Saturday, November 8, 2025
Saturday, November 8, 2025

ಪ್ರವಾಸವನ್ನು ಕನ್ನಡೀಕರಿಸುವ ಶಪಥ ಕೈಗೊಳ್ಳೋಣ!

ಕರ್ನಾಟಕದ ಪ್ರತಿ ಪ್ರವಾಸಿ ಕ್ಷೇತ್ರದಲ್ಲೂ ಸ್ವಚ್ಚತೆ, ಊಟ, ಸಂಸ್ಕೃತಿ, ಭಾಷೆ, ಸೌಲಭ್ಯ, ಸಂಸ್ಕಾರ, ಶಿಸ್ತಿನ ವಿಷಯದಲ್ಲಿ ಒಂದು ಯೂನಿಫಾರ್ಮ್‌ ಅನ್ನು ನಾವು ಕಾಯ್ದುಕೊಳ್ಳಬೇಕು. ಇದು ಕನ್ನಡಿಗರ ಸಂಸ್ಮೃತಿ ಎಂಬಂತೆ ಬಿಂಬಿತವಾಗಬೇಕು. ಪ್ರವಾಸಿ ಕೇಂದ್ರಗಳ ಸ್ವಚ್ಛತೆಗೆ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಬೇಕು. ಜತೆಗೆ ಪ್ರತಿ ಪ್ರವಾಸಿ ಕೇಂದ್ರದಲ್ಲೂ ನಮ್ಮತನವನ್ನು ಎದ್ದುಕಾಣುವಂತೆ ನೋಡಿಕೊಳ್ಳಬೇಕು.

  • ವೀರಕಪುತ್ರ ಶ್ರೀನಿವಾಸ

ಕನ್ನಡವೆಂದರೆ ಬರಿ ನುಡಿಯಲ್ಲ

ಹಿರಿದಿದೆ ಅದರರ್ಥ!

ಅನ್ನೋ ಕವಿಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಕಾಲವಿದು ಅನ್ನೋದು ನನ್ನ ಭಾವನೆ. ಕವಿಯು ಭಾವನಾತ್ಮಕ ನೆಲೆಯಲ್ಲಿಯೇ ಅದನ್ನು ಹೇಳಿದ್ದರೂ ನಾವದನ್ನು ವಾಸ್ತವ ನೆಲೆಗಟ್ಟಿನಲ್ಲಿ ನೋಡುವ ಅಗತ್ಯವಿದೆ. ಕನ್ನಡವೆಂದರೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ‍ಶ್ರೀಮಂತ ಭಾಷೆ. ಶಾಸ್ತೃೀಯ ಸ್ಥಾನಮಾನ ಪಡೆದ ಭಾಷೆ, ಎಂಟು ಜ್ಞಾನಪೀಠಗಳನ್ನು ಪಡೆದ ಭಾಷೆ ಎಂಬ ಸಂಗತಿಗಳೆಲ್ಲಾ ನಮ್ಮ ಭಾಷೆ ಬಗ್ಗೆ ನಮಗಿರುವ ಹೆಮ್ಮೆಯ ಭಾವವನ್ನು ಹೆಚ್ಚಿಸುತ್ತವೆ. ಹಾಗೆ ಕರ್ನಾಟಕವೆಂದರೆ ವೈವಿದ್ಯಮಯ ತಾಣಗಳನ್ನು ಹೊಂದಿರುವ, ಶ್ರೀಮಂತ ಐತಿಹಾಸಿಕ ಪರಂಪರೆಯ, ಬೆರಗುಗೊಳಿಸುವ ಭೂದೃ‍ಶ್ಯಗಳ ಕೇರಾಫ್‌ ಅಡ್ರೆಸ್! ಹಂಪಿಯ ಭವ್ಯ ಅವಶೇಷಗಳಿಂದ ಹಿಡಿದು ಮಡಿಕೇರಿಯ ಹಸಿರಿನ ತನಕ, ಕೋಲಾರದ ಬಯಲುಸೀಮೆಯಿಂದ ಹಿಡಿದು ಗೋಕರ್ಣದ ಕರಾವಳಿ ಸೌಂದರ್ಯದ ತನಕ ಅದರ ವೈವಿಧ್ಯತೆಗೆ ಸಾಟಿಯೇ ಇಲ್ಲ. ಭಾರತದಲ್ಲಿ ಕೆಲವು ರಾಜ್ಯಗಳು ಮಳೆಗೇ ಫೇಮಸ್‌, ಇನ್ನು ಕೆಲವು ಚಳಿಗೆ, ಮತ್ತಲವು ಬಿಸಿಲಿಗೆ. ಆದರೆ ಕರ್ನಾಟಕ ಹಾಗಲ್ಲ; ಇಲ್ಲಿರುವಂತಹ ವೈವಿಧ್ಯ ಮತ್ತೆಲ್ಲೂ ಕಾಣಲಾಗದು. ಮೋಡಗಳನ್ನು ಚುಂಬಿಸುವ ಗಿರಿಧಾಮಗಳು ಇಲ್ಲಿವೆ. ಗಿರಿಧಾಮಗಳಿಲ್ಲದ ಬಯಲು ಸೀಮೆಯೂ ಇಲ್ಲಿದೆ. ನೆಲವನ್ನೇ ಮರೆಸುವ ನದಿ, ಸಮುದ್ರಗಳಿವೆ. ನಾಡನ್ನೇ ಮರೆಸುವ ಕಾಡುಗಳಿವೆ. ಬಿಸಿಲಿಗಾಗಿ ಕಾಯುವ ಪ್ರದೇಶಗಳಿವೆ. ಬಿಸಿಲಿಗೆ ಬಸವಳಿದ ಊರುಗಳೂ ಇವೆ.

