ಸರ್ ಎಂ. ವಿ. ಅವರ ನೆನಪಿನ ಅಂಗಳಕ್ಕೊಂದು ಪಯಣ
ವಿಶ್ವೇಶ್ವರಯ್ಯನವರು ಜನಿಸಿದ ಮನೆ ಹಾಗೂ ಅವರು ಬಳಸುತ್ತಿದ್ದ ವಸ್ತುಗಳು ಇಂದು ಸ್ಮಾರಕ ಹಾಗೂ ವಸ್ತುಸಂಗ್ರಹಾಲಯವಾಗಿ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಲ್ಪಟ್ಟಿವೆ. ಈ ತಾಣವು ಅವರ ಅಸಾಧಾರಣ ಜೀವನ ಹಾಗೂ ಸಾಧನೆಗಳನ್ನು ಹತ್ತಿರದಿಂದ ಅರಿಯಲು ಪ್ರವಾಸಿಗರಿಗೆ ಒಂದು ಅಪೂರ್ವ ಅವಕಾಶವನ್ನು ನೀಡುತ್ತದೆ.
ಸೆಪ್ಟೆಂಬರ್ 15, ವಿಶ್ವವಿಖ್ಯಾತ ಎಂಜಿನಿಯರ್, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನ. ದೇಶದ ಅಭಿವೃದ್ಧಿಗೆ ತಮ್ಮ ಅಪ್ರತಿಮ ಬುದ್ಧಿಮತ್ತೆ, ದೂರದೃಷ್ಟಿ ಮತ್ತು ಪರಿಶ್ರಮವನ್ನು ಸಮರ್ಪಿಸಿದ ಈ ಮಹಾನ್ ಸಾಧಕರ ಜನ್ಮದಿನವನ್ನು ಭಾರತದಲ್ಲಿ ‘ಎಂಜಿನಿಯರ್ಸ್ ಡೇ’ ಎಂದು ಆಚರಿಸಲಾಗುತ್ತದೆ. ಅವರ ಸಾಧನೆಗಳನ್ನು ನೆನಪಿಸಿಕೊಳ್ಳುವ ಈ ಸಂದರ್ಭದಲ್ಲಿ, ಅವರ ಹುಟ್ಟೂರಾದ ಮುದ್ದೇನಹಳ್ಳಿಗೆ ಒಂದು ಪ್ರವಾಸ ಮಾಡೋಣ ಬನ್ನಿ. ಅಲ್ಲಿ ಅವರ ನೆನಪುಗಳನ್ನು ಹೊತ್ತಿರುವ ಮನೆ ಮತ್ತು ಸಮಾಧಿಯೊಂದಿಗೆ, ಸುತ್ತಮುತ್ತಲಿನ ಪ್ರಕೃತಿ ಹಾಗೂ ಐತಿಹಾಸಿಕ ತಾಣಗಳನ್ನೂ ಕಣ್ತುಂಬಿಕೊಳ್ಳೋಣ.
ಚಿಕ್ಕಬಳ್ಳಾಪುರದ ಚಿನ್ನ
ವ್ಯಕ್ತಿಯೊಬ್ಬರ ಅಸಾಧಾರಣ ಬದುಕಿನ ನೆನಪನ್ನು ತನ್ನೊಳಗೆ ಹೊತ್ತು ನಿಂತಿರುವ ಅಪರೂಪದ ಸ್ಥಳಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯೂ ಒಂದು. ಇದು ವಿಶ್ವ ಕಂಡ ಮೇಧಾವಿ ಎಂಜಿನಿಯರ್, ದೂರದೃಷ್ಟಿಯ ಆಡಳಿತಗಾರ ಹಾಗೂ ಆಧುನಿಕ ಮೈಸೂರಿನ ನಿರ್ಮಾತೃ ಎಂದು ಗುರುತಿಸಲ್ಪಟ್ಟ ‘ಭಾರತ ರತ್ನ’ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮಸ್ಥಳ.
ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ದೇಶಾದ್ಯಂತ ಅನೇಕ ಮಹತ್ವದ ಯೋಜನೆಗಳ ಹಿಂದೆ ಅವರ ದೂರದೃಷ್ಟಿ ಮತ್ತು ಪರಿಶ್ರಮವಿದೆ. ಜಲಸಂಪನ್ಮೂಲ ನಿರ್ವಹಣೆ, ನೀರಾವರಿ, ಕೈಗಾರಿಕೆ, ಶಿಕ್ಷಣ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಅವರು ಬೀರಿದ ಪ್ರಭಾವ ಅಪಾರ. ಆದ್ದರಿಂದಲೇ ಬೆಂಗಳೂರಿನಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿರುವ ಈ ಪುಟ್ಟ ಹಳ್ಳಿ ಮುದ್ದೇನಹಳ್ಳಿ ಇಂದು ಹೆಮ್ಮೆ, ಗೌರವ ಮತ್ತು ಪ್ರೇರಣೆಯ ತಾಣವಾಗಿದೆ.
ಇಲ್ಲಿರುವ ವಿಶ್ವೇಶ್ವರಯ್ಯನವರು ಜನಿಸಿದ ಮನೆ ಹಾಗೂ ಅವರು ಬಳಸುತ್ತಿದ್ದ ವಸ್ತುಗಳು ಇಂದು ಸ್ಮಾರಕ ಹಾಗೂ ವಸ್ತುಸಂಗ್ರಹಾಲಯವಾಗಿ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಲ್ಪಟ್ಟಿವೆ. ಈ ತಾಣವು ಅವರ ಅಸಾಧಾರಣ ಜೀವನ ಹಾಗೂ ಸಾಧನೆಗಳನ್ನು ಹತ್ತಿರದಿಂದ ಅರಿಯಲು ಪ್ರವಾಸಿಗರಿಗೆ ಒಂದು ಅಪೂರ್ವ ಅವಕಾಶವನ್ನು ನೀಡುತ್ತದೆ.
ಐತಿಹಾಸಿಕ ಸ್ಮಾರಕ
ಮಹಾನ್ ಸಾಧಕರಾದ ವಿಶ್ವೇಶ್ವರಯ್ಯನವರು ಹುಟ್ಟಿದ್ದು ಬಡತನದ ಕುಟುಂಬದಲ್ಲಿ. 1860ರಲ್ಲಿ ತಾವು ಹುಟ್ಟಿದ ಆ ಚಿಕ್ಕದಾದ ಮನೆಯನ್ನು ಅವರು 1911ರಲ್ಲಿ ನವೀಕರಿಸಿದರು. ಈಗ ಆ ಮನೆಯು ಒಂದು ಸ್ಮಾರಕವಾಗಿ ಸಂರಕ್ಷಿಸಲ್ಪಟ್ಟಿದೆ. ಮನೆಯ ನವೀಕರಣಕ್ಕಾಗಿ ಬಳಸಿದ ಆ ಕಾಲದ ಒಂದು ಮಂಗಳೂರು ಹಂಚನ್ನೂ ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಈ ಹಳೆಯ ಮನೆಯ ಆವರಣದಲ್ಲಿ ನಿಂತಾಗ, ನಮಗೆ ಶತಮಾನದ ಹಿಂದಿನ ಅವರ ಸರಳ ಬದುಕಿನ ಚಿತ್ರಣ ಕಣ್ಣಮುಂದೆ ಹಾದುಹೋಗುತ್ತದೆ.
