Friday, October 31, 2025
Friday, October 31, 2025

ಅದು ಕೂಸು ಕರ್ದಿದ್ದಲ್ಲ... ಕಾರ್ಡೆಲಿಯಾ ಕ್ರೂಸ್‌ ಸೆಳೆದಿದ್ದು..!

ಇಲ್ಲಿ ಪ್ರಯಾಣಿಕರು 40ಕ್ಕೂ ಅಧಿಕ ಆಟಗಳನ್ನು ಮತ್ತು ಸ್ಟೇಜ್‌ ಶೋ ಗಳನ್ನು ವೀಕ್ಷಿಸಬಹುದು. ಪ್ರತಿಯೊಂದು ಭಿನ್ನ ಹಾಗೂ ಹೊಸ ಅನುಭವ ನೀಡುತ್ತವೆ. ಕಣ್ಣುಗಳು ಎಲ್ಲವನ್ನೂ ನೋಡಿ ಆನಂದಿಸುತ್ತಿರುತ್ತವೆ. ಕೈಗಳು ಆನಂದಕ್ಕೆ ಸರಿಯಾಗಿ ಚಪ್ಪಾಳೆ ತಟ್ಟುವ ತವಕದಲ್ಲಿರುತ್ತವೆ. ಪ್ರತಿದಿನ ಯಾವೆಲ್ಲಾ ಕಾರ್ಯಕ್ರಮಗಳಿವೆ? ಯಾವ ಬಗೆಯ ಊಟಗಳಿವೆ? ನಿಮಗೆ ಯಾವುದು ಉಚಿತವಾಗಿ ದೊರೆಯುವುದು? ಎನ್ನುವ ವಿವರಗಳನ್ನು ಪಾಂಪ್ಲೆಟ್‌ ಮೂಲಕ ಪ್ರತಿಯೊಬ್ಬ ಪ್ರಯಾಣಿಕನಿಗೂ ನೀಡುತ್ತಾರೆ.

  • ದಿವ್ಯಾ ಪಂಡಿತ್‌

ಹಲೋ...

ಹಾಂ..,

ಏನೋ ಹೇಳಲಾ ನಿನಗೆ?

ಹಂ... ಹೇಳು...

ಲವ್‌ ಯು, ಲವ್‌ ಯು, ಲವ್‌ ಯು...

ನಾಚಿಕೆ ಪ್ಲಸ್‌ ಖುಷಿಯಿಂದ ಕೇಳ್ದೆ, ಇದನ್ನ ಹೇಳೋಕೆ ಕಾಲ್‌ ಮಾಡಿದ್ಯಾ?

ಇದ್ರ ಜೊತೆ ಇನ್ನು ಏನೋ ಹೇಳೋಕೆ ಕಾಲ್‌ ಮಾಡಿದ್ದೆ...

ಏನ್‌ ಅದು, ಅಂಥ ಸ್ಪೆಷಲ್‌?

next week ನಿನಗೆ ಸ್ವರ್ಗ ತೋರ್ಸೋಣ ಅಂಥ ಅಂದ್ಕೊಂಡಿದ್ದೆ...

ಈಗಾಗ್ಲೆ ಸ್ವರ್ಗ ಕಂಡಾಯ್ತಲ್ಲ... ಇದ್ಯಾವ್ದು ಇನ್ನೊಂದು ಹೊಸ ಸ್ವರ್ಗ?

ಕರದ್ದು ಕೂಸು, ಅದನ್ನ ನೋಡೋಕೆ ಈ ಸಂಡೆ ಚೆನ್ನೈಗೆ ಬರ್ಬೇಕು ನೀನು...

ಇವ್ನು ಯಾವ ಇನ್ನೊಂದು ಕೂಸಿನ(ಹುಡುಗಿ) ಜತೆ ತಿರ್ಗತಾ ಇದ್ದಾನೆ? ಅನ್ನೋ ಸಿಟ್ಟಲ್ಲಿ, ಒಂದಷ್ಟು ಬಟ್ಟೆಯನ್ನ ಪ್ಯಾಕ್‌ ಮಾಡ್ಕೊಂಡು ಸಂಡೆ ಬೆಳಗ್ಗೆ 6 ಗಂಟೆಗೆಲ್ಲ ಚೆನ್ನೈನ ಸತ್ಯನಗರ ತಲುಪಿದೆ.

