ಪ್ಯಾಂಗಾಂಗ್ ಲೇಕ್ ನೋಡಿ ಊಸರವಳ್ಳಿ ಅನ್ನಬೇಡಿ
ರಾತ್ರಿ ಚಳಿಗೆ ಹೆಪ್ಪುಗಟ್ಟಿ ಬೆಳಗಿನ ಸಮಯಕ್ಕೆ ಕರಗುವ ಈ ಸರೋವರ, ಸುತ್ತಲಿನ ಹಿಮಪರ್ವತಗಳಿಗೆ ಆತುಕೊಂಡಿದೆ. ಸಮಯ ಸರಿಯುತ್ತಿದ್ದಂತೆ ನೀಲಿಯಾಗಿ, ನೇರಳೆಯಾಗಿ, ಬೂದಾಗಿ, ಗುಲಾಬಿಯಾಗಿ ಬಣ್ಣ ಬದಲಿಸುತ್ತ ನೋಡುಗರು ವ್ಹಾವ್ಹಾ.. ವ್ಹಾವ್ಹಾ ಎಂದು ಕಣ್ಣು ಬಾಯಿ ಬಿಟ್ಟು ನೋಡುವಂತೆ ಮಾಡುತ್ತದೆ.
- ಸಿಂಧುಚಂದ್ರ ಹೆಗಡೆ. ಶಿರಸಿ.
ಗೆಳತಿ ಪೂರ್ಣಿಮಾ ಜತೆ ಆರಾಮದಾಯಕ ದುಬೈ ಟೂರ್ ಮುಗಿಸಿ, ಮುಂದಿನ ಪ್ರವಾಸಕ್ಕಾಗಿ ಲಡಾಕ್ ಆಯ್ಕೆ ಮಾಡಿಕೊಂಡೆವು. ಈ ಮಧ್ಯೆ ಮಾತುಕಥೆಯಲ್ಲಿ ಹಿಮದ ಮಧ್ಯೆ ಬಾಲಿವುಡ್ ನಟಿಯರ ಚಿತ್ರ ಗೀತೆಗಳು ನೆನಪಾದವು. ಏನಾದರಾಗಲಿ ಒಮ್ಮೆ ಈ ತೆರನ ಸೀರೆಯುಟ್ಟು ನಾಲ್ಕು ಹೆಜ್ಜೆಯಾದರೂ ಹಾಕಲೇಬೇಕು ಎಂದೆನಿಸಿತು. ಬಟ್ಟೆ ಪ್ಯಾಕ್ ಮಾಡುವಾಗ ಸೀರೆಯನ್ನು ಸೇರಿಸಲು ಮರೆಯದಿರು ಎಂದು ಪೂರ್ಣಿಮಾಳಿಗೂ ಹೇಳಿದೆ.
ಆಪರೇಷನ್ ಸಿಂಧೂರ್ ಕಾರಣಕ್ಕೆ ನಮ್ಮ ಟೂರ್ ಕ್ಯಾಲೆಂಡರ್ ಹಿಂದುಮುಂದಾಗಿತ್ತು. ಹೇಗೋ ಲಡಾಕ್‌ಗೆ ಹೋದಾಗ ಮೇ ಕೊನೆಯ ವಾರ. ಲೇಹ್‌ನಲ್ಲಿ ಮೊದಲ ದಿನವೇ ಹೊಟೇಲ್ ಮಾಲೀಕ ನೀವು ಪ್ರವಾಸಕ್ಕೆ ಜುಲೈ ಇಲ್ಲವೇ ಆಗಸ್ಟ್‌ನಲ್ಲಿ ಬರಬೇಕಿತ್ತು. ಈಗ ವಿಪರೀತ ಚಳಿ. ನೀವು ವಾರಗಟ್ಟಲೆ ಈ ಹವಾಮಾನಕ್ಕೆ ಹೊಂದಿಕೊಳ್ಳಲು ಬಹಳ ಕಷ್ಟ ಎಂದ. ಅದಾಗಲೇ ಅಲ್ಲಿನ ಚಳಿಯ ಪಾತ್ರ ಪರಿಚಯ ಮಾಡಿಕೊಂಡಿತ್ತು. ಇದರ ಜತೆಗೆ ಮಾಲೀಕನ ಮಾತಿನಿಂದ ಮತ್ತಷ್ಟು ನಡುಗಿದೆವು.
