ಕಾರ್ಮಿಕರ ಥರ ಬಂದು ಸಾವಿರ ಕೋಟಿ ಎಗರಿಸಿದರು!
ಲೂವ್ರ್ ಅರಮನೆಯಲ್ಲಿನ ಕಿಟಕಿಯನ್ನು ಆಂಗಲ್ ಗ್ರೈಂಡರ್ ಮತ್ತು ವಿವಿಧ ಅತ್ಯಾಧುನಿಕ ಟೂಲ್‌ಗಳನ್ನು ಬಳಸಿ ತೆರೆದು, ಅಪೊಲೋ ಗ್ಯಾಲರಿ ಒಳಗೆ ಹೋದರು. ಯಾವುದೇ ಹಳೆಯ ಟೂಲ್‌ಗಳಿಲ್ಲ. ಎಲ್ಲ ಅತ್ಯಾಧುನಿಕ ಟೂಲ್‌ಗಳೇ. ಗದ್ದಲ ಸದ್ದುಗಳಿಲ್ಲದೇ ಸಾವಿರಾರು ಕೋಟಿ ಬೆಲೆಯ ಆಭರಣಗಳು ಕಳ್ಳರ ಪಾಲಿಗೆ.
- ವಿನಯ್ ಖಾನ್
ನಾವು ಎಷ್ಟೊಂದೆಲ್ಲ ಕಳ್ಳತನದ ಸಿನಿಮಾಗಳನ್ನು ನೋಡಿದ್ದೇವೆ, ಅದರಲ್ಲಿ ಫೈಟ್ ಇರುತ್ತೆ, ಲವ್ ಇರುತ್ತೆ, ಚೇಸ್ ಇರುತ್ತೆ, ನೋಡುತ್ತಾ ಹೋದಹಾಗೆ ಹಲವಾರು ಮನರಂಜನೆ ಇರುತ್ತೆ. ದಾರಿ ತಪ್ಪಿದ ಮಗ ಸಿನಿಮಾದಲ್ಲಿ ರಾಜಕುಮಾರ್ ಅವರು ಕಳ್ಳತನ ಮಾಡುವ ಮುನ್ನ ಹಾಡು ಹಾಡಿ, ಎಲ್ಲರನ್ನೂ ಮೋಡಿ ಮಾಡಿ ಕೊನೆಗೆ ಒಬ್ಬರ ಮನೆಯಲ್ಲಿನ ಒಡವೆಗಳನ್ನು ಕಳವು ಮಾಡುತ್ತಾರೆ. ಹಾಗೆ, ಮನಿ ಹೀಸ್ಟ್ ಸೀರೀಸ್‌ನಲ್ಲೂ ಅಷ್ಟೇ, ಬ್ಯಾಂಕ್‌ಗೆ ಹೋಗಿ ಅಲ್ಲಿರುವ ಜನರನ್ನು ಬಳಸಿ, ಹೊಸ ನೋಟ್ ಗಳನ್ನು ಪ್ರಿಂಟ್ ಮಾಡಿ, ಹಾಡಹಗಲೇ ಓಡಿಹೋಗುತ್ತಾರೆ. ಇದೇ ಮನೀ ಹೀಸ್ಟ್‌ನಲ್ಲಿ ಹೊರಗಡೆ ಪೊಲೀಸರು ಗನ್ ಹಿಡಿದುಕೊಂಡು ಶೂಟ್ ಮಾಡಲು ನಿಂತಿರುತ್ತಾರೆ. ಅಂಥ ಕಷ್ಟದ ಸಮಯದಲ್ಲಿ ಇವರು ಕಳ್ಳತನ ಮಾಡುತ್ತಿರುತ್ತಾರೆ. ಧೂಮ್ ಸಿನಿಮಾದಲ್ಲಿ ಬಿಳಿಬಣ್ಣದ ಕಲಾಕೃತಿಯ ರೀತಿ ಹೃತಿಕ್ ರೋಷನ್ ಒಂದು ಮ್ಯೂಸಿಯಂನಲ್ಲಿ ನಿಂತು ವಿಶೇಷ ರೋಬೋಟ್ ಸಹಾಯದಿಂದ ಅಲ್ಲಿನ ವಜ್ರವನ್ನು ಕಳವು ಮಾಡುತ್ತಾನೆ. ಅದರ ಜತೆಗೆ ಬ್ರಿಟಿಷರೂ ಭಾರತವನ್ನು ಲೂಟಿ ಮಾಡಿ, ಕೊನೆಗೆ ಭಾರತೀಯ ಶಬ್ದವಾಗಿದ್ದ ಲೂಟ್ ನ್ನು ತಮ್ಮ ಭಾಷೆಗೆ ಸೇರಿಸಿಕೊಂಡು, ತಮ್ಮ ಕಸುಬನ್ನಾಗಿಯೂ ಮಾಡಿಕೊಂಡರು. ಇರಲಿ!