ಅಲ್ಲಿ ನನಗಾಗಿ ಕಾಯುತಿದ್ದ ನನ್ನವನ ಜತೆ ಇದ್ದದ್ದು ಇನ್ನೊಂದು ಕೂಸು(ಹುಡುಗಿ) ಅಲ್ಲ. ಕ್ರೂಸ್‌ ಎನ್ನುವ ಬೃಹತ್‌ ಗಾತ್ರದ ಶಿಪ್‌. ಕಾಲ್‌ನಲ್ಲಿ ಮಾತನಾಡುವಾಗ ʼಕಾರ್ಡೆಲಿಯಾ ಕ್ರೂಸ್‌ʼ ಎನ್ನುವುದನ್ನು ʼಕರದ್ದು ಕೂಸುʼ ಅಂತ ತಪ್ಪಾಗಿ ತಿಳಿದಿದ್ದೆ ಎನ್ನುವ ಸತ್ಯ, ಸತ್ಯ ನಗರಕ್ಕೆ ತಲುಪಿದಾಗ ತಿಳಿಯಿತು.

ನಿಜಕ್ಕೂ ಅದೊಂದು ಅಚ್ಚರಿ ಮತ್ತು ಅದ್ಭುತವಾದ ಶಿಪ್‌. ಅದರಲ್ಲಿ ಕಳೆದ ಒಂದೊಂದು ಕ್ಷಣವೂ ಕೂಡ ಹೊಸತೇ. ನೀರಿನ ಮೇಲೆ ತೇಲಿಸುವ ಸ್ವರ್ಗ ಅದು. ಈ ರೀತಿಯ ಶಿಪ್‌ ಅನ್ನ ಟೈಟಾನಿಕ್‌ ಅನ್ನೋ ಇಂಗ್ಲಿಷ್‌ ಫಿಲ್ಮ್ ನಲ್ಲಿ ನೋಡಿದ್ದೆ. ಪ್ರಯಾಣಿಕರನ್ನು ಕರೆದೊಯ್ಯುವ ಐಷಾರಾಮಿ ಶಿಪ್‌ಗಳು ಕೇವಲ ಫಾರಿನ್‌ ಕಂಟ್ರಿಗಳಲ್ಲಿ ಮಾತ್ರ ನೋಡಬಹುದು ಅಂದುಕೊಂಡಿದ್ದೆ. ಆ ರೀತಿಯ ಹಡಗು ನಮ್ಮ ದೇಶದಲ್ಲೂ ಇದೆ, ಅದರಲ್ಲಿ ಎಲ್ಲ ವರ್ಗದ ಜನರೂ ಪ್ರಯಾಣ ಬೆಳೆಸಬಹುದು ಅನ್ನೋದು ತಿಳಿದಿದ್ದೇ ಆಗ.

cordelia

ಎಲ್ಲೋ ಒಂದು ಕಡೆ ಟ್ರಿಪ್‌ ಹೋಗಲು ಪ್ಲಾನ್‌ ಮಾಡ್ತಾಇದ್ದೇವೆ ಎಂದ ತಕ್ಷಣ ಮೊದಲು ನಮ್ಮ ಯೋಚನೆಗೆ ಬರುವುದು ಎಷ್ಟು ಬೇಗ ಆ ಸ್ಥಳಕ್ಕೆ ಹೋಗಬಹುದು? ಟ್ರೇನ್‌ ಅಥವಾ ಫ್ಲೈಟ್‌ ಎರಡರಲ್ಲಿ ಯಾವುದು ಬೆಸ್ಟ್‌? ಎನ್ನುವುದು. ಅರೆ ಕ್ಷಣಕ್ಕೂ ಶಿಪ್‌ನ ಪ್ರಯಾಣ ಕೈಗೊಳ್ಳಬಹುದಾ? ಅನ್ನೋದನ್ನು ಯೋಚಿಸುವುದಿಲ್ಲ. ಒಮ್ಮೆ ʼಕಾರ್ಡೆಲಿಯಾ ಕ್ರೂಸ್‌ʼ ಹಡಗಲ್ಲಿ ಪ್ರಯಾಣ ಮಾಡಿದ್ರೆ, ಎಲ್ಲ ಸ್ಥಳಕ್ಕೂ ಈ ರೀತಿಯ ಸಂಚಾರ ವ್ಯವಸ್ಥೆಯೇ ಇರಬೇಕಿತ್ತು ಎನಿಸುತ್ತದೆ. ಯಾಕಂದ್ರೆ ಪ್ರಯಾಣದುದ್ದಕ್ಕೂ ಯಾವುದೇ ಕರ್ಕಶ ಶಬ್ದ ಇರುವುದಿಲ್ಲ. ಒಂದೇ ಸ್ಥಳದಲ್ಲಿ ಕುಳಿತೇ ಇರಬೇಕು ಎನ್ನುವ ನಿಯಮ ಇರುವುದಿಲ್ಲ. ವಾಹನದಲ್ಲಿ ಇರುವ ವಾಸನೆ, ನೂಕುನುಗ್ಗಲಿನಿಂದ ಕಾಡುವ ತಲೆನೋವು ಮತ್ತು ವಾಂತಿ-ವಾಕರಿಕೆ ಸಮಸ್ಯೆ ಕಾಡುವುದಿಲ್ಲ. ಬದಲಿಗೆ ಮನಸ್ಸಿಗೆ ಹಿತ ನೀಡುವ ಸಂಗೀತ, ತಂಪಾದ ಗಾಳಿ, ಹಾಯಾದ ದೃಶ್ಯಗಳು ಮನಸ್ಸನ್ನು ಹಿತಗೊಳಿಸುತ್ತಲೇ ಇರುತ್ತವೆ.

