Monday, December 15, 2025
Monday, December 15, 2025

ಇದು ಅಣಬೆಗಳ ಲೋಕವಯ್ಯಾ......!

ಪ್ರವಾಸ ಅಂತ ಹೊರಟಾಗ ಆಹಾರ ಒಂದು ಪ್ರಮುಖ ವಿಚಾರವಾಗುತ್ತದೆ. ಅದರಲ್ಲೂ ಸಸ್ಯಾಹಾರಿಗಳಿಗೆ ಕೆಲವು ಆಹಾರಗಳಿವೆ. ಅತ್ತ ವೆಜ್ಜೂ ಅನಿಸದ ಇತ್ತ ನಾನ್‌ ವೆಜ್ಜೂ ಅನಿಸದ ಆಹಾರಗಳು. ಅಣಬೆ/ ಮಶ್ರೂಮ್‌ ಅಂಥದ್ದೊಂದು ಆಹಾರ. ಎಲ್ಲೇ ಪ್ರವಾಸ ಹೋದರೂ ನಮಗೆ ಮಶ್ರೂಮ್‌ನ ಖಾದ್ಯಗಳು ಲಭ್ಯ. ಪ್ರವಾಸಪ್ರಿಯ ಪ್ರಧಾನಿ ಮೋದಿಗೂ ಅಣಬೆಯೆಂದರೆ ಇಷ್ಟವೆಂಬ ಸುದ್ದಿಗಳು ಹರಿದಾಡಿದ್ದವು. ಇಂಥ ಸರ್ವಾಂತರ್ಯಾಮಿ ಅಣಬೆ ಪ್ರಪಂಚದ ಬಗ್ಗೆ ಚಿಕ್ಕದೊಂದು ಇಣುಕುನೋಟ.

  • ಬೀರಣ್ಣ ನಾಯಕ ಮೊಗಟಾ

ಮಲೆನಾಡಿನ ಮಣ್ಣಿನ ಮೇಲೆ ಮಳೆ ಮುತ್ತಿಕ್ಕಿ, ರಾತ್ರಿ ಗುಡುಗು, ಸಿಡಿಲಿನ ಅಬ್ಬರದ ಅಲಾರಾಮಿಗೆ ಮಲೆಯ ಮಣ್ಣಿನ ಮಕ್ಕಳಿಗೆ ಅಣಬೆಯ ನೆನಪು ಹಸಿಯಾಗಿ ಬೆಳಗಿನ ಜಾವಕ್ಕಾಗಿ ಕಾಯದೆ ಇರಲಾರರು. ಬೆಳಗಿನ ಚಹ ಕುಡಿಯುವ ಮೊದಲೆ ಅಣಬೆಯ ಅನುಭವವಿರುವ ಮಲೆನಾಡಿಗರು ಕೊಡ್ಲಗದ್ದೆಯ ಇಕ್ಕಲ ಬೆಟ್ಟ, ಖಂಟಗಾರಿನ ಸೊವೆಹಕ್ಕಲು, ನಂದೊಳ್ಳಿಯ ಕುಂಬ್ರಿ ಬೆಟ್ಟ, ತಟಗಾರಿನ ಗವಿಯನಪಾಲು, ಹೊಳೆಮಕ್ಕಿಯ ದನದಗುಡ್ಡ, ಇಡಗುಂದಿಯ ದೊಡ್ಡಹಕ್ಕಲುಗಳನೆಲ್ಲ ಸುತ್ತಾಡಿ ಅಣಬೆ ಬೇಟೆಗೆ ಜೈ ಎಂದು ಮನೆ ಸೇರುವಾಗ ಬುಟ್ಟಿ ತುಂಬಾ ಬಾಯಲ್ಲಿ ನೀರೂರಿಸುವ ಅಣಬೆಯೋ ಅಣಬೆ!

mushroom

ಸಸ್ಯ ವರ್ಗಕ್ಕೆ ಸೇರಿದ ಅಣಬೆಗೆ ಪತ್ರಹರಿತ್ತು ಇಲ್ಲದ ಕಾರಣ, ತಾನೆ ಆಹಾರ ತಯಾರಿಸಿಕೊಳ್ಳಲಾಗದ ಪರಾವಲಂಬಿ. ಫಂಗೈನ ಜಾತಿಗೆ ಸೇರಿದ ಅಣಬೆ ಯೂಕಾರ್ಯೋಟ ಕುಟುಂಬದ್ದಾಗಿದ್ದು ಮೈಕೋಟ ಸಾಮ್ರಾಜ್ಯಕ್ಕೆ ಸೇರಿದೆ. ಇವುಗಳಲ್ಲಿ ಕೆಲವು ಅಣಬೆಗಳನ್ನು ಬಿಟ್ಟರೆ ಉಳಿದವು ವಿಷಕಾರಿ. ಆ ಕಾರಣದಿಂದಲೇ ಚೀನಾ ದೇಶದಲ್ಲಿ ಅಣಬೆ ಸೇವಿಸಿ ಪ್ರತಿ ವರುಷ ಸಾವಿರಾರು ಜನ ಸಾವನಪ್ಪುತ್ತಾರೆ. ವಿಟಮಿನ್ ಟಿ2 ಹಾಗೂ ಡಿ ಜೀವನ ಸತ್ವವಿರವ ಅಣಬೆ ಮಧುಮೇಹಿಗಳಿಗೆ ಔಷಧವಿದ್ದಂತೆ. ಸಾವಿರಾರು ಜಾತಿಯ ಅಣಬೆಗಳಲ್ಲಿ ಸುಮಾರು 20 ಜಾತಿಯ ಅಣಬೆಗಳನ್ನು ತಿನ್ನಲು ಬಳಸುತ್ತಾರೆ.