ಇಲ್ಲೊಂದು ಕಳ್ಳತನ ನಡೀತು, ಇದು ಸಾಧಾರಣ ಪಿಕ್‌ಪಾಕೆಟ್ ಅಥವಾ ಅಂಗಡಿಯ ಶಟರ್ ಕಿತ್ತು ಕೈಗೆ ಸಿಕ್ಕಷ್ಟು ಹಣ ದೋಚಿದ್ದಲ್ಲ. ಬದಲಿಗೆ ವಿಶ್ವ ವಿಖ್ಯಾತ ಮ್ಯೂಸಿಯಂನಿಂದ ಅನರ್ಘ್ಯ ವಜ್ರ, ವೈಢೂರ್ಯ, ಆಭರಣಗಳನ್ನು ನಿಮಿಷಗಳಲ್ಲೇ ಕಳವು ಮಾಡಿದ್ದು. ಇವರು ಎಷ್ಟು ಫಾಸ್ಟ್ ಆಗಿ ಕಳ್ಳತನ ಮಾಡಿದರೆಂದರೆ, ಯಾರಾದರೂ ಒಬ್ಬ ಅಲ್ಲಿ ಸಿಗರೇಟ್ ಹಚ್ಚಿ ಅದನ್ನು ನೋಡುತ್ತ ನಿಂತಿದ್ದರೆ, ಅವನ ಸಿಗರೇಟ್ ಖಾಲಿ ಆಗುವ ಮೊದಲೇ ಇವರು ಜಾಗ ಖಾಲಿ ಮಾಡಿರುತ್ತಿದ್ದರು.
ಇದೆಲ್ಲ ಆಗಿದ್ದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ. ಲೂವ್ರ್ ಮ್ಯೂಸಿಯಂನಲ್ಲಿ.
ಮೊದಲು ಇದು ಲೂವ್ರ್ ಅರಮನೆಯಾಗಿತ್ತು, ಈಗ ಮ್ಯೂಸಿಯಂ. ಇದನ್ನು ಮೊದಲಿಗೆ ಅಂದ್ರೆ 12ನೇ ಶತಮಾನದಲ್ಲೇ ಕೋಟೆಯಾಗಿ ಕಟ್ಟಿಸಿದ್ದರಂತೆ. ಅಲ್ಲಿನ ರಾಜಮನೆತನದವರ ಆವಾಸ ಸ್ಥಾನ ಆಗಿತ್ತಂತೆ. ಫ್ರೆಂಚ್ ರೆವಲ್ಯೂಷನ್‌ನ ನಂತರ ಅಂದರೆ, 1793ರಿಂದ ಸಾರ್ವಜನಿಕರಿಗಾಗಿ ಮ್ಯೂಸಿಯಂ ಆಗಿ ಮಾಡಿದರು. ಇಲ್ಲಿ ಮೊನಾ ಲೀಸಾ, ವೀನಸ್ ಡಿ ಮೆಲೋ, ವಿಂಗ್ಡ್ ವಿಕ್ಟರಿ ಆಫ್ ಸಾಮೋಥ್ರೇಸ್ ನಂತ ಕಲೆಕ್ಷನ್ ಸೇರಿದಂತೆ, ಹಲವಾರು ದೇಶಗಳ, ಹಲವಾರು ಸಂಸ್ಕೃತಿಯ ಹಲವಾರು ಆಂಟಿಕ್ ಪೀಸ್‌ಗಳು ಇದ್ದವು. ಇದು ವಿಶ್ವದ ಪ್ರಖ್ಯಾತ ಮತ್ತು ಅತೀ ಹೆಚ್ಚು ವೀಕ್ಷಕರನ್ನು ಬರಮಾಡಿಕೊಂಡ ಟಾಪ್ ಮ್ಯೂಸಿಯಂ!
ಈ ಕಳ್ಳತನ ಆಗಿದ್ದು ಹೇಗೆ ಗೊತ್ತಾ?
