ಬಾಂದಳದಿಂದ ಹಿಮಾಲಯ ಮನದಾಳದಲ್ಲಿ ಉಳಿಯಿತು…
ಮುಂದಿನದು 23,406 ಅಡಿ ಎತ್ತರದ ಗೌರಿ ಶಂಕರ ಪರ್ವತ ಎಂದು ತಿಳಿದಾಗ ಮನಸ್ಸು ಸೌಂದರ್ಯೋಪಾಸನೆಯಿಂದ ಆಧ್ಯಾತ್ಮಿಕತೆಯತ್ತ ಹೊರಳಿತು. ಶಿವ ಪಾರ್ವತಿಯರ ದಿವ್ಯ ಧಾಮಕ್ಕೆ ಕುಳಿತಲ್ಲೇ ಶಿರ ಬಾಗಿತು.
- ಮಂಜುನಾಥ ಡಿ. ಎಸ್.
ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದಲ್ಲಿಯೇ ಎತ್ತರವಾದ ಹಲವಾರು ಶಿಖರಗಳನ್ನು ಹೊಂದಿರುವುದು ಹಿಮಾಲಯ ಪರ್ವತ ಶ್ರೇಣಿಯ ಹೆಗ್ಗಳಿಕೆ. ಸಮುದ್ರ ಮಟ್ಟದಿಂದ 23,600 ಅಡಿಗಳಿಗಿಂತಲೂ ಎತ್ತರವಿರುವ ನೂರಕ್ಕೂ ಅಧಿಕ ಪರ್ವತಗಳು ಈ ಶ್ರೇಣಿಯಲ್ಲಿವೆ. ಹಾಗಾಗಿ, ನಾವು ಹೊರಟಿದ್ದ ನೇಪಾಳ ಪ್ರವಾಸದ ಅಂತಿಮ ಹಂತದಲ್ಲಿ ನಿಗದಿಪಡಿಸಲಾಗಿದ್ದ ಈ ಪರ್ವತ ಶ್ರೇಣಿಯ ದರ್ಶನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆ.
ಏತಿ ಸಂಸ್ಥೆಯ ಮೌಂಟನ್ ಫ್ಲೈಟ್ ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಗಿನ ಆರು ಗಂಟೆಗೆ ಹೊರಡುವುದಿತ್ತು. ಬೇಗನೆ ಎದ್ದು ವಿಮಾನ ನಿಲ್ದಾಣ ತಲುಪಿದ್ದೆ. ಪ್ರವಾಸ ಕಾಲದಲ್ಲಿ ನೋಡಲಿರುವ ಪರ್ವತಗಳ ವಿವರಗಳನ್ನೊಳಗೊಂಡ ಸಚಿತ್ರ ಕರಪತ್ರವನ್ನು ಬೋರ್ಡಿಂಗ್ ಪಾಸ್ ಜತೆ ವಿತರಿಸಿದ್ದರು. ಎಲ್ಲ ಪ್ರವಾಸಿಗರಿಗೂ ಪರ್ವತಗಳ ದರ್ಶನ ಭಾಗ್ಯ ಸಿಗಬೇಕೆಂಬ ಆಶಯದಿಂದ ಪ್ರತಿ ಯಾತ್ರಿಗೂ ಕಿಟಕಿ ಬಳಿಯ ಆಸನವನ್ನೇ ನೀಡಲಾಗಿತ್ತು.

ಸಮಯಕ್ಕೆ ಸರಿಯಾಗಿ ವಿಮಾನ ಹೊರಡುತ್ತಿದ್ದಂತೆ ಪೂರ್ವ ದಿಗಂತದಲ್ಲಿ ಉದಯಿಸುತ್ತಿದ್ದ ಹೊಂಬಣ್ಣದ ರವಿ ಗೋಚರಿಸಿದನು. ಮುಂದೆ ಅನಾವರಣಗೊಳ್ಳಲಿರುವ ಅದ್ಭುತ ಅನುಭವಕ್ಕೆ ಇದು ಮುನ್ನುಡಿಯೆನಿಸಿತು. ಗಗನಮುಖಿಯಾದ ಎಟಿಆರ್ 72 ವಿಮಾನ ಶೀಘ್ರದಲ್ಲಿ ಪರ್ವತಗಳ ಸಾಲಿನ ಬಳಿ ತಲುಪಿತ್ತು. ಮೊದಲಿಗಿದ್ದ ಪರ್ವತ ಲ್ಯಾಂಗ್ಟ್ಯಾಂಗ್ ಲಿರುಂಗ್ ಎಂದು ಗಗನಸಖಿ ತಿಳಿಸಿದರು. ಇದರ ಎತ್ತರ 23,734 ಅಡಿ ಎಂದು ಕರಪತ್ರದಿಂದ ತಿಳಿಯಿತು. ವಿಮಾನ ಮುಂದೆ ಸಾಗಿದಂತೆ ಶೀಷ ಪೆಂಗ್ಮ (26,289 ಅಡಿ), ಡೋರ್ಜೆ ಲಕ್ಪ (22,854 ಅಡಿ), ಪೂರ್ಬಿ ಘ್ಯಾಚು (21,775 ಅಡಿ), ಛೋಬ ಭಮರೆ (19,587 ಅಡಿ) ಶಿಖರಗಳ ದರ್ಶನವಾಯಿತು.