Untitled design

ಅದಿರಲಿ; ಭಾಷೆಯ ವಿಷಯದಲ್ಲಿ ನಾವು ಅಭಿಮಾನ ಶೂನ್ಯರು ಅಂತ ಹಿರಿಯರು ಹೇಳುತ್ತಾರಾದರೂ ಭಾಷೆ ಜತೆಗಿನ ನಮ್ಮ ಭಾವುಕತೆ ಪ್ರಶ್ನಾತೀತ. ಇತ್ತೀಚೆಗಂತೂ ಭಾಷೆಯನ್ನು ಮೆರೆಸುವ ವಿಚಾರದಲ್ಲಿ ನಾವೆಲ್ಲರೂ ದೇಶಕ್ಕೇ ಮಾದರಿಯಾಗುತ್ತಿದ್ದೇವೆ. ಆದರೆ ಕನ್ನಡ ಕುರಿತಂತೆ ನಮ್ಮ ನಿಲುವುಗಳು, ಹೋರಾಟಗಳು, ಯೋಜನೆಗಳು ಮತ್ತು ಕಾನೂನುಗಳು ಜಸ್ಟ್‌ ಅದನ್ನು ಉಳಿಸಿಕೊಳ್ಳುವ ದೃಷ್ಟಿಯಿಂದಲೇ ರೂಪುಗೊಳ್ಳುತ್ತಿವೆಯೇ ವಿನಃ ಬೆಳೆಸುವ ಮತ್ತು ಗಟ್ಟಿಗೊಳಿಸುವ ಹಿನ್ನಲೆಯಿಂದ ರೂಪುಗೊಳ್ಳುತ್ತಿಲ್ಲವೆಂದು ಹೇಳಲು ಬೇಸರವೆನಿಸುತ್ತದೆ. ಹಾಗಂತ ಕನ್ನಡ ಮಾಧ್ಯಮವೋ, ಕನ್ನಡಿಗರಿಗೆ ಉದ್ಯೋಗಗಳೋ, ಕನ್ನಡಿಗರು ದೇಶವನ್ನಾಳುವುದೋ ಮಾತ್ರವೇ ಪರಿಹಾರವಲ್ಲ. ಕರ್ನಾಟಕದ ಪ್ರತಿ ಸಂಗತಿಯನ್ನು ನಾವು ಹೇಗೆ ಕನ್ನಡೀಕರಣಗೊಳಿಸುತ್ತೇವೆ ಎಂಬುದೂ ಅಷ್ಟೇ ಮುಖ್ಯ. ಮುಖ್ಯವಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಿನಿಮಾ, ರಾಜಕಾರಣ, ಕ್ರೀಡೆ, ಪ್ರವಾಸ ಸೇರಿದಂತೆ ಪ್ರತಿ ಕ್ಷೇತ್ರವೂ ಕನ್ನಡೀಕರಣಗೊಳ್ಳುತ್ತಾ ಹೋಗಬೇಕು.