ತಲುಪಬೇಕಿದ್ದ ಸ್ಥಳಕ್ಕಿಂತ ಹೋಗುವ ದಾರಿಯೇ ಸುಂದರವಾಗಿರುತ್ತವೆ ಎನ್ನುವ ಮಾತನ್ನು ನೀವು ಕೇಳಿರುತ್ತೀರಿ. ಈ ಒಂದು ಸಾಲಿಗೆ ಅಕ್ಷರಶಃ ಸತ್ಯ ಎನ್ನುವ ಭಾವನೆ ಮೂಡಿಸುವುದು ಕ್ರೂಸ್‌ ಪ್ರಯಾಣ. ಈ ಶಿಪ್‌ನ ಒಳಗೆ ಕಾಲಿಟ್ಟರೆ ಅಲ್ಲಿ ಏನಿದೆ? ಏನಿಲ್ಲ? ಎನ್ನುವುದನ್ನು ತಿಳಿದುಕೊಳ್ಳಲು ಸುಮಾರು ನಾಲ್ಕೈದು ಗಂಟೆ ಬೇಕು. ಸಂಪೂರ್ಣವಾಗಿ ಜಗಮಗಿಸುವ ಲೈಟ್‌ಗಳ ಅಲಂಕಾರ, ಹೊಳೆಯುವ ನೆಲ, ಶಿಸ್ತು ಮತ್ತು ಸ್ವಚ್ಛತೆಗೆ ಒತ್ತು ನೀಡುವ ಸಿಬ್ಬಂದಿ ವರ್ಗ ಎಲ್ಲವೂ ಒಮ್ಮೆಲೇ ಕಲ್ಪನಾ ಲೋಕದಲ್ಲಿದ್ದೇವೇನೋ ಎನ್ನುವಂತೆ ಮಾಡುತ್ತವೆ. ಅಲ್ಲದೆ ಜೀವನದಲ್ಲಿ ಒಮ್ಮೆ ಸ್ವರ್ಗ ನೋಡಿದೆ ಎನ್ನುವ ತೃಪ್ತಿಯನ್ನು ಸಹ ನೀಡುವುದು.

ಕ್ರೂಸ್‌ನ ಸಾಮರ್ಥ್ಯ

ವಿದೇಶಗಳಲ್ಲಿ ಮಾತ್ರ ಕಾಣಬಹುದಾಗಿದ್ದ ಈ ರೀತಿಯ ಶಿಪ್‌ಗಳು ಆರಂಭದಲ್ಲಿ 104 ಅಡಿ ಅಗಲ, 883 ಅಡಿ ಉದ್ದದಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಬರ ಬರುತ್ತಾ ಅವುಗಳ ಉದ್ದಗಲಗಳಲ್ಲಿ, ತಂತ್ರಜ್ಞಾನಗಳಲ್ಲಿ ಹಾಗೂ ವ್ಯವಸ್ಥೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಂಡವು. ಇದೀಗ ಕ್ರೂಸ್‌ ಹಡಗು 230 ಅಡಿ ಅಗಲ ಹಾಗೂ 1198 ಅಡಿ ಉದ್ದದ ವಿನ್ಯಾಸದಲ್ಲಿ ನಿರ್ಮಾಣಗೊಂಡಿದೆ. 'waterways leisure tourism Pvt Ltd' ಎನ್ನುವ ಸಂಸ್ಥೆ ಈ ಸೇವೆಯನ್ನು ಭಾರತದಲ್ಲಿ ಒದಗಿಸುತ್ತಿದೆ. ಇದರಲ್ಲಿ ಅತ್ಯಂತ ಶ್ರೀಮಂತ ವರ್ಗದ ಜನರಿಂದ ಹಿಡಿದು ಮಧ್ಯಮ ವರ್ಗದ ಜನರು ಸಹ ಪ್ರಯಾಣಿಸಬಹುದು. ಇದು 11 ಮಹಡಿ ಹಾಗೂ 796 ಕ್ಯಾಬಿನ್‌ (ಕೋಣೆ)ಗಳನ್ನು ಒಳಗೊಂಡಿದ್ದು, ಸುಮಾರು 1900 ಪ್ರಯಾಣಿಕರನ್ನು ಒಮ್ಮೆಲೇ ಕರೆದೊಯ್ಯುತ್ತದೆ.