ಸಮುದ್ರ ಮಟ್ಟದಿಂದ 8000 - 13000 ಅಡಿಗಳಷ್ಟು ಎತ್ತರದಲ್ಲಿ ಲೇಹ್ ವಿಮಾನ ನಿಲ್ದಾಣವಿದೆ. ಇದು ಜಗತ್ತಿನಲ್ಲೇ ಅತ್ಯಂತ ಎತ್ತರದ ವಿಮಾನ ನಿಲ್ದಾಣ. ಸಣ್ಣ ವಿಮಾನ ನಿಲ್ದಾಣ ಮತ್ತು ರನ್ ವೇ ಕೂಡ ಚಿಕ್ಕದೇ. ಇಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವುದು ಪೈಲಟ್ ಗೆ ಸವಾಲಿನ ವಿಷಯ. ಇಳಿಯುವಾಗ ಪ್ರಯಾಣಿಕರಿಗೆ ಜೀವ ಬಾಯಿಗೆ ಬರುವ ಅನುಭವ ಆಗಿಯೇ ಇರುತ್ತದೆ.
ಜಗತ್ತಿನ ಅತಿ ಎತ್ತರದ ಜನವಸತಿ ಪ್ರದೇಶ ಲಡಾಕ್. ಇಲ್ಲಿ ವರ್ಷದಲ್ಲಿ ಆರು ತಿಂಗಳು ಪ್ರವಾಸೋದ್ಯಮ ಕಣ್ಣು ಬಿಡುತ್ತದೆ. ಉಳಿದ ದಿನಗಳಲ್ಲಿ ಸಂಪರ್ಕವೂ ಕಷ್ಟಸಾಧ್ಯ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ರಸ್ತೆಯ ಮೇಲಿನ ಹಿಮವನ್ನು ಕರಗಿಸುತ್ತಾ ಪ್ರವಾಸಿಗರಿಗೆ ರಸ್ತೆ ಕಲ್ಪಿಸಿಕೊಡುತ್ತಾರೆ. ಇಲ್ಲಿ ಹಸಿರು ಬಣ್ಣದಲ್ಲಿ ಹರಿಯುವ ಸಿಂಧೂ ನದಿಯ ಸೌಂದರ್ಯವನ್ನು ಸಿಂಧೂ- ಝಂಸ್ಕಾರ್ ಸಂಗಮ್ ಪ್ರದೇಶದಲ್ಲಿ ನಿಂತು ನೀವೊಮ್ಮೆ ನೋಡಬೇಕು. ನನಗಂತೂ ಇಂಥ ಪ್ರಕೃತಿಯ ರಮಣೀಯತೆ ಕಂಡ ಅಪರೂಪದ ಕ್ಷಣ ಅದು. ಲಡಾಕಿನಲ್ಲಿ ಸೇವೆ ಸಲ್ಲಿಸುವ ಯೋಧರು, ಬದುಕು ಕಟ್ಟಿಕೊಂಡಿರುವ ಲಡಾಕಿಗಳು, ಪರ್ವತಗಳ ನಡುವಿನ ಬೌದ್ದ ಮಠಗಳು, ರಮಣೀಯ ನಿಸರ್ಗ ಎಲ್ಲವೂ ಲಡಾಕಿನ ವಿಶೇಷಗಳು.
ಪ್ರವಾಸದ ದಿನಗಳಲ್ಲಿ ಯಾರೂ ತಲೆ ಸ್ನಾನ ಮಾಡಬೇಡಿ. ಹೆಚ್ಚು ನೀರು ಕುಡಿಯಿರಿ. ಹಿಮಪಾತದ ಪ್ರದೇಶಗಳಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ನಿಲ್ಲಬೇಡಿ ಹೀಗೆ ಟೂರ್ ಮ್ಯಾನೇಜರ್ ನಿತ್ಯ ನೆನಪಿಸುತ್ತಿದ್ದ. ಸಮುದ್ರ ಮಟ್ಟದಿಂದ 17,982 ಅಡಿ ಎತ್ತರದಲ್ಲಿನ ಖರ್ದುಂಗ್ ಲಾ ಪಾಸ್‌ಗೆ ಹೋಗಿದ್ದೆವು.

ಇಲ್ಲಿ ನಮಗೆ ಮೈನಸ್ ಡಿಗ್ರಿ ಎಂದರೇನು ಎಂಬುದು ಅರಿವಿಗೆ ಬಂದಿತ್ತು. ತಲೆಯ ಒಳಗೆ ವಿಚಿತ್ರ ಸೆಳೆತ, ಮಾತನಾಡಲು ಆಗದಂಥ ಪರಿಸ್ಥಿತಿ, ಉಸಿರಾಡಲು ಕಷ್ಟ, 5 ನಿಮಿಷಗಳು ನಿಂತಿದ್ದೆವು ಅಷ್ಟೆ, ಕಾಲುಗಳು ಮರಗಟ್ಟಿ ಹೋಗಿದ್ದವು, ಓಡಿ ಬಂದು ವಾಹನ ಏರಿ ಕೂತಾಗ ಹೋದ ಜೀವ ಬಂದಂತಾಗಿತ್ತು. ಆಗಲೆ, ಉಟ್ಟು ಹೆಜ್ಜೆ ಹಾಕುವ ಎಂದು ತಂದಿದ್ದ ಸೀರೆ ಲಗೇಜ್ ಬ್ಯಾಗಿನಲ್ಲಿ ಕುಳಿತು ಅಣಕಿಸಿದಂತೆ ಭಾಸವಾಯಿತು. ಸೀರೆ ಉಟ್ಟು ನಾವೇನಾದರು ಫೋಟೊಶೂಟ್ ಮಾಡಿದ್ದರೆ ಅದು ನಮ್ಮ ಕೊನೆಯ ಫೊಟೋ ಆಗಿರುತ್ತಿತ್ತು.
ಲಡಾಕಿನ ಪ್ರವಾಸದ ಕೊನೆಯ ಎರಡು ದಿನಗಳು ಪ್ಯಾಂಗಾಂಗ್ ಲೇಕ್‌ಗೆ ಮೀಸಲು ಎಂದು ಮೊದಲೇ ನಿರ್ಧಾರವಾಗಿತ್ತು. ಮೊದಲನೇ ದಿನ ನುಬ್ರಾ ವ್ಯಾಲಿ ಮತ್ತು ತುರ್ತುಕ್ ಎಂಬ ಬಹಳ ಚಂದದ ಹಳ್ಳಿಗಳನ್ನು ನೋಡಿ ಅಲ್ಲಿಯೇ ಉಳಿದೆವು. ಮಾರನೇ ದಿನ ಬೆಳಿಗ್ಗೆ ಪ್ಯಾಂಗಾಂಗ್ ಸರೋವರ ನೋಡಲು ಯೋಜನೆಯಂತೆ ಹೊರಟೆವು. ಆಮ್ಲಜನಕದ ಕೊರತೆಯಿಂದ ನನಗಂತೂ ನಿತ್ಯವೂ ತಲೆನೋವು. ನಮ್ಮ ತಂಡದ ಓರ್ವ ಮಹಿಳೆಗೆ ಎರಡು ದಿನಗಳಿಂದ ನಿರಂತರ ವಾಂತಿ ಇದು ನಮ್ಮನ್ನೆಲ್ಲಾ ಚಿಂತೆಗೆ ದೂಡಿತ್ತು. ಆದರೂ ಅನಿವಾರ್ಯ ಕಾರಣಗಳಿಂದ ಮಾತ್ರೆ, ಗ್ಲೂಕೋಸ್ ನೀಡುತ್ತಾ ಸರೋವರದತ್ತ ನಮ್ಮ ವಾಹನ ಹತ್ತಿ ಹೊರಟೆವು. ಈ ಸರೋವರ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿದ್ದು, ಪ್ರಪಂಚದಲ್ಲಿನ ಅತಿ ಎತ್ತರದ ಉಪ್ಪುನೀರಿನ ಸರೋವರವಾಗಿದೆ.