ಸೌಲಭ್ಯಗಳ ಕೊರತೆಯ ನಡುವೆಯೂ ವಿದ್ಯಾಭ್ಯಾಸದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಬಾಲಕ ವಿಶ್ವೇಶ್ವರಯ್ಯನವರು ಮನೆಯ ಮುಂದಿನ ಬೀದಿಯ ದೀಪದ ಕಂಬದ ಬೆಳಕಿನಲ್ಲಿ ಓದುತ್ತಿದ್ದರು ಎಂಬ ಸಂಗತಿ ಪ್ರಸಿದ್ಧ. ಆ ದೀಪದ ಕಂಬವನ್ನು ಇಂದಿಗೂ ಅವರ ಮನೆಯ ಬಳಿ ಸಂರಕ್ಷಿಸಿ ಇಡಲಾಗಿದೆ. ಅದನ್ನು ನೋಡುವಾಗ ಕತ್ತಲೆಯ ನಡುವೆಯೂ ಜ್ಞಾನದ ಬೆಳಕನ್ನು ಅರಸಿದ ಬಾಲಕನ ಅಸಾಧಾರಣ ಸಂಕಲ್ಪದ ಬಗ್ಗೆ ಹೆಮ್ಮೆಯೆನಿಸುತ್ತದೆ.

ವಸ್ತುಸಂಗ್ರಹಾಲಯ
ಈ ಸ್ಮಾರಕದ ಪಕ್ಕದಲ್ಲಿ ತಮ್ಮ ಕಚೇರಿಯ ಕಾರ್ಯಗಳಿಗಾಗಿ ಸರ್ ಎಂ.ವಿ.ಯವರು 1937-38ರಲ್ಲಿ ನಿರ್ಮಿಸಿದ ಸಣ್ಣ ಬಂಗಲೆಯಿದೆ. ಇಂದು ಈ ಬಂಗಲೆಯನ್ನು ‘ವಸ್ತುಸಂಗ್ರಹಾಲಯ’ ವಾಗಿ ಮಾರ್ಪಡಿಸಲಾಗಿದೆ. ಇಲ್ಲಿ ಕಾಲಿಡುತ್ತಿದ್ದಂತೆ ನಮಗೆ ಅವರ ಸರಳ ಹಾಗೂ ಅತ್ಯಂತ ಶಿಸ್ತುಬದ್ಧ ಜೀವನಶೈಲಿಯ ಪರಿಚಯವಾಗುತ್ತದೆ. ಅವರು ಬಳಸುತ್ತಿದ್ದ ಟೈಪ್‌ರೈಟರ್, ಧರಿಸುತ್ತಿದ್ದ ಸಾಂಪ್ರದಾಯಿಕ ಮೈಸೂರು ಪೇಟ, ಕೋಟ್,ಅವರ ಉಪನಯನಕ್ಕಾಗಿ ಖರೀದಿಸಿದ್ದ ರೇಷ್ಮೆ ಮಗುಟ, ಅವರ ದಿನಚರಿ ಪುಸ್ತಕಗಳು, ಕನ್ನಡಕ, ಕೈಬರಹದ ಟಿಪ್ಪಣಿಗಳು, ಅಂದಿನ ಬ್ರಿಟಿಷ್ ಸರಕಾರ ನೀಡಿದ ಗೌರವಪತ್ರಗಳು, ಅವರಿಗೆ ಸಂದ 'ಭಾರತರತ್ನ' ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ ಕಾಣಿಕೆಗಳು ಇಲ್ಲಿ ಪ್ರದರ್ಶನಕ್ಕಿವೆ.