ತಿನ್ನುವ ಹಾಗೂ ತಿನ್ನದೆ ಇರುವ ಎರಡೂ ಬಗೆಯ ಅಣಬೆಗಳನ್ನು ನೋಡಿ ಆನಂದಿಸುವುದೇ ಒಂದು ಸೊಗಸು. ಅವುಗಳ ಆಕರ್ಷಣೆ ಅಭೂತಪೂರ್ವವಾದದು. ಅದರ ಆಕಾರಕ್ಕೆ ಅನುಗುಣವಾಗಿ ಸ್ಥಳೀಯರು ತಮ್ಮದೆ ರೀತಿಯಲ್ಲಿ ಅವುಗಳಿಗೆ ನಾಮಕರಣ ಮಾಡಿದ್ದಾರೆ. ಹೆಗ್ಲಿ ಅಣಬೆ, ಕಲ್ಲಣಬೆ, ಹಾಲಣಬೆ, ಮರಳಣಬೆ, ಹಪ್ಪಳಣಬೆ, ಬೆಳ್ಳಣಬೆ, ಮರಣಬೆ, ಮುತ್ತಣಬೆ, ಬೋಗಿ ಅಣಬೆ, ದೋಸೆ ಅಣಬೆ, ಇಡ್ಲಿ ಅಣಬೆ, ಶೃಂಗಾರ ಅಣಬೆ......ಹೀಗೆ. ಸಸ್ಯ ಹಾಗೂ ಮಾಂಸಾಹಾರಿಗಳೂ ಇಷ್ಟ ಪಡುವ ಅಣಬೆಗೆ ಮಾಂಸಾಹಾರಿ ಮಸಾಲೆಯನ್ನೆ ಹೆಚ್ಚು ಬಳಸುತ್ತಾರೆ. ಸಾರು, ಪಲ್ಲೆ, ಫ್ರೈ ಮುಂತಾದ ರುಚಿಕಟ್ಟಾದ ಅಡುಗೆಯನ್ನು ಅಣಬೆಯಿಂದ ತಯಾರಿಸಿ ಮೆಲ್ಲುತ್ತಾರೆ.

mushroom 3

ನಿಸರ್ಗ ದತ್ತವಾದ ಅಣಬೆ ಮಳೆಗಾಲದಲ್ಲಿ ಮಾತ್ರ ದೊರೆತರೆ, ಅಣಬೆ ಬೆಳೆಯುವುದನ್ನೇ ಉದ್ಯಮವಾಗಿಸಿಕೊಂಡವರಲ್ಲಿ ಎಲ್ಲ ಕಾಲದಲ್ಲಿಯು ಅಣಬೆ ದೊರೆಯುತ್ತದೆ. ಆದರೆ ನಿಸರ್ಗದತ್ತವಾದ ಅಣಬೆ ರುಚಿ ಹಾಗೂ ಸತ್ವದಲ್ಲಿ ಮೇಲು. ಕೃಷಿಕ ಬೆಳದ ಅಣಬೆಯ ಬೆಲೆ ಒಂದು ಕೆಜಿಗೆ 200 ರಿಂದ 300ರು ಇದ್ದರೆ ನಿಸರ್ಗದತ್ತವಾದ ಒಂದು ದೊಡ್ಡ ಅಣಬೆ ಕೆಲವೊಮ್ಮೆ 5ರು ನಲ್ಲಿ ಮಾರಾಟವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ, ಹಳಿಯಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಭಟ್ಕಳ ಪೇಟೆಯಲ್ಲಿ ಮಾರಾಟಕ್ಕಾಗಿ ಅಣಬೆ ಹೇರಳವಾಗಿ ಮಳೆಗಾಲದಲ್ಲಿ ಬರುತ್ತದೆ.

ಅರಣ್ಯ ಇಲಾಖೆ ಅಣಬೆ ಮಾರಾಟ ಮಾಡುವುದನ್ನು ತಡೆಯುತ್ತಿದೆಯಲ್ಲದೆ, ಭಟ್ಕಳದಲ್ಲಿ ಕಳೆದ ವರ್ಷ ಕೆಲ ಮಾರಾಟಗಾರರನ್ನು ಬಂಧಿಸಿದೆ. ತಲೆ ತಲಾಂತರದಿಂದ ಅಣಬೆ ಮಳೆಗಾಲದ ಒಂದು ಆಹಾರವಾಗಿ ಬಳಸುವ ಅಣಬೆ ಪ್ರೀಯರಿಗೆ ಇದೊಂದು ಮಾರಕವಾಗಿ ಪರಿಣಮಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!