ಶಾಕಾಹಾರಿ ವಿಹಾರಿಗಳಿಗೊಂದು ಸಿಹಿ ಸುದ್ದಿ...
ಪ್ರವಾಸವೆಂದರೆ ಕೇವಲ ಸ್ಥಳಗಳನ್ನು ನೋಡುವುದಲ್ಲ, ಅಲ್ಲಿಯ ಸಂಸ್ಕೃತಿ, ಸಂಪ್ರದಾಯವನ್ನು ಅರಿಯುವುದು ಮತ್ತು ಅಲ್ಲಿಯ ಆಹಾರವನ್ನು ಅಷ್ಟೇ ಆಸ್ಥೆಯಿಂದ ಸವಿಯುವುದೂ ಕೂಡ ಪ್ರವಾಸದ ಬಹು ಮುಖ್ಯ ಭಾಗ. ಶಾಕಾಹಾರಿಗಳಿಗಾಗಿ ವಿಶ್ವದಾದ್ಯಂತ ರುಚಿಕರ ಮತ್ತು ಆರೋಗ್ಯಕರ ಆಹಾರ ಸಿಗುವ ಸ್ಥಳಗಳನ್ನು ಹುಡುಕುವುದು ಸವಾಲಿನ ವಿಷಯ. ಆದರೆ ಇದೀಗ ಅನೇಕ ರಾಷ್ಟ್ರಗಳು ಶಾಕಾಹಾರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ.
ಪ್ರವಾಸವೆಂದರೆ ಕೇವಲ ಸ್ಥಳಗಳನ್ನು ನೋಡುವುದಲ್ಲ, ಅಲ್ಲಿಯ ಸಂಸ್ಕೃತಿ, ಸಂಪ್ರದಾಯವನ್ನು ಅರಿಯುವುದು ಮತ್ತು ಅಲ್ಲಿಯ ಆಹಾರವನ್ನು ಅಷ್ಟೇ ಆಸ್ಥೆಯಿಂದ ಸವಿಯುವುದೂ ಕೂಡ ಪ್ರವಾಸದ ಬಹು ಮುಖ್ಯ ಭಾಗ. ಶಾಕಾಹಾರಿಗಳಿಗಾಗಿ ವಿಶ್ವದಾದ್ಯಂತ ರುಚಿಕರ ಮತ್ತು ಆರೋಗ್ಯಕರ ಆಹಾರ ಸಿಗುವ ಸ್ಥಳಗಳನ್ನು ಹುಡುಕುವುದು ಸವಾಲಿನ ವಿಷಯ. ಆದರೆ ಇದೀಗ ಅನೇಕ ರಾಷ್ಟ್ರಗಳು ಶಾಕಾಹಾರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದ್ದು, ಸಸ್ಯಾಹಾರಿಗಳಿಗೂ ವಿಶ್ವದ ಅನೇಕ ತಾಣಗಳಲ್ಲಿ ವಿವಿಧ ಬಗೆಯ ಭಕ್ಷ್ಯಗಳು ಸವಿಯಲು ದೊರೆಯುತ್ತಿವೆ.

ಭಾರತ:-
ಭಾರತದ ಸಂಸ್ಕೃತಿಯಲ್ಲಿ ಶಾಕಾಹಾರ ಪದ್ಧತಿಯು ಹಾಸುಹೊಕ್ಕಾಗಿದೆ. ಇಲ್ಲಿಯ ಪ್ರತಿ ರಾಜ್ಯವೂ ವಿಶಿಷ್ಟ ಶಾಕಾಹಾರಿ ಪದಾರ್ಥಗಳನ್ನು ತಯಾರಿಸುವಲ್ಲಿ ಹೆಸರುವಾಸಿ. ಉದಾಹರಣೆಗೆ- ರಾಜಸ್ಥಾನದ ದಾಲ್-ಬಾಟಿ-ಚೂರ್ಮಾ, ದಕ್ಷಿಣ ಭಾರತದ ಇಡ್ಲಿ-ದೋಸೆ, ಪಂಜಾಬಿನ ಸರ್ಸೋಂ ದಾ ಸಾಗ್ ಮತ್ತು ಮಕೀ ಕೀ ರೊಟ್ಟಿಯನ್ನು ಸಸ್ಯಾಹಾರಿಗಳು ಸವಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಿಸುವುದರಲ್ಲಿ ಸಂಶಯವೇ ಇಲ್ಲ.