cordelia  4

ಇದರಲ್ಲಿ ಏನೇನಿದೆ?

11ನೇ ಮಹಡಿಯಲ್ಲಿ ಸನ್‌ ಬಾತ್‌ ಮತ್ತುಸಮುದ್ರಯಾನ ವೀಕ್ಷಿಸಲು ಅನುಕೂಲವಾಗುವಂತೆ ತೆರೆದ ಬಾಲ್ಕನಿಗಳಿವೆ. 12 ನೇ ಮಹಡಿಗೆ ಹೋದ್ರೆ ಅಲ್ಲಿ ರಾಕ್‌ ವಾಲ್‌, ಜಿಮ್‌, ಸ್ಪಾ, ಸ್ವಿಮ್ಮಿಂಗ್‌ ಪೂಲ್‌ ಮತ್ತು ಫುಡ್‌ ಕೋರ್ಟ್‌ಗಳು ಸಿಗುತ್ತವೆ. 9, 10, 7ನೇ ಮಹಡಿಗೆ ಹೋದರೆ ಲಕ್ಸುರಿ ವ್ಯವಸ್ಥೆಯಿಂದ ಕೂಡಿರುವ ಪ್ರಯಾಣಿಕರ ರೂಮ್‌ಗಳಿವೆ. ಇಲ್ಲಿ ಎಲ್ಲ ಕೋಣೆಗಳು ಐಷಾರಾಮಿ ವ್ಯವಸ್ಥೆ ಪಡೆದುಕೊಂಡಿವೆ. 6ನೇ ಮಹಡಿ ಗೇಮಿಂಗ್‌ ಆರ್ಕೇಡ್‌, ಕ್ಯಾಸಿನೋ, ಶಾಪಿಂಗ್‌ ಸೆಂಟರ್‌ ಗಳಿಂದ ಕೂಡಿದೆ. 5ನೇ ಮಹಡಿ ಸ್ಟಾರ್‌ ಲೈಟ್‌, ಚೇರ್‌ಮನ್ಸ್‌ ಕ್ಲಬ್‌, ರಿಸೆಪ್ಷನ್‌, ಮಾರ್ಕ್ಯೂ ಥಿಯೇಟರ್‌ ಹೊಂದಿದೆ. 4 ಮತ್ತು 3ನೇ ಮಹಡಿಯು ಪ್ರಯಾಣಿಕರಿಗಾಗಿ ಇರುವ ರೂಮ್‌ ವ್ಯವಸ್ಥೆಗಳು. 1 ಮತ್ತು 2ನೇ ಮಹಡಿಯಲ್ಲಿ ಸ್ಟಾಫ್‌ ಕ್ಯಾಬಿನ್‌ ಮತ್ತು ಮೆಡಿಕಲ್‌ ರೂಮ್‌ಗಳಿವೆ.