ಅರೇ, ಎಲ್ಲವೂ ಸರಿ! ಆದರೆ ಪ್ರವಾಸವನ್ನು ಕನ್ನಡೀಕರಣಗೊಳಿಸುವುದು ಹೇಗೆ? ಅನ್ನೋ ಅನುಮಾನ ನಿಮಗೆ ಬಂದಿರಬಹುದು. ಅದರ ಬಗ್ಗೆ ಹೇಳುವುದಕ್ಕೂ ಮೊದಲು ನಾನೊಂದೆರಡು ಉದಾಹರಣೆಯನ್ನು ನಿಮ್ಮ ಮುಂದಿಡಬೇಕು. ಕೆಲವು ತಿಂಗಳುಗಳ ಹಿಂದೆ ಕಲಬುರಗಿಯ ಗಾಣಗಾಪುರಕ್ಕೆ ಹೋಗಿದ್ದೆ. ಅದು ಭಗವಾನ್‌ ದತ್ತಾತ್ರೇಯರ ಕ್ಷೇತ್ರ. ಆ ಕ್ಷೇತ್ರಕ್ಕೆ ಅದೆಲ್ಲೆಲ್ಲಿಂದಲೂ ಭಕ್ತರು ಸಾಲುಸಾಲಾಗಿ ಬರುತ್ತಲೇ ಇರುತ್ತಾರೆ. ಅದೊಂದು ಆಧ್ಯಾತ್ಮ ಸ್ಪೂರ್ತಿಯ ಕೇಂದ್ರ. ನಿತ್ಯ ಗ್ರಂಥ ಪಠಣ ಅಲ್ಲಿಯ ವಿಶೇಷ. ಹರಕೆ ಹೊತ್ತ ಭಕ್ತರು ಧಾರ್ಮಿಕ ಗ್ರಂಥ ಪಠಣದಲ್ಲಿ ದಿನ, ವಾರ, ತಿಂಗಳುಗಳನ್ನು ಕಳೆಯುತ್ತಾರೆ. ಅವರನ್ನು ಹೊರತುಪಡಿಸಿ ಸಹ, ನಿತ್ಯಪ್ರವಾಸಿಗರದ್ದು ಅಸಂಖ್ಯೆ! ಸರಾಗವಾಗಿ ಹೆಜ್ಜೆ ಇಡಲಾಗದಷ್ಟು ಜನಸಂದಣಿಯ ಧಾರ್ಮಿಕ ಕ್ಷೇತ್ರವದು. ಆದರೆ ಅಲ್ಲಿನ ಶುಚಿತ್ವವನ್ನು ಕಂಡು ದುಃಖವಾಗದಿರದು. ಚಪ್ಪಲಿ ಬಿಟ್ಟು ಹೋಗಿ ಎನ್ನುತ್ತಾರೆ ಆದರೆ ಯಾಕೆ ಚಪ್ಪಲಿ ಬಿಟ್ಟೆವೋ ಎಂದು ಪಶ್ಚಾತ್ತಾಪವಾಗುವಷ್ಟು ಕೊಳಚೆ ಕ್ಷೇತ್ರವದು. ಹೆಜ್ಜೆ ಹೆಜ್ಜೆಗೂ ಕಸ, ಹಸು ಸಗಣಿ, ಉಗುಳು, ಕೆಸರು, ಪ್ಲಾಸ್ಟಿಕ್ ಸೇರಿದಂತೆ ಏನೆಲ್ಲಾ ಇರಬಾರದಿತ್ತೋ ಅದೆಲ್ಲವೋ ಅಲ್ಲಿ ಹೆಜ್ಜೆ ಹೆಜ್ಜೆಗೂ ಅಂಟಿಕೊಳ್ಳುತ್ತದೆ. ಆ ದೇವಸ್ಥಾನದ ಬೆನ್ನಿಗೆ ಹರಿಯುವ ಭೀಮಾ ನದಿಯ ಕತೆಯಂತೂ ಕೇಳುವುದೇ ಬೇಡ. ಕೆಸರು ನೀರಿನಂಥ ನೀರಲ್ಲಿ ಜನ ಮಿಂದೆದ್ದು ಬರುತ್ತಾರೆ. ಅಲ್ಲೇ ಬಟ್ಟೆ ಒಗೆಯೋದು, ಅಲ್ಲೇ ಮೈ ತೊಳೆಯೋದು! ಆ ನೀರನ್ನು ನೋಡಿದರೆ ನೋವಾಗುತ್ತದೆಯೇ ಹೊರತು ಭಾವನೆ ಹುಟ್ಟುವುದಿಲ್ಲ. ತಿಂಗಳಿಗೆ ಲಕ್ಷಾಂತರ ಜನರನ್ನು ಸೆಳೆಯುವ ಧಾರ್ಮಿಕ ಕ್ಷೇತ್ರವೊಂದು ಹೀಗಿದ್ದರೆ ಅದನ್ನು ಏನೆನ್ನುವುದು?

