Thursday, September 10, 2026
Thursday, September 10, 2026

ಸುರಿವ ಮಳೆ ಹೊಳೆವ ಹಾದಿ

ಮಾನ್‌ಸೂನ್‌ ಅಲ್ಲಿ ಮೂರು ದಿನಗಳಲ್ಲಿ 1,243.4 ಕಿಮೀ ದೂರ ಬೈಕ್‌ ರೈಡ್‌ ಪಯಣದ ಕಥೆ ಇಲ್ಲಿದೆ.

  • ಪ್ರಮೋದ ಮೋಹನ ಹೆಗಡೆ

ಒಬ್ಬ ಯುವಕ. ಈಗಷ್ಟೇ ಬಿ.ಟೆಕ್‌ ಮುಗಿಸಿದ್ದಾನೆ. ಮುಂದೇನು ಮಾಡುವುದು ಎಂಬ ಯೋಚನೆ ಅವನಿಗೆ ಕಾಡುತ್ತಿದೆ. ಇದರ ಮಧ್ಯೆ ಆತ ಇಡೀ ದಕ್ಷಿಣ ಭಾರತ ರೈಡ್‌ ಹೋಗೋಣ ಎಂದು ಜೂನ್‌ ಒಂದರಿಂದ ಪಯಣ ಶುರು ಮಾಡಿದ್ದಾನೆ. ರಾಯಲ್‌ ಎನ್‌ಫೀಲ್ಡ್‌ ಕಾಂಟಿನೆಂಟಲ್‌ ಜಿಟಿ ಅವನ ಸಂಗಾತಿ. ಹೈದರಾಬಾದ್‌ನಿಂದ ಶುರು ಒಂದಿಷ್ಟು ಕಡೆ ಸುತ್ತಾಡಿ ಮನೆ ತಲುಪಿ ಬಳಿಕ ಒಂದು ಸಣ್ಣ ವಿರಾಮ ಪಡೆದು ಸಾಧ್ಯವಾದರೆ ನೆಕ್ಸ್ಟ್‌ ಲಡಾಖ್‌ ಹೋಗಬೇಕು ಎನ್ನುವುದು ಅವನ ಆಸೆ. ಒಬ್ಬನೇ ಹೈವೇಯಲ್ಲಿ ಬರುತ್ತಿದ್ದ ಅವನನ್ನು ಮಾತನಾಡಿಸಿದಾಗ ಇಷ್ಟು ಹೇಳಿದ. ಇಂಥ ಕಥೆಗಳನ್ನು ಕೇಳವುದೇ ಮಜ. ಆತನ ಹೆಸರು ನಾನು ಕೇಳಲಿಲ್ಲ. ಅವನೂ ನನ್ನ ಹೆಸರು ಕೇಳಲಿಲ್ಲ. ಇಬ್ಬರೂ ರೈಡ್‌ ಬಗ್ಗೆ ಮಾತನಾಡಿದೆವು, ಮುಂದೆ ಎಲ್ಲಾದರೂ ಸಿಗೋಣ ಎಂದೆವು. ಇಂಥ ಕಥೆಗಳು ಸಿಗುವುದೇ ರಸ್ತೆಯಲ್ಲಿ. ಯಾರೋ ಏನನ್ನೋ ಹುಡುಕಿಕೊಂಡು ಹೋಗುತ್ತಾರೆ, ಇನ್ಯಾರೋ ಎಲ್ಲವನ್ನೂ ಮರೆಯಲು ರಸ್ತೆಗಿಳಿಯುತ್ತಾರೆ. ಬೈಕ್‌ ರೈಡ್‌ನ ವಿಶೇಷತೆಯೇ ಅದು, ರಸ್ತೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು! ಕೇರಳಕ್ಕೆ ನಮ್ಮ ಪಯಣವೂ ಶುರುವಾಗಿದ್ದು ಹಾಗೆ. ಮೊದಲು ತಪ್ಪಿದ್ದು ದಾರಿ. ಬಳಿಕ ಸಿಕ್ಕಿದ್ದೆಲ್ಲವೂ ಅಚ್ಚರಿ.

