ಗುಂ-ಟೂರ್ ಮಸಾಲಾ - ಕಸ್ಟಮರ್ ಕಷ್ಟಕ್ಕೆ ಮರುಗಿದಾತ
ಪಂಡರಾಪುರಕ್ಕೆ ತೀರ್ಥಯಾತ್ರೆಗೆಂದು ಹೋಗಿದ್ದ ವೃದ್ಧ ದಂಪತಿಗಳ ಚಿನ್ನ ಖರೀದಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್. ಪತ್ನಿಯ ಬಹುವರ್ಷದ ಆಸೆ ಪೂರೈಸಲು ಚಿನ್ನದ ಅಂಗಡಿಗೆ ಕರೆದುಕೊಂಡು ಹೋಗಿ ತಾಳಿ ಖರೀದಿಗ ಮುಂದಾಗುತ್ತಾನೆ ವೃದ್ಧ ಪತಿ. ವರ್ಷಗಳಿಂದ ಉಳಿಸಿದ ಪುಡಿಗಾಸನ್ನೆಲ್ಲ ಅಂಗಡಿ ಮಾಲೀಕನೆದುರು ಹರವುತ್ತಾನೆ. ಆದರೆ ಈಗ ಚಿನ್ನಕ್ಕೆ ಗ್ರಾಮಿಗೆ ಹತ್ತು ಸಾವಿರ ಎಂದು ವೃದ್ಧನಿಗೆ ಅರಿವೇ ಇಲ್ಲ.
ಹೊಟೇಲ್ ಗಳಲ್ಲಿ ಸೆಲ್ಫ್ ಸರ್ವಿಸ್ ಅಥವಾ ಮೊದಲು ಹಣ ಪಾವತಿಸಿ ಟೋಕನ್ ಪಡೆದು ತಿಂಡಿ ನೀಡುವ ವ್ಯವಸ್ಥೆ ಬಂದದ್ದು ಹೇಗೆ? ಕಾರಣ ಅನೇಕ. ಆದರೆ ಅದರಲ್ಲಿ ಒಂದು ಫನ್ನೀ ಆದರೂ ನಿಜವೆನಿಸುವ ಕಾರಣ ಇದೆ. ಹೊಟ್ಟೆ ತುಂಬ ತಿಂಡಿ ತಿಂದು ಬಿಲ್ ಕೊಡಲು ಹಣವಿಲ್ಲ ಎಂದು ಲೆಕ್ಕ ಬರೆಸುವವರು, ಹಿಟ್ಟು ರುಬ್ಬೋ ಕೆಲಸ ಪಾತ್ರೆ ತೊಳೆಯೋ ಕೆಲಸ ಇದ್ಯಾ ಎಂದು ರಾಜಾರೋಷವಾಗಿ ಕೇಳುವವರು, ಹೊಟೇಲಲ್ಲಿ ಕೆಲಸ ಗಿಟ್ಟಿಸಲೆಂದೇ ಪುಗಸಟ್ಟೆ ತಿನ್ನುವವರು, ವಾಚು ಉಂಗುರ ಬಿಚ್ಚಿಕೊಟ್ಟು ಹೋಗುವವರು ಇಂಥವರ ಸಂಖ್ಯೆ ಜಾಸ್ತಿ ಆಗಿದ್ದೂ ಸೆಲ್ಫ್ ಸರ್ವಿಸ್ ಫಾಸ್ಟ್ ಫುಡ್ ದರ್ಶಿನಿಗಳು ಪ್ರಾರಂಭವಾಗೋದಕ್ಕೆ ಒಂದು ಕಾರಣ.
ಅವರಾದರೂ ಎಷ್ಟು ಮಂದಿಗೆ ಕೆಲಸ ಕೊಡಲು ಸಾಧ್ಯ? ಗ್ರೈಂಡರ್, ಪಾತ್ರೆ ತೊಳೆಯೋ ಮಷಿನ್ ಇರುವಾಗ ಕೆಲಸದವರ ಅಗತ್ಯವಾದೂ ಏನು? ವಾಚು ಉಂಗುರ ಇಟ್ಟುಕೊಂಡು ಹೊಟೇಲ್ ನವರು ಗಿರವಿ ಅಂಗಡಿ ನಡೆಸೋಕಾಗತ್ತಾ? ಯಾವುದೇ ಉದ್ಯಮ ಇರಲಿ ಖರೀದಿಗೆ ಬೇಕಿರುವಷ್ಟು ಹಣವಿಲ್ಲದಿದ್ದರೆ ಈಗ ಉದ್ರಿ ಮಾತಿಗೆ ಅವಕಾಶವೇ ಇಲ್ಲ. ಕಾಸಿದ್ರೆ ಮಾತ್ರ ಕೈಲಾಸ. ಆದರೆ ಧಾರ್ಮಿಕ ಪ್ರವಾಸವೊಂದರಲ್ಲಿ ದೈವಿಕವೆನಿಸುವ ಅಪರೂಪದ ಘಟನೆ ನಡೆದು ಇದೀಗ ವೈರಲ್ ಆಗಿದೆ.