ನೀವು ಆಯ್ಕೆಯಲ್ಲೇ ದಣಿಯುತ್ತೀರಿ

ಇಲ್ಲಿ ಪ್ರಯಾಣಿಕರು 40ಕ್ಕೂ ಅಧಿಕ ಆಟಗಳನ್ನು ಮತ್ತು ಸ್ಟೇಜ್‌ ಶೋ ಗಳನ್ನು ವೀಕ್ಷಿಸಬಹುದು. ಪ್ರತಿಯೊಂದು ಭಿನ್ನ ಹಾಗೂ ಹೊಸ ಅನುಭವ ನೀಡುತ್ತವೆ. ಕಣ್ಣುಗಳು ಎಲ್ಲವನ್ನೂ ನೋಡಿ ಆನಂದಿಸುತ್ತಿರುತ್ತವೆ. ಕೈಗಳು ಆನಂದಕ್ಕೆ ಸರಿಯಾಗಿ ಚಪ್ಪಾಳೆ ತಟ್ಟುವ ತವಕದಲ್ಲಿರುತ್ತವೆ. ಪ್ರತಿದಿನ ಯಾವೆಲ್ಲಾ ಕಾರ್ಯಕ್ರಮಗಳಿವೆ? ಯಾವ ಬಗೆಯ ಊಟಗಳಿವೆ? ನಿಮಗೆ ಯಾವುದು ಉಚಿತವಾಗಿ ದೊರೆಯುವುದು? ಎನ್ನುವ ವಿವರಗಳನ್ನು ಪಾಂಪ್ಲೆಟ್‌ ಮೂಲಕ ಪ್ರತಿಯೊಬ್ಬ ಪ್ರಯಾಣಿಕನಿಗೂ ನೀಡುತ್ತಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಟೀ-ಕಾಫಿ ಅಥವಾ ಊಟ ಯಾವುದೇ ಆಗಿರಲಿ ಒಂದು ನಿಗದಿತ ಸಮಯದಲ್ಲಿ ಮಾತ್ರ ಸಿಗುವುದು. ತಡವಾಗಿ ಹೋದರೆ ಸಿಗುವುದಿಲ್ಲ. ಬದಲಿಗೆ ಬೇರೆ ಫುಡ್‌ ಕೋರ್ಟ್‌ಗಳಲ್ಲಿ ಖರೀದಿಸಬಹುದು.

ಕೆಲವೊಂದಕ್ಕೆ ಪೇ ಮಾಡಬೇಕು

ಇಲ್ಲಿ ಇರುವ ಸೃಜನಾತ್ಮಕ ಆಟಗಳಲ್ಲಿ ಕೆಲವನ್ನು ಉಚಿತವಾಗಿ ಆಡಬಹುದು. ಆಟಗಳ ಪಟ್ಟಿಯಲ್ಲಿ ಇರುವ ಒಂದು ಅದ್ಭುತ ಆಕ್ಟಿವಿಟಿ ಎಂದರೆ ʼಬ್ರಿಡ್ಜ್‌ ಟೂರ್‌ʼ. ಇದು 9ನೇ ಮಹಡಿಯಲ್ಲಿದೆ. ಇದಕ್ಕೆ ಒಬ್ಬರು 1540 ರು ನೀಡಬೇಕು. ಇದು ನನಗೆ ಒಂದಷ್ಟು ಮಾಹಿತಿ ಹಾಗೂ ಕುತೂಹಲ ಮೂಡಿಸಿದ ಸಂಗತಿಯಾದ್ದರಿಂದ ಮನಸ್ಸಿಗೂ ಬಹಳ ಇಷ್ಟವಾಯಿತು. ಇಲ್ಲಿ ಶಿಪ್‌ ಹೇಗೆ ನಡೆಯುತ್ತದೆ. ಯಾವ ಬಗೆಯ ತಂತ್ರಜ್ಞಾನ ಹಾಗೂ ಮ್ಯಾನ್‌ ಪವರ್‌ ಕೆಲಸ ನಿರ್ವಹಿಸುತ್ತದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಸುತ್ತಾರೆ. ಬಹಳ ಹತ್ತಿರದಲ್ಲಿ ಕ್ರೂಸ್‌ ಓಪರೇಟಿಂಗ್‌ ಆಕ್ಟಿವಿಟಿಯನ್ನು ತಿಳಿಯಬಹುದು.

ಬಲ್ಲೇ ಬಲ್ಲೇ ಶೋ

ಪಂಜಾಬಿ ವಿವಾಹದ ಕಥೆ ಹಾಗೂ ಜೀವನದ ಬಗ್ಗೆ ತಮಾಷೆಯಾಗಿ ತೋರಿಸುವ ಒಂದು ಸ್ಟೇಜ್‌ ಶೋ ಎಂದರೆ ಅದು ʼಬಲ್ಲೇ ಬಲ್ಲೇ ಶೋʼ. ಇದರೊಟ್ಟಿಗೆ ಮ್ಯೂಸಿಕ್‌ ಶೋ, ಮ್ಯಾಜಿಕ್‌ ಶೋ, ಡಿಜೆ ಪಾರ್ಟೀಸ್‌ ಎಲ್ಲವನ್ನೂ ನೀವು ಎಂಜಾಯ್‌ ಮಾಡಬಹುದು. ಇವುಗಳ ಜತೆಗೆ ವಿಶೇಷವಾದ ಬರ್ಲೆಸ್ಕ್‌ (burlesque) ಶೋಗಳು ಇವೆ. ಇದು ವಯಸ್ಕರಿಗೆ ಮಾತ್ರ. ಇದನ್ನು ವೀಕ್ಷಿಸಲು ಒಬ್ಬರು 1025 ರು. ಟಿಕೆಟ್‌ ಪಡೆಯಬೇಕು.