ಕೇರಳದ ಅಲಿಪ್ಪಿ ತಲುಪಲು ಬೆಂಗಳೂರಿನಿಂದ ಎರಡು ಪ್ರಮುಖ ದಾರಿಗಳಿವೆ. ಹೊಸೂರು, ಕೊಯಿಮತ್ತೂರು ಮೂಲಕ ಸಾಗುವುದು ಒಂದು. ಇನ್ನೊಂದು ದಾರಿ ಮೈಸೂರು, ಬಂಡೀಪುರದ ಮೂಲಕ ಸಾಗುತ್ತದೆ. ಆದರೆ, ಇವೆರಡರ ನಡುವೆ ಇನ್ನೊಂದು ದಾರಿಯಿದೆ. ಗೂಗಲ್‌ ಮ್ಯಾಪ್‌ ಆ ದಾರಿಯನ್ನು ಆದ್ಯತೆಯಲ್ಲಿ ತೋರಿಸುವುದಿಲ್ಲ. ಕನಕಪುರ, ಚಾಮರಾಜನಗರ, ಸತ್ಯಮಂಗಲ ಟೈಗರ್‌ ರಿಸರ್ವ್‌ ಮೂಲಕ ಕೊಯಿಮತ್ತೂರು ತಲುಪಿ ಅಲ್ಲಿಂದ ಹೈವೇಯಲ್ಲಿ ಕೊಚ್ಚಿ ಮೂಲಕ ಅಲಿಪ್ಪಿ ತಲುಪುವುದು. ನಾವು ಗೂಗಲ್‌ ಮ್ಯಾಪ್‌ ಕೃಪೆಯಿಂದ ದಾರಿ ತಪ್ಪಿ ಈ ದಾರಿಯಲ್ಲಿ ಸಾಗುವ ಹಾಗಾಯಿತು.

ಇದನ್ನು ಓದಿ:ಖುಷಿಯಾಗಿ ಹೋಗಿ ಕ್ಷೇಮವಾಗಿ ಬನ್ನಿ!

ಸತ್ಯಮಂಗಲದ ತಿರುವುಗಳು

ಸತ್ಯಮಂಗಲ ಕಾಡಿನಲ್ಲಿ ಸುಮಾರು 27 ಹೇರ್‌ಪಿನ್‌ ಕರ್ವ್‌ಗಳಿವೆ. ಪ್ರತಿ ತಿರುವಿನಲ್ಲೂ ಕಾಣಿಸುವ ಬೆಟ್ಟ ಗುಡ್ಡಗಳು, ನೀಲಿ ಮತ್ತು ಬಿಳಿ ಮಿಶ್ರಿತ ಆಕಾಶ, ಹಸಿರು ಕಣಿವೆಗಳು ಉಳಿದೆಲ್ಲಾ ಕಿರಿಕಿರಿಗಳನ್ನು ಮರೆಸುತ್ತವೆ. ನಮಗೆ ಅಂದು ರಸ್ತೆ ಪಕ್ಕದಲ್ಲಿ ಇಂತು ಮರದಿಂದ ಎಲೆಗಳನ್ನು ಕಿತ್ತು ತಿನ್ನುತ್ತಿದ್ದ ಆನೆಯ ದರ್ಶನವೂ ಆಯಿತು. ಕೆಲವು ತಿರುವುಗಳಲ್ಲಿ ಚೂರು ಮಿಸ್‌ ಆದರೂ ಬೈಕ್‌ ಸಮೇತರಾಗಿ ಮಾಯ ಆಗುವ ಸಾಧ್ಯತೆ ಇರುತ್ತದೆ. ಅದರ ಬಗ್ಗೆ ಸ್ವಲ್ಪ ಎಚ್ಚರವಹಿಸಬೇಕು.

ನದಿಯ ನಡುವಲ್ಲಿ..