ಹಾಗೇ ಬೀದರಿನ ನರಸಿಂಹ ಝರನಿ!

ಇದಂತೂ ಅದ್ಭುತವಾದ ಸ್ಥಳ. ಮುನ್ನೂರು ಮೀಟರು ದೂರದಷ್ಟು ಉದ್ದದ ಗುಹೆ ಅದು. ಆ ಗುಹೆಯ ಇನ್ನೊಂದು ತುದಿಯಲ್ಲಿ ನರಸಿಂಹ ಸ್ವಾಮಿ ದೇವಸ್ಥಾನವಿದೆ. ಬರೀ ಅಷ್ಟು ಮಾತ್ರವಾಗಿದ್ದರೆ ಅದು ವಿಶೇಷವಾಗುತ್ತಿರಲಿಲ್ಲ. ಆ ಗುಹೆಯಲ್ಲಿ ಯಾವಾಗಲೂ ನೀರು ತುಂಬಿ ಹರಿಯುತ್ತಿರುತ್ತದೆ. ಎದೆಮಟ್ಟದ ನೀರಲ್ಲಿ ಅರ್ಧಮೈಲು ನಡೆದು ದೇವರ ದರ್ಶನ ಪಡೆಯಬೇಕು. ಅಲ್ಲಿ ನೂರಾರು ಬಾವಲಿಗಳಿರುತ್ತವೆ. ಆದರೆ ಇದುವರೆಗೆ ಬಾವುಲಿಗಳಿಂದ ಒಂದೇ ಒಂದು ಅಪಾಯವೂ ಸಂಭವಿಸಿಲ್ಲ ಎಂಬುದು ವಿಶೇಷ. ಎದೆಮಟ್ಟದ ನೀರಿನಲ್ಲಿ ನಡೆದು ಹೋದರೆ ಗುಹೆಯ ಕಟ್ಟಕಡೆಗೆ ನರಸಿಂಹನ ದೇವಸ್ಥಾನವಿದೆ. ಚರ್ಮರೋಗ ನಿವಾರಣೆ ಮತ್ತು ಪಾಪನಾಶಕ್ಕೆ ಈ ದೇವಸ್ಥಾನ ಪ್ರಸಿದ್ಧಿಯಾಗಿದೆ. ವಾಸ್ತವದಲ್ಲಿ ಈ ಜಾಗ ಪ್ರವಾಸಿಗರ ಪಾಲಿನ ರೋಮಾಂಚನವಾಗಬೇಕಿತ್ತು. ಆದರೆ ನಂಬಿ; ಅದೂ ಸಹ ಪರಮ ಕೊಳಕು ಕ್ಷೇತ್ರವೇ ಆಗಿದೆ. ಆ ಗುಹೆಯಲ್ಲಿ ನಡೆದು ಹೋಗುವಾಗ ಜನರು ನೀರಲ್ಲಿ ತಮ್ಮ ಬನಿಯನ್ ಹಿಂಡುತ್ತಾರೆ. ತಮ್ಮ ತಲೆಯ ಹೂಗಳನ್ನು ಕಿತ್ತೆಸೆಯುತ್ತಾರೆ. ಕೆಲವರು ಉಗುಳುತ್ತಾರೆ ಕೂಡ! ಹೇಗೋ ಗುಹೆ ನಡಿಗೆ ಮುಗಿಸಿ, ಹೊರಗೆ ಬಂದರೆ ಬಟ್ಟೆ ಬದಲಿಸಲು ಅಲ್ಲೊಂದು ಜಾಗವಿದೆ. ಆದರೆ ಅದಕ್ಕಾಗಿ ಐದು ರೂಪಾಯಿ ಕೊಡಬೇಕು. ಐದು ರುಪಾಯಿ ಕೊಡಬೇಕಾದ ಕಷ್ಟಕ್ಕಾಗಿ ಹೆಂಗಸರಾದಿಯಾಗಿ ಬಹುತೇಕರು ಆ ಕಟ್ಟಡವನ್ನು ಬಳಸುವುದೇ ಇಲ್ಲ. ಅಲ್ಲೋ ಇಲ್ಲೋ ಮೂಲೆಗಳಲ್ಲಿ ನಿಂತು ಬಟ್ಟೆ ಬದಲಿಸಿ ಇಡೀ ಕ್ಷೇತ್ರದ ಘನತೆಯನ್ನೇ ಕುಬ್ಜವಾಗಿಸಿಬಿಡುತ್ತಾರೆ. ಅದರ ಜತೆಗೆ, ಗುಹೆಯಿಂದ ಆಚೆ ಬಂದವರು ಶುಚಿಯಾಗಲು ಅಲ್ಲೊಂದು ನೀರಿನ ಕೊಳವಿದೆ. ಆದರೆ ನಮ್ಮ ಜನ ತಲೆ, ಮೈ ಮಾತ್ರ ತೊಳೆದುಕೊಳ್ಳುವುದಿಲ್ಲ ಒಳಚಡ್ಡಿ ಸಮೇತ ಎಲ್ಲವನ್ನೂ ಅಲ್ಲೇ ತೊಳೆದು ಹೋಗುವುದು. ಇದನ್ನೆಲ್ಲಾ ಕೇಳಲು, ಸರಿ ರೀತಿಯಲ್ಲಿ ನಡೆಸಲು ಅಲ್ಲೊಂದು ವ್ಯವಸ್ಥೆಯೇ ಇಲ್ಲ.