6 ತಾಸಿನ ಪ್ರಯಾಣದ ನಂತರ ನಾವು ಈ ಸರೋವರ ತೀರವನ್ನು ತಲುಪಿದೆವು. ಸಮಯ ಸುಮಾರು 3.30 ಆಗಿತ್ತು. ಸಂಜೆ ಚಳಿ ಹೆಚ್ಚಾಗುವ ಕಾರಣಕ್ಕೆ ಸಾಧಾರಣವಾಗಿ ಎಲ್ಲರು ಮಧ್ಯಾಹ್ನದ ಸಮಯವನ್ನೇ ಆರಿಸಿಕೊಳ್ಳುತ್ತಾರೆ. ಈ ಸರೋವರದ ಮೂರನೇ ಎರಡು ಪಾಲಿನಷ್ಟು ಚೀನಾದಲ್ಲಿ ಒಂದು ಪಾಲು ಮಾತ್ರ ಭಾರತದಲ್ಲಿದೆ. ಈ ಸರೋವರ ರಾತ್ರಿ ಚಳಿಗೆ ಹೆಪ್ಪುಗಟ್ಟಿ ಬೆಳಗಿನ ಸಮಯಕ್ಕೆ ಕರಗುತ್ತದೆ. ಸುತ್ತಲೂ ಇರುವ ಹಿಮಪರ್ವತಗಳಿಗೆ ಆತುಕೊಂಡಿದ್ದು, ಸಮಯ ಸರಿಯುತ್ತಿದ್ದಂತೆ ನೀಲಿಯಾಗಿ, ನೇರಳೆಯಾಗಿ, ಬೂದಾಗಿ, ಗುಲಾಬಿಯಾಗಿ ಬಣ್ಣ ಬದಲಿಸುತ್ತ ನೋಡುಗರು ವ್ಹಾವ್ಹಾ.. ವ್ಹಾವ್ಹಾ ಎಂದು ಕಣ್ಣು ಬಾಯಿ ಬಿಟ್ಟು ನೋಡುವಂತೆ ಮಾಡುತ್ತದೆ. ಇದು ನನಗಂತೂ ನಿಜಕ್ಕೂ ಜೀವಮಾನದ ಅನುಭವ.

ಈ ಸರೋವರವನ್ನು ನೋಡುತ್ತಿದ್ದಂತೆ ನಾನು ಇಲ್ಲಿ ಮಾತ್ರ ಸೀರೆ ಉಟ್ಟು ಫೋಟೋ ತೆಗೆಸಿಕೊಳ್ಳಲೇಬೇಕು ಎಂದು ಥರ್ಮಲ್ಸ್ ಮೇಲೆಯೇ ಸೀರೆ ಉಡುವ ಸಾಹಸ ಮಾಡಿದೆ. ಸರೋವರದ ಹತ್ತಿರ ಹೋದಂತೆ ಸೌಂದರ್ಯ ರಾಶಿ ಮೈ ತುಂಬಾ ಸುತ್ತಿಕೊಂಡ ಅನುಭವ. ಚಳಿಗಾಳಿ ವೇಗವಾಗಿ ಬೀಸತೊಡಗಿತ್ತು. ನಿಲ್ಲಲು ಸಹ ಆಗುತ್ತಿರಲಿಲ್ಲ, ಮಾತನಾಡಲು ಹೊರಟರೆ ಕಣ್ಣಿನಿಂದ ಬಳಬಳನೆ ನೀರು ಹೊರಬರುತ್ತಿತ್ತು. ಹೇಗೋ ಕಷ್ಟಪಟ್ಟು ಒಂದೆರೆಡು ವೀಡಿಯೋ ಮತ್ತೊಂದೆರಡು ಫೊಟೋ ತೆಗೆದುಕೊಂಡೆ. ನನ್ನ ಉತ್ಸಾಹ ನೋಡಿ ಗೆಳತಿ ಪೂರ್ಣಿಮಾ ಸಹ ಅಲ್ಲಿಯೇ ಸೀರೆ ಸುತ್ತಿಕೊಂಡಳು. ಆ ಗಾಳಿಯಲ್ಲಿ ಹೇಗೋ ಇಬ್ಬರೂ ಸೇರಿ ಕ್ಯಾಮೆರಾ ಕಣ್ಣಲ್ಲಿ ಇಲ್ಲಿನ ಮಧುರ ಕ್ಷಣಗಳನ್ನು ಕ್ಲಿಕ್ಕಿಸಿಕೊಂಡೆವು.