cordelia 3

ಊಟ-ತಿಂಡಿಗೆ ರಾಜಿಯಿಲ್ಲ

ಇಲ್ಲಿ ಊಟ-ತಿಂಡಿ ಹಾಗೂ ಯಾವುದೇ ಬಗೆಯ ಪಾನೀಯಗಳು ಖಾಲಿ ಆಗುತ್ತವೆ ಎನ್ನುವ ಹಾಗಿಲ್ಲ. ಎಲ್ಲವೂ ಭಿನ್ನ ಹಾಗೂ ವಿಶೇಷ ರುಚಿಗಳಿಂದ ಹೇರಳವಾಗಿ ಸಿಗುತ್ತವೆ. ಸ್ವಚ್ಛತೆಯ ಜೊತೆಗೆ ವಿವಿಧತೆಯನ್ನು ನೀಡುತ್ತವೆ. ಇಂಡಿಯನ್‌ ಫುಡ್‌, ವೆಜ್‌, ನಾನ್‌ವೆಜ್‌ ಹಾಗೂ ಚೈನೀಸ್‌ ಫುಡ್‌ ರೂಪದಲ್ಲಿ ನಾವು ಆಯ್ಕೆ ಮಾಡಬಹುದು.

ಮದ್ಯ ಪ್ರಿಯರಿಗೆ ಸ್ವರ್ಗ

ಪ್ರಯಾಣಿಕರು ಯಾವ ಕ್ಲಾಸ್‌ ಟಿಕೆಟ್‌ ಪಡೆದಿದ್ದಾರೆ ಎನ್ನುವುದರ ಆಧಾರದ ಮೇಲೆ ಆಲ್ಕೋಹಾಲ್‌ ಪಾನೀಯಗಳು ಉಚಿತವಾಗಿ ದೊರೆಯುತ್ತವೆ. ನಿಮ್ಮ ಆಯ್ಕೆಯ ಡ್ರಿಂಕ್ಸ್‌ ಬೇಕೆಂದಿದ್ದರೆ ಹಣ ಕೊಟ್ಟು ಖರೀದಿಸಬಹುದು.