ಆಗಾಗಲೇ ಸೂರ್ಯ ಹುಟ್ಟಿದ್ದ ಬೆಳಗ್ಗೆ 9.30ರ ಸಮಯ, ಲೂವ್ರ್ ಮ್ಯೂಸಿಯಂನ ಮುಂದೆ ವೀಕ್ಷಕರು ಜಮಾಯಿಸಿದ್ದರು. ಲೂವ್ರ್ ಮ್ಯೂಸಿಯಂನ ಸೀನ್ ನದಿಯ ಕಡೆ ಮುಖ ಮಾಡಿದ್ದ ರೋಡ್‌ನಲ್ಲಿ ಒಂದು ಕ್ರೇನ್ ಬರುತ್ತದೆ. ಅದರ ಜತೆಗೆ ಕಾರ್ಮಿಕರ ವೇಷದಲ್ಲಿ 4 ಜನರೂ ಬರುತ್ತಾರೆ. ಅವರೆಲ್ಲ ಕಾರ್ಮಿಕರ ಥರದ ಬಿಳಿ ಬಣ್ಣದ ರೇನ್‌ಕೋಟ್ ರೀತಿಯಲ್ಲಿ ಫುಲ್ ಜಾಕೆಟ್‌ಗಳನ್ನು ಹಾಕಿದ್ದರು. ಹಾಡಹಗಲೇ, ಎಲ್ಲರ ಕಣ್ಣಮುಂದೆ ಮ್ಯೂಸಿಯಂನಲ್ಲಿ ಹೋಗ್ತಾರೆ, ಆರಾಮವಾಗಿ ಅಲ್ಲಿನ ಆಭರಣಗಳನ್ನು ಕದೀತಾರೆ. ಬೈಕ್‌ಗಳ ಮೇಲೆ ಕೂತ್ಕೊಂಡು ವಾಪಸ್ ಹೋಗ್ತಾರೆ.

ಅವರೆಲ್ಲ ಎಷ್ಟು ಸ್ಮಾರ್ಟ್ ಗೊತ್ತಾ?
ಮೊದಲೇ ಹೇಳಿದ ಹಾಗೆ ಬಲಾಕ್ಲಾವಾ (ಮುಖ ಗೊತ್ತಾಗದ ಹಾಗೆ ಮುಚ್ಚಿಕೊಳ್ಳುವ ವಸ್ತು) ದಲ್ಲಿ ಬಂದಿದ್ದ ಅವರು ಏಣಿಯ ಗಾಡಿಯನ್ನು ಬಳಸಿ, ಅಲ್ಲಿನ ಬಾಲ್ಕನಿಗೆ ಹೋಗಿ, ಅಲ್ಲಿನ ಕಿಟಕಿಯನ್ನು ಆಂಗಲ್ ಗ್ರೈಂಡರ್ ಮತ್ತು ವಿವಿಧ ಅತ್ಯಾಧುನಿಕ ಟೂಲ್‌ಗಳನ್ನು ಬಳಸಿ, ಲೂವ್ರ್ ಅರಮನೆಯಲ್ಲಿನ ಅಪೊಲೋ ಗ್ಯಾಲರಿ ಒಳಗೆ ಹೋದರು. ಯಾವುದೇ ಹಳೆಯ ಟೂಲ್‌ಗಳಿಲ್ಲ. ಎಲ್ಲ ಅತ್ಯಾಧುನಿಕ ಟೂಲ್‌ಗಳೇ. ಗದ್ದಲ ಸದ್ದುಗಳಿಲ್ಲದೇ ಸಾವಿರಾರು ಕೋಟಿ ಬೆಲೆಯ ಆಭರಣಗಳು ಕಳ್ಳರ ಪಾಲಿಗೆ.
ಕಳ್ಳತನ ಆದ ಮೇಲೆ ಏನಾಯ್ತು?