ಆಲಪುಳದಲ್ಲಿ ಬೋಟ್‌ ಹೌಸ್‌ ಬಹಳ ಫೇಮಸ್‌. ಅದೊಂದು ದೊಡ್ಡ ಪ್ರವಾಸಿ ಆಕರ್ಷಣೆಯಾಗಿ ಬೆಳೆದಿದೆ. ಅಲ್ಲಿ ಹೆಚ್ಚೂಕಮ್ಮಿ ಪ್ರತಿ ಮೂರು ಮನೆಗೊಂದು ಬೋಟ್‌ ಇದ್ದಂತಿದೆ. ಅಷ್ಟು ಡಿಮ್ಯಾಂಡ್‌ ಇದೆ. ದೊಡ್ಡ ಬ್ಯುಸಿನೆಸ್‌ ಆಗಿದೆ. ಒಂದು ಬೋಟ್‌ಗೆ ಸುಮಾರು 10-12 ಸಾವಿರ ರು. ಆಗಬಹುದು. ಗುಂಪಿನಲ್ಲಿ ಹೋದರೆ ಅದು ಹೆಚ್ಚು ವರ್ಕೌಟ್‌ ಆಗುತ್ತದೆ. ಬಜೆಟ್‌ ಫ್ರಂಡ್ಲಿ ಟ್ರಿಪ್‌ ಮಾಡುವವರಿಗೆ ಕೇರಳ ಸರಕಾರದ ಕ್ರೂಸ್‌ ವ್ಯವಸ್ಥೆ ಕೂಡ ಇದೆ. ಇದು ಬೆಳಗ್ಗೆಯಿಂದ ಸಂಜೆವರೆಗೂ ನದಿಯಲ್ಲಿ ಸಾಗುತ್ತದೆ.

Untitled design (77)

ಇಲ್ಲಿ ಎರಡು ರೀತಿಯ ಬೋಟ್‌ಗಳಿವೆ. ಕಡಿಮೆ ದೂರ ಪ್ರಯಾಣದ್ದು, ಇಡೀ ದಿನ ಪ್ರಯಾಣದ್ದು. ನಾವು ʼವೇಗಾʼ ಎಂಬ ಇಡೀ ದಿನದ ಹೈ ಸ್ಪೀಡ್‌ ಬೋಟ್‌ ಪ್ರಯಾಣ ಆಯ್ಕೆ ಮಾಡಿಕೊಂಡಿದ್ದೆವು. ಜಲಸಾರಿಗೆ ಇಲಾಖೆಯು ಆರಂಭಿಸಿರುವ ಈ ಆಧುನಿಕ ಫೈಬರ್‌ಗ್ಲಾಸ್ ಕ್ಯಾಟಮರನ್ ಬೋಟ್ ಕಡಿಮೆ ವೆಚ್ಚದಲ್ಲಿ ಕೇರಳದ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಅತ್ಯುತ್ತಮ ಅವಕಾಶ ನೀಡುತ್ತದೆ.

ಈ ಬೋಟ್‌ನಲ್ಲಿ ಒಟ್ಟು 120 ಆಸನಗಳ ವ್ಯವಸ್ಥೆಯಿದೆ. ಎಸಿ ಮತ್ತು ನಾನ್-ಎಸಿ ಎಂದು ಎರಡು ವಿಭಾಗಗಳಿವೆ. ಪ್ರತಿದಿನ ಬೆಳಗ್ಗೆ ಸರಿಯಾಗಿ 11:00 ಗಂಟೆಗೆ ಆಲಪುಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹತ್ತಿರವಿರುವ ಬೋಟ್ ಜೆಟ್ಟಿಯಿಂದ ಹೊರಡುವ ಈ ಕ್ರೂಸ್, ಒಟ್ಟು 50 ಕಿಲೋಮೀಟರ್ ದೂರದ ವರ್ತುಲ ಪ್ರಯಾಣವನ್ನು ಪೂರೈಸಿ ಸಂಜೆ 4:00 ರ ವೇಳೆಗೆ ಮರಳಿ ಬರುತ್ತದೆ. ನಾನ್-ಎಸಿಗೆ ಒಬ್ಬರಿಗೆ ರು. 400 ಹಾಗೂ ಎಸಿ ಕ್ಯಾಬಿನ್‌ಗೆ ರು. 600 ಅಷ್ಟೇ.