ರೂಮ್‌ಗಳ ಆಯ್ಕೆ

ಇಬ್ಬರು ವಯಸ್ಕರಿಗೆ ಒಂದು ಕೋಣೆಯನ್ನು ನೀಡಲಾಗುವುದು. ಅಲ್ಲಿ ಮಕ್ಕಳಿಗಾಗಿಯೂ ವಿಶೇಷ ಬೆಡ್‌ ವ್ಯವಸ್ಥೆ ಮಾಡಲಾಗಿರುತ್ತದೆ. ಇವುಗಳಲ್ಲಿ ಭಿನ್ನತೆಗಳಿವೆ. ಇಂಟೀರಿಯರ್‌ ಸ್ಟೇಟ್‌ ರೂಮ್‌ ಗೆ 30,000 ರು. ಓಷನ್‌ ವ್ಯೂ ರೂಮ್‌ಗೆ 36,000 ರು. ಮಿನಿ ಸೂಟ್ ರೂಮ್‌ 52,000 ರು.ಸೂಟ್‌ ರೂಮ್‌- 92,000 ರು. ಚೇರ್‌ಮನ್‌ ಸೂಟ್‌ ರೂಮ್‌ ಗೆ 1,38,000 ರು. ಪಾವತಿಸಬೇಕು. ನನ್ನ ಕ್ರೂಸ್‌ ಅನುಭವದ ಪ್ರಕಾರ ನೀವು ಇಂಟೀರಿಯರ್‌ ಸ್ಟೇಟ್‌ ರೂಮ್‌ ಅಥವಾ ಓಷಿಯನ್‌ ವ್ಯೂ ಸ್ಟೇಟ್‌ ರೂಮ್‌ ಆಯ್ಕೆ ಮಾಡುವುದು ಉತ್ತಮ. ಈ ರೂಮ್‌ಗಳು 142 ಸ್ಕ್ವಾರ್‌ ಫೀಟ್‌ ವಿಸ್ತಾರದಲ್ಲಿರುತ್ತವೆ. ಇವು ಕಡಿಮೆ ಬಜೆಟ್‌ನಲ್ಲಿ ದೊರೆಯುತ್ತವೆಯಾದರೂ ಸ್ವಚ್ಛತೆ ಹಾಗೂ ಉತ್ತಮ ಸೌಲಭ್ಯಗಳ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಕ್ರೂಸ್‌ ಒಳ ಹೊಕ್ಕ ನಂತರ ನಾವು ಅಧಿಕ ಸಮಯವನ್ನು ಆಕ್ಟಿವಿಟಿ ಹಾಗೂ ಸೈಟ್‌ ನೋಡುವುದರಲ್ಲಿಯೇ ಕಳೆಯುತ್ತೇವೆ. ರೂಮ್‌ಗೆ ಮಲಗಲು ಹಾಗೂ ಫ್ರೆಶ್‌ ಆಗಲು ಮಾತ್ರ ಹೋಗುತ್ತೇವೆ. ಹಾಗಾಗಿ ಕಡಿಮೆ ಬೆಲೆಯ ರೂಮ್‌ ಆಯ್ಕೆಮಾಡಿಕೊಂಡರೆ ಹಣವನ್ನು ಉಳಿಸಿಕೊಂಡು, ಇತರ ಅಗತ್ಯಗಳಿಗೆ ವೆಚ್ಚಮಾಡಬಹುದು.

ಎಲ್ಲೆಲ್ಲಿಗೆ ಹೋಗಬಹುದು?

ಕಾರ್ಡೆಲಿಯಾ ಕ್ರೂಸ್‌ ಪ್ರಯಾಣವನ್ನು ಆನಂದಿಸಬೇಕು ಎಂದರೆ 17,490ರು.ಗೆ 2 ರಾತ್ರಿಯ ಚೆನ್ನೈನಿಂದ ಲಕ್ಷದ್ವೀಪದ ಪ್ರಯಾಣ ಕೈಗೊಳ್ಳಬಹುದು. ಇದು ನಿಮಗೆ ಬಜೆಟ್‌ ಫ್ರೆಂಡ್ಲಿ ಪಯಣವಾಗುತ್ತದೆ. ಇದನ್ನು ಹೊರತು ಪಡಿಸಿದರೆ 2 ರಾತ್ರಿಯ ಮುಂಬೈ-ಗೋವಾ, 2 ರಾತ್ರಿಯ ಮುಂಬೈ-ಕೊಚ್ಚಿ, 3 ರಾತ್ರಿಯ ಗೋವಾ-ಲಕ್ಷದ್ವೀಪ, ಮುಂಬೈ ಪ್ರಯಾಣ, 4 ರಾತ್ರಿಯ ಮುಂಬೈ- ಲಕ್ಷದ್ವೀಪ-ಮುಂಬೈ ಪ್ರಯಾಣ ಕೈಗೊಳ್ಳಬಹುದು. ನೀವು ಗ್ರೂಪ್‌ ಬುಕಿಂಗ್‌ ಮಾಡಿದರೆ ಟಿಕೆಟ್‌ ದರದಲ್ಲಿ ರಿಯಾಯತಿ ಪಡೆದುಕೊಳ್ಳುವ ಅವಕಾಶ ಇರುತ್ತದೆ.