ಕಳ್ಳತನ ಆದತಕ್ಷಣ ಮ್ಯೂಸಿಯಂನ ಅಲಾರ್ಮ್, ಸೈರನ್‌ಗಳೆಲ್ಲ ಕೂಗೋಕೆ ಶುರುಮಾಡಿದವು. ಆಗ ಈ ಕಳ್ಳರು ಹತ್ತಿದ ಏಣಿಯನ್ನು ಆರಾಮವಾಗಿ ಇಳಿದು ಅಲ್ಲಿಂದ ಬೈಕ್ ಹತ್ತಿ ಓಡಿಹೋದರು. ತಾವು ತಂದಿದ್ದ ಕೆಲವು ಟೂಲ್‌ಗಳನ್ನೂ ಅಲ್ಲೇ ಬಿಟ್ಟರಂತೆ. ಈ ಗ್ಯಾಂಗ್ ತಾವು ಏಣಿ ಹತ್ತಲು ತಂದಿದ್ದ ಗಾಡಿಗೆ ಬೆಂಕಿ ಹಚ್ಚಲೂ ಪ್ರಯತ್ನ ಮಾಡಿದರು ಆದರೆ, ಮ್ಯೂಸಿಯಂನ ಸೆಕ್ಯೂರಿಟಿ ಗಾರ್ಡ್‌ಗಳು ಬಂದಿದ್ದರಿಂದ ಇವರು ಬೈಕ್ ಹತ್ತಿ ಓಡಿ ಹೋದರು.
ಮಾಡಿದ್ಯಾರು?
ಈ ಕಳ್ಳತನದ ರೂವಾರಿಗಳನ್ನು ಪತ್ತೆ ಹಚ್ಚಲು 60 ತನಿಖಾಧಿಕಾರಿಗಳ ತಂಡವನ್ನು ಸಿದ್ಧ ಪಡಿಸಿದ್ದಾರೆ. ಈ ಕಳ್ಳತನವನ್ನು ಯಾವುದೋ ಭಾರೀ ಪ್ರೊಫೆಷನಲ್ ಟೀಂ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಹಾಗೆ ಇಬ್ಬರು ಶಂಕಿತರನ್ನೂ ಬಂಧಿಸಿದ್ದಾರೆ. ಇನ್ನೂ ಎಷ್ಟು ಜನ ಸಿಗ್ತಾರೆ. ಏನೇನೆಲ್ಲ ಆಗಿದೆ, ಎಂಬುದು ಗೊತ್ತಾಗಬೇಕಿದೆ.

ಮೊದಲೂ ಇಂಥದ್ದೆಲ್ಲ ಆಗಿತ್ತು
ಈ ಕಳ್ಳತನವಾದ ಮೇಲೆ ಮ್ಯೂಸಿಯಂಗಳ ಸೆಕ್ಯೂರಿಟಿಗಳ ಬಗ್ಗೆ ಜನರು ಪ್ರಶ್ನೆ ಮಾಡಲು ಶುರುಮಾಡಿದ್ದಾರೆ. ಬ್ಯಾಂಕ್‌ಗಳಿಗಿಂತಲೂ ಮ್ಯೂಸಿಯಂಗಳಲ್ಲಿ ಸೆಕ್ಯೂರಿಟಿ ಕಡಿಮೆ. ಆದ್ದರಿಂದ ಕಳ್ಳರೆಲ್ಲ ಮ್ಯೂಸಿಯಂಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಹೋದ ತಿಂಗಳು, ಪ್ಯಾರಿಸ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ 7 ಲಕ್ಷ ಡಾಲರ್ ಮೌಲ್ಯದ ಬಂಗಾರವನ್ನು ಕದ್ದಿದ್ದರು. ಸೆಂಟ್ರಲ್ ಸಿಟಿ ಆಫ್ ಲಿಮೊಗಸ್‌ನಿಂದ 2 ಪಾತ್ರೆಗಳು ಮತ್ತು ಹೂಜಿಯನ್ನೂ ಕದ್ದಿದ್ದರು. ಇವೆರೆಡೂ ಸೇರಿದರೆ ಹೆಚ್ಚೂಕಡಿಮೆ 7.6 ಮಿಲಿಯನ್ ಡಾಲರ್‌ನಷ್ಟು ನಷ್ಟವಾಗಿತ್ತು.