ಕೃಷ್ಣರಾಜಸಾಗರ ಅಣೆಕಟ್ಟು, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಇವೇ ಮೊದಲಾದ ಸಂಸ್ಥೆಗಳ ಸ್ಥಾಪನೆಯಲ್ಲಿ ಅವರ ಪಾತ್ರವನ್ನು ಬಿಂಬಿಸುವ ಅಪರೂಪದ ಛಾಯಾಚಿತ್ರಗಳು ಇಲ್ಲಿವೆ. ಇವೆಲ್ಲವೂ ಒಬ್ಬ ವ್ಯಕ್ತಿಯ ಬದುಕಿನ ಹಿಂದೆ ಅಡಗಿರುವ ಶಿಸ್ತು, ಪರಿಶ್ರಮ ಮತ್ತು ಜ್ಞಾನಾರ್ಜನೆಯ ಮಹತ್ವವನ್ನು ಮನವರಿಕೆ ಮಾಡುತ್ತವೆ. ಕೇವಲ ಎಂಜಿನಿಯರಿಂಗ್ ಕ್ಷೇತ್ರದಲ್ಲಷ್ಟೇ ಅಲ್ಲದೆ ಶಿಕ್ಷಣ, ಕೈಗಾರಿಕೆ, ಆಡಳಿತ ಮತ್ತು ಇನ್ನಿತರ ಹಲವು ಕ್ಷೇತ್ರಗಳಲ್ಲಿ ಅವರು ಬೀರಿದ ಪ್ರಭಾವ ಎಷ್ಟೊಂದು ವಿಶಾಲವಾಗಿತ್ತು ಎಂಬುದು ಇಲ್ಲಿ ತಿಳಿಯುತ್ತದೆ. ಬ್ರಿಟಿಷ್ ಆಡಳಿತಾವಧಿಯಲ್ಲೂ ದೇಶದ ಸ್ವಾವಲಂಬನೆ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅವರು ಶ್ರಮಿಸಿದ ರೀತಿ ಅವರಲ್ಲಿದ್ದ ಅಪ್ರತಿಮ ರಾಷ್ಟ್ರಪ್ರೇಮಕ್ಕೆ ಸಾಕ್ಷಿಯಾಗಿದೆ. ವೈಯಕ್ತಿಕ ಲಾಭಕ್ಕಿಂತ ದೇಶದ ಹಿತಾಸಕ್ತಿಯೇ ಮುಖ್ಯ ಎಂದು ಭಾವಿಸಿದ್ದ ಅವರ ದೇಶಭಕ್ತಿ ಇಂದಿಗೂ ನಮಗೆ ಮಾದರಿ. ಒಂದು ಸರಳ ಮನೆಯ ನೆನಪು, ಅದರೊಳಗೆ ಬೆಳೆದ ಅಸಾಮಾನ್ಯ ಪ್ರತಿಭೆಯ ಕಥೆ ಮತ್ತು ದೇಶದ ಅಭಿವೃದ್ಧಿಗಾಗಿ ಬದುಕನ್ನೇ ಅರ್ಪಿಸಿದ ಮಹನೀಯರ ಆದರ್ಶ ಮನಸ್ಸಿನಲ್ಲಿ ಉಳಿಯುತ್ತದೆ.
ಸಮಾಧಿ ಸ್ಥಳ ಮತ್ತು ಪ್ರಶಾಂತ ಉದ್ಯಾನವನ
1962 ಏಪ್ರಿಲ್ 14ರಂದು ನಿಧನರಾದ ವಿಶ್ವೇಶ್ವರಯ್ಯನವರ ಅಂತ್ಯಕ್ರಿಯೆ ಅವರು ಬಯಸಿದ್ದಂತೆ ಮುದ್ದೇನಹಳ್ಳಿಯಲ್ಲಿಯೇ ನೆರವೇರಿತು. ಮನೆಯ ಆವರಣದಿಂದ ತುಸು ದೂರದಲ್ಲಿಯೇ ಅವರ ಸಮಾಧಿ ಸ್ಥಳವಿದ್ದು, ಸುತ್ತಲೂ ಸುಂದರ ಹಾಗೂ ಪ್ರಶಾಂತವಾದ ಉದ್ಯಾನವನವನ್ನು ನಿರ್ಮಿಸಲಾಗಿದೆ. 101 ವರ್ಷಗಳ ಕಾಲ ಸುದೀರ್ಘ, ಅರ್ಥಪೂರ್ಣ ಜೀವನ ನಡೆಸಿ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಈ ಮಹಾಚೇತನದ ಸಮಾಧಿಯ ಬಳಿ ನಿಂತಾಗ ನಮ್ಮ ಮನಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತವೆ. ನೂರು ವರ್ಷಕ್ಕೂ ಮೀರಿದ ಸುದೀರ್ಘ ಬದುಕನ್ನು ಅವರು ಹೇಗೆ ಇಷ್ಟು ಸಾರ್ಥಕಗೊಳಿಸಿದರು? ವೈಯಕ್ತಿಕ ಕೀರ್ತಿಗಿಂತ ದೇಶದ ಅಭಿವೃದ್ಧಿಯನ್ನು ಮುಂದಿಟ್ಟು ಹೇಗೆ ದುಡಿದರು? ಅಪ್ಪಟ ರಾಷ್ಟ್ರಪ್ರೇಮಿಯಾಗಿ ಅಪರಿಮಿತ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವ ಅವರ ದೃಷ್ಟಿಕೋನ ಇಂದಿನ ಪೀಳಿಗೆಗೆ ಏನು ಹೇಳುತ್ತದೆ? ಇಂಥ ಪ್ರಶ್ನೆಗಳೇ ಮುದ್ದೇನಹಳ್ಳಿಯ ಪ್ರವಾಸವನ್ನು ಸಾಮಾನ್ಯ ಪ್ರವಾಸದಿಂದ ವಿಭಿನ್ನವಾಗಿಸುತ್ತವೆ.
