ಕಬಿನಿ ನದಿಯ ಸುತ್ತಮತ್ತಲೂ…
ಈ ಸಫಾರಿಯಲ್ಲಿ, ಪ್ರವಾಸಿಗರಿಗೆ ಹುಲಿ, ಆನೆ, ಜಿಂಕೆ, ಕಾಡೆಮ್ಮೆ ಹಾಗೂ ನಾನಾ ಪ್ರಭೇದದ ಪಕ್ಷಿಗಳನ್ನು ನಿಜವಾದ ಅರಣ್ಯ ಪರಿಸರದಲ್ಲಿ ವೀಕ್ಷಿಸುವ ಅವಕಾಶ ದೊರೆಯುತ್ತದೆ. ಕಬಿನಿ ಬ್ಯಾಕ್‌ವಾಟರ್‌ನ ಸುತ್ತಮುತ್ತ ಬೋಟ್ ಸಫಾರಿಯೂ ಅತ್ಯಂತ ಜನಪ್ರಿಯ. ನೀರಿಗಾಗಿ ನಡಿ ತಟಕ್ಕೆ ಬರುವ ಕಾಡುಪ್ರಾಣಿಗಳ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಬೆಳಕಿನ ಹಬ್ಬದಂತಿರುತ್ತವೆ.
- ಸುಪ್ರೀತಾ ಕುಕ್ಕೆಮನೆ
ಕರ್ನಾಟಕದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಕಬಿನಿ ಮತ್ತು ಮೈಸೂರು, ಪ್ರಕೃತಿ ಸೌಂದರ್ಯ ಹಾಗೂ ಸಾಂಸ್ಕೃತಿಕ ವೈಭವದ ಅಪೂರ್ವ ಮಿಶ್ರಣವನ್ನು ಪ್ರತಿನಿಧಿಸುವ ಪ್ರವಾಸಿ ತಾಣಗಳಾಗಿವೆ. ಕಬಿನಿಯ ನೈಸರ್ಗಿಕ ವನ್ಯಜೀವಿ ಪ್ರಪಂಚ ಹಾಗೂ ಮೈಸೂರಿನ ಶಿಲ್ಪಕಲ ನಗರಿಯ ಸೊಬಗು, ಪ್ರವಾಸಿಗರ ಹೃದಯ ಸೆಳೆಯುವ ಎರಡು ವಿಭಿನ್ನ ಕಿರಣಗಳಂತೆ ಹೊಳೆಯುತ್ತವೆ.
ನಾಗರಹೊಳೆಯಲ್ಲಿ ನಡೆದಾಡಿ ಕಬಿನಿಯ ಕಬಂದದಲ್ಲಿ ತೇಲಾಡಿ
ಕಬಿನಿ ಅರಣ್ಯವು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಇದೆ. ನದಿ ತೀರದ ಹಸಿರು ಸೊಬಗು, ದಟ್ಟ ಕಾಡು, ಹಾಗೂ ಪಕ್ಷಿ ವೀಕ್ಷಣೆಯ ಬೆಳಗಿನ ದೃಶ್ಯಗಳು ಇಲ್ಲಿ ಧ್ಯಾನಮಗ್ನತೆಯಂತಿವೆ. ಕಬಿನಿಯ ಪ್ರಮುಖ ಆಕರ್ಷಣೆಯೆಂದರೆ ನಾಗರಹೊಳೆ ಸಫಾರಿ. ಬೆಳಿಗ್ಗೆ ಆರರಿಂದ ಒಂಬತ್ತು ಗಂಟೆಯವರೆಗೆ ಹಾಗೂ ಸಂಜೆ ಮೂರರಿಂದ ಆರು ಗಂಟೆಯವರೆಗೆ ಎರಡು ಅವಧಿಗಳಲ್ಲಿ ನಡೆಯುವ ಈ ಸಫಾರಿಯಲ್ಲಿ, ಪ್ರವಾಸಿಗರಿಗೆ ಹುಲಿ, ಆನೆ, ಜಿಂಕೆ, ಕಾಡೆಮ್ಮೆ ಹಾಗೂ ನಾನಾ ಪ್ರಭೇದದ ಪಕ್ಷಿಗಳನ್ನು ನಿಜವಾದ ಅರಣ್ಯ ಪರಿಸರದಲ್ಲಿ ವೀಕ್ಷಿಸುವ ಅವಕಾಶ ದೊರೆಯುತ್ತದೆ. ಕಬಿನಿ ಬ್ಯಾಕ್‌ವಾಟರ್‌ನ ಸುತ್ತಮುತ್ತ ಬೋಟ್ ಸಫಾರಿಯೂ ಅತ್ಯಂತ ಜನಪ್ರಿಯ. ನೀರಿಗಾಗಿ ನದಿ ತಟಕ್ಕೆ ಬರುವ ಕಾಡುಪ್ರಾಣಿಗಳ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಬೆಳಕಿನ ಹಬ್ಬದಂತಿರುತ್ತವೆ. ಜೀಪ್ ಹಾಗೂ ಬಸ್ ಸಫಾರಿಗಳ ಸೌಲಭ್ಯವಿದೆ.