ಈ ಲೂವ್ರ್ ಮ್ಯೂಸಿಯಂ ಕಳ್ಳತನಕ್ಕೆ ಆಗಾಗ ನಲುಗಿ ಹೋಗಿದೆ. 1911ರಲ್ಲಿ ಇಟಲಿಯ ಒಬ್ಬ ಕೆಲಸಗಾರ ಇಲ್ಲಿನ ಮೊನಾ ಲೀಸಾ ಪೇಂಟಿಂಗ್‌ನನ್ನೇ ಎಗಿರಿಸಿಬಿಟ್ಟಿದ್ದ. ವಿನ್‌ಸೆಂಜೋ ಪೆರುಗಿಯಾ ಹೆಸರಿನ ಈ ವ್ಯಕ್ತಿ, ಮ್ಯೂಸಿಯಂನಲ್ಲಿ ಕೆಲಸಗಾರನ ಬಟ್ಟೆಹಾಕಿಕೊಂಡು, ಮೊನಾಲೀಸಾದ ಕಡೆ ಯಾರೂ ನೋಡದೇ ಇರುವಂಥ ಸಮಯದಲ್ಲಿ ಆ ಚಿತ್ರವನ್ನು ಕದ್ದು ಓಡಿಹೋಗಿದ್ದ. ಆಮೇಲೆ ಪೊಲೀಸರು ಅವನನು ಸೆರೆ ಹಿಡಿದರು.
1998ರಲ್ಲಿ ಸಂಡೇ ಹೀಸ್ಟ್ ಹೆಸರಲ್ಲಿ ಒಂದು ಫೇಮಸ್ ಕಳ್ಳತನ ಇದೇ ಲೂವ್ರ್ ನಲ್ಲಿ ಆಗಿತ್ತು. ಕ್ಯಾಮಿಲ್ಲೇ ಚೊರೋಟ್‌ರ ಒಂದು ಪೇಂಟಿಂಗ್ ಇಲ್ಲಿಂದ ಕದ್ದ ನಂತರ ಅದು ಎಲ್ಲಿದೆ? ಹೇಗಿದೆ? ಯಾರು ಕದ್ದದ್ದು ಎಂದು ಇನ್ನೂವರೆಗೂ ಪತ್ತೆಯಾಗಲಿಲ್ಲ!
ಭಾರತ, ಕರ್ನಾಟಕದಲ್ಲೂ ಹಲವಾರು ಮ್ಯೂಸಿಯಂಗಳಿವೆ. ಕೆಲವೊಂದಿಷ್ಟರಲ್ಲಿ ಭಾರೀ ಬೆಲೆಬಾಳುವ ವಸ್ತುಗಳಿವೆ. ಅದಕ್ಕೆಲ್ಲ ಮತ್ತಷ್ಟು ಸುರಕ್ಷತೆಯನ್ನು ನೀಡಲೇಬೇಕು. ಇಲ್ಲವಾದಲ್ಲೊ, ಇಂಥ ಘಟನೆಗಳಿಂದ ಪ್ರೇರಿತರಾಗಿ ಯಾರಾದರೂ ಕಳ್ಳತನಕ್ಕೆ ಇಳಿಯಬಹುದು. ಲೂವ್ರ್ ಹೀಸ್ಟ್‌ನಿಂದ ಎಲ್ಲ ಸರಕಾರ, ಪೊಲೀಸ್ ಇಲಾಖೆಗಳು ಕಲಿಯುವುದು ಬಹಳಷ್ಟಿದೆ.

ಕದ್ದಿದ್ದೇನೇನು?
*ಮೊದಲನೇ ನೆಪೋಲಿಯನ್ ತನ್ನ ಎರಡನೇ ಹೆಂಡತಿ ಮೇರೀ ಲೂಯಿಗೆ ಉಡುಗೊರೆ ಕೊಟ್ಟ ಒಂದು ನೆಕ್‌ಲೇಸ್ ಮತ್ತು ಕಿವಿ ಓಲೆ.
*ನೆಪೋಲಿಯನ್‌ನ ಮೂರನೇ ಹೆಂಡತಿ ಯೂಜಿನೀಯ ವಜ್ರದ ಆಭರಣ, ಬ್ರೂಚ್(ಪದಕದ ರೀತಿಯಲ್ಲಿರುವ ಆಭರಣ). ವಜ್ರದ ಆಭರಣವೂ 2000ಕ್ಕೂ ಹೆಚ್ಚು ವಜ್ರಗಳಿಂದ ಸಿಂಗರಿಸಲ್ಪಟ್ಟಿದ್ದು.
