ಟೂರಿಸಂ ಇಂಡೆಕ್ಸ್: ಪ್ರಯಾಣದ ಹಿಂದೆ ಇರುವ ಸ್ಮಾರ್ಟ್ ಹೂಡಿಕೆ
ವಾರಾಂತ್ಯ ಬಂದಾಗ ನಾವು ಎಲ್ಲಿಗಾದರೂ ಟ್ರಿಪ್ ಹೋಗ್ಬೇಕು ಅಂತ ಪ್ಲಾನ್ ಮಾಡ್ತೀವಿ. ಯುಟ್ಯೂಬ್ ವಿಡಿಯೋ, ರೀಲ್ಸ್, ಗೂಗಲ್ ಲಿಸ್ಟ್ ಗಳಲ್ಲಿನ 'ಎ ಇಂದ ಝಡ್ ' ಜಾಗಗಳು ನಮ್ಮ 24 ಗಂಟೆಗಳನ್ನು ಓವರ್ ಟೇಕ್ ಮಾಡಿದರೂ,ಕೆಲವು ಸಲ ನಾವು ಅಂದುಕೊಂಡ ಸ್ಥಳಕ್ಕೆ ಹೋಗುವುದಕ್ಕೆ ಆಗೋದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು.ಟೈಮ್ ಇಲ್ಲ, ಫ್ರೆಂಡ್ಸ್ ಒಪ್ಪೋದಿಲ್ಲ, ಮನೆಯವರ ಅನುಮತಿ ಸಿಗೋದಿಲ್ಲ ಅಂತ.ಆದರೆ ಇವೆಲ್ಲಕ್ಕಿಂತ ದೊಡ್ಡ ಕಾರಣ ಒಂದಿದೆ.ಅದು ಏನು ಗೊತ್ತಾ? ವಿಟಮಿನ್ ಎಂ (ಮನಿ) ಕೊರತೆ.
- ಕಾಂಚನಾ ಹೆಗಡೆ
ಪೈಸಾ ಬಜಾರ್ (Paisabazaar) ವರದಿಯ ಪ್ರಕಾರ, ಭಾರತದಲ್ಲಿ ತೆಗೆದುಕೊಳ್ಳುವ ಪರ್ಸನಲ್ ಲೋನ್‌ಗಳಲ್ಲಿ ಸುಮಾರು 25% ಟ್ರಾವೆಲ್‌ಗಾಗಿ ಬಳಸಲಾಗುತ್ತಿದೆ. ನಾವು ಟ್ರಿಪ್‌ಗೆ ಹೋಗಲು ಪರ್ಸನಲ್ ಲೋನ್ ಬಳಸಬಹುದು. ಆದರೆ ಅದು ನಮ್ಮ ಈಗಿನ ಫೈನಾನ್ಷಿಯಲ್ ಗೋಲ್‌ಗಳಿಗೆ ಭಾರವಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಇನ್ನೊಂದು ವರದಿ ಪ್ರಕಾರ, 1,000 ಭಾರತೀಯ ವಯಸ್ಕರನ್ನು ಸಮೀಕ್ಷೆ ಮಾಡಿದಾಗ, ಟ್ರಾವೆಲ್ ಮಾಡಲು ಯೋಜನೆ ಮಾಡುತ್ತಿರುವವರಲ್ಲಿ ಸುಮಾರು 47% ಜನರು 1.26 ಲಕ್ಷ ರು. ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ವಿಶೇಷವಾಗಿ ಟ್ರಾವೆಲ್‌ಗಾಗಿ ಸೇವ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವ ಪ್ರವಾಸೋದ್ಯಮ ಆರ್ಥಿಕತೆಯಲ್ಲಿ 8ಕ್ಕೇರಿದ ಭಾರತ! ಕಾರಣವೇನು?