ಇದನ್ನು ಓದಿ:ಬರೀ ಪ್ರವಾಸಕಥನವಲ್ಲ, ಇದು ಕ್ರಾಂತಿಯ ಮುನ್ನುಡಿ!

ಈ ಬೋಟ್ ಮೊದಲು ವಿಶ್ವಪ್ರಸಿದ್ಧ 'ನೆಹರು ಟ್ರೋಫಿ ಬೋಟ್ ರೇಸ್' ನಡೆಯುವ ಪುನ್ನಮದ ಹಿನ್ನೀರಿನ ಮೂಲಕ ಸಾಗುತ್ತದೆ. ನಂತರ ಭಾರತದ ಅತಿ ಉದ್ದದ ಸರೋವರವಾದ ವೇಂಬನಾಡ್ ಸರೋವರವನ್ನು ಪ್ರವೇಶಿಸುತ್ತಿದ್ದಂತೆ ವಿಶಾಲವಾದ ಜಲರಾಶಿ ಮತ್ತು ಸಾಲಾಗಿ ಸಾಗುವ ಹೌಸ್‌ಬೋಟ್‌ಗಳ ಸುಂದರ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಈ ಪ್ರಯಾಣದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಜನವಸತಿ ಇಲ್ಲದ ಸುಂದರ 'ಪಾತಿರಾಮಣಲ್ ದ್ವೀಪ'. ಇಲ್ಲಿ ಸುಮಾರು 15 ರಿಂದ 30 ನಿಮಿಷಗಳ ಕಾಲ ನಿಲ್ಲುತ್ತದೆ. ಪ್ರವಾಸಿಗರು ದ್ವೀಪಕ್ಕಿಳಿದು ದಟ್ಟವಾದ ಮಂಗ್ರೋವ್ ಕಾಡುಗಳು ಮತ್ತು ಅಪರೂಪದ ವಲಸೆ ಹಕ್ಕಿಗಳನ್ನು ವೀಕ್ಷಿಸಬಹುದು. ಈ ದ್ವೀಪದ ಒಳಗೆ ಪ್ರವೇಶಿಸಲು 50 ರು. ಟಿಕೆಟ್‌ ಪಡೆಯಬೇಕು. ಕಾಡು ಹಾಗೂ ಪಕ್ಷಿಗಳ ಬಗ್ಗೆ ಹೆಚ್ಚು ಆಸಕ್ತಿ ಅಥವಾ ಮಾಹಿತಿ ಇಲ್ಲದೇ ಹೋದರೆ ಅಲ್ಲಿ ಕಾಣಿಸುವುದು ಎತ್ತರದ ಮರಗಳು, ಒಂದು ಪುಟ್ಟ ಆಟದ ಪಾರ್ಕ್‌ ಹಾಗೂ ಮಣ್ಣಿನ ದಾರಿ ಅಷ್ಟೇ. ಏನೂ ಇಲ್ಲವಲ್ಲಾ ಇಲ್ಲಿ, ಇದಕ್ಕೆ 50 ರು. ಕೊಟ್ಟಿದ್ದಾ ಅಂತಲೇ ಅನಿಸುತ್ತದೆ.