*ಫ್ರಾನ್ಸ್‌ನ ಕೊನೆಯ ರಾಣಿ ಮೇರಿ ಅಮಿಲೀ ಅವರ ವಜ್ರದ ಕಿರೀಟ (ಮಿಸ್ ಇಂಡಿಯಾ ಅಥವಾ ಮಿಸ್ ಯೂನಿವರ್ಸ್ ಗೆದ್ದವರಿಗೆ ಕೊಡ್ತಾರಲ್ಲ ಅಂಥದ್ದು), ನೆಕ್‌ಲೇಸ್, ನೀಲಮಣಿಯ ಕಿವಿ ಓಲೆ. ಇವರ ನೆಕ್‌ಲೇಸ್‌ನಲ್ಲಿ 631 ವಜ್ರ ಮತ್ತು 8 ನೀಲಮಣಿ ಇದ್ದವು.
ಬಿಟ್ಟಿದ್ದೇನು?
ಈ ಕಳ್ಳರು ಯುಜಿನೀ 1,354 ವಜ್ರದ ತುಣುಕು, 56 ಎಮರಾಲ್ಡ್‌ಗಳು ಇದ್ದ ಕಿರೀಟವನ್ನು ಕದ್ದಿಲ್ಲ. ಮ್ಯೂಸಿಯಂನವರ ಪ್ರಕಾರ ಇದು ಭಾರೀ ಬೆಲೆ ಬಾಳುವಂಥದ್ದು. ಇವರು 60 ಮಿಲಿಯನ್ ಡಾಲರ್ ಬೆಲೆಬಾಳುವ ರಿಜೆಂಟ್ ಡೈಮಂಡ್‌ನ್ನೂ ಬಿಟ್ಟು ಹೋಗಿದ್ದಾರೆ.

ಕಳ್ಳತನದ ಮೇಲೂ ಮಾರ್ಕೆಟಿಂಗ್
ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ ಜನ ಎಲ್ಲವನ್ನೂ ಕಂಟೆಂಟ್ ಆಗಿ ತೊಗೋತಾರೆ. ಅದರಲ್ಲಿ ಇದೂ ಒಂದು, ಲೂವ್ರ್ ಹೀಸ್ಟ್ ಜಾಸ್ತಿ ಜನರಿಗೆ ಗೊತ್ತಾಗಿದ್ದು ಮೀಮ್‌ನಿಂದಲೇ. ಈ ಕೆಲಸಕ್ಕೆ ಬಳಸಿದ್ದ ಏಣಿ ಇರುವ ಗಾಡಿ ಕಂಪನಿಯವರು “ನಿಮಗೆ ಆತುರವಿದ್ದರೆʼ ಎಂಬ ಹೆಡ್‌ಲೈನ್‌ನಲ್ಲಿ ಈ ರಾಬರಿಯ ಚಿತ್ರ ಹಾಕಿಕೊಂಡರೆ, ಫೆವಿಕಲ್‌ನವರು ಕಳ್ಳತನವಾದ ಸರಗಳು ಇರುವ ಚಿತ್ರದ ಪಕ್ಕ ʼಫೆವಿಕಾಲ್ ಹಚ್ಚಿದ್ದರೆ, ಇದಾಗುತ್ತಿರಲಿಲ್ಲʼ ಎಂಬ ಸಂದೇಶವನ್ನು ಕೊಟ್ಟರು. ಐಕಿಯಾದವರೂ ಇದರ ಹೆಸರಲ್ಲೇ ಮೀಮ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇನ್ನೂ ಹಲವಾರು ಕಂಪನಿಯವರು ತಮಗೆ ಬೇಕಾದ ರೀತಿಯಲ್ಲಿ ಈ ಕಳ್ಳತನವನ್ನು ಬಳಸಿದರು. ಎಲದಕ್ಕಿಂತ ಹೆಚ್ಚಾಗಿ ಸೌಂಡ್ ಮಾಡಿದ್ದು ಯಾವುದು ಎಂದರೆ, ಈ ಕಳ್ಳತನದ ಪತ್ತೆದಾರಿಗೆ ಬಂದ ಡಿಟೆಕ್ಟಿವ್‌ದು. ಹೆಚ್ಚೂಕಡಿಮೆ ಮೊದಲ ಬಾರಿಗೆ ಒಬ್ಬ ಸರಿಯಾದ ಡಿಟೆಕ್ಟಿವ್ ಥರ ಬಟ್ಟೆ ಹಾಕಿದ್ದು ಎಂಬ ಮೀಮ್‌ಗಳು ಹೆಚ್ಚುಕಡಿಮೆ ಎಲ್ಲರ ಇನ್‌ಸ್ಟಾಗ್ರಾಂನಲ್ಲಿ ಕಂಡಿರುತ್ತದೆ.