ಮುಂದಿನದು 23,406 ಅಡಿ ಎತ್ತರದ ಗೌರಿ ಶಂಕರ ಪರ್ವತ ಎಂದು ತಿಳಿದಾಗ ಮನಸ್ಸು ಸೌಂದರ್ಯೋಪಾಸನೆಯಿಂದ ಆಧ್ಯಾತ್ಮಿಕತೆಯತ್ತ ಹೊರಳಿತು. ಶಿವ ಪಾರ್ವತಿಯರ ದಿವ್ಯ ಧಾಮಕ್ಕೆ ಕುಳಿತಲ್ಲೇ ಶಿರ ಬಾಗಿತು.
ಗೌರಿ ಶಂಕರ ಶೃಂಗಕ್ಕೆ ವಿದಾಯ ಹೇಳಿ ಮುಂದೆ ಚೋ ಓಯು (26,906 ಅಡಿ), ಗ್ಯಾಚುಂಗ್ಕಾಂಗ್ (26,089 ಅಡಿ) ಸೇರಿದಂತೆ ಹಲವು ಪರ್ವತಗಳನ್ನು ನೋಡಿದ್ದಾಯಿತು. ಜಗತ್ಪ್ರಸಿದ್ಧ ಸಾಗರಮಾತಾ ಅಥವಾ ಮೌಂಟ್ ಎವರೆಸ್ಟ್ (29,031 ಅಡಿ) ಕಾಣಿಸುತ್ತಿದ್ದಂತೆ ಪ್ರವಾಸಿಗರು ಸಂತೋಷವೂ ಹೆಚ್ಚಾಗಿತ್ತು. ವಿಶ್ವವಿಖ್ಯಾತ ಪರ್ವತವನ್ನು ಕಣ್ಮನಗಳಲ್ಲಿ ತುಂಬಿಕೊಂಡರು. ಫೋಟೋ, ವೀಡಿಯೋಗಳಲ್ಲಿ ಅದನ್ನು ಸೆರೆಹಿಡಿದರು. ಇನ್ನೊಂದು ಬದಿಯಲ್ಲಿ ಕುಳಿತಿದ್ದ ಪ್ರವಾಸಿಗರು ತಮಗೆಲ್ಲಿ ಈ ಭಾಗ್ಯ ತಪ್ಪಿಹೋಗುವುದೋ ಎಂದು ತವಕಿಸಿದರು. ತಮ್ಮ ಆಸನಗಳಿಂದ ಎದ್ದು ಬಂದು, ಎದುರು ಭಾಗದ ಕಿಟಕಿಯಲ್ಲಿ ಇಣುಕಿಣುಕಿ ನೋಡುತ್ತಿದ್ದರು.

ಲೋಟ್ಸೆ (27,940 ಅಡಿ) ಮತ್ತು ಮಕಲು (27,766 ಅಡಿ) ಪರ್ವತಗಳ ದರ್ಶನ ಮುಗಿಯುತ್ತಿದ್ದಂತೆ ವಿಮಾನ ನಿಧಾನವಾಗಿ ತಿರುಗುತ್ತಾ ದಿಕ್ಕು ಬದಲಿಸಿತು. ಇದೀಗ ಪರ್ವತ ಶ್ರೇಣಿಯನ್ನು ವೀಕ್ಷಿಸುವ ಸರದಿ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಪ್ರವಾಸಿಗರದಾಗಿತ್ತು.
ನಾನು ಈ ತನಕ ಕಂಡ ದೃಶ್ಯ ಬದಲಾಗಿತ್ತು. ಎತ್ತರದ ಪರ್ವತಗಳು ಮರೆಯಾಗಿ ಆಳವಾದ ಕಣಿವೆಗಳು ಗೋಚರಿಸಿದವು. ಅತ್ತ ಹಿಮದ ಬಿಳಿ ಹರಡಿದ್ದರೆ ಇತ್ತ ಹಸಿರ ಸಿರಿ ಪಸರಿಸಿತ್ತು. ನೋಡ ನೋಡುತ್ತಾ ಮನ ಅಂತರ್ಮುಖಿಯಾಯಿತು. ಪ್ರಕೃತಿಯ ಅಗಾಧತೆ, ವೈವಿಧ್ಯತೆ, ನಿಗೂಢತೆಗಳ ಕುರಿತು ಚಿಂತನೆಗೆ ತೊಡಗಿತು. ನಾನು ಮತ್ತಷ್ಟು ಕುಬ್ಜನಾದಂತೆ ಭಾಸವಾಯಿತು.
ಸುಮಾರು ಇನ್ನೂರು ಮೈಲಿ ಉದ್ದ ಹರಡಿದ್ದ ಶ್ರೇಣಿಯಲ್ಲಿನ ಇಪ್ಪತ್ತು ಪರ್ವತ ಶಿಖರಗಳನ್ನು ಅರ್ಧ ತಾಸಿನಲ್ಲಿ ವೀಕ್ಷಿಸಿದ ಅನುಭವ, ಅನನ್ಯ ಹಾಗೂ ಅಪೂರ್ವವೆನಿಸಿತು.
ಈ ಯಾನದ ನೆನಪಿಗಾಗಿ ಪ್ರತಿ ಪ್ರವಾಸಿಗೂ ಪ್ರಮಾಣ ಪತ್ರವನ್ನು ನೀಡಲಾಯಿತು. ಇದಕ್ಕೆ ಫ್ಲೈಟ್ ಕ್ಯಾಪ್ಟನ್ ರೇಣು ಕತ್ಯತ್ ಸಹಿಯೂ ಇತ್ತು. ಪ್ರವಾಸಿಯ ಹೆಸರನ್ನೂ ಬರೆದುಕೊಟ್ಟಿದ್ದರೆ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು ಅನ್ನಿಸಿತು.