ಥೈಲ್ಯಾಂಡ್:-
ವಿಶಿಷ್ಟ ಮಸಾಲೆ ರುಚಿ ಮತ್ತು ಬಗೆ ಬಗೆಯ ಖಾದ್ಯಗಳಿಂದಾಗಿ ಥೈಲ್ಯಾಂಡ್ ಸಸ್ಯಾಹಾರಿಗಳಿಗೆ ಅಚ್ಚು ಮೆಚ್ಚಿನ ದೇಶವೆಂದು ಹೇಳಬಹುದು. ಬ್ಯಾಂಕಾಕ್‌ನ ಬೀದಿಗಳಲ್ಲಿ ಬೀಡುಬಿಟ್ಟಿರುವ ಆಹಾರ ಮಾರುಕಟ್ಟೆಗಳಲ್ಲಿ ಮತ್ತು ಫುಕೇಟ್‌ನ ರೆಸ್ಟೋರೆಂಟ್‌ಗಳಲ್ಲಿ ಶಾಕಾಹಾರಿ ಪ್ಯಾಡ್ ಥಾಯ್ ಮತ್ತು ಗ್ರೀನ್ ಕರಿ ಸಿಗುತ್ತದೆ. ಇದನ್ನು ನೀವು ಒಮ್ಮೆ ಸವಿದರೆ, ಮತ್ತೆ ಮತ್ತೆ ತಿನ್ನಬೇಕೆನ್ನುವ ಆಸೆ ನಿಮ್ಮಲ್ಲಿ ಕುಡಿಯೊಡೆಯುವುದಂತೂ ಖಂಡಿತ. ಇತ್ತೀಚೆಗೆ ಥೈಲ್ಯಾಂಡ್ ದೇಶದ ಅನೇಕ ಹೊಟೇಲುಗಳು “ವೆಗನ್” ಮೆನುಗಳನ್ನೂ ಪ್ರಾರಂಭಿಸಿವೆ.
ಇಟಲಿ:-
ಇಟಲಿಯ ಆಹಾರ ಪದ್ಧತಿಯಲ್ಲಿ ತರಕಾರಿಗಳು ಮತ್ತು ಆಲಿವ್ ಆಯಿಲ್ ಪ್ರಮುಖ ಪಾತ್ರವಹಿಸುತ್ತವೆ. ಶಾಕಾಹಾರಿಗಳಿಗೆ ವಿವಿಧ ಪಾಸ್ತಾ, ಮರ್ಗರೀಟಾ ಪಿಜ್ಜಾ, ಮತ್ತು ಫ್ರೆಶ್ ಸಲಾಡ್‌ಗಳು ಅತ್ಯಂತ ಪ್ರಿಯ. ಇಟಲಿಯ ಸಣ್ಣ ಪಟ್ಟಣಗಳಲ್ಲಿ ಸ್ಥಳೀಯ ಅಡುಗೆಮನೆಗಳ ಅನುಭವವಂತೂ ವರ್ಣನಾತೀತ.