bidar temple

ಇವು ಕೇವಲ ಎರಡು ಉದಾಹರಣೆಗಳು ಮಾತ್ರ.

ರಾಜ್ಯದ ಬಹುತೇಕ ಕಡೆ ಇಂಥ ಅದ್ವಾನಗಳನ್ನೇ ಕಣ್ತುಂಬಿಕೊಳ್ಳುವಂತಾಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಹೋದಾಗ ಇಂಥವುಗಳ ದರ್ಶನವಾದರೆ ಹುಟ್ಟುವುದು ಧಾರ್ಮಿಕ ಭಾವವೋ ಅಸಹ್ಯ ಭಾವವೋ ಓದುಗರೇ ಹೇಳಬೇಕು. ಇಂಥ ಕಡೆ ಕನ್ನಡೀಕರಣವಾಗಬೇಕು ಅನ್ನೋದು ನನ್ನ ಮಾತಿನ ತಾತ್ಪರ್ಯ!

ಏನಿದು ಕನ್ನಡೀಕರಣ? ಮತ್ತೇನಿಲ್ಲ... ನಮ್ಮತನ.

ಕರ್ನಾಟಕದ ಪ್ರತಿ ಪ್ರವಾಸಿ ಕ್ಷೇತ್ರದಲ್ಲೂ ಸ್ವಚ್ಚತೆ, ಊಟ, ಸಂಸ್ಕೃತಿ, ಭಾಷೆ, ಸೌಲಭ್ಯ, ಸಂಸ್ಕಾರ, ಶಿಸ್ತಿನ ವಿಷಯದಲ್ಲಿ ಒಂದು ಯೂನಿಫಾರ್ಮ್‌ ಅನ್ನು ನಾವು ಕಾಯ್ದುಕೊಳ್ಳಬೇಕು. ಇದು ಕನ್ನಡಿಗರ ಸಂಸ್ಮೃತಿ ಎಂಬಂತೆ ಬಿಂಬಿತವಾಗಬೇಕು. ಪ್ರವಾಸಿ ಕೇಂದ್ರಗಳ ಸ್ವಚ್ಛತೆಗೆ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಬೇಕು. ಜತೆಗೆ ಪ್ರತಿ ಪ್ರವಾಸಿ ಕೇಂದ್ರದಲ್ಲೂ ನಮ್ಮತನವನ್ನು ಎದ್ದುಕಾಣುವಂತೆ ನೋಡಿಕೊಳ್ಳಬೇಕು. ಇದನ್ನು ಇನ್ನಷ್ಟು ಸರಳವಾಗಿ ಹೇಳಬೇಕು ಅಂದರೆ; ನೀವು ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಉತ್ತರ ಭಾರತದ ರೋಟಿ ಕರಿ ಸಿಗುತ್ತದೆ. ಆದರೆ ಕರ್ನಾಟಕದ್ದೇ ಆದ ಮುದ್ದೆ ಊಟ ಭಾರತ ಬಿಡಿ ನಮ್ಮದೇ ಉತ್ತರ ಕರ್ನಾಟಕದಲ್ಲೂ ಸಿಗುವುದಿಲ್ಲ. ಉತ್ತರ ಕರ್ನಾಟಕದ ಜೋಳದ ರೊಟ್ಟಿಯದ್ದೂ ಅದೇ ಕಥೆ! ಊಟದಂತೆ ಉಡುಪಿನ ವಿಚಾರದಲ್ಲೂ ನನಗೆ ತಕರಾರುಗಳಿವೆ. ಹಿಮಾಚಲ, ರಾಜಸ್ಥಾನದಂತಹ ಪ್ರದೇಶಗಳಿಗೆ ಹೋದರೆ ಅಲ್ಲಿನವರ ಸಾಂಪ್ರದಾಯಿಕ ಡ್ರೆಸ್‌ ಕೊಟ್ಟು ನಮಗೆ ಫೊಟೋ ತೆಗೆಸಿಕೊಳ್ಳಲು ಹೇಳುತ್ತಾರೆ. ಕರ್ನಾಟಕಕ್ಕೊಂದು ಆ ತರಹದ ಸ್ಟೈಲ್‌ ಇಲ್ಲ! ಹಾಗಂತ ಎಲ್ಲಾ ಕಡೆ ಶರ್ಟು ಪಂಚೆ ಕೊಡಲಾದೀತೆ ಎನ್ನಬೇಡಿ. ಅದು ತೀರಾ ಅಸಮಂಜಸ ಮಾತಾಗುತ್ತದೆ. ಬಯಲು ಸೀಮೆಯಿಂದ ಕರಾವಳಿ ತನಕ, ಮಡಿಕೇರಿಯಿಂದ ಮಲೆನಾಡಿನ ತನಕ, ಉತ್ತರದಿಂದ ದಕ್ಷಿಣದ ತನಕ ನಮ್ಮಲ್ಲಿರುವ ಉಡುಪು ವೈವಿಧ್ಯತೆ ಇನ್ನೆಲ್ಲಿರಲು ಸಾಧ್ಯ! ಆಯಾ ಭಾಗಗಳಲ್ಲಿ ಅಂಥ ಪೋಷಾಕುಗಳನ್ನು ನಾವು ಹಿಮಾಚಲ, ರಾಜಸ್ಥಾನದವರ ಹಾಗೆ ಪ್ರೊಜೆಕ್ಟ್‌ ಮಾಡಿಕೊಳ್ಳಬಹುದು. ಆಂಧ್ರಸ್ಟೈಲ್‌ ಊಟದ ಹೊಟೇಲ್ಲುಗಳು ಬೆಂಗಳೂರಿನ ಬೀದಿ ಬೀದಿಯಲ್ಲೂ ಇವೆ. ಆದರೆ ಒಂದೇ ಒಂದು ಕರ್ನಾಟಕ ಸ್ಟೈಲ್‌ ಊಟದ ಹೊಟೇಲ್‌ ತೋರಿಸಿ? ಇಂಥ ಸಂಗತಿಗಳಿಗಾಗಿ ನಾವು ಪ್ರತಿಭಟಿಸಿದರೆ ಪರಿಹಾರ ಸಿಗುವುದಿಲ್ಲ. ಪ್ರಯತ್ನವಾಗಿಸಿದರೆ ಪರಿಹಾರ ಸಿಗುತ್ತದೆ. ಉಳಿಸಿಕೊಳ್ಳುವುದರತ್ತ ಪ್ರಯತ್ನಿಸುವುದು ಬಲಹೀನರು ಮಾತ್ರ! ಬಲಾಢ್ಯರು ಯಾವಾಗಲೂ ಬೆಳೆಸುವುದನ್ನೇ ನೋಡುತ್ತಿರುತ್ತಾರೆ. ಕನ್ನಡಿಗರು ಬಲಾಢ್ಯರಾಗಬೇಕು. ಕೇವಲ ಭಾಷೆಯನ್ನು ಉಳಿಸಿ ಪ್ರಯೋಜನವಿಲ್ಲ. ಪ್ರತಿ ಕ್ಷೇತ್ರವೂ ಭಾಷೆಯಾಗಬೇಕು. ಬಲಾಢ್ಯವಾಗಬೇಕು. ಹಾಗಾದರೆ ಮಾತ್ರ ಅದು ನೈಜ ರಾಜ್ಯೋತ್ಸವ!

ಕನ್ನಡವೆಂದರೆ ಬರಿ ನುಡಿಯಲ್ಲ...

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!