ಅಲ್ಲಿಂದ ಮುಂದುವರಿದು ಕುಮರಕಮ್ ತೀರದ ಮೂಲಕ ಸಾಗಿ, ಕೇರಳದ ಭತ್ತದ ಕಣಜ ಎಂದೇ ಕರೆಯಲ್ಪಡುವ ಕುಟ್ಟನಾಡ್‌ನ ಪ್ರಸಿದ್ಧ ದ್ವೀಪಗಳಾದ ಆರ್-ಬ್ಲಾಕ್, ಚಿತ್ತಿರಾ ಮತ್ತು ಕುಪ್ಪಪುರಂನ ತೆಂಗಿನ ತೋಟಗಳ ಸೌಂದರ್ಯವನ್ನು ಹಾಗೂ ಸಮುದ್ರ ಮಟ್ಟಕ್ಕಿಂತ ಕೆಳಗಿರುವ ಜಾಗದಲ್ಲಿ ಸ್ಥಳೀಯರು ಮಾಡುವ ವಿಶಿಷ್ಟ ಕೃಷಿ ಪದ್ಧತಿಯನ್ನು ಕಣ್ತುಂಬಿಕೊಳ್ಳಬಹುದು.

ಕೃಷ್ಣನ ಸನ್ನಿಧಿ

ಅಲಿಪ್ಪಿ ಸಮೀಪವೇ ಅಂಬಲಪುಳ ಎಂಬ ಜಾಗವಿದೆ. ಅಲ್ಲೊಂದು ಕೃಷ್ಣನ ದೇವಾಲಯವಿದೆ. ಒಂದು ಭಾಗದಲ್ಲಿ ನೀರು. ಅದರ ಹಿಂದೆ ಗರ್ಭಗುಡಿ. ವಿಶಾಲವಾದ ಜಾಗ. ಕೇರಳ ದೇವಸ್ಥಾನ ಶೈಲಿಯ ವಾಸ್ತುಶಿಲ್ಪ. ಕೃಷ್ಣನ ವಿಗ್ರಹವೂ ಇಲ್ಲಿ ವಿಶೇಷವಾಗಿದೆ.

Untitled design (75)

ಈ ಐತಿಹಾಸಿಕ ದೇವಾಲಯ 15 ರಿಂದ 17ನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಂಡಿದ್ದು. ಇಲ್ಲಿಯ ವಿಶೇಷ ಎಂದರೆ ʼಅಂಬಲಪುಳ ಪಾಲ್ಪಾಯಸʼ (ಹಾಲು ಪಾಯಸ). ಇಲ್ಲಿ ದಿನನಿತ್ಯ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಅತ್ಯಂತ ರುಚಿಕರವಾದ, ತಿಳಿ ಗುಲಾಬಿ ಬಣ್ಣದ ಈ ಪಾಯಸಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರಂತೆ. ಇಲ್ಲಿನ ಕೃಷ್ಣನ ವಿಗ್ರಹವನ್ನು ಮಹಾಭಾರತದ ʼಅರ್ಜುನನ ಸಾರಥಿʼ ರೂಪದಲ್ಲಿ ಆರಾಧಿಸಲಾಗುತ್ತಿದ್ದು, ಇತಿಹಾಸದಲ್ಲಿ ಟಿಪ್ಪು ಸುಲ್ತಾನನ ಆಕ್ರಮಣದ ಸಮಯದಲ್ಲಿ ಗುರುವಾಯೂರು ದೇವಸ್ಥಾನದ ಶ್ರೀಕೃಷ್ಣನ ವಿಗ್ರಹವನ್ನು ರಕ್ಷಣೆಗಾಗಿ ಕೆಲವು ವರ್ಷಗಳ ಕಾಲ ಇದೇ ಅಂಬಲಪುಳ ಕ್ಷೇತ್ರದಲ್ಲಿ ಬಚ್ಚಿಡಲಾಗಿತ್ತು ಎಂಬ ಪ್ರತೀತಿ ಇದೆ. ಅಷ್ಟೇ ಅಲ್ಲದೆ, ಕೇರಳದ ಪ್ರಸಿದ್ಧ ಸಾಂಪ್ರದಾಯಿಕ ಹಾಸ್ಯ ನೃತ್ಯ ರೂಪಕವಾದ ‘ಓಟ್ಟನ್ ತುಳ್ಳಲ್’ ಎಂಬ ಕಲೆ ಮೊತ್ತಮೊದಲ ಬಾರಿಗೆ ಜನ್ಮತಾಳಿದ್ದು ಇದೇ ದೇವಸ್ಥಾನದ ಆವರಣದಲ್ಲಿ. ಇಲ್ಲಿ ಸಾಂಪ್ರದಾಯಿಕ ಉಡುಗೆ ಕಡ್ಡಾಯ.