ಟ್ರಾವೆಲ್ ಫಂಡ್
ಟ್ರಾವೆಲ್ ಫಂಡ್ ಕೂಡ ಒಂದು ಪ್ರಮುಖ ಫೈನಾನ್ಷಿಯಲ್ ಗೋಲ್ ಆಗಿದ್ದು, ಜೀವನದಲ್ಲಿ ಕೇವಲ ಶಿಕ್ಷಣ, ಮನೆ ಅಥವಾ ಭವಿಷ್ಯದ ಭದ್ರತೆಗೆ ಮಾತ್ರ ಹಣವನ್ನು ಬಳಸುವುದು ಸೂಕ್ತವಲ್ಲ. ಅನುಭವಗಳಿಗೆ ಕೂಡ ಖರ್ಚು ಮಾಡುವುದು ಅಗತ್ಯ. ಆದ್ದರಿಂದ ಇನ್ವೆಸ್ಟ್‌ಮೆಂಟ್‌ನ ಒಂದು ಭಾಗವನ್ನು ಟ್ರಾವೆಲ್‌ಗಾಗಿ ಮೀಸಲಿಡುವುದು ಉತ್ತಮ. ಟ್ರಾವೆಲ್ ಫಂಡ್ ನಿರ್ಮಿಸಲು ಬೇರೆ ಬೇರೆ ಸ್ಕೀಮ್‌ಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡುವುದರ ಜತೆಗೆ ಇದರಲ್ಲಿ ಒಂದು ಭಾಗವನ್ನು ಟೂರಿಸಂ ಸಂಬಂಧಿತ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯ ಬೆಳವಣಿಗೆ ಸಿಗುತ್ತದೆ.
ಪ್ರವಾಸೋದ್ಯಮ ಮತ್ತು ಟ್ರಾವೆಲ್ ಸೆಕ್ಟರ್‌ನ ಕಂಪೆನಿಗಳ ಸ್ಟಾಕ್‌ಗಳ ಪರ್ಫಾರ್ಮೆನ್ಸ್ ಟ್ರ್ಯಾಕ್ ಮಾಡಲು ನಿಫ್ಟಿ ಇಂಡಿಯಾ ಟೂರಿಸಂ ಇಂಡೆಕ್ಸ್ (Nifty India Tourism Index ). ಇದು ಒಂದು ಥೀಮ್ಯಾಟಿಕ್ ಇಂಡೆಕ್ಸ್ ಆಗಿದ್ದು, (ಅಂದರೆ ಒಂದು ನಿರ್ದಿಷ್ಟ ಸೆಕ್ಟರ್ ಆಧಾರವಾಗಿ ರಚಿಸಲಾದ ಸ್ಟಾಕ್ ಮಾರ್ಕೆಟ್ ಇಂಡೆಕ್ಸ್) ಇದರಲ್ಲಿ ಏರ್‌ಲೈನ್ಸ್, ಹೊಟೇಲ್ಸ್ ಹಾಗೂ ಫುಡ್ ಸರ್ವಿಸ್ ಹೀಗೆ ಟ್ರಾವೆಲ್ ಮತ್ತು ಟೂರಿಸಂ ಉದ್ಯಮಕ್ಕೆ ಸಂಬಂಧಪಟ್ಟ ಕಂಪೆನಿಗಳು ಸೇರಿರುತ್ತವೆ. ಈ ಇಂಡೆಕ್ಸ್‌ನಲ್ಲಿ ನಿಫ್ಟಿ 500 ಒಳಗೊಂಡ ಕಂಪೆನಿಗಳಿಂದ ಗರಿಷ್ಠ 30 ಸ್ಟಾಕ್ಸ್ ಆಯ್ಕೆ ಮಾಡಲಾಗುತ್ತದೆ. ಇದು ಹೂಡಿಕೆದಾರರಿಗೆ ಟೂರಿಸಂ ಸೆಕ್ಟರ್‌ನ ಒಟ್ಟಾರೆ ಬೆಳವಣಿಗೆ ಮತ್ತು ಟ್ರೆಂಡ್ ಅನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಿಫ್ಟಿ ಇಂಡಿಯಾ ಟೂರಿಸಂ ಇಂಡೆಕ್ಸ್ ಒಂದು ಸೂಚ್ಯಂಕವಾಗಿದ್ದು, ಇದು ಪ್ರವಾಸೋದ್ಯಮ ಕ್ಷೇತ್ರದ ಕಂಪೆನಿಗಳ ಒಟ್ಟಾರೆ ಪರ್ಫಾರ್ಮೆನ್ಸ್ ತೋರಿಸುತ್ತದೆ. ಇದು ಪ್ರತ್ಯೇಕ ಷೇರುಗಳ ಲಾಭ-ನಷ್ಟವನ್ನು ನೇರವಾಗಿ ತೋರಿಸುವುದಿಲ್ಲ. ದೊಡ್ಡ ಪ್ರಮಾಣದ ಕಂಪೆನಿಗಳಿಗೆ ಹೆಚ್ಚು ಪ್ರಾಮುಖ್ಯ ಇರುವುದರಿಂದ, ಅವುಗಳ ಬೆಲೆ ಬದಲಾವಣೆ ಸೂಚ್ಯಂಕದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒಂದು ಕಂಪೆನಿಯ ಷೇರು ಇಳಿದರೂ, ಉಳಿದ ಕಂಪನಿಗಳು ಏರಿದರೆ ಸೂಚ್ಯಂಕ ಏರಬಹುದು. ಹೀಗಾಗಿ, ಸೂಚ್ಯಂಕವು ಉದ್ಯಮದ ಸಾಮಾನ್ಯ ದಿಕ್ಕನ್ನು ತೋರಿಸುತ್ತದೆ, ಆದರೆ ಪ್ರತ್ಯೇಕ ಷೇರುಗಳ ಹೂಡಿಕೆ ನಿರ್ಧಾರಕ್ಕೆ ಕಂಪನಿ ಮಟ್ಟದ ವಿಶ್ಲೇಷಣೆ ಅಗತ್ಯ. ಜೊತೆಗೆ, ಕಂಪನಿಯ ಸ್ಪರ್ಧಾತ್ಮಕ ಸ್ಥಿತಿ ಮತ್ತು ಮಾರುಕಟ್ಟೆಯಲ್ಲಿ ಅದರ ಸ್ಥಾನಮಾನವನ್ನೂ ಪರಿಶೀಲಿಸಬೇಕು. ಉದಾಹರಣೆಗೆ, ದೊಡ್ಡ ಬ್ರಾಂಡ್ ಹೊಂದಿರುವ ಹೋಟೆಲ್ ಅಥವಾ ಸ್ಥಿರವಾದ ಗ್ರಾಹಕರನ್ನು ಹೊಂದಿರುವ ಕಂಪನಿ ಹೆಚ್ಚು ಸುರಕ್ಷಿತವಾಗಿರಬಹುದು. ನಿರ್ವಹಣೆಯ ನಿರ್ಧಾರಗಳು, ಹೊಸ ಯೋಜನೆಗಳು ಮತ್ತು ವಿಸ್ತರಣಾ ಯೋಜನೆಗಳು ಕೂಡ ಭವಿಷ್ಯದ ಲಾಭದ ಮೇಲೆ ಪರಿಣಾಮ ಬೀರುತ್ತವೆ.

ಸ್ಮಾರ್ಟ್ ಪ್ಲಾನ್
ಟೂರಿಸಂ ಸೆಕ್ಟರ್ ಕೂಡ ಆರ್ಥಿಕ ಪರಿಸ್ಥಿತಿ, ಇಂಧನದ ಬೆಲೆಗಳು ಹೀಗೆ ಅನಿರೀಕ್ಷಿತ ಘಟನೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಅಲ್ಪಾವಧಿಯಲ್ಲಿ ರಿಟರ್ನ್ಸ್ ತೀವ್ರ ಏರಿಳಿತಗಳನ್ನು ಕಾಣಬಹುದು. ಆದರೆ ದೇಶದ ಆದಾಯ ವೃದ್ಧಿ, ಮಧ್ಯಮ ವರ್ಗದ ಖರ್ಚು ಸಾಮರ್ಥ್ಯ ಮತ್ತು ಟ್ರಾವೆಲ್ ಟ್ರೆಂಡ್ ಹೆಚ್ಚಳದಿಂದ ಈ ಕ್ಷೇತ್ರದಲ್ಲಿ ಬೆಳವಣಿಗೆ ಸಾಧ್ಯತೆ ಹೆಚ್ಚು. ಟ್ರಾವೆಲ್ ಡಿಮಾಂಡ್ ಹೆಚ್ಚುತ್ತಿರುವುದರಿಂದ, ಟೂರಿಸಂ ಸೆಕ್ಟರ್ ದೀರ್ಘಾವಧಿಯಲ್ಲಿ ಉತ್ತಮ ಅವಕಾಶಗಳನ್ನು ನೀಡುವ ಸಾಮರ್ಥ್ಯ ಹೊಂದಿದ್ದು, ಇಂತಹ ಸಮಯಾವಧಿಯ ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ. ದೀರ್ಘಾವಧಿಯಲ್ಲಿ ಇದು ಉತ್ತಮ ಬೆಳವಣಿಗೆ ಸಾಧ್ಯತೆಯನ್ನು ಹೊಂದಿದೆ. ಆದರೂ ಸಂಪೂರ್ಣ ಹಣವನ್ನು ಒಂದೇ ಕಡೆಯಲ್ಲಿ ಹೂಡಿಕೆ ಮಾಡುವುದು ರಿಸ್ಕ್ ಹೆಚ್ಚಿಸುತ್ತದೆ. ಆದ್ದರಿಂದ, ಉತ್ತಮ ವಿಧಾನವೆಂದರೆ ನಮ್ಮ ಟ್ರಾವೆಲ್ ಫಂಡಿನ ಪೋರ್ಟ್‌ಫೋಲಿಯೋದಲ್ಲಿ 10–15% ಮಾತ್ರ ಟೂರಿಸಂ ಸೆಕ್ಟರ್ ಗೆ ಹಂಚಿಕೆ ಮಾಡಿ, ಡೈವರ್ಸಿಫಿಕೇಶನ್ ಮಾಡಬಹುದು.
ನಮ್ಮ ಅಗತ್ಯಕ್ಕನುಗುಣವಾಗಿ ಟ್ರಾವೆಲ್ ಫಂಡ್ ಅನ್ನು ನಿರ್ಮಿಸಿಕೊಳ್ಳಬೇಕು. ಮತ್ತು ಇತರ ಹಣಕಾಸು ಗುರಿಗಳಿಗಾಗಿ ನಮ್ಮ ಪ್ರಯಾಣದ ಅನುಭವವನ್ನು ಕಡಿಮೆ ಮಾಡಿಕೊಳ್ಳಬಾರದು. ಜೀವನದಲ್ಲಿ ಕೇವಲ ಭವಿಷ್ಯಕ್ಕಾಗಿ ಹಣವನ್ನು ಉಳಿಸುವುದಷ್ಟೇ ಅಲ್ಲ, ನೆನಪುಗಳನ್ನು ಸೃಷ್ಟಿಸಲು ಮತ್ತು ಹೊಸ ಅನುಭವಗಳನ್ನು ಪಡೆಯಲು ಕೂಡ ಖರ್ಚು ಮಾಡುವುದು ಅಗತ್ಯ.
ಲೇಖಕರು: ಅರ್ಥಿಕ ಸಲಹೆಗಾರರು, ಬರಹಗಾರರು