ಜೀವಮಾನದಲ್ಲಿ ಮತ್ತೆ ಈ ಸರೋವರದ ಬಳಿ ಬಂದು ನಿಲ್ಲುತ್ತೇನೋ ಇಲ್ಲವೋ. ಎಂದೆಲ್ಲಾ ಯೋಚನೆಗಳು ಬರಲಾರಂಭಿಸಿದವು. ಅಷ್ಟೊತ್ತಿಗೆ ಹಿಮವೂ ಬೀಳಲು ಆರಂಭವಾಯಿತು. ವಿಪರೀತ ಗಾಳಿ, ಕೊರೆಯುವ ಚಳಿ, ಮಬ್ಬಾದ ಮುಸುಕಿನ ಬೆಳಕು, ಇಷ್ಟಿದ್ದರೂ ಸರೋವರವನ್ನು ಎಷ್ಟು ಕಣ್ತುಂಬಿಕೊಂಡರೂ ಸಾಕು ಎನ್ನದ ಮನಸ್ಸು. ಆದರೆ, ಅಷ್ಟೊತ್ತು ಅಲ್ಲಿ ನಿಂತಿದ್ದ ಪರಿಣಾಮಕ್ಕೆ ಕೈ ಕಾಲುಗಳು ಮರಗಟ್ಟಿದ್ದವು. ಒಂದು ಹೆಜ್ಜೆ ಸಹ ಮುಂದಿಡಲು ಸಾಧ್ಯವಾಗುತ್ತಿಲ್ಲ. ಸ್ಪರ್ಶ ಜ್ಞಾನವೇ ಇಲ್ಲವೇನೋ ಎನ್ನುವಷ್ಟು ಇಬ್ಬರೂ ಫ್ರೀಝ್ ಆಗಿದ್ದೆವು. ಹೇಗೋ ಮರಳಿದರೆ, ಅಂದು ಸರೋವರದ ಅಂಚಿನ ವಸತಿಗೃಹಗಳಲ್ಲಿ ನಮಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ರಾತ್ರಿಯಿಡೀ ಅಲ್ಲಿ ಹಿಮಪಾತ. ಅಸಾಧ್ಯ ಚಳಿ. ವಿದ್ಯುತ್ ವ್ಯವಸ್ಥೆ ಸಹ ಇರಲಿಲ್ಲ. ಸ್ವಲ್ಪ ಸಮಯ ಜನರೇಟರ್ ಮೂಲಕ ಹೀಟರ್ ಹಾಕಿದಾಗ ಓಡಾಡುವಷ್ಟು ಚೇತರಿಸಿಕೊಂಡೆವು. ಅಲ್ಲಿ ಹೊಟೇಲ್ ಕೆಲಸ ನಿರ್ವಹಿಸುವವರಿಗೆ ದೊಡ್ಡ ನಮಸ್ಕಾರ ಮಾಡಿ, ಪ್ಯಾಂಗಾಂಗ್ ಸರೋವರದ ಬೆಳಗಿನ ಚಂದವನ್ನು ಕಣ್ತುಂಬಿಕೊಂಡು ಲೇಹ್ ಕಡೆಗೆ ಮುಖ ಮಾಡಿ ಹೊರಟೆವು. ಸರೋವರ ದೂರವಾಗುತ್ತಾ ಕಣ್ಮರೆಯಾಯಿತು. ಅಲ್ಲಿ ಸೀರೆಯುಟ್ಟ ನೆನಪುಗಳು ಮಾತ್ರ ಇನ್ನೂ ಜೀವಂತವಾಗಿವೆ.