ಇಸ್ರೇಲ್:-
ಇಸ್ರೇಲ್‌ನ ಟೆಲ್ ಅವೀವ್ ನಗರವನ್ನು ಜಗತ್ತಿನ ಶಾಕಾಹಾರಿ ರಾಜಧಾನಿ ಎಂದು ಕರೆಯುತ್ತಾರೆ. ಹಮ್ಮಸ್, ಫಲಾಫಲ್, ಮತ್ತು ತಬೂಲೇ ಎಂಬ ಮಧ್ಯಪೂರ್ವ ಭಾಗದ ಖಾದ್ಯಗಳು ಸಸ್ಯಾಹಾರಿಗಳಿಗೆ ರಸದೌತಣ ನೀಡುತ್ತವೆ. ಇಸ್ರೇಲ್‌ನಲ್ಲಿ ಸಸ್ಯಾಹಾರವನ್ನು ಆಧರಿಸಿದ “ಫಾರ್ಮ್-ಟು-ಟೇಬಲ್” ಸಂಪ್ರದಾಯವು ಬಹು ವೇಗವಾಗಿ ಬೆಳೆಯುತ್ತಿದೆ.
ಗ್ರೀಸ್:-
ಗ್ರೀಸ್‌ನ ಮೆಡಿಟರೇನಿಯನ್ ಆಹಾರ ಪದ್ಧತಿ ತರಕಾರಿ, ಹಣ್ಣುಗಳು ಮತ್ತು ಧಾನ್ಯಗಳ ಸಮತೋಲನದ ಬಳಕೆಯಿಂದ ಆರೋಗ್ಯಕರ ಜೀವನಶೈಲಿಗೆ ಮಾದರಿಯಾಗಿದೆ. ಗ್ರೀಕ್ ಸಲಾಡ್, ಸ್ಪಾನಕೋಪಿಟಾ ಮತ್ತು ಡಾಲ್ಮಾಡ್ಸ್ ಶಾಕಾಹಾರಿಗಳಿಗೆ ಪ್ರಿಯವಾಗುವುದರಲ್ಲಿ ಸಂಶಯವಿಲ್ಲ.

ಜಪಾನ್:-
ಜಪಾನ್‌ನಲ್ಲಿ “ಶೋಜಿನ್ ರಿಯೋರಿ” ಎಂಬ ಬೌದ್ಧ ಶಾಕಾಹಾರಿ ಆಹಾರ ಪದ್ಧತಿ ಶತಮಾನಗಳಿಂದಲೂ ಪ್ರಸಿದ್ಧ. ಟೋಫು, ಸಮುದ್ರ ಸಸ್ಯಗಳು ಮತ್ತು ತರಕಾರಿಗಳಿಂದ ತಯಾರಿಸಲಾದ ಈ ಆಹಾರ ಆರೋಗ್ಯಕರವೂ ವಿಶಿಷ್ಟವಾಗಿಯೂ ಇದೆ. ಈಗ ಅನೇಕ ಜಪಾನೀಸ್ ರೆಸ್ಟೋರೆಂಟ್‌ಗಳು ಅಂತಾರಾಷ್ಟ್ರೀಯ ಶಾಕಾಹಾರಿ ಮೆನುಗಳನ್ನು ಅಳವಡಿಸಿಕೊಂಡಿವೆ.

ಕೋಸ್ಟಾರಿಕಾ:-
ಪ್ರಕೃತಿಯ ಮಧ್ಯೆ ರುಚಿ ಮತ್ತು ಶುಚಿಯಾದ ಆಹಾರವನ್ನು ಸವಿಯಲು ಕೋಸ್ಟಾರಿಕಾ ಒಂದು ಅದ್ಭುತ ಸ್ಥಳ. “ಗಲ್ಲೋ ಪಿಂಟೋ” ಎಂಬ ಬೀನ್ಸ್ ಮತ್ತು ರೈಸ್‌ನಿಂದ ತಯಾರಿಸಲಾದ ಸ್ಥಳೀಯ ಆಹಾರ ಇಲ್ಲಿ ಶಾಕಾಹಾರಿಗಳಿಗೆ ಪ್ರಿಯ. ಸುಂದರ ತಾಣಗಳಿಂದ ಪ್ರವಾಸಿಗರ ಕಣ್ಮನ ಸೆಳೆಯುವುದರೊಟ್ಟಿಗೆ ಕೋಸ್ಟಾರಿಕಾ ವಿವಿಧ ಬಗೆಯ ಸಸ್ಯಾಹಾರಿ ಭಕ್ಷ್ಯಗಳ ಮೂಲಕ ಅವರ ಹೊಟ್ಟೆಯನ್ನೂ ತಣಿಸುತ್ತದೆ.
ಇಂದು ವಿಶ್ವದ ಅನೇಕ ದೇಶಗಳು ಶಾಕಾಹಾರಿ ಪ್ರವಾಸಿಗರ ಅಗತ್ಯಗಳನ್ನು ಅರಿತು ಆಹಾರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಸ್ಯಾಹಾರಿಗಳಿಗೆ ಇದೊಂದು ಸಿಹಿ ಸುದ್ದಿಯೇ ಎನ್ನಬಹುದು.