ಕಬಿನಿಯ ವನ್ಯಜೀವಿಯೊಂದಿಗೆ ಮಳೆಗಾಲದ ಬಳಿಕ ಅರಳುವ ಹೂವುಗಳ ಗಂಧ, ನದಿಯ ಹರಿವಿನ ನಾದ ಹಾಗೂ ಅರಣ್ಯದ ಮಧ್ಯದ ಶಾಂತ ವಾತಾವರಣ ಪ್ರವಾಸಿಗನ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಪರಿಸರ ಸಂರಕ್ಷಣೆಯೊಂದಿಗೆ ಸಹಜತೆಯ ಅಚ್ಚುಕಟ್ಟುತನವನ್ನು ಕಾಣಲು ಬಯಸುವವರಿಗೆ ಕಬಿನಿ ನಿಜವಾದ ಸ್ವರ್ಗವಾಗಿದೆ. ಇಲ್ಲಿ ಚೆಂಡು ಹೂವು, ಕಬ್ಬು, ಹತ್ತಿ, ಜೋಳ, ತೆಂಗು ಹೀಗೆ ವೈವಿಧ್ಯ ಕೃಷಿ ಬೆಳೆಗಳನ್ನೂ ಕಾಣಬಹುದು.
ಮೈಸೂರಿನ ಸಾಂಸ್ಕೃತಿಕ ವೈಭವ
ಕಬಿನಿಯಿಂದ ಸುಮಾರು ಎರಡು ಗಂಟೆಗಳಷ್ಟು ಹೊತ್ತು ಪ್ರಯಾಣ ಕೈಗೊಂಡರೆ ಮೈಸೂರನ್ನು ಸೇರಬಹುದು. ಕರ್ನಾಟಕದ ಸಾಂಸ್ಕೃತಿಕ ಹೃದಯ ಎಂದು ಕರೆಯಲ್ಪಡುತ್ತದೆ. ಪ್ರಾಚೀನ ವೈಭವ, ಶಿಲ್ಪಸೌಂದರ್ಯ ಮತ್ತು ಶಿಸ್ತುಗರ ಅಭಿವ್ಯಕ್ತಿ ಇಲ್ಲಿ ಎಲ್ಲೆಡೆ ಗೋಚರಿಸುತ್ತದೆ.

ಮೈಸೂರು ಅರಮನೆ
ನಗರದ ಕೇಂದ್ರದಲ್ಲಿರುವ ಮೈಸೂರು ಅರಮನೆ, ಒಡೆಯರ್ ಕಾಲದ ಶ್ರೀಮಂತ ಶಿಲ್ಪಕಲೆಯ ಮಾದರಿ. ಕಲೆ, ಕಂಬಗಳು, ಚಿತ್ರಗಳು, ಗಾಜಿನ ಅಲಂಕಾರಗಳು ಮತ್ತು ಗಾಜಿನ ಅರಮನೆಗೆ ರಾಜಮಯ ಸ್ಪರ್ಶ ನೀಡುತ್ತವೆ. ರಾತ್ರಿ ಹೊತ್ತು ಅರಮನೆಯಲ್ಲಿ ಬೆಳಗುವ ಸಾವಿರಾರು ದೀಪಗಳು, ನಗರವನ್ನು ಕನಸಿನ ಲೋಕವಾಗಿ ಪರಿವರ್ತಿಸುತ್ತವೆ. ದಸರಾ ಹಬ್ಬದ ಸಂದರ್ಭದಲ್ಲಿ ಅರಮನೆಗೆ ಭೇಟಿ ನೀಡುವುದು ಪ್ರವಾಸಿಗನಿಗೆ ಅಪರೂಪದ ಅನುಭವ.
ಮೈಸೂರು ರೈಲು ಮ್ಯೂಸಿಯಂ
ಮೈಸೂರಿನ ರೈಲು ಮ್ಯೂಸಿಯಂ ಭಾರತೀಯ ರೈಲು ಪರಂಪರೆಯ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿ ಪುರಾತನ ರೈಲು ಎಂಜಿನ್, ಬೋಗಿಗಳು, ರಾಜಮನೆತನದ ಖಾಸಗಿ ರೈಲು ಕೋಚ್‌ಗಳು ಪ್ರದರ್ಶನದಲ್ಲಿವೆ. ಮಕ್ಕಳಿಗೆ ಇದು ಆಕರ್ಷಕ ವೀಕ್ಷಣಾ ಸ್ಥಳ. ರೈಲುಗಳ ಇತಿಹಾಸ, ರೈಲು ತಂತ್ರಜ್ಞಾನದಯನ್ನು ತಿಳಿಯಲು ಇದು ಅತ್ಯುತ್ತಮ ತಾಣ.
ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಕನ್ನಂಬಾಡಿ
ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವು ಕರ್ನಾಟಕದ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟಿನ ಹತ್ತಿರ, ಹೊಸ ಕನ್ನಂಬಾಡಿ ಎಂಬ ಗ್ರಾಮದಲ್ಲಿದೆ. ಇದು 12ನೇ ಶತಮಾನದಲ್ಲಿ ನಿರ್ಮಾಣವಾದ ಇದು, ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿದೆ. ಈ ಮೊದಲು ಇದು ಕನ್ನಂಬಾಡಿ ಗ್ರಾಮದಲ್ಲಿತ್ತು, ಆದರೆ 1909ರಲ್ಲಿ ಕೆಆರ್‌ಎಸ್ ಅಣೆಕಟ್ಟು ಯೋಜನೆಯಿಂದ ಆ ಸ್ಥಳ ಮುಳುಗಡೆಗೊಂಡಿದೆ. ದೇವಾಲಯದ ಮೂಲ ಸಂಕೀರ್ಣ 50 ಎಕರೆ ಪ್ರದೇಶವನ್ನು ಒಳಗೊಂಡಿತ್ತು. 2011ರ ವೇಳೆಗೆ ಪುನರ್ವಸತಿ ಪೂರ್ಣಗೊಂಡಿದ್ದು, ಮೂಲ ದೇವಾಲಯದ ಶಿಲ್ಪಕಲೆಯನ್ನು, ವಾಸ್ತುಶಿಲ್ಪ ಹಾಗೂ ಇತಿಹಾಸವನ್ನು ಉಳಿಸಿಕೊಳ್ಳಲಾಗಿದೆ. ನೀರಿನ ಮಟ್ಟ ಕಡಿಮೆ ಆಗುವ ವೇಳೆಯಲ್ಲಿ ಹಳೆಯ ದೇವಾಲಯದ ಅವಶೇಷಗಳು ಕಾಣಿಸಿಕೊಳ್ಳುತ್ತವೆ, ಈಗಲೂ ಇದು ಪ್ರವಾಸಿ ಮತ್ತು ಭಕ್ತರ ಗಮನಸೆಳೆಯುವ ಸ್ಥಳವಾಗಿದೆ. ಸಂಜೆ ಆರರಿಂದ ಆರೂವರೆಯ ತನಕ ಭೇಟಿ ನೀಡುವ ಅವಕಾಶವಿದ್ದು, ದೇವಸ್ಥಾನದ ಒಳಗೆ ಫೋಟೋ ವೀಡಿಯೋ ತೆಗೆಯುವಂತಿಲ್ಲ ಹಾಗೂ ಇನ್ನೊಂದು ವಿಶೇಷವೆಂದರೆ ಕಾಣಿಕೆಯನ್ನು ನೀಡುವಂತಿಲ್ಲ. ಇಲ್ಲಿ ಪೂಜೆ ನಡೆಯುವುದಿಲ್ಲ, ಬದಲಿಗೆ ಹಲವು ದೇವರುಗಳ, ದೇವತೆಗಳ ಮೂರ್ತಿಗಳಿಗೆ ಚೆಂದದ ನಾಮಫಲಕಗಳನ್ನು ಹಾಕಲಾಗಿದೆ. ಭೇಟಿ ನೀಡುವವರು ಎಲ್ಲದರ ಮಾಹಿತಿನ್ನು ತಿಳಿಯಬಹುದು, ಎಲ್ಲವನ್ನು ಕಣ್ಮನ ತುಂಬಿಕೊಳ್ಳಬಹುದು.

ಪ್ರಕೃತಿ, ಕಲೆ ಮತ್ತು ಶಾಂತಿಯ ಸಂಯೋಜನೆ
ಕಬಿನಿಯ ನೈಸರ್ಗಿಕ ಜಗತ್ತು, ಮೈಸೂರಿನ ಮಾನವ ನಿರ್ಮಿತ ವೈಭವದೊಂದಿಗೆ ಸೇರಿಕೊಂಡು ಒಂದು ಸಂಪೂರ್ಣ ಪ್ರವಾಸ ಯಾತ್ರೆಯ ಅನುಭವ ನೀಡುತ್ತದೆ. ಒಂದು ಭಾಗದಲ್ಲಿ ಅರಣ್ಯದ ನಿಶ್ಶಬ್ದತೆ, ಮತ್ತೊಂದು ಭಾಗದಲ್ಲಿ ಅರಮನೆಯ ಚೈತನ್ಯ ಎಲ್ಲವೂ ಈ ಯಾತ್ರೆಯ ಸೌಂದರ್ಯ. ಕಬಿನಿಯ ಪ್ರಕೃತಿ, ಮೈಸೂರಿನ ಸಂಸ್ಕೃತಿ, ಮತ್ತು ಅವರ ನಡುವಿನ ರಸ್ತೆಯ ಪಯಣವೂ ಕಣ್ಣಿಗೆ ಹಾಗೂ ಮನಸ್ಸಿಗೆ ಆನಂದ ನೀಡುವ ಅನುಭವವಾಗಿದೆ.