ಇಲ್ಲಿ ಒಮ್ಮೆ ಪರಿಶೀಲಿಸಿ

ಕಾರ್ಡೆಲಿಯಾ ಕ್ರೂಸ್‌ ನ ವೆಬ್‌ಸೈಟ್‌ (https://www.cordeliacruises.com/) ಅನ್ನು ಒಮ್ಮೆ ಪರಿಶೀಲಿಸಿದರೆ ನಿಮಗೆ ಎಲ್ಲಾ ಬಗೆಯ ಮಾಹಿತಿ ದೊರೆಯುವುದು. ಅಲ್ಲದೆ ಆನ್‌ ಲೈನ್‌ ಮೂಲಕವೂ ನೀವು ನಿಮ್ಮ ಟಿಕೆಟ್‌ ಅನ್ನು ಕಾಯ್ದಿರಿಸಬಹುದು. ಇಲ್ಲವೇ ಸೂಕ್ತ ಕ್ರೂಸ್‌ ಟ್ರಾವೆಲ್‌ ಏಜನ್ಸಿಯೊಂದಿಗೆ ಬುಕ್‌ ಮಾಡಬಹುದು. ಈ ಪ್ರಯಾಣದಲ್ಲಿ ನಿಮ್ಮ ಟಿಕೆಟ್‌ನ ದರಕ್ಕೆ ಅನುಗುಣವಾಗಿಯೇ ಫುಡ್‌, ರೂಮ್‌ ಹಾಗೂ ಆಕ್ಟಿವಿಟಿಗಳು ಉಚಿತವಾಗಿ ದೊರೆಯುತ್ತವೆ. ಅವುಗಳಿಗೂ ಮೀರಿ ನಿಮಗೆ ಬೇರೆ ಸೇವೆಗಳ ಅಗತ್ಯವಿದ್ದರೆ ಹಣಕೊಟ್ಟು ಪಡೆಯಬಹುದು.

cordelia  5

ಯಾವ ಸಮಯ ಸೂಕ್ತ?

ಕ್ರೂಸ್‌ ಪ್ರಯಾಣವು ಭಾರತದ ಪೂರ್ವ ಹಾಗೂ ಪಶ್ಚಿಮ ದಿಕ್ಕಿನ ಸಮುದ್ರಯಾನ. ಪಶ್ಚಿಮ ಭಾಗದಲ್ಲಿ ಜುಲೈ ಮತ್ತು ಆಗಸ್ಟ್‌ ತಿಂಗಳುಗಳನ್ನು ಹೊರತು ಪಡಿಸಿ ಉಳಿದ ತಿಂಗಳುಗಳಲ್ಲಿ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಅದೇ ಪೂರ್ವ ದಿಕ್ಕಿನ ಸಮುದ್ರ ಯಾನವು ಕೇವಲ ಜುಲೈ ಮತ್ತು ಆಗಸ್ಟ್‌ ತಿಂಗಳಿಗೆ ಸೀಮಿತವಾಗಿರುತ್ತದೆ.

ಲಗೇಜ್‌ ಪಾಲಿಸಿ

ಒಬ್ಬ ವ್ಯಕ್ತಿ ಮೂರು ಬ್ಯಾಗ್‌ಗಳನ್ನು ಕೊಂಡೊಯ್ಯಬಹುದು. ಒಟ್ಟು ತೂಕವು 20 ಕೆಜಿ ಮೀರಿರಬಾರದು. ವಿಶೇಷ ಪರವಾನಗಿ ಪಡೆದು 50 ಕೆಜಿ ವರೆಗೆ ಕೊಂಡೊಯ್ಯಬಹುದು.

ನೆನಪಿಡಬೇಕಾದ ಕೆಲವು ಸಂಗತಿಗಳು

ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಇರಬೇಕು. ಇಂಟರ್‌ನ್ಯಾಷನಲ್‌ ಪ್ರಯಾಣಕ್ಕೆ ಪಾಸ್‌ಪೋರ್ಟ್‌ ಕಡ್ಡಾಯವಾಗಿರುತ್ತದೆ. 21ವರ್ಷ ಕೆಳಗಿರುವ ಮಕ್ಕಳಿಗೆ ಆಲ್ಕೋಹಾಲ್‌ ಪೇಯ ನೀಡುವುದಿಲ್ಲ. ಪೆಟ್‌ಗಳಿಗೆ ಪ್ರವೇಶವಿಲ್ಲ. ವಿವಾಹ ಕಾರ್ಯಕ್ರಮ, ಕಾರ್ಪೋರೇಟ್‌ ಇವೆಂಟ್‌ ಮತ್ತು ಸ್ಕೂಲ್‌ ಟ್ರಿಪ್‌ಗಳಿಗಾಗಿ ಬುಕ್‌ ಮಾಡಬಹುದು.

ಇನ್ಯಾಕೆ ತಡ..? ಭಿನ್ನ ಹಾಗೂ ವಿಶೇಷತೆಯಿಂದ ಕೂಡಿರುವ ಕಾರ್ಡೆಲಿಯಾ ಕ್ರೂಸ್‌ ಶಿಪ್‌ ಪಯಣಕ್ಕೆ ಸಜ್ಜಾಗಿ. ನಿಮ್ಮವರೊಂದಿಗೆ ಸ್ವರ್ಗದ ಅನುಭವ ಪಡೆಯಿರಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!