ಇದನ್ನೂ ಓದಿ: ಟೇಕ್‌ಆಫ್ ಆದ 5 ನಿಮಿಷದಲ್ಲೇ ವಾಪಸ್: ಎಂಜಿನ್ ದೋಷದಿಂದ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್
ವಿದ್ಯಾರ್ಥಿಗಳು, ಎಂಜಿನಿಯರಿಂಗ್ ಕ್ಷೇತ್ರದವರು, ಇತಿಹಾಸಾಸಕ್ತರು ಹಾಗೂ ಪ್ರವಾಸಪ್ರಿಯರು ಎಲ್ಲರೂ ಇಲ್ಲಿಗೆ ಭೇಟಿ ನೀಡಿ ಒಬ್ಬ ಮಹಾನ್ ಭಾರತೀಯನ ಜೀವನದಿಂದ ಪ್ರೇರಣೆ ಪಡೆಯಬಹುದು. ಅಲ್ಲದೇ ಇಂಥ ಪ್ರವಾಸಗಳಿಗೆ ನಮ್ಮ ಮಕ್ಕಳನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬೇಕು. ಅದು ನಮ್ಮ ಮುಂದಿನ ತಲೆಮಾರಿಗೆ ನಾವು ನೀಡಬಹುದಾದ ಒಂದು ಅಮೂಲ್ಯ ಪಾಠವೂ ಆಗುತ್ತದೆ. ಸ್ಮಾರಕದಲ್ಲಿರುವ ಪ್ರತಿಯೊಂದು ವಸ್ತುವಿನ ಹಿಂದೆ ಇರುವ ಕಥೆಯನ್ನು ಅವರಿಗೆ ತಿಳಿಸಬೇಕು. ಒಬ್ಬ ಸಾಮಾನ್ಯ ಬಾಲಕ ತನ್ನ ಜ್ಞಾನ, ಪರಿಶ್ರಮ ಮತ್ತು ಸಂಕಲ್ಪದಿಂದ ದೇಶದ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲಬಹುದು ಎಂಬ ಸತ್ಯವನ್ನು ಅವರು ಮನಗಾಣಬೇಕು. ಅವರ ಸರಳ ಬದುಕು, ಅಸಾಧಾರಣ ಸಾಧನೆ, ಶಿಸ್ತು, ಪರಿಶ್ರಮ ಮತ್ತು ದೇಶದ ಅಭಿವೃದ್ಧಿಯ ಬಗೆಗಿನ ದೂರದೃಷ್ಟಿಯನ್ನು ಪುಸ್ತಕದ ಪುಟಗಳಲ್ಲಿ ಓದುವುದಕ್ಕಿಂತ, ಅವರು ಹುಟ್ಟಿ ಬೆಳೆದ ನೆಲದಲ್ಲಿ ನಿಂತು ಅರಿಯುವುದು ಮಕ್ಕಳ ಮನಸಿನ ಮೇಲೆ ಹೆಚ್ಚು ಗಾಢವಾದ ಪರಿಣಾಮ ಬೀರಬಹುದು. ಮುದ್ದೇನಹಳ್ಳಿಯ ಈ ಪ್ರವಾಸ ನಮ್ಮ ಮಕ್ಕಳಿಗೆ ಬದುಕಿನಲ್ಲಿ ದೊಡ್ಡ ಕನಸು ಕಾಣಲು ಮತ್ತು ಅದನ್ನು ಸಾಧಿಸಲು ಪ್ರೇರಣೆ ನೀಡುವ ಅನುಭವವಾಗಲಿ.
