಾಗದ ದಂಪತಿಗಳು ಈ ಕ್ಷೇತ್ರಕ್ಕೆ ಬಂದು ಹರಕೆ ಕಟ್ಟಿ ಪ್ರಾರ್ಥಿಸಿಕೊಂಡರೆ ಮಕ್ಕಳಾಗುತ್ತದೆ ಎಂಬ ನಂಬಿಕೆಯಿದೆ. ಈ ಮಾತಿಗೆ ಪುಷ್ಠಿ ತುಂಬುವಂತೆ ಪ್ರತಿದಿನ ಭಕ್ತ ದಂಪತಿಗಳು ತಮ್ಮ ಮಕ್ಕಳೊಂದಿಗೆ ಬಂದು ಹರಕೆ ನೀಡಿ, ಪೂಜೆ ಸಲ್ಲಿಸುತ್ತಾರೆ. ಭಕ್ತರು ವಿವಿಧ ಕ್ಷೇತ್ರಗಳಲ್ಲಿ ಸರ್ಪಸಂಸ್ಕಾರ ಸೇವೆಗಳನ್ನು ಪೂರೈಸಿ ವಿದುರಾಶ್ವತ್ಥಕ್ಕೆ ಆಗಮಿಸಿ ನಾಗರಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡುವ ಏಕೈಕ ಪ್ರಸಿದ್ದ ಕ್ಷೇತ್ರ ಇದಾಗಿದೆ. ನಾಗರಕಲ್ಲು ಪ್ರತಿಷ್ಠಾಪನೆ ಮಾಡುವವರು ಎರಡು ಮೂರು ದಿನ ಮುಂಚಿತವಾಗಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ತಿಳಿಸಿದರೆ ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ. ಶತಮಾನಗಳ ಹಿಂದೆ ಇಲ್ಲಿ ಉತ್ತರ ಪಿನಾಕಿನಿ ನದಿಯು ಹರಿಯುತ್ತಿದ್ದು ಇಂದು ಬರಡಾಗಿದೆ. ಅನೇಕ ಅಶ್ವಥವೃಕ್ಷಗಳಿದ್ದು, ಇಲ್ಲಿ ಪ್ರತಿನಿತ್ಯ ಸಂತಾನ ನಾಗಪೂಜೆ, ನಾಗದೋಷ ನಿವಾರಣಪೂಜೆ, ರಾಹುಕೇತು ಪೂಜೆ, ಕಾಳಸರ್ಪದೋಷ ನಿವಾರಣ ಪೂಜೆಗಳು ನಡೆಯುತ್ತವೆ.

ಈ ಪುಣ್ಯಕ್ಷೇತ್ರಕ್ಕೆ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಭಕ್ತರು ಆಗಮಿಸಿತ್ತಾರೆ. ಒಮ್ಮೆ ದೇವಸ್ಥಾನವನ್ನು ಪ್ರವೇಶಿಸಿದರೆ ಮನಸು ಉಲ್ಲಾಸಭರಿತ ಹಾಗೂ ನೆಮ್ಮದಿಯಿಂದ ಕೂಡುತ್ತದೆ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತಾದಿಗಳು. ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಅಭಿಷ್ಟಸಿದ್ದ ಗಣಪತಿ ಮಂಟಪವಿದ್ದು, ಬಲಮುರಿ ಗಣಪತಿಯ ದರ್ಶನವಾಗುತ್ತದೆ. ಇದರ ಪಕ್ಕದಲ್ಲೇ ಅಶ್ವಥನಾರಾಯಣ ಗುಡಿಯಿದ್ದು ಇಲ್ಲಿ ಭವಾನಿಶಂಕರ, ಶ್ರೀರಾಮ, ವೀರಾಂಜನೇಯ, ಶ್ರೀದೇವಿ, ಭೂದೇವಿ ದೇವರುಗಳ ದರ್ಶನ ಮಾಡಬಹುದು. ಈ ದೇವಸ್ಥಾನದ ಹಿಂದಿರುವ ತೋಟದಲ್ಲಿ ಪ್ರತಿವರ್ಷ ಚೈತ್ರ ಹುಣ್ಣಿಮೆಯಂದು ನಡೆಯುವ ಬೃಹತ್ ಜಾತ್ರೆಗೆ ಸಾವಿರಾರು ಭಕ್ತರು ಬಂದು ಸೇರುತ್ತಾರೆ. ದೇವಸ್ಥಾನದ ಬಾಗಿಲು ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ಭಕ್ತಾದಿಗಳಿಗೆ ಪ್ರತಿದಿನ ಮಧ್ಯಾಹ್ನ ಪ್ರಸಾದದ ವ್ಯವಸ್ಥೆಯಿರುತ್ತದೆ.