ದಾರಿಯಲ್ಲಿ ಸಿಕ್ಕವರು

ದಾರಿಯ ಅಕ್ಕಪಕ್ಕದಲ್ಲಿ ಸಾವಿರಾರು ಕಥೆಗಳು ಮಲಗಿರುತ್ತವೆ. ಕೆಲವೊಮ್ಮೆ ನಾವು ಗಾಡಿ ನಿಲ್ಲಿಸಿದಾಗ ಅವು ನಮ್ಮನ್ನು ಮಾತನಾಡಿಸುತ್ತವೆ. ನಮ್ಮ ಜತೆಗೆ ಸ್ವಲ್ಪ ದೂರ ಪ್ರಯಾಣ ಕೂಡ ಮಾಡುತ್ತವೆ. ಇಬ್ಬರು ಅಣ್ಣತಮ್ಮಂದಿರು ಉತ್ತರಪ್ರದೇಶದ ಝಾನ್ಸಿಯಿಂದ ತಮ್ಮ ಪ್ರಯಾಣ ಶುರು ಮಾಡಿದವರು. ಆದರೆ, ಇವರು ಹೊರಟಿದ್ದು, ಸೈಕಲ್‌ನಲ್ಲಿ. ಅದೇ ವಿಶೇಷ! ಸೈಕಲ್‌ನಲ್ಲಿ ಲಗೇಜ್‌ ಕಟ್ಟಿಕೊಂಡು, ಅದರ ಮೇಲೋಂದು ಪ್ಲಾಸ್ಟಿಕ್‌ ಮುಚ್ಚಿ, ಸುಮಾರು 80,000 ಸಾವಿರ ಕಿಮೀ ಎರಡು ವರ್ಷಗಳಲ್ಲಿ ಪೂರೈಸುವ ಗುರಿ ಇವರದ್ದು.

ಗಾಡಿ ಮತ್ತು ಮೈಲೇಜ್‌

Untitled design (76)

ಹಿಮಾಲಯನ್‌ 411 ಬೈಕ್‌ ಈ ಟ್ರಿಪ್‌ನಲ್ಲಿ ಸುಮಾರು 34 ಕಿಮೀ ಮೈಲೇಜ್‌ ನೀಡಿತು. 1,200 ಕಿಮೀಗೆ ನಮಗೆ ಅಂದಾಜು 3,800 ರು. ಅಷ್ಟು ಪೆಟ್ರೋಲ್‌ಗೆ ಖರ್ಚಾಯಿತು.

ಯಾವುದೋ ಹಾಡು ಕೇಳುತ್ತಾ, ಕೆಲವೊಮ್ಮೆ ಜೀವನದ ಬಗ್ಗೆ ಯೋಚನೆ ಮಾಡುತ್ತಾ, ಕೆಲವೊಮ್ಮೆ ಏನೂ ಯೋಚನೆ ಮಾಡದೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾ, ಬೈಕ್‌ ಮತ್ತು ರಸ್ತೆಯ ನಡುವಿನ ಸಂಭಾಷಣೆಯನ್ನು ಕದ್ದು ಕೇಳಿಸಿಕೊಳ್ಳುತ್ತಾ, ಸೂರ್ಯೋದಯವನ್ನು ಹಿಂಬಾಲಿಸುತ್ತಾ, ಕತ್ತಲಿಂದ ಬೆಳಕಾಗುವಾಗ ಆಕಾಶ ಕಂಗೊಳಿಸುವುದನ್ನು ಹೆಲ್ಮೆಟ್‌ ನಡುವಿನಿಂದ ನೋಡುವ ಅನುಭವಕ್ಕೆ ಯಾವುದೇ ಹೆಸರಿಲ್ಲ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..