ಸುತ್ತಮುತ್ತಲಿನ ಆಕರ್ಷಣೆಗಳು
ಮುದ್ದೇನಹಳ್ಳಿಯ ಈ ಪ್ರೇರಣಾದಾಯಿ ಪಯಣದ ಜತೆಗೆ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಹಾಗೂ ಐತಿಹಾಸಿಕ ತಾಣಗಳನ್ನೂ ಕಣ್ತುಂಬಿಕೊಳ್ಳಬಹುದು. ಇಲ್ಲಿಗೆ ಅತ್ಯಂತ ಸಮೀಪದಲ್ಲಿರುವ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟ ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಇಲ್ಲಿನ ತಂಪಾದ ವಾತಾವರಣ, ಸುತ್ತಲಿನ ಹಸಿರು ಕಣಿವೆಗಳ ವಿಹಂಗಮ ನೋಟ ಮತ್ತು ಬೆಟ್ಟದ ಮೇಲಿರುವ ಪ್ರಾಚೀನ ಯೋಗನಂದೀಶ್ವರ ದೇವಾಲಯ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ನಂದಿ ಬೆಟ್ಟದ ತಪ್ಪಲಿನಲ್ಲಿರುವ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯವು ಭವ್ಯ ವಾಸ್ತುಶಿಲ್ಪ, ಮನಮೋಹಕ ಕಲ್ಲಿನ ಕೆತ್ತನೆಗಳು ಮತ್ತು ಐತಿಹಾಸಿಕ ಹಿನ್ನೆಲೆಯಿಂದ ಪ್ರವಾಸಿಗರ ಹಾಗೂ ಇತಿಹಾಸಾಸಕ್ತರ ಗಮನ ಸೆಳೆಯುತ್ತದೆ.
ಇನ್ನು ಪ್ರಶಾಂತ ವಾತಾವರಣ ಬಯಸುವ ಪ್ರಕೃತಿ ಪ್ರಿಯರಿಗೆ ಧೇನುಗಿರಿ (ಆವಲಬೆಟ್ಟ) ಮತ್ತೊಂದು ಸುಂದರ ತಾಣವಾಗಿದ್ದು, ಇಲ್ಲಿನ ಬೆಟ್ಟದ ತುದಿಯಿಂದ ಕಾಣುವ ಮನಮೋಹಕ ನೋಟ ಹಾಗೂ ಐತಿಹಾಸಿಕ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ಪ್ರವಾಸದ ಅನುಭವವನ್ನು ಮತ್ತಷ್ಟು ಸಾರ್ಥಕಗೊಳಿಸುತ್ತದೆ.
ಮಾಹಿತಿ ಪೆಟ್ಟಿಗೆ
ವಸ್ತುಸಂಗ್ರಹಾಲಯವು ಬೆಳಗ್ಗೆ 11:00 ರಿಂದ ಸಂಜೆ 5:00 ರವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ. ಪ್ರತಿ ಮಂಗಳವಾರ ವಸ್ತುಸಂಗ್ರಹಾಲಯಕ್ಕೆ ವಾರಾಂತ್ಯದ ರಜೆ ಇರುತ್ತದೆ. ವಸ್ತುಸಂಗ್ರಹಾಲಯದ ಒಳಗೆ ಛಾಯಾಗ್ರಹಣ ಸಂಪೂರ್ಣವಾಗಿ ನಿಷೇಧಿಸಲಾಗಿದೆ.