ಪಂಡರಾಪುರಕ್ಕೆ ತೀರ್ಥಯಾತ್ರೆಗೆಂದು ಹೋಗಿದ್ದ ವೃದ್ಧ ದಂಪತಿಗಳ ಚಿನ್ನ ಖರೀದಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್. ಪತ್ನಿಯ ಬಹುವರ್ಷದ ಆಸೆ ಪೂರೈಸಲು ಚಿನ್ನದ ಅಂಗಡಿಗೆ ಕರೆದುಕೊಂಡು ಹೋಗಿ ತಾಳಿ ಖರೀದಿಗ ಮುಂದಾಗುತ್ತಾನೆ ವೃದ್ಧ ಪತಿ. ವರ್ಷಗಳಿಂದ ಉಳಿಸಿದ ಪುಡಿಗಾಸನ್ನೆಲ್ಲ ಅಂಗಡಿ ಮಾಲೀಕನೆದುರು ಹರವುತ್ತಾನೆ. ಆದರೆ ಈಗ ಚಿನ್ನಕ್ಕೆ ಗ್ರಾಮಿಗೆ ಹತ್ತು ಸಾವಿರ ಎಂದು ವೃದ್ಧನಿಗೆ ಅರಿವೇ ಇಲ್ಲ. ಅವನಿನ್ನೂಅವನ ಕಾಲದಲ್ಲೇ ಇದ್ದಾನೆ. ಚಿನ್ನದ ಬೆಲೆ ಕೇಳಿ ಹೌಹಾರಿ, ಕಣ್ಣಲ್ಲಿ ನೀರುತುಂಬಿಕೊಂಡು, ಇನ್ನೊಮ್ಮೆ ಕೊಡಿಸುವೆ ಎಂದು ಪತ್ನಿಗೆ ಸಮಾಧಾನ ಮಾಡಿ ಹೊರಡಲು ಎದ್ದಿದ್ದಾನೆ. ಅವರ ಪರಿಸ್ಥಿತಿ, ವಯಸ್ಸು, ಪರಸ್ಪರ ಪ್ರೀತಿ, ಅಸಹಾಯಕತೆ, ಸ್ವಾಭಿಮಾನ ಎಲ್ಲವನ್ನೂ ಗಮನಿಸಿ ಚಿನ್ನದಂಗಡಿ ಮಾಲೀಕ ಉಚಿತವಾಗಿ ತಾಳಿ ಕೊಟ್ಟು, ಅವರ ಹಣವನ್ನೂ ಅವರಿಗೆ ವಾಪಸ್ ಕೊಟ್ಟು ಉಪಚರಿಸಿ ಕಳಿಸಿದ್ದಾನೆ.

ಈ ಎಮೋಷನಲ್ ದೃಶ್ಯಾವಳಿ ಯಾರದ್ದೋ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಷಿಯಲ್ ಮೀಡಿಯಾ ತಲುಪಿ ವೈರಲ್ ಆಗಿದೆ. ಈ ಮಾನವೀಯತೆಗೆ ಸಹೃದಯತೆಗೆ ಸಲಾಮ್ ಹೇಳಲೇಬೇಕು. ಆದರೆ ಈ ವೈರಲ್ ವಿಡಿಯೋದ ಆಫ್ಟರ್ ಎಫೆಕ್ಟ್ ಏನು? ಆತನ ಒಳ್ಳೇತನದ ಪರೀಕ್ಷೆಗೆ ಇನ್ನಷ್ಟು ಮಂದಿ ಬಂದರೆ ಕತೆ ಏನು? ಅಂಗಡಿಯವನು ಒಳ್ಳೆಯವ ಎಂದು ಕಸ್ಟಮರ್ ಜಾಸ್ತಿ ಆದರೆ ಓಕೆ. ಆದರೆ ಉದ್ರಿ ಉದಾರತನವನ್ನೇ ಬಯಸಿ ಬರುವವರ ಸಂಖ್ಯೆ ಹೆಚ್ಚಾದರೆ ಆತ ಏನು ಮಾಡಬೇಕು? ಹಾಗೊಮ್ಮೆ ಅವನು ನಕಾರ ನುಡಿದರೆ ಅವನದ್ದು ತೋರಿಕೆಯ ಒಳ್ಳೇತನ ಎಂದು ನೆಗೆಟಿವ್ ಸುದ್ದಿ ಬರುವ ಸಾಧ್ಯತೆಯೂ ಉಂಟು. ಕೆಲವೊಮ್ಮೆ ಒಳ್ಳೇತನ ವೈರಲ್ ಆಗುವುದೂ ಎಂಥ ಅಪಾಯ. ಧರ್ಮಕ್ಷೇತ್ರದಲ್ಲಿ ದಾನಧರ್ಮ ನೋಡಿದ್ದೇ ತಪ್ಪಾಗಿ ಅಂಗಡಿಯಲ್ಲಿರುವ ಚಿನ್ನವೆಲ್ಲ ಧರ್ಮಕ್ಕಿಟ್ಟಿದ್ದು ಎಂಬಂತಾಗಬಾರದು ಪಾಪ.