ಈ ಕ್ಷೇತ್ರವೂ ನಾಗಸೇವೆಗೆ ಮಾತ್ರವಲ್ಲದೆ, ಸ್ವತಂತ್ರ ಸಂಗ್ರಾಮಕ್ಕೂ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಕ್ಷೇತ್ರವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂತಲೂ ಕರೆಯುತ್ತಾರೆ. ವಿದುರಾಶ್ವತ್ಥದಲ್ಲಿ ವಿದುರನಾರಾಯಣನ ಪೂಜೆಯಲ್ಲಿ ತೊಡಗಿದ್ದ ಗರ್ಭಿಣಿ ಗೌರಮ್ಮನಿಗೆ ಗುಂಡು ಬಡಿದು ಸ್ಥಳದಲ್ಲೇ ಮಡಿದಳೆಂಬ ವಾರ್ತೆ ಎಲ್ಲೆಡೆ ಹರಡುತ್ತದೆ. ಈ ಹತ್ಯಾಕಾಂಡ ಕರಾಳ ಇತಿಹಾಸವನ್ನು ಸೃಷ್ಟಿಸಿತು. ಈ ಘಟನೆಯನ್ನು ಗಾಂಧಿಜೀಯವರು ಸೇರಿದಂತೆ ಹಲವು ಮಂದಿ ಹಿರಿಯ ರಾಷ್ಟ್ರೀಯ ನಾಯಕರು ಖಂಡಿಸಿದರು. ಅದರ ಬೆನ್ನಲ್ಲೇ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟು ಪ್ರತಿಭಟನಾ ಮೆರವಣಿಗೆಗಳು ಚಿಕ್ಕಬಳ್ಳಾಪುರ ಸೇರಿದಂತೆ ಕೋಲಾರ ಜಿಲ್ಲೆಯಾದ್ಯಂತ ನಡೆದವು. ಸ್ವಂತತ್ರ ಹೋರಾಟದ ಕಾವು ಹೆಚ್ಚುತ್ತಿದ್ದಂತೆ ಇಲ್ಲಿ ನಡೆಯುವ ಜಾತ್ರೆಯ ನೆಪದಲ್ಲಿ ಸಾವಿರಾರು ಹೋರಾಟಗಾರರು ಬಂದು ಸೇರಿದಾಗ, ಅಂದಿನ ಬ್ರಿಟಿಷ್ ವ್ಯವಸ್ಥೆ ಸೆಕ್ಷನ್ 144 ಅನ್ನು ಜಾರಿಗೆ ತಂದಿದ್ದರೂ ಸಹ ಯಾರು ಕದಲದೆ ಇದ್ದ ಸಂದರ್ಭದಲ್ಲಿ ಗುಂಡು ಹಾರಿಸಿದರು. ಆಗ 35ಕ್ಕೂ ಹೆಚ್ಚು ಸ್ವತಂತ್ರ ಹೋರಾಟಗಾರರು ಹುತಾತ್ಮರಾದರು. ಇವರ ಸ್ವತಂತ್ರ ಚಳುವಳಿಯ ಬಲಿದಾನದ ಸಂಕೇತವಾಗಿ ನಿರ್ಮಿಸಲಾದ ವೀರಸೌಧವನ್ನು ಸಹ ಈ ಸ್ಥಳದಲ್ಲಿ ಕಾಣಬಹುದಾಗಿದೆ.
ದಾರಿ ಹೇಗೆ?
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಕೇಂದ್ರದಿಂದ 7 ಕಿಮೀ ದೂರದಲ್ಲಿದೆ. ಬಸ್ಸು, ಕಾರು ಮತ್ತು ಬೈಕಿನ ಮೂಲಕ ತಲುಪಬಹುದು.